

'ಸಂತ ಶಿಶುನಾಳ ಷರೀಫ' ಚಿತ್ರಗಳಿಂದ ಲೆಕ್ಕ ಶುರುವಾಗುತ್ತದೆ. ಕೆಲವರು ಫಾರ್ಟಿ ಅಂತಾರೆ, ಮತ್ತೆ ಕೆಲವರು ಐದು ಸೇರಿಸಿ 'ಪ್ಲಸ್' ಎನ್ನುತ್ತಾರೆ.
ಈ ನಟಿಯ ವಯಸ್ಸು ಎಷ್ಟು...?
ಸುಮನ್ ರಂಗನಾಥ್ರನ್ನು ನೋಡಿದಾಗಲೆಲ್ಲ ಇದೇ ಪ್ರಶ್ನೆ. ಐದಾರು ವರ್ಷ ಬಿಟ್ಟು ನೋಡಿದಾಗಲೂ ಮತ್ತೆ ಅದೇ ಪ್ರಶ್ನೆ, 'ಈಕೆಯ ವಯಸ್ಸು' ಎಷ್ಟು? ಸೌಂದರ್ಯದ ಚಾಲಾಕಿತನ ವಯಸ್ಸಿನ ರೇಖೆಗಳನ್ನು ಮರೆ ಮಾಚುತ್ತದೆ ಎನ್ನುತ್ತಾರೆ. ಈ ಮಾತು ನಟಿ ಸುಮನ್ ರಂಗನಾಥ್ರನ್ನೇ ನೋಡಿ ಹೇಳಿರಬೇಕು. ಯಾವುದೇ ಸಿನಿಮಾ ಪತ್ರಿಕಾಗೋಷ್ಟಿಗಳಲ್ಲಿ ಈಕೆಯನ್ನು ಕಂಡ ಪತ್ರಕರ್ತರು ಕೂಡ ಇದೇ ಪ್ರಶ್ನೆ ಕೇಳುತ್ತಾರೆ. ಉತ್ತರ ಹೇಳಬೇಕಾದ ಸುಮನ್ ನಕ್ಕು ಸುಮ್ಮನಾಗುತ್ತಾರೆ.
ಆದರೆ ಎದುರಿಗಿದ್ದವರಿಗೆ ಈಕೆಯ ವಯಸ್ಸಿನ ಕುತೂಹಲ, ಸುಮ್ಮನಿದ್ದರೆ ತಾನೆ? 'ಸಿಬಿಐ ಶಂಕರ್', 'ಸಂತ ಶಿಶುನಾಳ ಷರೀಫ' ಚಿತ್ರಗಳಿಂದ ಲೆಕ್ಕ ಶುರುವಾಗುತ್ತದೆ. ಕೆಲವರು ಫಾರ್ಟಿ ಅಂತಾರೆ, ಮತ್ತೆ ಕೆಲವರು ಐದು ಸೇರಿಸಿ 'ಪ್ಲಸ್' ಎನ್ನುತ್ತಾರೆ. ಆದರೆ ಸುಮನ್ ರಂಗನಾಥ್ರನ್ನು ಬಲ್ಲವರು 'ಏನೂ ಇಲ್ಲ ಸಾರ್, ಫಾರ್ಟಿಫೈವ್ ದಾಟಿದೆ. ಸದ್ಯದಲ್ಲೇ ಫಸ್ಟ್ ಹಾಫ್ ಮುಗಿಯುತ್ತದೆ' ಎಂದು ಥೇಟ್ ಸಿನಿಮಾ ಶೈಲಿಯಲ್ಲೇ ಹೇಳುತ್ತಾರೆ. ಅದೇನೆ ಇರಲಿ, ಸುಮನ್ಳನ್ನು ಸುಮ್ಮನೆ ನೋಡಿದಾಗಲೂ ಆಕೆಯ ವಯಸ್ಸಿನ ಗೆರೆಗಳು ಯಾರಿಗೂ ಕಾಣಲ್ಲ. ಆಕೆ ಒಂಥರಾ 'ಸೌಂದರ್ಯದ ಕಾದಂಬರಿ' ಇದ್ದಂತೆ. ಅದನ್ನು ಓದುವವರಿಗೆ ಪ್ರತಿ ದಿನ, ಪ್ರತಿ ಕ್ಷಣ ಹೊಸದಾಗಿ ಯೌವ್ವನ ಭರಿತವಾಗಿಯೇ ಕಾಣುತ್ತದೆ.
ನಟ ಶಂಕರ್ನಾಗ್ 'ಸಿಬಿಐ ಶಂಕರ್' ಚಿತ್ರದಲ್ಲಿ 'ಗೀತಾಂಜಲಿ...' ಎನ್ನುತ್ತ ಹಿಂದೆ ಹೋಗುತ್ತಿದ್ದರೆ, ಹುಸಿ ಕೋಪಗೊಂಡು ಮುಖ ಸಿಂಡರಿಸಿಕೊಳ್ಳುವ ಮುಗ್ಧ ಸುಂದರಿ ಯಾರಿಗೆ ನೆನಪಿಲ್ಲ ಹೇಳಿ? ಒಂದು ಮಾಹಿತಿಯ ಪ್ರಕಾರ ಹತ್ತು ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈಕೆ, ಕನ್ನಡ, ತಮಿಳು, ಹಿಂದಿ, ಮಲೆಯಾಳಂ ಹೀಗೆ ದಕ್ಷಿಣ ಭಾರತೀಯ ಪ್ರಮುಖ
ಭಾಷೆಯ ಚಿತ್ರಗಳಲ್ಲಿ ಪಯಣಿಸಿದ್ದಾರೆ. ಆದರೆ ಈ ಕನ್ನಡದ ಸುಂದರಿ ಒಂದು ಕಾಲದಲ್ಲಿ ಬಾಂಬೆ ಬೆಡಗಿ ಆದ ಮೇಲೆ ಗಾಂಧಿನಗರಕ್ಕೆ ಅಪರೂಪವಾಗಿಬಿಟ್ಟಿದ್ದರು. 'ಓ ಗಂಡಸರೆ ನೀವೆಷ್ಟು ಒಳ್ಳೆಯವರು' ಎಂದ ಈಕೆ, ತೆರೆ ಹಿಂದೆ ಸ್ವತಂತ್ರ ಜೀವಿ. ಬಾಂಬೆನಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡು ಇದ್ದವಳನ್ನು, 'ಬಿಂದಾಸ್', 'ಬುದ್ಧಿವಂತ', 'ಕಲಾಕಾರ್', 'ಸಿದ್ಲಿಂಗು', 'ಕಠಾರವೀರ ಸುರಸುಂದರಾಂಗಿ', 'ಮೈನಾ', 'ಜಿಂಕೆಮರಿ' ಮುಂತಾದ ಚಿತ್ರಗಳು ಇಲ್ಲಿಗೆ ಕರೆತಂದವು.
ಆದರೆ 'ಬುದ್ಧಿವಂತ', 'ಸಿದ್ಲಿಂಗು', 'ಗಲಾಟೆ' ಚಿತ್ರಗಳಲ್ಲಿ ಈಕೆಯ ಮೈ ಮಾಟವನ್ನು ನೋಡಿದವರು 'ಕಳೆದು ಕೊಂಡ ಅಪರೂಪದ ಮುತ್ತು ಮತ್ತೆ ಸಿಕ್ಕಷ್ಟು' ಖುಷಿ ಪಟ್ಟರು. 'ಅರೆ! ವಯಸ್ಸು ಎಷ್ಟು' ಎನ್ನುವ ಪ್ರಶ್ನೆಯನ್ನೂ ಕೇಳಿಕೊಂಡರು. ನಟ ಉಪೇಂದ್ರರೊಂದಿಗೆ 'ನೀ ನನಗೆ ಬೇಕು ನೀ ನನಗೆ ಬೇಕು' ಎಂದ 'ಸಿದ್ಲಿಂಗು'ನ ಈ ಅಂಡಾಳಮ್ಮನ ಪಾತ್ರ ನೋಡಿದ ಪ್ರೇಕ್ಷಕರು ತಮ್ಮ ಹಳೆ ನೋಟ್ ಬುಕ್ಗಳನ್ನು ಹೊಸ ನವಿಲು ಗರಿಯನ್ನು ನೋಡಿದ ಸಂಭ್ರಮಕ್ಕೆ ಸಾಕ್ಷಿಯಾದರು. ಈಗಿನ ಹೊಸ ತಲೆಮಾರಿನ ನಟಿಯರು ಟೂ ಪೀಸ್ ಹಾಕಿಕೊಳ್ಳುವುದಕ್ಕೆ ಕ್ಯೂನಲ್ಲಿ ನಿಲ್ಲುತ್ತಾರೆ. ಆದರೂ ಈ ಫಾರ್ಟಿ ಪ್ಲಸ್ ನಟಿಯ ಮುಂದೆ ಹೊಸಬರ ಬಿಕಿನಿ ಸೌಂದರ್ಯ ಪೇಲವವಾಗಿ ಕಾಣಿಸುತ್ತದೆ.
ಜಾರಿ ಬೀಳುವ ಸೀರೆ, ಕಂಡೂ ಕಾಣದಂತೆ ಆಗಾಗ ಮಿಂಚುವ ಬೆನ್ನು, 'ಆಸೆ'ಗಳನ್ನು ಹೊತ್ತಂತೆ ಕಾಣುವ ತುಟಿಗಳು... ಹೀಗೆ ವರ್ಣಿಸಿದರೆ 'ಸುಮ್ ಸುಮ್ನೆ ನೋಡಬೇಡ' ಎಂದು ತುಂಟ ನಗೆ ಬೀರಬಲ್ಲ ಉದಾರವಾದಿ ಚೆಲುವೆ ಈಕೆ. ಗ್ಲಾಮರ್, ಗ್ರಾಮರ್ಗೆ ವಯಸ್ಸಿನ ಹಂಗೇನು ಇಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆಯಂತಿರುವ ಸುಮನ್ ರಂಗನಾಥ್, ಸದ್ಯ ವಯಸ್ಸಿನ ಭೇದವಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನು ಮೋಡಿ ಮಾಡುವಾಕೆ.
ನಟಿ ಸುಮನ್ ರಂಗನಾಥ್ ನೋಡಲು 'ಸೌಂದರ್ಯ ಕಾದಂಬರಿ' ಇದ್ದಂತೆ. ಪ್ರತಿ ದಿನ, ಪ್ರತಿ ಪುಟವೂ ಹೊಸದಾಗಿಯೇ ಕಾಣುತ್ತದೆ. ಈಕೆ 'ಫಾರ್ಟಿ ಫ್ಲಸ್'ನಲ್ಲೂ ಪಾಪರ್ ಆಗಲಿಲ್ಲ ಎಂಬುದು ರಸಿಕರ ಸಮಾಧಾನ. -ಸುಮನ್ ರಂಗನಾಥ್
-ಆರ್.ಕೇಶವಮೂರ್ತಿ