ಕೇಪ್ಟೌನ್ ಕಪ್ಪು ನೆರಳು

'ನಾನು ಚೀನಾಕ್ಕೆ ಭೇಟಿ ನೀಡುವುದಕ್ಕಿಂತ ಮೊದಲು ಅಲ್ಲಿನ ಜನರೆಲ್ಲ ಹಾವು, ಕಪ್ಪೆಗಳನ್ನು ಮಾತ್ರ ತಿನ್ನುತ್ತಾರೆ ಅಂತ ಭಾವಿಸಿದ್ದೆ.' ಎಂದು ಖ್ಯಾತ ಪ್ರವಾಸಕಥನ ಲೇಖಕ ಕೆರಿ ಹರ್ಬರ್ಟ್ ಹೇಳಿದ್ದಾನೆ. 'ಚೀನಾದ ಮಹಾಗೋಡೆ ನೂರಾರು ಕಿ.ಮೀ. ಉದ್ದವಿರಬಹುದೆಂದು ಅಂದುಕೊಂಡಿದ್ದೆ. ಅಲ್ಲಿಗೆ ಹೋಗಿ ನೋಡಿದಾಗ ಗೊತ್ತಾಯಿತು, ಅದು ಎಂಟು ಸಾವಿರ ಕಿ.ಮೀ.ಗಿಂತ ಉದ್ದವಾಗಿದೆಯೆಂದು. ಯಾರಾದರೂ ಅದು ಇಷ್ಟು ಉದ್ದವಾಗಿದೆಯೆಂದು ಮೊದಲೇ ಹೇಳಿದ್ದಿದ್ದರೆ, ಕಣ್ಣಾರೆ ನೋಡುವ ತನಕ ನಂಬಿಕೆ ಹುಟ್ಟುತ್ತಿರಲಿಲ್ಲ ಎಂದು ಮತ್ತೊಬ್ಬ ಪ್ರವಾಸಿ ಲೇಖಕ ಪಿಕೊ ಅಯ್ಯರ್ ಹೇಳಿದ್ದು ನೆನಪಿದೆ. ನಮ್ಮ ದೇಶವನ್ನು ಇಂದಿಗೂ ಎಷ್ಟೋ ವಿದೇಶಿಯರು ಹಾವಾಡಿಗರ, ಮಾಂತ್ರಿಕರ, ಬಡಬಗ್ಗರೇ ತುಂಬಿರುವ ದೇಶ ಎಂದೇ ಭಾವಿಸಿದ್ದಾರೆ. 'ಅಲ್ಲಿಗೇ ಹೋಗಿ ಕಣ್ಣಾರೆ ನೋಡುವ ತನಕ ನಂಬಿಕೆ ಹುಟ್ಟಿರಲಿಲ್ಲ' ಅಂತಾರಲ್ಲ, ಅದು ಎಲ್ಲ ದೇಶಗಳಿಗೂ ಅನ್ವಯ. ಇಂಗ್ಲಿಷಿನಲ್ಲಿ ಒಂದು ಮಾತಿದೆ. ಅದನ್ನು ಹೇಳಿದವನು ಯಾರೆಂಬುದು ಗೊತ್ತಿಲ್ಲ. ಅದೇನೆಂದರೆ The world is a book and those who do not travel read only one page. ಹಾಗೆಯೇ ಇನ್ನೊಂದು ಮಾತಿದೆ ವಿದೇಶ, ಪರದೇಶ, ವಿದೇಶಿ ನೆಲ ಎಂಬುದು ತಪ್ಪು ಕಲ್ಪನೆ. ಅದು ಇಲ್ಲವೇ ಇಲ್ಲ. ಇದ್ದರೆ ವಿದೇಶಿ ಪ್ರವಾಸಿಗನಿರಬಹುದು ಅಷ್ಟೇ.
ಪ್ರತಿ ದೇಶಕ್ಕೆ ಹೋದಾಗಲೂ ಈ ಮಾತುಗಳೆಲ್ಲ ನೆನಪಾಗುತ್ತವೆ. ದಕ್ಷಿಣ ಆಫ್ರಿಕಾಕ್ಕೆ ಹೋಗುವ ಮುನ್ನ ಅದರ ಬಗ್ಗೆ ಇದ್ದ ಕಲ್ಪನೆಯೇ ಬೇರೆಯದಾಗಿತ್ತು. ನಾವು ಮುಂಬೈಯಿಂದ ಜೋಹಾನೆಸ್ಬರ್ಗ್ಗೆ ಹೋಗಿ, ಅಲ್ಲಿಂದ connecting flight ನಲ್ಲಿ ಕೇಪ್ಟೌನ್ಗೆ ಹೋದಾಗ, ನಮ್ಮೊಂದಿಗೆ ಐದು ದಿನಗಳ ಕಾಲ ಇದ್ದ ಗೈಡ್ ಅಬ್ದುಲ್ ಕ್ಲರ್ಕ್ ಹೇಳಿದ ಮಾತು ಗಮನ ಸೆಳೆಯಿತು. 'ಆಫ್ರಿಕಾ ಖಂಡದಲ್ಲಿ ದಕ್ಷಿಣ ಆಫ್ರಿಕಾವೇ ಅತಿ ದೊಡ್ಡ economy ಹೊಂದಿರುವ ದೇಶ. ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ವೇದಿಕೆಗಳಲ್ಲೂ ಸಕ್ರಿಯ ಸದಸ್ಯವಾಗಿದೆ. 2010ರ ಫುಟ್ಬಾಲ್ ವರ್ಲ್ಡ್ಕಪ್ನ್ನು ನಾವೇ ಸಂಘಟಿಸಿದ್ದು' ಎಂದು ಅಭಿಮಾನದಿಂದ ಹೇಳಿಕೊಂಡಾಗ ಅನಿಸಿದ್ದು, 'ಹೌದಲ್ಲ, ಜಿ-20 ಶೃಂಗಸಭೆ ಹಾಗೂ ಬ್ರಿಕ್ಸ್ (BRICS - ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) ಸಮಾವೇಶದಲ್ಲಿ ನಾನೇ ಖುದ್ದಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರನ್ನು ನೋಡಿದ್ದೇನಲ್ಲ ಎಂದೆನಿಸಿತು. ಬ್ರಿಕ್ಸ್ ಕೂಟದಲ್ಲಿ ಭಾರತ ಚೀನಾದೊಂದಿಗೆ ದಕ್ಷಿಣ ಆಫ್ರಿಕಾವೂ ಸೇರಿರುವುದು ಗಮನಾರ್ಹ. ಜಗತ್ತಿನ emerging economy ಅಂದರೆ ಪ್ರವರ್ಧಮಾನಕ್ಕೆ ಬರುವ, ಆರ್ಥಿಕವಾಗಿ ಶಕ್ತಿಶಾಲಿಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹನ್ನೆರಡನೆ ಸ್ಥಾನದಲ್ಲಿದೆ ಎಂಬುದು ವಿಶೇಷ.
ದಕ್ಷಿಣ ಆಫ್ರಿಕಾದಲ್ಲಿ ಓಡಾಡುವಾಗ, ಶಹರಗಳನ್ನು ಬಿಟ್ಟು ಗ್ರಾಮೀಣ ಪ್ರದೇಶಗಳ ಕಡೆ ಪ್ರಯಾಣ ಮಾಡುವಾಗ, ಆ ದೇಶದ ಆರ್ಥಿಕ ಚೇತರಿಕೆಯ ಫಲಾನುಭವವಾಗುತ್ತದೆ. ಆಫ್ರಿಕಾದ ಯಾವುದೋ ಬಡ ದೇಶದಲ್ಲಿದ್ದೇವೆ, ತೃತೀಯ ಜಗತ್ತಿನ ದೇಶದಲ್ಲಿ ಸಂಚರಿಸುತ್ತಿದ್ದೇವೆ ಎಂಬ ಸಣ್ಣ ಅನುಮಾನವೂ ಕಾಡುವುದಿಲ್ಲ.
ಅತಿಶಯೋಕ್ತಿ ಎಂದೆನಿಸಬಹುದು, ಆದರೆ ಖರೆ ಹೇಳಬೇಕೆಂದರೆ, ಅಲ್ಲಿನ ರಸ್ತೆಗಳು, ಸೇತುವೆಗಳು, ಅವುಗಳ ಗುಣಮಟ್ಟ, ಸಾರಿಗೆ-ಸಂಚಾರ ವ್ಯವಸ್ಥೆ, ಮೇಲ್ಸೇತುವೆಗಳನ್ನು ಕಟ್ಟಿದ ರೀತಿ, ಮೂಲಸೌಕರ್ಯಗಳು ವಿಸ್ತರಿಸಿಕೊಂಡ ಬಗೆ... ನೋಡಿದರೆ ನಾನು ಅಮೆರಿಕದಲ್ಲೋ, ಚೀನಾದಲ್ಲೋ ಇದ್ದೇನೆಂಬ ಭಾವನೆ ಮೂಡಿದ್ದು ಸುಳ್ಳಲ್ಲ. ಈ ವಿಷಯದಲ್ಲಿ ದಕ್ಷಿಣ ಆಫ್ರಿಕಾ ನಮಗಿಂತ ಕನಿಷ್ಠ ಹತ್ತು ವರ್ಷ ಮುಂದಿದೆ. ಅಂದರೆ ನಮ್ಮನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ನಡೆದಿದೆ. ನಾವು ಪುನಃ ಬಸ್ಸನ್ನ ಮಿಸ್ ಮಾಡಿಕೊಂಡೆವಾ?
ನಿಸ್ಸಂದೇಹವಾಗಿ ಹೌದು.
ಒಂದು ದೇಶದ ಆಡಳಿತ, ಆರ್ಥಿಕ ಸ್ಥಿತಿಗತಿ ನೋಡಬೇಕೆಂದರೆ ಅಲ್ಲಿನ ಆಡಳಿತ ಕಚೇರಿಗೋ, ರಿಜರ್ವ್ಬ್ಯಾಂಕಿನ ಕಚೇರಿಗೋ ಹೋಗಬೇಕಿಲ್ಲ. ಆ ದೇಶ ಕಲ್ಪಿಸಿರುವ ಮೂಲ ಸೌಲಭ್ಯಗಳನ್ನು ನೋಡಿದರೆ ಸಾಕು, ಅಲ್ಲಿನ ರಸ್ತೆಗಳನ್ನು ನೋಡಿದರೆ ಸಾಕು. ಗುಂಡಿ ಬಿದ್ದ ರಸ್ತೆ, ಹೊಪ್ಪಳಿಕೆಯೆದ್ದ ಹೆದ್ದಾರಿಗಳನ್ನು ನೋಡಿ ಅಲ್ಲಿನ economy ಒಂದೇ ಅಲ್ಲ, ಅಧಿಕಾರದಲ್ಲಿರುನ ಸರ್ಕಾರ, ಅದರ ಚುಕ್ಕಾಣಿ ಹಿಡಿದಿರುವ ನಾಯಕರ ಹಣೆಬರಹ, ಆ ದೇಶದ ಸದ್ಯೋಭವಿಷ್ಯವೆಲ್ಲವನ್ನೂ ಹೇಳಬಹುದು. (ಅದಕ್ಕೆ ನಮ್ಮೂರಿನ ರಸ್ತೆಗಳೇ ಸಾಕ್ಷಿ).
ಆದರೆ, ದಕ್ಷಿಣ ಆಫ್ರಿಕಾದಲ್ಲಿ ಆ ಹತ್ತು ದಿನಗಳಲ್ಲಿ ಸಾವಿರಾರು ಕಿ.ಮಿ. ದೂರ ಕ್ರಮಿಸಿರಬಹುದು, ಒಂದೇ ಒಂದು ಗುಂಡಿ, ಹಳ್ಳ, ತಗ್ಗು ನೋಡಲು ಸಹ ಸಿಗಲಿಲ್ಲ. ಕಿತ್ತು ಹೋದ ರಸ್ತೆಗಳು, ನೀರು ನಿಂತ ಗಟಾರುಗಳು, ಬಾಯ್ತೆರೆದ ಚರಂಡಿಗಳು, ವಾಲಿದ ಕರೆಂಟ್ ಕಂಬ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು, ನಡೆಯಲು ಅಯೋಗ್ಯವೆನಿಸುವ ಪಾದಚಾರಿ ರಸ್ತೆ... ಉಹುಂ ಕೇಳಲೇಬೇಡಿ. ಅಂಥ ಒಂದು ದೃಶ್ಯ ಸಹ ಕಣ್ಣಿಗೆ ಬೀಳಲಿಲ್ಲ. ಸ್ಯಾಂಪಲ್ಲಿಗೊಂದು ಇರಲಿ ಎಂಬಂತೆ ಒಂದು ರೋಡ್ ಹಂಪ್ (ರಸ್ತೆಉಬ್ಬು) ಸಿಕ್ಕಿದ್ದು ಬಿಟ್ಟರೆ, ಮತ್ತೊಂದನ್ನು ಎಣಿಸುವ ಪ್ರಮೇಯ ಬರಲಿಲ್ಲ. ಡರ್ಬನ್, ಜೋಹಾನೆಸ್ಬರ್ಗ್, ಕೇಪ್ಟೌನ್ನಂಥ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಹ ಇಲ್ಲವಲ್ಲ ಎಂದು ಆಶ್ಚರ್ಯವಾಯಿತು. ಹೇಳಿದ ಸಮಯಕ್ಕೆ ಹೋಗದೇ ತಡವಾದರೆ ನಾವು ಟ್ರಾಫಿಕ್ ಜಾಮ್ ಎಂಬ ಕುಂಟು ನೆಪ ಹೇಳುತ್ತೇವೆ. ಅದಿಲ್ಲದ ಈ ದೇಶದಲ್ಲಿ ಜನ ತಡವಾಗಿ ಹೋದಾಗ ಯಾವ ನೆಪ ಹೇಳಬಹುದು ಎಂಬ ಜಿಜ್ಞಾಸೆ ಮೂಡಿದ್ದಂತೂ ನಿಜ. ವಿಶಾಲ ರಸ್ತೆಗಳು, ಪಾದಚಾರಿ ರಸ್ತೆಗಳು, ಒಮ್ಮುಖವಾಗಿ ಮೂರು ಲೇನ್ಗಳಲ್ಲಿ ಚಲಿಸುವಷ್ಟು ಹಿರಿದಾದ ರಸ್ತೆಗಳಿಂದಾಗಿ ಟ್ರಾಫಿಕ್ಜಾಮ್ ಇಲ್ಲವೆನಿಸುವಷ್ಟು ಸಂಚಾರ ನಿರಾಳ. ಎಲ್ಲೆಡೆ ಒಂದು ಅಚ್ಚುಕಟ್ಟುತನ, ಶಿಸ್ತು, ಸುವಸ್ಯವಸ್ಥಿತ ನೋಟ ಗಮನ ಸೆಳೆಯುತ್ತದೆ.
ಯಾವುದೇ ಹೋಟೆಲ್ನಲ್ಲಿ ಉಳಿದುಕೊಂಡಾಗ ಅಲ್ಲಿನ ಒಂದು ಸೂಚನೆ ಸಾಮಾನ್ಯವಾಗಿತ್ತು. ಅದೇನೆಂದರೆ, 'ನಮ್ಮ ಹೋಟೆಲ್ನಲ್ಲಿ ಟ್ಯಾಪ್ ವಾಟರ್(ನಲ್ಲಿ ನೀರು) ಅನ್ನು ಕುಡಿಯಲು ಬಳಸಬಹುದು.' ಈ ವಿಷಯವನ್ನು ಗೈಡ್ ಅಬ್ದುಲ್ ಜತೆ ಪ್ರಸ್ತಾಪಿಸಿದಾಗ, 'ಹೋಟೆಲ್ನಲ್ಲಿ ಮಾತ್ರ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿ ಬಹುತೇಕ ಎಲ್ಲ ಕಡೆ ನಲ್ಲಿ ನೀರನ್ನು ಕುಡಿಯುತ್ತಾರೆ. ವಿದೇಶಿ ಪ್ರವಾಸಿಗರು ಸುರಕ್ಷತೆಗಾಗಿ ಮಿನರಲ್ವಾಟರ್ ಕುಡಿಯಬಹುದಷ್ಟೆ. ನೀರಿನಲ್ಲಿ ದೋಷವಿಲ್ಲ, ಅದು ಸ್ವಚ್ಛವಾಗಿರುತ್ತದೆ. ಜನರ ಗ್ರಹಿಕೆಯಲ್ಲಿದ್ದಿರಬಹುದು' ಎಂದು ನಕ್ಕ. ಹಾಗಂತ ದಕ್ಷಿಣ ಆಫ್ರಿಕಾದಲ್ಲಿ ಎಲ್ಲವೂ ಸರಿಯಾಗಿದೆ, ಅದೊಂದು ಆದರ್ಶ ದೇಶ ಎಂದು ಹೇಳುತ್ತಿಲ್ಲ ಅಥವಾ ಹಾಗೆ ಭಾವಿಸಬೇಕಾಗಿಲ್ಲ.
ಮೊದಲ ದಿನ ಕೇಪ್ಟೌನ್ಗೆ ಹೋದಾಗ, ಅಬ್ದುಲ್ ಹೇಳಿದ 'ರಾತ್ರಿ ಎಂಟು ಗಂಟೆಯ ನಂತರ ಒಬ್ಬರೇ ಹೋಟೆಲ್ನಿಂದ ಹೊರಗೆ ತಿರುಗಾಡಲು ಹೋಗಬೇಡಿ. ಕನಿಷ್ಠ ಐದಾರು ಜನ ಗುಂಪಾಗಿ ಹೋಗುವುದಿದ್ದರೆ ಪರವಾಗಿಲ್ಲ. ರಾತ್ರಿ ನಗರಸಂಚಾರವನ್ನು ಕೈಬಿಟ್ಟರೆ ಸುರಕ್ಷಿತ. ಏನೋ ಅಹಿತಕರ ಘಟನೆ ಆಗಿಬಿಡುತ್ತದೆ ಎಂದಲ್ಲ. ಆದರೂ ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ವಿಹಿತ' ಎಂದ.
ಅಬ್ದುಲ್ ಹೀಗೇಕೆ ಹೇಳಿದ? ಆತ ಹೇಳಿದ ಅಸಲಿಯತ್ತು ಏನಿದ್ದಿರಬಹುದು? ಪ್ರವಾಸೋದ್ಯಮವನ್ನೇ ಮುಖ್ಯ ವರಮಾನವಾಗಿ ಸ್ವೀಕರಿಸಿದ ನಗರ ಅದೇಗೆ ಈ ರೀತಿ ಅಪಾಯಕಾರಿಯಾಗಿದ್ದೀತು?
ಈ ಪ್ರಶ್ನೆಗೆ ಅಬ್ದುಲ್ ಹೇಳಿದ್ದು 'ಬಡತನ ಹಾಗೂ ನಿರುದ್ಯೋಗ. ಮೇಲ್ಮಧ್ಯಮ ವರ್ಗದ ಜನರೇ ಹೆಚ್ಚಿರುವ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ನಗರ ಪ್ರದೇಶಗಳಲ್ಲಿ ಇಂಥ ನಿರುದ್ಯೋಗಿ ಯುವಕರು ಅಮಾಯಕರು, ಏಕಾಂಗಿ ಪ್ರವಾಸಿಗರನ್ನು ದೋಚುತ್ತಾರೆ. ಈ ಪುಂಡ ಪೋಕರಿಗಳಿಂದ ಕೆಟ್ಟ ಹೆಸರು ಬಂದಿದೆ. ಇದು ಪ್ರವಾಸೋದ್ಯಮದ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಆದ್ದರಿಂದ ನಾವು ಸುರಕ್ಷತೆ ಬಗ್ಗೆ ಪದೇ ಪದೆ ಹೇಳುತ್ತೇವೆ.' 'ಹಾಗಾದರೆ ವಿದೇಶಿ ಪ್ರವಾಸಿಗರು ಅಹಿತಕರ ಪ್ರಸಂಗಗಳನ್ನು ಎದುರಿಸುವುದು ಅನಿವಾರ್ಯವಾ' ಎಂಬ ಪ್ರಶ್ನೆಗೆ 'ಈ ಪುಂಡರು, ಪಡಪೋಶಿಗಳು ಸುಲಿಗೆ ಮಾಡಬಹುದು, ಆದರೆ, ಕೊಲೆ ಮಾಡುವ ಮಟ್ಟಿಗೆ ಹೋಗುವುದಿಲ್ಲ. ಹೆಚ್ಚೆಂದರೆ ಪರ್ಸು, ಮೊಬೈಲು ಕಸಿದುಕೊಳ್ಳಬಹುದು. ಆದರೂ ಎಚ್ಚರದಿಂದ ಇರುವುದು ಲೇಸು. ಒಬ್ಬಂಟಿಯಾಗಿ ತಿರುಗುವುದು ಅಪಾಯ' ಎಂದ.
ನಾವು ಪ್ರವಾಸ ಮುಗಿಸಿ ವಾಪಸ್ ಮುಂಬೈಗೆ ಹೊರಡುವ ಮುನ್ನಾದಿನ ಜೋಹಾನೆಸ್ಬರ್ಗ್ಗೆ ಬಂದಾಗಲೂ ಅಲ್ಲಿನ ಗೈಡ್ನಿಂದ ಇದೇ ಸೂಚನೆ ಬಂತು. ಹೀಗಾಗಿ ಆ ಹತ್ತು ದಿನಗಳಲ್ಲಿ ರಾತ್ರಿ ತಿರುಗುವ 'ದುಸ್ಸಾಹಸ'ಕ್ಕೆ ನಾವ್ಯಾರೂ ಮುಂದಾಗಲಿಲ್ಲ. ಪ್ರತಿದಿನ ಪತ್ರಿಕೆಯ ಕ್ರೈಮ್ ಪುಟದಲ್ಲಿ 'ವಿದೇಶಿ ಪ್ರವಾಸಿಗನ ಸುಲಿಗೆ, ವಂಚನೆ' ಎಂಬ ಶೀರ್ಷಿಕೆಯಿರುವ ವರದಿಗಳೇನಾದರೂ ಪ್ರಕಟವಾಗಿರಬಹುದಾ ಎಂದು ಕುತೂಹಲದಿಂದ ನೋಡುತ್ತಿದ್ದೆ. ಆದರೆ, ಅಂಥ ಸುದ್ದಿಯೇನೂ ಕಾಣಲಿಲ್ಲ. ಆದರೆ ಈ ಭಯ ಮಾತ್ರ ನಾವಿದ್ದಷ್ಟೂ ದಿನ ನಮ್ಮನ್ನು ಇನ್ನಷ್ಟು ಎಚ್ಚರದಿಂದ, ಎಚ್ಚರಿಕೆಯಿಂದ ಇರುವಂತೆ ಮಾಡಿ ಸ್ವಯಂ ರಕ್ಷಣೆಯ ಜಾಗೃತಿಯನ್ನು ಮೂಡಿಸಿತು. 'ಇಂಥ ಪುಂಡ-ಪೋಕರಿಗಳ ಬಗ್ಗೆ ಪೊಲೀಸರು ಯಾವ ಕ್ರಮ ಕೈಗೊಳ್ಳುವುದಿಲ್ಲವಾ?' ಅದಕ್ಕೆ ಅಬ್ದುಲ್ ಹೇಳಿದ್ದು - 'ಹೊಸ ನಿರುದ್ಯೋಗಿ ನೂತನವಾಗಿ ಈ ದಂಧೆಗೆ ಇಳಿಯುವ ಸಾಧ್ಯತೆಯಿರುತ್ತದಲ್ಲ, ಅದನ್ನು ತಳ್ಳಿ ಹಾಕುವುದಾದರೂ ಹೇಗೆ?'
ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸಿಗರನ್ನು ದೋಚುತ್ತಾರೆಂಬ ಮಾತುಗಳನ್ನು ಕೇಳಿ ನಮ್ಮೊಂದಿಗೆ ಬಂದಿದ್ದ ಮುಂಬೈನ ಪತ್ರಕರ್ತ ದಂಪತಿ ಸೋವಿ ಮೊಬೈಲು ಹಾಗೂ ಕ್ಯಾಮೆರಾಗಳನ್ನು ತಂದಿದ್ದರು. ದುಬಾರಿ ಕ್ಯಾಮೆರಾ ಇದ್ದರೂ ಆ ಡಬ್ಬಾ ಕ್ಯಾಮೆರಾದಲ್ಲೇ ಕ್ಲಿಕ್ಕಿಸುತ್ತಿದ್ದರು.
ಹಾಗೆಂದು ದಕ್ಷಿಣ ಆಫ್ರಿಕಾಕ್ಕೆ ಹೋಗದೇ ಇರಬೇಡಿ. ಇಂಥ ಪುಂಡ, ಪೋಕರಿಗಳು ನಮ್ಮೂರಲ್ಲೂ ಇಲ್ಲವಾ?
(ಪ್ರದಕ್ಷಿಣೆ ಮುಂದುವರಿಯುವುದು)
- ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


