

'ದೇವಲೋಕದಿಂದ ಗಂಗೆ ಮತ್ತು ನಂದಿನಿ ಭೂಮಿಗೆ ಬಂತು. ಗಂಗೇನ ರೈತರು ತಗೊಂಡ್ರು, ನಂದಿನಿ ಮಗ ನಮ್ ಕೈಗೆ ಬಂತು. ನಾವು ಯಾದವರು ಸೋಮಿ. ನಂದಿನಿ ಮಗ ಬಸವನ್ನ ಕುಣಿಸಿ ನಮ್ ಬದುಕು. ಇದನ್ನ ಬಿಡೋ ಹಂಗಿಲ್ಲ'- ಶಿವಮೊಗ್ಗ ಜಿಲ್ಲೆಯ ಹಳ್ಳಿಯಿಂದ ಬಂದ ಸೋಮಯ್ಯ ಹೀಗೆ ಹೇಳಿದ. ಅವನ ಪಾಲಿಗೆ ಬಸವನೆಂದರೆ ದೇವರು. ಆಂಧ್ರದಿಂದ ಕರ್ನಾಟಕಕ್ಕೆ ವಲಸೆ ಬಂದು ಬೇಸಿಗೆಯ ಆರು ತಿಂಗಳಲ್ಲಿ ಬಸವನ ಹಗ್ಗ ಹಿಡಿದು ಮನೆಮನೆಗೆ ಹೋಗಿ ಬಸವನಾಟ ಆಡಿಸಿ ಕೈಗೆ ಬಂದ ಗಳಿಕೆಯಲ್ಲಿ ಸಾಗುವ ಬದುಕು ಅವನದು.
ಆಗುಂಬೆ ಘಾಟಿ ಇಳಿಯುತ್ತಾ ಜನಸಂದಣಿ ಇರುವ ಊರಿನಲ್ಲಿ ಡೇರಾ ಹಾಕಿ ಹಗಲಿನಲ್ಲಿ ಎಲ್ಲ ಮನೆಗಳಿಗೆ ಹೋಗಿ ರಾತ್ರಿ ಮರಳಿ ಡೇರಾ ಸೇರುತ್ತಾರೆ. ಒಂದೂರು ಮುಗಿಯುತ್ತಲೇ ಮುಂದಿನೂರು. ದಕ್ಷಿಣ ಕನ್ನಡ ಜಿಲ್ಲೆಯ ಬಳಿಕ ಉಡುಪಿ. ಅಲ್ಲಿಂದ ಕಾಸರಗೋಡು. ಕಾಞಂಗಾಡಿನವರೆಗೆ ಸಂಚರಿಸಿ ಮಳೆಗಾಲದಲ್ಲಿ ಊರು ತಲಪಿ, ಬೇಸಾಯಕ್ಕೆ ಸಜ್ಜಾಗುತ್ತಾರೆ. ಅವರಿರುವ ಹಳ್ಳಿಯಲ್ಲಿ ಎಲ್ಲರೂ ಬಸವನಾಟದವರೇ.
ಮನೆಯಲ್ಲಿ ಯಾರಾದರೊಬ್ಬರು ನಿಂತರಾಯಿತು. ಉಳಿದ ಸದಸ್ಯರೆಲ್ಲರಿಗೂ ಜೀವನ ಯಾತ್ರೆ. ಎದೆಹಾಲು ಕುಡಿಯುವ ಕಂದಮ್ಮ ಜೋಳಿಗೆಯಲ್ಲಿ. ಕಾಲ್ನಡಿಗೆಯ ಯಾನ. ತಲೆ ಮೇಲೆ ಬಟ್ಟೆಗಳ ಗಂಟು. ಯಾವುದೋ ಊರು, ಎಲ್ಲಿಯದೋ ನೀರು. ಶೀತವಿಲ್ಲ ಜ್ವರವಿಲ್ಲ. ಆಯಾಸ ಗೊತ್ತಿಲ್ಲ.
ಮುಂಜಾವಿನ ಐದು ಗಂಟೆಯೊಳಗೆ ಬಸವನಾಡಿಸುವವ ಎದ್ದು ಬಸವನಿಗೆ ತಿನ್ನಲು ಹುಲ್ಲು ಕುಡಿಯಲು ಹಿಂಡಿ ಹಾಕಿದ ಕಲಗಚ್ಚು ಕೊಡುತ್ತಾನೆ. ಬಸವನೇ ಅವರಿಗೆ ಬದುಕಾದ್ದರಿಂದ ಅವನ ಆರೈಕೆಯೇ ಇಲ್ಲಿ ಮುಖ್ಯ. ಗಳಿಕೆಯಲ್ಲಿ ನೂರು ರುಪಾಯಿ ಬಸವನ ಆಹಾರಕ್ಕೇ ಮೀಸಲು. ಅದಕ್ಕೆ ಸ್ನಾನ ಮಾಡಿಸಿ ಬೆಳ್ಳಿಯ ನಾಣ್ಯಗಳು, ಹಳೆಯ ಸೇನಾ ಪದಕಗಳು ಇತ್ಯಾದಿಗಳಿಂದ ಹೊಸೆದ ಹಣೆಪಟ್ಟಿಯಿಟ್ಟು ಕೊರಳಿಗೆ ಸರಗಳನ್ನು ಹಾಕಲಾಗುತ್ತದೆ. ಬೆನ್ನಿಗೆ ಬಣ್ಣದ ಪಟ್ಟೆಯ ಹಾಸು, ಬಳಿಕ ಯಾನ ಆರಂಭ. ಮನೆಯಾತನ ಮುಂದೆ ಬಸವ ಮಂಡಿಯೂರಿ ನಮಸ್ಕರಿಸುತ್ತಾನೆ. ಕೆಲವರಲ್ಲಿ ಹೆಣ್ಣು ಕರುವೂ ಜತೆಗಿರುತ್ತದೆ. ಅದಕ್ಕೆ ಸಾಧಾರಣ ಸಿಂಗಾರ. ಬಸವ ರಾಮನಾದರೆ ಈ ಕರು ಸೀತೆ. 'ಮದುವೆಯಾಗುತ್ತೀಯೋ ಬಸವ' ಎಂದರೆ ಹೌದೆಂದು ತಲೆಯಾಡಿಸುತ್ತಾನೆ. 'ವರದಕ್ಷಿಣೆ ಬೇಕೇ?' ಕೇಳಿದರೆ ಬೇಕಂತೆ! ಆದರೆ ವರದಕ್ಷಿಣೆ ಪಡೆಯುವ ಗಂಡು ತನಗೆ ಒಪ್ಪಿಗೆಯಿಲ್ಲವೆಂದು ಸೀತೆ ಸೆಡವಿನಿಂದ ದೂರ ಓಡುತ್ತಾಳೆ. ಅವಳನ್ನು ಸಮಾಧಾನಪಡಿಸಿ ಕರೆತಂದು ವರದಕ್ಷಿಣೆರಹಿತವಾದ ಮದುವೆ ನಡೆಯುತ್ತದೆ. ಇಂಥ ಹಲವು ಕಲ್ಯಾಣಗಳ ಆಟವೂ ಇದೆ.
ಹಲವು ಆಟಗಳನ್ನು ಕಲಿತಿರುವ ಬಸವ ಮನೆಮಂದಿಗೆ ಖುಷಿ ಕೊಡುತ್ತಾನೆ. ಮನೆಯಾಕೆ ಕೊಟ್ಟ ಅನ್ನವನ್ನೋ, ಹಿಂಡಿಯನ್ನೋ ತಿನ್ನುತ್ತಾನೆ. ಮನೆಯವರಿಗೆ ಖುಷಿಯಾದರೆ ಆಟವಾಡಿಸುವವನಿಗೂ ಗಳಿಕೆ. ಅವನಿಗೊಂದು ಪಂಚೆ. ಹೆಂಡತಿ ಇದ್ದರೆ ಸೀರೆ. ಹಣ- ಧಾನ್ಯ- ತೆಂಗಿನಕಾಯಿಗಳಿಂದ ಜೋಳಿಗೆ ಭರ್ತಿ. ಪೇಟೆಯಲ್ಲಿ ತಿರುಗಿದರೆ ಒಂದು ಪಾವಲಿಗಿಂತ ಹೆಚ್ಚಿಗೆ ಕೊಡುವವರಿಲ್ಲ. ಹೀಗಾಗಿ ಹಳ್ಳಿಯಲ್ಲಿ ಪ್ರಯಾಣ ಕಷ್ಟವಾದರೂ ಹಳ್ಳ ಸಂಕ ಎನ್ನುವ ಪ್ರಯಾಸಗಳ ಜತೆಗೆ ನಾಯಿಗಳ ಕಾಟವಿದ್ದರೂ ಗಳಿಕೆಯ ದೃಷ್ಟಿಯಿಂದ ಹಳ್ಳಿಗಳೇ ಪ್ರಶಸ್ತವಂತೆ.
ಅತಿ ಚಿಕ್ಕ ಕರುವಿದ್ದಾಗಲೇ ನಿತ್ಯ ನಸುಕಿನಲ್ಲಿ ಬಸವನಿಗೆ ವಿವಿಧ ಆಟಗಳನ್ನು ಕಲಿಸುವುದು ರೂಢಿ. ದೇಗುಲಗಳಿಗೆ ಹರಕೆಯಾಗಿ ಬಂದ ಗಂಡುಕರುಗಳನ್ನು ಕಟುಕರಿಗೆ ಕೊಡದೆ ಬಸವನಾಟದವರಿಗೆ ಉಚಿತವಾಗಿ ಕೊಡುತ್ತಾರೆ. ಮುಂದೆ ಬಸವ ವಯಸ್ಸಿನ ಕಾರಣದಿಂದ ದುಡಿಯಲು ಅಶಕ್ತವಾದರೆ ಅದನ್ನು ಮತ್ತೆ ಅದೇ ದೇಗುಲಕ್ಕೆ ಮರಳಿಸಬೇಕು. ಕಟುಕರಿಗೆ ಮಾರಬಾರದೆಂಬ ಲಿಖಿತ ಕರಾರು ಇರುತ್ತದೆ. ಹೀಗೆ ಸಾವಿರಾರು ಮಂದಿ ಬಸವನಾಟದವರು ಕಟುಕನ ಕತ್ತಿಗೆ ಬಲಿಯಾಗಲಿದ್ದ ಜೀವಗಳಿಗೆ ಬದುಕು ನೀಡಿ, ತಾವೂ ಅದರೊಂದಿಗೆ ಬದುಕುತ್ತಾರೆ.
ಕಾಲಿಗೆ ಲಾಳ ಹೊಡೆಸಿಕೊಂಡು ನೂರಾರು ಮೈಲು ಸಂಚರಿಸಿ ಕುಟುಂಬದ ಹೊಟ್ಟೆ ತುಂಬಿಸುವ ಬಸವ ಅನುಭವಿಸುವ ಒಂದರ್ಥದ ನೋವಿನಲ್ಲೂ ಜೀವನ ಪದ್ಧತಿಯೊಂದು ಅನಾವರಣಗೊಳ್ಳುತ್ತದೆ.
ಡೌರಿ ವಿರೋಧಿ ಬಸವ!
ವ್ಯಥೆಯ ಸಂಗತಿಯೆಂದರೆ, ಇವರ ಮಕ್ಕಳಿಗೆ ಶಾಲೆಯ ಭಾಗ್ಯವಿಲ್ಲ. ಆರು ತಿಂಗಳು ಊರಿನಲ್ಲಿರುವಾಗ ಮಕ್ಕಳು ಶಾಲೆಗೆ ಹೋಗುತ್ತಾರೆಂದು ಹೇಳುವ ಅವರ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ವರದಕ್ಷಿಣೆಯ ವಿರುದ್ಧ ಬಸವನ ಮೂಲಕ ಸಂದೇಶ ಸಾರಿದರೂ ಈ ಜನರಲ್ಲಿ ವರದಕ್ಷಿಣೆಯ ಹಾವಳಿ ತೀವ್ರವಿದೆಯೆಂಬುದೂ ಸೋಜಿಗ. <
-ಪ. ರಾಮಕೃಷ್ಣ ಶಾಸ್ತ್ರಿ