

ಹಾರ್ಮೋನಿಯಂ ಆಗಲಿ, ಕೀಬೋರ್ಡ್ ಆಗಲಿ ನುಡಿಸಲು ಬೆರಳುಗಳು ಬೇಕೇಬೇಕು. ಆದರೆ ಸಹವಾಗಿ ಎಷ್ಟು ಬೆರಳುಗಳು ಇರಬೇಕೋ ಅಷ್ಟಿಲ್ಲದ ವ್ಯಕ್ತಿಯೂ, ಇಂತಹ ವಾದ್ಯಗಳಲ್ಲಿ ಸ್ವರಗಳನ್ನು ರಾಗ-ತಾಳಕ್ಕೆ ತಕ್ಕಂತೆ ಸುಲಲಿತವಾಗಿ ಹಾಗೂ ಸುಮಧುರವಾಗಿ ನುಡಿಸಲು ಸಾಧ್ಯವಾದೀತೆ?
'ಇದು ಸಾಧ್ಯ' ಎಂದು ತೋರಿಸಿಕೊಟ್ಟಿದ್ದಾರೆ ಮೈಸೂರಿನ ಬಿ.ಗಣೇಶ ಭಟ್. ಎಲ್ಲರಿಗೂ ಎರಡು ಕೈಗಳಲ್ಲಿ ತಲಾ ಐದರಂತೆ ಹತ್ತು ಬೆರಳು, ಎಲ್ಲೋ ಕೆಲವರಿಗೆ 11 ಅಥವಾ 12 ಬೆರಳುಗಳಿರುತ್ತವೆ. ಆದರೆ ಗಣೇಶ ಭಟ್ರ ಎರಡೂ ಕೈಗಳಲ್ಲಿ ಇರುವುದು ತಲಾ 2 ಬೆರಳುಗಳು ಮಾತ್ರ! ಅವೂ ಜಂಟಿಯಾಗಿವೆ. ಎಡ ಮತ್ತು ಬಲ ಕೈಗಳಲ್ಲಿನ ಬೆರಳು ಬಹುತೇಕ ಒಂದೇ ರೀತಿಯಿವೆ.
ಕೈಗಳಂತೆ ಎರಡು ಕಾಲುಗಳಲ್ಲಿಯೂ ಸಹಜದಂತೆ ಬೆರಳುಗಳಿಲ್ಲ. 'ವಿ' ಆಕಾರದಲ್ಲಿ ಕಾಲಿನ ಹಸ್ತಗಳು ಮೂಡಿವೆ. ಹುಟ್ಟಿನಿಂದಲೇ ಇಂತಹ ಅಂಗವಿಕಲತೆಗೆ ಒಳಗಾದ ಇವರಿಗೆ ಆರಂಭದಲ್ಲಿ ಬದುಕಿನ ನಿರ್ವಹಣೆಗೆ ಭಯ ಪಡುವಂತಾದರೂ ಕಾಲಕ್ರಮೇಣ, ಆ ಅಪರೂಪದ ಕೈ ಹಸ್ತವೇ ಅವರ ಬದುಕಿಗೆ ಅಭಯ ವರದಾನವಾದದ್ದು ಆಶ್ಚರ್ಯದ ಸಂಗತಿ.
ಮೂಲತಃ ಉತ್ತರಕನ್ನಡ ಜಿಲ್ಲೆ ಕುಮಟಾದವರಾದ ಇವರು, ವಿದ್ವಾಂಸ ಷಡಕ್ಷರಿ ಗವಾಯಿ ಅವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ನಂತರ ಮೈಸೂರಿಗೆ ವಿದ್ಯಾಭ್ಯಾಸದ ಸಲುವಾಗಿ ಬಂದು ಇಲ್ಲಿನ ಮಾನಸಗಂಗೋತ್ರಿಯಲ್ಲಿರುವ ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಸೇರಿ ಆರ್ಕಿಟೆಕ್ಟ್ ವಿಷಯದಲ್ಲಿ ಡಿಪ್ಲೋಮಾ ಪಡೆದರು.
ಈ ಮಧ್ಯೆ ಕೀಬೋರ್ಡ್ ನುಡಿಸುವಲ್ಲಿ ಆಸಕ್ತಿ ಬೆಳೆಯಿತು. ತಾವು ಕಲಿತ ಡಿಪ್ಲೋಮಾ ಪದವಿಯನ್ನು ಪಕ್ಕಕಿಟ್ಟು, ಸಂಗೀತದ ಒಲವು ಮೈಗೂಡಿಸಿಕೊಂಡರು. ಕೀಬೋರ್ಡ್ ವಾದಕರಾಗಿ ಪರಿಣತಿ ಹೊಂದಿದರು. ಕಾರ್ಯಕ್ರಮಗಳಿಗೆ ಸಂಗೀತ ನುಡಿಸುವ ಕಲಾವಿದರಾಗಿ ಗುರುತಿಸಿಕೊಂಡರು. 10 ವರ್ಷ ಹಿಂದೆ ಸಂಗೀತ ಪಯಣ ಆರಂಭವಾದದ್ದು ಹೀಗೆ. ಈಗ ಮೈಸೂರಿನ ಕೀಬೋರ್ಡ್ ವಾದಕರಲ್ಲಿ ಮುಂಚೂಣಿಯ ಹೆಸರು. 'ಕೀಬೋರ್ಡ್ ಮಾಂತ್ರಿಕ' ಎನ್ನುವುದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಬಿರುದು.
ಸಿ.ಅಶ್ವತ್ಥ್, ಪುತ್ತೂರು ನರಸಿಂಹ ನಾಯಕ್, ಶಂಕರ್ ಶಾನಭಾಗ್, ಎಂ.ಡಿ. ಪಲ್ಲವಿ ಸೇರಿದಂತೆ ಪ್ರಖ್ಯಾತ ಸುಗಮ ಸಂಗೀತಗಾರರ ಕಾರ್ಯಕ್ರಮಗಳಲ್ಲಿ ಕೀಬೋರ್ಡ್ ನುಡಿಸಿದ್ದಾರೆ. 'ಬಂಗಾರು ನನ್ನ ಕುಚ್ಚಿಕೂ' ಹಾಗೂ ಮಹದೇಶ್ವರನ ಕುರಿತ ಸಿನಿಮಾಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದು, ಹಾಡುಗಳ ಚಿತ್ರೀಕರಣ ಮುಗಿದಿದೆ. ನಂಜನಗೂಡಿನ ನಂಜುಂಡೇಶ್ವರನ ಕುರಿತು ರಾಜೇಶ್ ಕೃಷ್ಣನ್ ಹಾಗೂ ಶಮಿತಾ ಮಲ್ನಾಡ್ ಹಾಡಿರುವ ಮೈಸೂರು ಶ್ರೀಹರಿ ನಿರ್ಮಾಣದ ವಿಸಿಡಿಗೂ ಇವರದೇ ಸಂಗೀತ ನಿರ್ದೇಶನ.
ದೂರದರ್ಶನ ಹಾಗೂ ವಿವಿಧೆಡೆ ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಭಾಗವಹಿಸುವುದರ ಜೊತೆಗೆ, ಆಸಕ್ತರಿಗೆ ಕೀಬೋರ್ಡ್ ಕಲಿಸುವಲ್ಲಿಯೂ ತೊಡಗಿಸಿಕೊಂಡಿದ್ದಾರೆ ಗಣೇಶ್ ಭಟ್. ಇಲ್ಲಿನ ಗಂಗೋತ್ರಿ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿಯೇ ಪುಟ್ಟ ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿ, ಮಡದಿ ವಾಣಿಶ್ರೀ ಅವರೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.
ಒಂದೊಂದು ಕೈಯ್ಯಲ್ಲಿರುವುದು ಎರಡೇ ಬೆರಳು. ಅದೂ ಒಂದಕ್ಕೊಂದು ಕೂಡಿಕೊಂಡು. ಕೀಬೋರ್ಡ್ ಮುಂದೆ ಕುಳಿತರೆಂದರೆ ಎಲ್ಲರೂ ತಲೆದೂಗಬೇಕು.
-ಮಾ. ವೆಂಕಟೇಶ್