

ಹೈದಾರಾಬಾದ್: ಇಲ್ಲಿನ ಯೂಸಫ್‌ಗಢದಲ್ಲಿರುವ ಎಟಿಎಂ ಒಂದರಲ್ಲಿ ಆಗಂತುಕನೊಬ್ಬ ಗುಂಡು ಹಾರಿಸಿ ಮಹಿಳೆಯ ಆಭರಣ ಮತ್ತು ಮೊಬೈಲ್ ಫೋನ್ ದೋಚಿರುವ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ ಬುಧವಾರ ಬೆಳಗ್ಗೆ 7.45ಕ್ಕೆ ಈ ಘಟನೆ ನಡೆದಿದೆ. ಹಣ ವಿತ್‌ಡ್ರಾ ಮಾಡಲು ಲಲಿತಾ (25) ಎಂಬಾಕೆ ಎಟಿಎಂಗೆ ಹೋಗಿದ್ದರು. ಆಗ ಮುಸುಕುಧಾರಿ ವ್ಯಕ್ತಿಯೊಬ್ಬ ಎಟಿಎಂಗೆ ನುಗ್ಗಿ ಆಭರಣಗಳನ್ನು ನೀಡುವಂತೆ ಲಲಿತಾ ಅವರಿಗೆ ಆದೇಶಿಸಿದ್ದಾನೆ. ಆಕೆ ನೀಡಲು ನಿರಾಕರಿಸಿದಾಗ ಆತ ಕೈಯಲ್ಲಿದ್ದ ಪಿಸ್ತೂಲ್ ನಿಂದ ಎಟಿಎಂ ಗೋಡೆಗೆ ಗುಂಡು ಹಾರಿಸಿದ್ದಾನೆ.
ಇದಾದ ನಂತರ ಆತ ಆಕೆಯ ಬಳಿ ಇದ್ದ ಚಿನ್ನದ ಸರ, ಕಿವಿಯೋಲೆ (ಒಟ್ಟು 20 ಗ್ರಾಂ ಚಿನ್ನ), ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ ದೋಚಿದ್ದಾನೆ.
ಎಟಿಎಂ ಪಾಸ್‌ವರ್ಡ್ ಹೇಳುವಂತೆ ಒತ್ತಾಯಿಸಿದ ಆತ ಎಟಿಎಂನಿಂದ ಹಣ ತೆಗೆಯಲು ಯತ್ನಿಸಿದಾಗ ಮೊದಲು ತಾಂತ್ರಿಕ ದೋಷದಿಂದ ಹಣ ತೆಗೆಯಲಾಗಲಿಲ್ಲ. ಅಲ್ಲಿಂದ ಆತ ಪರಾರಿಯಾದ 15 ನಿಮಿಷಗಳಲ್ಲಿ ಅದೇ ಎಟಿಎಂ ಕಾರ್ಡ್ ಬಳಸಿ ಆತ 2, 500 ರು. ವಿತ್‌ಡ್ರಾ ಮಾಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.