

ಕೋಲ್ಕತಾ: ದಶಕಗಳ ಪ್ರಯಾಸದ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ BJP ಸರ್ಕಾರ ಮತದಾರರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಕೇವಲ 5 ರೂಪಾಯಿಗೆ ಮೀನು ಊಟ ಯೋಜನೆ ಘೋಷಿಸಿದೆ.
ಹೌದು.. ಸಿಎಂ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಕೇವಲ 5 ರೂಪಾಯಿಗೆ ಮೀನ ಊಟ ನೀಡುವ ಘೋಷಣೆ ಮಾಡಿದೆ. ರಾಜ್ಯ ಸರ್ಕಾರವು ಸುಮಾರು 400 ವಿಶೇಷ ಕ್ಯಾಂಟೀನ್‌ಗಳಲ್ಲಿ ವಾರಕ್ಕೆ ಎರಡು ದಿನ ಮೀನು-ಅನ್ನ ಊಟವನ್ನು ಕೇವಲ ₹5 ಸಬ್ಸಿಡಿ ದರದಲ್ಲಿ ಒದಗಿಸುವ ಯೋಜನೆ ಘೋಷಿಸಲಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿರುವಂತೆ ಮಹಿಳೆಯರಿಗೆ ಪ್ರತಿ ತಿಂಗಳು ₹3,000 ನೀಡುವ “ಅನ್ನಪೂರ್ಣ ಯೋಜನೆ”ಗಾಗಿ ಮೇ 27ರಿಂದ ಅರ್ಜಿ ಫಾರ್ಮ್‌ಗಳನ್ನು ವಿತರಿಸಲಾಗುವುದು ಎಂದು ಮಂಗಳವಾರ ಘೋಷಿಸಿದೆ.
ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, “ಅನ್ನಪೂರ್ಣ ಯೋಜನೆಯ ಫಾರ್ಮ್‌ಗಳನ್ನು ನಾಳೆಯಿಂದ ರಾಜ್ಯ ಕಾರ್ಯಾಲಯದಿಂದ ವಿತರಿಸಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಎಲ್ಲಾ ಭಾರತೀಯರು ಅರ್ಹರಾಗಿದ್ದಾರೆ ಎಂದು ಹೇಳಿದರು.
ಅದೇ ವೇಳೆ, ಶಾಲೆಗಳು, ಕಾಲೇಜುಗಳು ಮತ್ತು ಧಾರ್ಮಿಕ ಸ್ಥಳಗಳ ಸುತ್ತಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಇದಲ್ಲದೆ, ಪಶ್ಚಿಮ ಬಂಗಾಳ ಸರ್ಕಾರವು AYUSH ಇಲಾಖೆಯನ್ನು ಪ್ರತ್ಯೇಕವಾಗಿ ಸ್ಥಾಪಿಸಲು ನಿರ್ಧರಿಸಿದ್ದು, ಅದನ್ನು ಆರೋಗ್ಯ ಇಲಾಖೆಯಿಂದ ಬೇರ್ಪಡಿಸಲಾಗುವುದು ಎಂದು ಸಿಎಂ ಸುವೇಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆಡಳಿತಗಾರನ ಆಳ್ವಿಕೆ ಅಲ್ಲ, ಕಾನೂನಿನ ಆಳ್ವಿಕೆ
ಅಂತೆಯೇ ಬಂಗಾಳದಲ್ಲಿ "ಅಲ್ಲಿ ಆಡಳಿತಗಾರನ ಆಳ್ವಿಕೆ ಅಲ್ಲ, ಆದರೆ ಕಾನೂನಿನ ಆಳ್ವಿಕೆ" ಎಂದು ಹೊಸ ವ್ಯವಸ್ಥೆ ಇದೆ ಎಂದು ಹೇಳಿದ ಸುವೇಂದು ಅಧಿಕಾರಿ, "ನಾವು ಈ ಹಿಂದೆ ದುರ್ಗಾಪುರದಲ್ಲಿ ಬಂಕುರಾ, ಪೂರ್ವ ಬರ್ಧಮಾನ್ ಮತ್ತು ಪಶ್ಚಿಮ ಬರ್ಧಮಾನ್ ಅನ್ನು ಒಳಗೊಂಡ ಸಭೆಯನ್ನು ನಡೆಸಿದ್ದೆವು. ಇಂದು, ನಾವು ನಾಡಿಯಾ, ಉತ್ತರ 24 ಪರಗಣಗಳು ಮತ್ತು ಹೂಗ್ಲಿಯನ್ನು ಕೇಂದ್ರೀಕರಿಸಿ ಇಲ್ಲಿ ಸಭೆ ನಡೆಸಿದ್ದೇವೆ. ಮುರ್ಷಿದಾಬಾದ್, ಉತ್ತರ ದಿನಾಜ್‌ಪುರ ಮತ್ತು ದಕ್ಷಿಣ ದಿನಾಜ್‌ಪುರವನ್ನು ಒಳಗೊಂಡಂತೆ ಮಾಲ್ಡಾದಲ್ಲಿ ಇದೇ ರೀತಿಯ ಸಭೆಗಳು ನಡೆಯಲಿವೆ ಎಂದರು.
"ಒಂದು ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ, ಅಲ್ಲಿ ಅದು ಆಡಳಿತಗಾರನ ಆಳ್ವಿಕೆಯಲ್ಲ, ಬದಲಾಗಿ ಕಾನೂನಿನ ಆಳ್ವಿಕೆ ಇರಲಿದೆ. 'ರಾಷ್ಟ್ರ ಮೊದಲು' ಎಂಬ ತತ್ವದಲ್ಲಿ ನಂಬಿಕೆ ಇಡುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದೆ. ಹೊಸ ವ್ಯಕ್ತಿಗಳು ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ದೃಷ್ಟಿಕೋನವೇನು? ನಾವು ರಾಜ್ಯವನ್ನು ಹೇಗೆ ಆಳಲು ಬಯಸುತ್ತೇವೆ? ನಮ್ಮ ಪ್ರಣಾಳಿಕೆ ಏನು? ಈ ವಿಚಾರಗಳು ಮೊದಲು ಆಡಳಿತದ ಪ್ರತಿಯೊಂದು ಹಂತವನ್ನು ತಲುಪಬೇಕು. ಆ ಉದ್ದೇಶದಿಂದಲೇ ನಾವು ಈ ಜನಸಂಪರ್ಕ ಭೇಟಿಗಳು ಮತ್ತು ಸಭೆಗಳನ್ನು ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.
Advertisement