

ನವದೆಹಲಿ: ನೋಟು ನಿಷೇಧ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿರಲಿಲ್ಲ. ಆರ್'ಬಿಐ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಂಡು ನಿಷೇಧ ಹೇರಲಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
ಶಹಜಹಾನ್ ಪುರದಲ್ಲಿ ಪರಿವರ್ತನ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, 50 ದಿನಗಳ ಗಡುವು ಇದೇ ಡಿಸೆಂಬರ್ 30 ರಂದು ಪೂರ್ಣಗೊಳ್ಳಲಿದೆ. ಸಾಕಷ್ಟು ಆಲೋಚಿಸಿ, ನಿರ್ಧಾರಗಳನ್ನು ಕೈಗೊಂಡೇ ಗಡುವನ್ನು ಕೇಳಲಾಗಿತ್ತು. ಅಂತಿಮ ಗಡುವಿನೊಳಗೆ ಎಟಿಎಂ ಹಾಗೂ ಬ್ಯಾಂಕ್ ಸಮಸ್ಯೆಗಳು ಮುಗಿಯಲಿದೆ ಎಂದು ಹೇಳಿದ್ದಾರೆ.
ಆರ್ ಬಿಐನಿಂದ ಯಾವುದೇ ರಹಸ್ಯಗಳನ್ನು ನಾವು ಮುಚ್ಚಿಟ್ಟಿಲ್ಲ. ಆರ್ ಬಿಐನ ಎಲ್ಲಾ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆದೇ ದುಬಾರಿ ನೋಟಿನ ಮೇಲೆ ನಿಷೇಧ ಹೇರಲಾಗಿತ್ತು. ನೋಟಿನ ಮುದ್ರಣ ತಡವಾಗುತ್ತಿರುವುದರಿಂದ ಹಾಗೂ ಹಂಚಿಕೆ ಮಾಡುತ್ತಿರುವುದರಲ್ಲಿ ತಡವಾಗುತ್ತಿರುವುದರಿಂದ ದೇಶದಲ್ಲಿ ನಗದು ಬಿಕ್ಕಟ್ಟು ಎದುರಾಗಿದೆ. ಹೀಗಾಗಿಯೇ ಸಮಸ್ಯೆ ಬಗೆಹರಿಕೆಗೆ 50 ದಿನಗಳ ಗಡುವನ್ನು ನಿಗದಿ ಮಾಡಲಾಗಿತ್ತು. 50 ದಿನಗಳೊಳಗಾಗಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂಬ ಅರ್ಥವಲ್ಲ. ಆದರೆ, ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಉಂಟಾಗಿರುವ ಸಾಕಷ್ಟು ಸಮಸ್ಯೆಗಳು ಒಂದು ಪ್ರಮಾಣಕ್ಕೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳೊಳಗಾಗಿ ಎಲ್ಲಾ ಔದ್ಯಮಿಕ ಕ್ಷೇತ್ರಗಳು ಸಾಮಾನ್ಯವಂತೆ ಕಾರ್ಯನಿರ್ವಹಿಸಲಿವೆ. ಜನರ ಸಮಸ್ಯೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತದೆ. ಈ 50 ದಿನಗಳ ಸಂಕಷ್ಟ 50 ವರ್ಷಗಳ ವರೆಗೂ ನಿರಾಳವನ್ನು ನೀಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾಡಿರುವ ಅವರು, ದೇಶದಲ್ಲಿ ಕಪ್ಪುಹಣ ಹಾಗೂ ಭ್ರಷ್ಟಾಚಾರ ತೊಲಗುವುದು ವಿರೋಧ ಪಕ್ಷಗಳಿಗೆ ಇಷ್ಟವಿಲ್ಲ. ಸಂಸತ್ತಿನಲ್ಲಿ ಗದ್ದಲವನ್ನುಂಟು ಮಾಡಿ ಚಳಿಗಾಲ ಅಧವೇಶನ ಬಲಿಯಾಗುಂತೆ ಮಾಡಿದ್ದರು. ಉತ್ತರ ಪ್ರದೇಶಕ್ಕೆ ಪ್ರತೀವರ್ಷ ಮೋದಿಯವರು ರು.1 ಲಕ್ಷ ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಗಳು ಕಾಣುತ್ತಿಲ್ಲ ಎಂದಿದ್ದಾರೆ.