'ಜಗವಿದು ನಾಲ್ಕು ದಿನದ ನಾಟಕ. ದೇಹ ನಶ್ವರ, ಮಣ್ಣಿನಲ್ಲಿ ಮಣ್ಣಾಗಿ ಹೋಗುವ ದೇಹದ ಕಾಳಜಿಗಿಂತ ಆತ್ಮದ ಉದ್ಧಾರಕ್ಕಾಗಿ ಜೀವನವನ್ನು ನಡೆಸಬೇಕು' ಎಂದು ಉಪದೇಶ ಮಾಡಿದ ಸ್ವಾಮೀಜಿಗಳಿಗೆ ಭಕ್ತರೊಬ್ಬರು ವಿದೇಶಿ ಪರ್ಫ್ಯೂಮ್ ಒಂದನ್ನು ಅರ್ಪಿಸಿದರು. ಕಾಣಿಕೆಯನ್ನು ಸ್ವೀಕರಿಸಿದ ಶ್ರೀಗಳು ಭಕ್ತರನ್ನು ಆಶಿರ್ವದಿಸಿದರು. ನಂತರದ ದಿನಗಳಲ್ಲಿ ಶ್ರೀಗಳ ನಶ್ವರ ದೇಹದಿಂದ ಪರ್ಫ್ಯೂಮ್ನ ಸುವಾಸನೆ ಭಕ್ತರ ಮನಸ್ಸಿಗೆ ಆನಂದ ನೀಡುತ್ತಿತ್ತು.
ಭಾರೀ ಕಳ್ಳ ಬಚಾವ್!
ಶ್ರೀಮಂತ ಸರ್ಕಾರಿ ಅಧಿಕಾರಿಯೊಬ್ಬನ ಮನೆಯಲ್ಲಿ ಕಳ್ಳತನದ ಪ್ರಯತ್ನ ನಡೆಯಿತು. ಪೊಲೀಸರು ಕಳ್ಳನನ್ನು ಹಿಡಿದು ಚಿತ್ರಹಿಂಸೆ ನೀಡಿದರು. ಪತ್ರಿಕೆಯವರು ಕಳ್ಳನ ಭಾವಚಿತ್ರದೊಂದಿಗೆ ಪೊಲೀಸರ ಕಾರ್ಯವನ್ನು ಪ್ರಶಂಸಿಸಿದರು. ಜನ ಕಳ್ಳನಿಗೆ ಹಿಡಿಶಾಪ ಹಾಕಿದರು. ನ್ಯಾಯಾಲಯವು ಕಳ್ಳನಿಗೆ ಉಗ್ರ ಶಿಕ್ಷೆಯನ್ನು ನೀಡಿತು. ಕಳ್ಳನಿಗೆ ತುಂಬಾ ಅವಮಾನ ಮಾಡಲಾಯಿತು. ಕದ್ದ ಆಸ್ತಿಯನ್ನು ಆ ಅಧಿಕಾರಿಗೆ ಹಿಂದಿರುಗಿಸಲಾಯಿತು.
ಆದರೆ ಆ ಆಸ್ತಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ಸಂಪಾದಿಸಿದ್ದೆಂಬುದರ ಬಗ್ಗೆ ಯಾವ ಪತ್ರಿಕೆಯೂ ಬರೆಯಲಿಲ್ಲ. ಆತ ಸರ್ಕಾರದ ಅಂದರೆ ಜನರ ಹಣವನ್ನು ಕದ್ದ ಭಾರೀ ದೊಡ್ಡ ಕಳ್ಳನೆಂಬ ವಿಚಾರ ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದರಿಂದಲೋ ಏನೋ ತಿಳಿಯಲೇ ಇಲ್ಲ.
-ಇಫ್ಕೋ ಗೋವಿಂದರಾಜ