ಕೋಲ್ಕತಾ: ಬೈಕ್ ನಲ್ಲಿ ಬಂದ ಆಗಂತುಕರು ಶಾಲೆಯೊಂದರ ಬಳಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಕೋಲ್ಕತಾದ ಲೊರೆಟೊ ಶಾಲಾ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಇಂದು ಬೆಳಿಗ್ಗೆ ಎರಡು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಕೈಯಲ್ಲಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಬಿದ್ದಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿ ಮಾಡಿದ ದುಷ್ಕರ್ಮಿಗಳು ಇದೀಗ ತಲೆಮರೆಸಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಶಾಲೆಯ ಸುತ್ತಮುತ್ತಲು ಭದ್ರತೆಯನ್ನು ಹೆಚ್ಚಿಸಿ ದಾಳಿ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.