ಚೆಸ್ ಆಡುತ್ತಿದ್ದೀರೆಂದುಕೊಳ್ಳಿ. ನಿಮ್ಮ ಎದುರಾಳಿ ಸ್ನೇಹಿತ ಮುನ್ನಡೆ ಸಾಧಿಸುತ್ತಾ ಹೋಗುತ್ತಿದ್ದಾನೆ. ಎಷ್ಟೇ ತಿಣುಕಾಡಿದರೂ ನಿಮಗೆ ಅವನನ್ನು ಕಟ್ಟಿ ಹಾಕುವುದಿರಲಿ, ಕನಿಷ್ಠ ಒಂದು ಹೆಜ್ಜೆ ಮುನ್ನಡೆ ಸಾಧಿಸಲೂ ಆಗುತ್ತಿಲ್ಲ. ಕೈ ಕೈ ಹಿಸುಕಿಕೊಳ್ಳುತ್ತಿರುವ ಹೊತ್ತಿಗೆ ಆತನಿಗೆ ಯಾವುದೋ ಫೋನ್ ಕಾಲ್ ಬರುತ್ತದೆ. ಅಥವಾ ಯಾವುದೋ ಕಾರಣಕ್ಕೆ ಎದ್ದು ಹೋಗಬೇಕಾಗಿ ಬರುತ್ತದೆ. ಇದೇ ಸುಸಂದರ್ಭ. ಒಂದು ನಡೆಯನ್ನು ಅವನಿಗೆ ಗೊತ್ತಿಲ್ಲದಂತೆ ಬದಲಿಸಿಬಿಡುತ್ತೀರಿ. ಜತೆಗೆ ಅವನ ಏಕಾಗ್ರತೆಯೂ ತಪ್ಪಿ ಮುಂದಿನ ಹೆಜ್ಜೆಗಳಲ್ಲಿ ನಿಮ್ಮ ಮೇಲುಗೈ ಸಾಧ್ಯವಾಗುತ್ತದೆ. ಅಂತೂ ಗೆಲುವು ನಿಮ್ಮದೇ. ಇನ್ನಿಲ್ಲದ ಖುಷಿಯಿಂದ ಮೇಲೇಳುತ್ತೀರಿ. ನಿಮ್ಮ ಸ್ನೇಹಿತ ಇದು ಹೀಗೇಕಾಯಿತೆಂದು ಗೊತ್ತಾಗದೇ ಗೊಂದಲಕ್ಕೀಡಾದದ್ದೂ ಕಂಡು ನೀವು ಇನ್ನಷ್ಟು ಹಿಗ್ಗಿರುತ್ತೀರಿ. ನಿಮ್ಮ ಅತಿ ಬುದ್ಧಿವಂತಿಕೆಗೆ ನಿಮ್ಮೊಳಗೆ ನೀವೇ ಬೆನ್ನು ತಟ್ಟಿಕೊಳ್ಳುತ್ತಿರಿ.
ಹೇಗೋ ಗೆದ್ದದ್ದಂತೂ ನಿಜ. ಆದರೆ ಅದು ನಿಜವಾಗಲೂ ನಿಮ್ಮ ಜಯ ಖಂಡಿತಾ ಆಗಿರುವುದಿಲ್ಲ. ನೀವೆಷ್ಟೇ ಖುಷಿಪಟ್ಟುಕೊಂಡರೂ ನಿಮ್ಮೊಳಗೆ ನಿಮಗೇ ಅಳುಕನ್ನು ಅನುಭವಿಸುತ್ತಲೇ ಇರುತ್ತೀರಿ. ನಿಮಗಷ್ಟೇ ಗೊತ್ತು ನೀವು ಗೆದ್ದಿಲ್ಲ ಎಂದು. ಅವತ್ತು ಮತ್ತೆ ಮತ್ತೆ ಮತ್ತೆ ನಿಮ್ಮ ಮೋಸದಾಟ ನಿಮ್ಮನ್ನೇ ಕಾಡುತ್ತಿರುತ್ತದೆ. ಜೀವನವೂ ಹಾಗೆಯೇ. ಏನೇನೋ ಕಸರತ್ತುಗಳನ್ನು ಮಾಡಿ, ಒಳಹಾದಿ, ತಳ ಹಾದಿಗಳಲ್ಲಿ ನುಸುಳಿ, ಯಾರನ್ನೋ ನಂಬಿಸಿ, ಇನ್ಯಾರನ್ನೂ ವಂಚಿಸಿ ನೀವು ಬೆಳೆದು ಬಿಡಬಹುದು. ಯಶಸ್ಸು ಗಳಿಸಿಬಿಡಿಬಹುದು. ಸುತ್ತಲ ಸಮಾಜವನ್ನೂ ಒಪ್ಪಿಸಿಬಿಡಬಹುದು. ಎಲ್ಲರನ್ನೂ ನಂಬಿಸಿ ತಾತ್ಕಾಲಿಕ ಪ್ರತಿಷ್ಠೆಯನ್ನೂ ಗಳಿಸಿಕೊಳ್ಳಬಹುದು. ಯಾರಿಗೂ ಗೊತ್ತಾಗದಂತೆ ನೀವು ಹಿಡಿದು ಬಂದ ಹಾದಿಯ ಬಗ್ಗೆ ನಿಮಗೆ ಕುರುಕುರೆ ಇದ್ದೇ ಇರುತ್ತದೆ. ನಿಮ್ಮನೇ ನೀವು ಕೇಳಿಕೊಳ್ಳಿ. ಇಂಥದ್ದು ನಿಮ್ಮನ್ನು ಒಮ್ಮೆಯೂ ಕಾಡದೇ ಉಳಿದೀತೇ? ನೀವು ಅದನ್ನೂ ಮೀರಿ ನೆಮ್ಮದಿಯಾಗಿ ಬದುಕಬಲ್ಲಿರೆ? ಅದೆಲ್ಲವನ್ನೂ ಮೀರಿ ಸುಖವಾಗಿ ಜೀವಿಸಬಲ್ಲಿರೆ? ನಿಶ್ಚಿಂತೆಯ ನಿದ್ದೆ ಹಾಗೂ ಬಂದೀತೇ? ಖಂಡಿತಾ ಸಾಧ್ಯವೇ ಇಲ್ಲ. ಅಂಥ ನಂಬಿಕೆ ಖಂಡಿತಾ ಇರಲಿಕ್ಕೆ ಸಾಧ್ಯವೇ ಇಲ್ಲ. ಹಾಗೂ ಇದ್ದರೆ ಅದಕ್ಕಿಂತ ಭಂಡತನ ಮತ್ತೊಂದಿರಲಾರದು. ಅದಕ್ಕಿಂಥ ಭಿಕ್ಷುಕ ನೈತಿಕನಾಗಿರುತ್ತಾನೆ. ಆಯ್ಕೆ ನಿಮ್ಮದು.