

ನವದೆಹಲಿ: ಹೇಡಿಗಳು ಮಾತ್ರ ಭಯೋತ್ಪಾದಕ ದಾಳಿ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಫ್ಘಾನಿಸ್ತಾನದ ಉಗ್ರ ದಾಳಿಯನ್ನು ಕಟು ಶಬ್ದಗಳಿಂದ ಭಾರತ ಖಂಡಿಸುತ್ತದೆ. ಹೇಡಿಗಳಿಂದ ಮಾತ್ರ ಇಂತಹ ದಾಳಿ ಸಾಧ್ಯ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಆಫ್ಘಾನಿಸ್ತಾನದ ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಮನಸೋ ಇಚ್ಝೆ ಗುಂಡಿನ ಸುರಿಮಳೆ ಗರೆದಿದ್ದಾರೆ. ಆಫ್ಘಾನಿಸ್ತಾನ ಸೇನಾ ಸಮವಸ್ತ್ರದಂತೆಯೇ ಬಟ್ಟೆತೋಟ್ಟಿದ್ದ ಉಗ್ರರು ಅನುಮಾನ ಬಾರದಂತೆ ಸೇನಾ ಕ್ಯಾಂಪ್ ಪ್ರವೇಶಿಸಿದ್ದರು. ಈ ವೇಳೆ ಗುಂಡಿನ ಮಳೆಗರೆದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ದಾಳಿಯಲ್ಲಿ ಸುಮಾರು 50 ಮಂದಿ ಯೋಧರು ಸಾವನ್ನಪ್ಪಿದ್ದರು.