Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

ಬುಧವಾರ ಸಕ್ಕರೆ ಬೆಲೆ ಕೆಜಿಗೆ 1ರೂಗಿಂತ ಹೆಚ್ಚು ಏರಿಕೆಯಾಗಿದ್ದು, ಸರಾಸರಿ ದರ 65.05 ರೂಗೆ ತಲುಪಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
Sugar prices rise again
ಸಕ್ಕರೆ ದರ ಏರಿಕೆ
Updated on

ನವದೆಹಲಿ: ಈರುಳ್ಳಿ ದರ ಗಗನದತ್ತ ಸಾಗಿರುವಂತೆಯೇ ಇತ್ತ ಸಕ್ಕರೆ ಕೂಡ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕೆಜಿಗೆ 65 ರೂ ದಾಟಿದೆ ಎಂದು ಹೇಳಲಾಗಿದೆ.

ಹೌದು.. ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸತತ ಎರಡನೇ ದಿನವೂ ಏರಿಕೆಯಾಗಿದೆ.

ಬುಧವಾರ ಸಕ್ಕರೆ ಬೆಲೆ ಕೆಜಿಗೆ 1ರೂಗಿಂತ ಹೆಚ್ಚು ಏರಿಕೆಯಾಗಿದ್ದು, ಸರಾಸರಿ ದರ 65.05 ರೂಗೆ ತಲುಪಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ನಿಗಾ ವಿಭಾಗ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಮಂಗಳವಾರ ಕೆಜಿಗೆ 63.97 ರೂ ನಷ್ಟಿದ್ದ ದೇಶದ ಸರಾಸರಿ ಚಿಲ್ಲರೆ ಸಕ್ಕರೆ ಬೆಲೆ ಬುಧವಾರ 65.05 ರೂಗೆ ಏರಿಕೆಯಾಗಿದೆ.

ಸಕ್ಕರೆ ಆಮದುಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಬಳಿಕ ಸಕ್ಕರೆಯ ಗಿರಣಿ ಮಟ್ಟದ (ಎಕ್ಸ್‌-ಮಿಲ್‌) ದರದಲ್ಲಿ ಸುಮಾರು ಶೇ.20ರಷ್ಟು ಇಳಿಕೆ ಕಂಡುಬಂದಿದ್ದರೂ, ಅದರ ಪ್ರಯೋಜನ ಇನ್ನೂ ಗ್ರಾಹಕರಿಗೆ ತಲುಪಿಲ್ಲ.

Sugar prices rise again
ರಾಜ್ಯದಲ್ಲಿ ಬರಗಾಲದ ಬಿಸಿ: ಗಗನಕ್ಕೇರಿದ ಸಕ್ಕರೆ, ಈರುಳ್ಳಿ ಬೆಲೆ..!

ತಿಂಗಳಲ್ಲಿ ಶೇ.34ರಷ್ಟು ಏರಿಕೆ

ಸದ್ಯದ ಸರಾಸರಿ ಚಿಲ್ಲರೆ ದರವು ಒಂದು ತಿಂಗಳ ಹಿಂದಿನ 48.68 ರೂಗೆ ಹೋಲಿಸಿದರೆ ಶೇ.34ರಷ್ಟು ಹೆಚ್ಚಾಗಿದೆ. ಒಂದು ವರ್ಷದ ಹಿಂದೆ ಕೆಜಿಗೆ 46.27ರೂ ನಷ್ಟಿದ್ದ ಸಕ್ಕರೆ ಬೆಲೆಗೆ ಹೋಲಿಸಿದರೆ ಈಗಿನ ದರ ಶೇ.41ರಷ್ಟು ಹೆಚ್ಚಾಗಿದೆ.

ಬುಧವಾರ ದೇಶದಲ್ಲಿ ಸಕ್ಕರೆಯ ಗರಿಷ್ಠ ಚಿಲ್ಲರೆ ಮಾರಾಟ ದರ ಕೆಜಿಗೆ 76 ರೂ ಆಗಿದ್ದರೆ, ಸಾಮಾನ್ಯವಾಗಿ ಹೆಚ್ಚು ವಹಿವಾಟಾಗುವ ದರ (ಮೋಡಲ್‌ ದರ) 65 ರೂ ರಷ್ಟಿತ್ತು. ಸಕ್ಕರೆಯ ಸಗಟು ದರವೂ ಬುಧವಾರ ಕೊಂಚ ಏರಿಕೆಯಾಗಿದ್ದು, ಕೆಜಿಗೆ 60.36 ರೂಗೆ ತಲುಪಿದೆ. ಒಂದು ತಿಂಗಳ ಹಿಂದೆ ಸಗಟು ದರ 45.34 ರೂ ಹಾಗೂ ಒಂದು ವರ್ಷದ ಹಿಂದೆ 43.02 ರೂ ನಷ್ಟಿತ್ತು.

ಗಿರಣಿ ಮಟ್ಟದ ದರ ಇಳಿಕೆ

ಸಕ್ಕರೆಯ ಎಕ್ಸ್‌-ಮಿಲ್‌ ದರ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಸಕ್ಕರೆ ಉದ್ಯಮ ಸಂಘಟನೆಗಳು ತಿಳಿಸಿವೆ. ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ಅವರು ಈ ವಾರದ ಆರಂಭದಲ್ಲಿ ಮಾತನಾಡಿ, ಕಚ್ಚಾ ಸಕ್ಕರೆ ಆಮದುಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಬಳಿಕ ಸಕ್ಕರೆಯ ಮಿಲ್‌ ದರ ಶೇ.18ರಷ್ಟು ಇಳಿದು ಕೆಜಿಗೆ 55 ರೂ.ಗೆ ಬಂದಿದೆ ಎಂದು ಹೇಳಿದ್ದರು.

ಕಳೆದ ವಾರ ಮಿಲ್‌ ದರ ದಾಖಲೆಯ 67 ರೂಗೆ ಏರಿಕೆಯಾಗಿತ್ತು. ಕೆಲವು ಸಕ್ಕರೆ ಕಾರ್ಖಾನೆಗಳು ದರವನ್ನು ಕೃತಕವಾಗಿ ಹೆಚ್ಚಿಸಿದ್ದರಿಂದ ಈ ಏರಿಕೆ ಸಂಭವಿಸಿತ್ತು ಎಂದು ಚೋಪ್ರಾ ಆರೋಪಿಸಿದ್ದರು. ‘ಸಕ್ಕರೆ ಕಾರ್ಖಾನೆಗಳು ಹೆಚ್ಚಿಸಿದ್ದ ಎಕ್ಸ್‌-ಮಿಲ್‌ ದರ ಈಗ ಇಳಿಕೆಯಾಗುತ್ತಿದೆ. 55 ರೂಗೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಲಿದೆ’ ಎಂದು ಅವರು ತಿಳಿಸಿದ್ದರು. ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಇರುವುದರಿಂದ ಬೆಲೆ ಏರಿಕೆಗೆ ಮೂಲಭೂತ ಕಾರಣಗಳಿಲ್ಲ ಎಂದೂ ಅವರು ಹೇಳಿದ್ದಾರೆ.

ಬೆಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ

ಸಕ್ಕರೆ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಅಕ್ಟೋಬರ್‌ 31ರವರೆಗೆ 10 ಲಕ್ಷ ಟನ್‌ ಕಚ್ಚಾ ಸಕ್ಕರೆ ಆಮದು ಮಾಡಲು ಅವಕಾಶ ನೀಡಿದೆ. ಇದರ ಜೊತೆಗೆ ಸಕ್ಕರೆ ವ್ಯಾಪಾರಿಗಳು ಹಾಗೂ ಪಾನೀಯ ತಯಾರಕರಂತಹ ಬೃಹತ್ ಗ್ರಾಹಕರಿಗೆ ದಾಸ್ತಾನು ಮಿತಿ ವಿಧಿಸಲಾಗಿದೆ. ಸಕ್ಕರೆ ರಫ್ತಿಗೂ ಕೆಲವು ತಿಂಗಳ ಹಿಂದೆಯೇ ನಿರ್ಬಂಧ ಹೇರಲಾಗಿದೆ.

ದೇಶದಲ್ಲಿ ಸಕ್ಕರೆ ದಾಸ್ತಾನು ಎಷ್ಟಿದೆ?

ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘಟನೆ (ISMA) ಪ್ರಕಾರ, 2025-26 ಮಾರುಕಟ್ಟೆ ವರ್ಷದಲ್ಲಿ ಎಥೆನಾಲ್‌ ಉತ್ಪಾದನೆಗೆ ವರ್ಗಾಯಿಸಿದ ಪ್ರಮಾಣವನ್ನು ಹೊರತುಪಡಿಸಿ ಭಾರತದ ನಿವ್ವಳ ಸಕ್ಕರೆ ಉತ್ಪಾದನೆ ಸುಮಾರು 279 ಲಕ್ಷ ಟನ್‌ ಇರಲಿದೆ ಎಂದು ಅಂದಾಜಿಸಲಾಗಿದೆ.

ಈ ಅವಧಿಯ ಆರಂಭದಲ್ಲಿ ದೇಶದ ಬಳಿ ಸುಮಾರು 50 ಲಕ್ಷ ಟನ್‌ ಸಕ್ಕರೆ ದಾಸ್ತಾನು ಇತ್ತು. ದೇಶೀಯ ವಾರ್ಷಿಕ ಸಕ್ಕರೆ ಬೇಡಿಕೆ ಸುಮಾರು 280ರಿಂದ 285 ಲಕ್ಷ ಟನ್‌ ಎಂದು ಅಂದಾಜಿಸಲಾಗಿದೆ. ರಫ್ತು ನಿಷೇಧಕ್ಕೂ ಮುನ್ನ ಭಾರತ ಸುಮಾರು 8 ಲಕ್ಷ ಟನ್‌ ಸಕ್ಕರೆಯನ್ನು ರಫ್ತು ಮಾಡಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಸಕ್ಕರೆ ದಾಸ್ತಾನು ಸುಮಾರು 35 ಲಕ್ಷ ಟನ್‌ ಇರಲಿದೆ ಎಂದು ISMA ಅಂದಾಜಿಸಿದೆ.

Sugar prices rise again
Onion Price: ಈರುಳ್ಳಿ ಬೆಲೆ ದಿಢೀರ್ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ; ಕಾರಣವೇನು?

ಪ್ರಸ್ತುತ ಮಾರುಕಟ್ಟೆ ವರ್ಷದಲ್ಲಿ ಒಟ್ಟು 309 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಸುಮಾರು 30 ಲಕ್ಷ ಟನ್‌ ಎಥೆನಾಲ್‌ ಉತ್ಪಾದನೆಗೆ ವರ್ಗಾವಣೆಯಾಗಲಿದೆ ಎಂದು ಸಂಘಟನೆ ತಿಳಿಸಿದೆ.

ಆರಂಭದಲ್ಲಿ 2025-26ನೇ ಮಾರುಕಟ್ಟೆ ವರ್ಷದಲ್ಲಿ ಭಾರತದ ಒಟ್ಟು ಸಕ್ಕರೆ ಉತ್ಪಾದನೆ 345 ಲಕ್ಷ ಟನ್‌ ಇರಲಿದೆ ಎಂದು ISMA ಅಂದಾಜಿಸಿತ್ತು. ಆದರೆ ಪ್ರತಿಕೂಲ ಹವಾಮಾನ ಹಾಗೂ ಕೀಟಬಾಧೆಯಿಂದ ಕಬ್ಬು ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ಉತ್ಪಾದನಾ ಅಂದಾಜನ್ನು ನಂತರ ಪರಿಷ್ಕರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com