370 ವಿಧಿ ವಿವಾದ: ಕಾನೂನು ಕಲಿಯಲು ಸಿಎಂ ಮೆಹಬೂಬಾ ಮುಫ್ತಿ ಶಾಲೆಗೆ ಹೋಗುವ ಅಗತ್ಯವಿದೆ- ಸ್ವಾಮಿ
370 ವಿಧಿ ವಿವಾದಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ನೀಡಿದ್ದ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಮುಫ್ತಿಯವರು ಶಾಲೆಗೆ ಹೋಗಿ ಕಾನೂನು ಕಲಿಯುವ...
ನವದೆಹಲಿ: 370 ವಿಧಿ ವಿವಾದಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ನೀಡಿದ್ದ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಮುಫ್ತಿಯವರು ಶಾಲೆಗೆ ಹೋಗಿ ಕಾನೂನು ಕಲಿಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಕುರಿತಂತೆ ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿಕೆಯೊಂದನ್ನು ನೀಡಿದ್ದರು. ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ದೇಶದ ಬದ್ಧತೆಯಾಗಿದ್ದು, ಆದ್ದರಿಂದಲೇ ಕಾಶ್ಮೀರದ ಜನರನ್ನು ಗೌರವಿಸಬೇಕು ಎಂದು ಹೇಳಿದ್ದರು.
ಈ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಸುಬ್ರಮಣಿಯನ್ ಸ್ವಾಮಿಯವರು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬಾಬೂ ಮುಫ್ತಿಯವರು ಕಾನೂನು ಕಲಿಯುವ ಅಗತ್ಯವಿದ್ದು, ಶಾಲೆಗೆ ಹೋಗುಬೇಕಿದೆ. 370 ವಿಧಿ ಸಂಪೂರ್ಣವಾಗಿ ಅಸಂಬದ್ಧವಾದದ್ದು. 5000 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದ ಹೊರಗೆ ಹಾಕಲಾಗಿದೆ. ಮತ್ತೆ ಅವರು ಕಾಶ್ಮೀರ ಪ್ರವೇಶಿಸಲು ಬಿಡುತ್ತಿಲ್ಲ. ಹೀಗಿರುವಾಗ ಮೆಹಬೂಬಾ ಮುಫ್ತಿಯವರಿಗೆ 370 ವಿಧಿಯೇಕೆ ಬೇಕು?...370 ವಿಧಿ ಮುಸ್ಲಿಮರಿಗೆ ರಕ್ಷಣೆಯಾಗುತ್ತದೆಯೇ ವಿನಃ ಹಿಂದೂಗಳಿಗಲ್ಲ. ಹೀಗಾಗಿ ಮುಫ್ತಿಯವರು ಶಾಲೆಗೆ ಹೋಗಿ ಕಾನೂನು ಕಲಿಯಬೇಕು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕ್ಷೇತ್ರವನ್ನು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಈಗಾಗಲೇ ಎಲ್ಲಾ ರೀತಿಯ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಹೇಳಿದೆ. ಹೀಗಿರುವಾಗ 370 ವಿಧಿ ಎಲ್ಲಿದೆ...ಜಮ್ಮು ಮತ್ತು ಕಾಶ್ಮೀರ ಸಂವಿಧಾನದಲ್ಲಿ 370 ವಿಧಿಯನ್ನು ನಮೂದಿಸಿಯೇ ಇಲ್ಲ. ಭಾರತೀಯ ಸಂವಿಧಾನದಲ್ಲಿ 370 ವಿಧಿಯನ್ನು ತಾತ್ಕಾಲಿಕವಷ್ಟೇ ಎಂದು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.