

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸರಣಿ ಕೈವಶ ಮಾಡಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ 20 ಸರಣಿಯನ್ನು 2-0 ಅಂತರದಿಂದ ಗೆದ್ದು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು, ಜೂಲನ್ ಗೋಸ್ವಾಮಿ ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ನಿಖರ ಬೌಲಿಂಗ್ನಿಂದ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿತು. ಮಳೆಯಿಂದ ಆಟ ತಡವಾಗಿ ಆರಂಭವಾದ ಕಾರಣ ಪಂದ್ಯವನ್ನು 18 ಓವರ್ಗಳಿಗೆ ಇಳಿಕೆ ಮಾಡಲಾಯಿತು. ಆಸ್ಟ್ರೇಲಿಯಾ ಅಂತಿಮವಾಗಿ 18 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.
126 ರನ್ ಗುರಿ ಬೆನ್ನತ್ತಿದ ಭಾರತವು ಉತ್ತಮ ಆರಂಭವನ್ನು ಪಡೆಯಿತು. ಈ ಹಂತದಲ್ಲಿ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು 10 ಓವರ್ಗಳಿಗೆ ಇಳಿಕೆ ಮಾಡಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗೆಲ್ಲಲು 66 ರನ್ ಗುರಿ ನಿಗದಿ ಪಡಿಸಲಾಯಿತು. ಸುಲಭದ ಗುರಿಯನ್ನು ಬೆನ್ನತ್ತಿದ ಮಿಥಾಲಿ ರಾಜ್ (37) ಮತ್ತು ಸ್ಮೃತಿ ಮಂದನ (22) ರನ್ ಗಳಿಸಿ ಜಯ ತಂದರು. ಅಂತಿಮವಾಗಿ ಭಾರತ 9.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿ ಜಯ ಪಡೆಯಿತು.