

ನವದೆಹಲಿ: ಕಳೆದ ಜೂನ್ 4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ.
ಸುಷ್ಮಾ ಮಾಡಿರುವ ಟ್ವೀಟ್ ಅನ್ವಯ ದಾಳಿಗೊಳಗಾದ 26 ವರ್ಷದ ಮುಬೀನ್ ಅಹ್ಮದ್ ತೆಲಂಗಾಣ ಮೂಲದವನಾಗಿದ್ದು, ಕ್ಯಾಲಿಫೋರ್ನಿಯಾದ ಗ್ಯಾಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ. ಜೂನ್ 4 ರಾತ್ರಿ ಆತನ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಪ್ರಸ್ತುತ ಆತನನ್ನು ಈಡನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾವೂ ಕೂಡ ತನಿಖೆಯ ವರದಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಮುಬೀನ್ ಅವರ ಸಂಬದಿಯೊಬ್ಬರು ಹೇಳಿಕೆ ನೀಡಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮುಬೀನ್ ನ ಮೇಲೆ ಕೆಲ ಕಪ್ಪು ವರ್ಣೀಯ ಯುವಕರ ತಂಡ ದಾಳಿ ಮಾಡಿದೆ. ಈ ವೇಳೆ ಆತನಿಂದ ಹಣ ಕಿತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
2015ರ ಫೆಬ್ರವರಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆಯಲು ಮುಬೀನ್ ಅಹ್ಮದ್ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು. ಇದಕ್ಕೂ ಮೊದಲು ರಾಯಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಟೆಕ್ ಮಾಡಿದ್ದ ಮುಬೀನ್ ಅಹ್ಮದ್ ಅಲ್ಲಿನ ಸ್ಥಳೀಯ ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.