ಜೈಪುರ: ಬಲವಂತವಾಗಿ ಆಕ್ರಮಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಜಸ್ಥಾನದ ರೈತರು ಮಣ್ಣಿನ ಸಮಾಧಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಜೈಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನಿನ್ದಾರ್ ಗ್ರಾಮದ 50ಕ್ಕೂ ಹೆಚ್ಚು ರೈತರು ಕಳೆದ ಮೂರು ದಿನಗಳಿಂದ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. 2010ರಲ್ಲಿ ರಾಜ್ಯ ಸರ್ಕಾರ ವಸತಿ ಯೋಜನೆಗಾಗಿ 333 ಎಕ್ಟೆರ್ ಭೂಮಿಯನ್ನು ವಶಪಡಿಸಿಕೊಂಡಿತ್ತು.
ಈ ಸಂಬಂಧ ಸೂಕ್ತ ಪರಿಹಾರಕ್ಕಾಗಿ ರೈತರು ಕೋರ್ಟ್ ಮೋರೆ ಹೋಗಿದ್ದರು. ರಾಜ್ಯ ಸರ್ಕಾರ ಪರಿಹಾರ ಮೊತ್ತವಾಗಿ 60 ಕೋಟಿ ರುಪಾಯಿಯನ್ನು ಕೋರ್ಟ್ ನಲ್ಲಿ ಠೇವಣಿ ಇಟ್ಟಿದ್ದು ಈ ಪರಿಹಾರ ಮೊತ್ತವನ್ನು ರೈತರು ತೆಗೆದುಕೊಂಡಿಲ್ಲ.
ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ವಿರುದ್ಧ ಹಲವು ಪ್ರತಿಭಟನೆಗಳನ್ನು ನಡೆಸಿದ್ದರು ಇಲ್ಲಿಯವರೆಗೂ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸದ ಕಾರಣ ರೈತರು ಮಣ್ಣಿನ ಸಮಾಧಿಯಲ್ಲಿ ಕುಳಿತು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.