ರಾಜ್ಯ

ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಮರುಜೀವ: 17,771 ಜನರ ಕೈಸೇರಲಿದೆ ₹352 ಕೋಟಿ ಮೌಲ್ಯದ ಸೌಲಭ್ಯ; ವಿವಿಧ ಕಲ್ಯಾಣ ಯೋಜನೆಗಳಿಗೆ ಸಿಎಂ ಡಿಕೆ. ಶಿವಕುಮಾರ್ ಚಾಲನೆ..!

ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಮರುಜೀವ: 17,771 ಜನರ ಕೈಸೇರಲಿದೆ ₹352 ಕೋಟಿ ಮೌಲ್ಯದ ಸೌಲಭ್ಯ; ವಿವಿಧ ಕಲ್ಯಾಣ ಯೋಜನೆಗಳಿಗೆ ಸಿಎಂ ಡಿಕೆ. ಶಿವಕುಮಾರ್ ಚಾಲನೆ..!
ಜಿಬಿಎ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ವಿತರಿಸಲು ವೇದಿಕೆ ಸಜ್ಜುಗೊಳಿಸಿದೆ.

ನಾಳೆ (ನವೆಂಬರ್ 30, ಸೋಮವಾರ) ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಒಟ್ಟು 17,771 ಅರ್ಹ ಫಲಾನುಭವಿಗಳಿಗೆ ₹352.81 ಕೋಟಿ ಮೌಲ್ಯದ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಇದರೊಂದಿಗೆ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸೌಲಭ್ಯಗಳನ್ನು ಫಲಾನುಭವಿಗಳ ಕೈಸೇರಿಸುವ ಮಹತ್ವದ ಹೆಜ್ಜೆಯನ್ನು ಪ್ರಾಧಿಕಾರ ಇಟ್ಟಿದೆ.

ಬೀದಿ ವ್ಯಾಪಾರಿಗಳಿಗೆ ಇ-ಮಾರಾಟ ವ್ಯವಸ್ಥೆ ಮತ್ತು ಸಿಎನ್‌ಜಿ ವಾಹನಗಳು, ಸಾರಥಿ ಯೋಜನೆಯಡಿ ವಿದ್ಯುತ್ ಚಾಲಿತ ಆಟೊ ರಿಕ್ಷಾಗಳನ್ನು ಒದಗಿಸುವುದೂ ಈ ಯೋಜನೆಗಳಲ್ಲಿ ಸೇರಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಪೌರಕಾರ್ಮಿಕರು, ದುಡಿಯುವ ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಉಚಿತ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮತ್ತು ಗಾಲಿಕುರ್ಚಿಗಳನ್ನು ವಿತರಿಸಲಿದ್ದಾರೆ. ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವುದರ ಜೊತೆಗೆ, ಮನೆ ಇಲ್ಲದವರು ಸ್ವಂತ ಸೂರು ಹೊಂದುವ ಕನಸನ್ನು ನನಸಾಗಿಸಲು ವಸತಿ ಯೋಜನೆಗಳ ಪ್ರಯೋಜನವನ್ನು ಕಲ್ಪಿಸಲಿದ್ದಾರೆ.

ಈ ಹಿಂದೆ ಗೌರಿ-ಗಣೇಶ ಹಬ್ಬದ ಉಡುಗೊರೆಯಾಗಿ ಸೆಪ್ಟೆಂಬರ್‌ನಲ್ಲಿ 15 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ದ್ವಿಚಕ್ರ ವಾಹನ, ಆಟೊ ರಿಕ್ಷಾಗಳನ್ನು ವಿತರಿಸುವುದು ಹಾಗೂ ಶಾಲಾ-ಕಾಲೇಜುಗಳ ಶುಲ್ಕ ಮರುಪಾವತಿ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಹುದ್ದೆಯಲ್ಲಿನ ಬದಲಾವಣೆ, ನಂತರ ನಡೆದ ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳ ವಿಳಂಬದಿಂದ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು. ಇದೀಗ ಒಟ್ಟು 352.81 ಕೋಟಿ ರೂಪಾಯಿ ವೆಚ್ಚದಲ್ಲಿ 17,771 ಫಲಾನುಭವಿಗಳಿಗೆ ಐದು ನಗರ ಪಾಲಿಕೆಗಳ ಮೂಲಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಹಲವು ಕಾರಣಗಳಿಂದಾಗಿ ಫಲಾನುಭವಿಗಳು ಕಳೆದ ಮೂರು ವರ್ಷಗಳಿಂದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗಿರಲಿಲ್ಲ. ಹಿಂದಿನ ಜಿಬಿಎ ವ್ಯವಸ್ಥೆಯನ್ನು ಐದು ನಗರ ಪಾಲಿಕೆಗಳಾಗಿ ಪುನರ್‌ರಚಿಸಿದ್ದೂ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಹೀಗಾಗಿ ಸೋಮವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಒಂದೇ ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಬಿಎ ಕಲ್ಯಾಣ ಇಲಾಖೆಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ಸರ್ಕಾರದಿಂದ ನೀಡುವ ಆಟೊ ರಿಕ್ಷಾ, ತಳ್ಳುಗಾಡಿ ಹಾಗೂ ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳು ಹಣಕ್ಕಾಗಿ ಬೇರೆಯವರಿಗೆ ವರ್ಗಾಯಿಸುತ್ತಾರೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿಂದೆ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಫಲಾನುಭವಿಗಳು ಬಾಡಿಗೆಗೆ ನೀಡಿದ ಪ್ರಕರಣಗಳು ವರದಿಯಾಗಿದ್ದ ಹಿನ್ನೆಲೆಯಲ್ಲಿ, ಸೌಲಭ್ಯಗಳ ದುರ್ಬಳಕೆ ತಡೆಯಲು ಅಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ನಡೆಸಲಿದ್ದಾರೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.