

ನವದೆಹಲಿ: ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ ಬರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಪ್ರಮಾಣದ ಇಂಧನವನ್ನು ಚಂದ್ರನಿಂದ ತರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಈ ಹಿಂದೆ ಅತ್ಯಂತ ಕಡಿಮೆ ದರದಲ್ಲಿ ಚಂದ್ರನ ಕಕ್ಷೆಗೆ ಉಪಗ್ರಹ ಕಳುಹಿಸಿದ್ದ ಇಸ್ರೋ ಅದೇ ಹುಮ್ಮಸ್ಸಿನಲ್ಲಿ ಚಂದ್ರ ಮೇಲ್ಮೈ ಮೇಲೆ ಗಣಿ ಯಂತ್ರಗಳನ್ನು ಇಳಿಸುವ ಮೂಲಕ ಅಲ್ಲಿರುವ ಅಪಾರ ಪ್ರಮಾಣದ ಹೀಲಿಯಂ-3 ಇಂಧನವನ್ನು ಭಾರತಕ್ಕೆ ರವಾನಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಇಸ್ರೋದ ಈ ಐತಿಹಾಸಿಕ ಯೋಜನೆ ಯಶಸ್ವಿಯಾಗಿದ್ದೇ ಆದರೆ 2030ರ ವೇಳೆಗೆ ಭಾರತ ತನಗೆ ಅಗತ್ಯವಿರುವ ಅಷ್ಟೂ ಪ್ರಮಾಣದ ಇಂಧನವನ್ನು ಅತ್ಯಂತ ಕಡಿಮೆ ದರದಲ್ಲಿ ಚಂದ್ರನಿಂದ ಪಡೆಯಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಸ್ರೋದ ಪ್ರಾಧ್ಯಾಪಕ ಮತ್ತು ಬ್ರಹ್ಮೋಸ್ ಏರೋಸ್ಪೇಸ್ ಯೋಜನೆಯ ಮುಖ್ಯಸ್ಥರೂ ಆಗಿರುವ ಶಿವತಾನು ಪಿಳ್ಳೈ ಅವರು, ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಪ್ರಮಾಣದ ಇಂಧನದ ಕೊರೆತೆಯನ್ನು ಚಂದ್ರ ನೀಗಿಸಲಿದ್ದು, ಈ ಕುರಿತ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ. ಬಹುಶಃ ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ಭಾರತಕ್ಕೆ ಅಗತ್ಯವಾದ ಇಂಧನವನ್ನು ಚಂದ್ರನಿಂದ ತರಿಸಿಕೊಳ್ಳಬಹುದು. ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ಹೀಲಿಯಂ-3 ಇದೆ. ಇದನ್ನು ಬೃಹತ್ ಯಂತ್ರಗಳ ಮೂಲಕ ತೋಡಿ ಭಾರತಕ್ಕೆ ರವಾನಿಸಬಹುದು. ವಿಶ್ವದ ನಾನಾ ದೇಶಗಳು ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದ್ದು, ಭಾರತ ಕೂಡ ಈ ಯೋಜನೆ ಸಂಬಂಧ ಕೆಲಸ ಆರಂಭಿಸಿದೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇಸ್ರೋದ ಮುಂದಿನ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದ ಶಿವತಾನು ಪಿಳ್ಳೈ ಅವರು, ‘ಚಂದ್ರನ ಮೇಲಿರುವ ಹೀಲಿಯಂ-3ನಿಂದ ಭಾರತದ ಸಂಪೂರ್ಣ ಇಂಧನ ಅಗತ್ಯೆತೆಯನ್ನು ಪೂರೈಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. 2030ರ ವೇಳೆ ಈ ಗುರಿ ಮುಟ್ಟಲಿದ್ದೇವೆ. ಚಂದ್ರನಲ್ಲಿ ಅಗಾಧ ಹೀಲಿಯಂ-3 ಇದೆ. ಇದನ್ನು ತೆಗೆದು, ತರುವ ಯೋಜನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇತರ ದೇಶಗಳು ಈ ಪ್ರಯತ್ನವನ್ನು ನಡೆಸುತ್ತಿವೆ. ವಿವಿದೋದ್ದೇಶ ಹಾಗೂ ಮರು ಬಳಕೆ ಮಾಡಬಹುದಾದ ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈ ತಂತ್ರಜ್ಞಾನ ಅಭಿವೃದ್ಧಿಯಾದರೆ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ದೊರೆಯಲಿದೆ’ ಎಂದು ಹೇಳಿದ್ದಾರೆ.
ಇಸ್ರೋಗೆ ಮೊದಲ ಜಯ
ಇನ್ನು ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮರುಬಳಕೆ ಮಾಡಬಹುದಾದ ರಾಕೆಟ್ (RLV-TD)ಗಳನ್ನು ಪರೀಕ್ಷೆ ನಡೆಸಿದ್ದು, ಅದು ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಅಲ್ಲದೆ ಹೆಚ್ಚು ಇಂಧನ ಬಳಸದ ಮತ್ತು ವಾತಾವರಣದಲ್ಲಿನ ಇಂಧನವನ್ನೇ ಬಳಸಿಕೊಳ್ಳುವ ಸ್ಕ್ರಾಮ್ ಜೆಟ್ ತಂತ್ರಜ್ಞಾನವನ್ನೂ ಕೂಡ ಇಸ್ರೋ ಸಂಶೋಧನೆ ಮಾಡಿತ್ತು. ಈ ಎಲ್ಲ ಯೋಜನೆಗಳು ಚಂದ್ರಯಾನ ಯೋಜನೆಗೆ ಪೂರಕವಾಗಲಿವೆ ಎಂದು ಹೇಳಲಾಗುತ್ತಿದೆ.