

ನವದೆಹಲಿ: ಪಂಚ ರಾಜ್ಯ ಚುನಾವಣೆಗಳ ಆಸುಪಾಸಿನಲ್ಲೇ ಕೇಂದ್ರ ಬಜೆಟ್ ಮಂಡನೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಬಜೆಟ್ ಮಂಡನೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರಿದ್ದ ಪೀಠ ತುರ್ತು ಅರ್ಜಿ ವಿಚಾರಣೆಗೆ ನಕಾರ ವ್ಯಕ್ತಪಡಿಸಿದ್ದು, ಬಜೆಟ್ ದಿನಾಂಕ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವ ಸಂದರ್ಭವೇನಿಲ್ಲ. ಅರ್ಜಿಯ ವಿಚಾರಣಾ ದಿನಾಂಕ ಬಂದಾಗಲೇ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಬಜೆಟ್ ದಿನಾಂಕವನ್ನು ಮುಂದೂಡವಂತೆ ಕೋರಿ ವಕೀಲ ಎಂ.ಎಲ್. ಶರ್ಮಾ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅಲ್ಲದೆ, ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.
ಕೇಂದ್ರದ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದ್ದು, ಪಂಚ ರಾಜ್ಯಗಳ ಚುನಾವಣೆ ಫೆಬ್ರವರಿ 4ರಿಂದ ಆರಂಭವಾಗಲಿದೆ. ಚುನಾವಣೆಗೂ ಮುನ್ನ ಬಜೆಟ್ ಘೋಷಣೆ ಮಾಡಿದರೆ ಬಿಜೆಪಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ ಜನರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ ಎಂಬ ಕಾರಣಕ್ಕೆ ವಿರೋಧಗಳು ತನ್ನ ಭೀತಿಯನ್ನು ವ್ಯಕ್ತಪಡಿಸುತ್ತಿವೆ.