ಬೈಟುಕಾಫಿ

ಸಕ್ಕರೆ ನೀರಿನ ಮ್ಯಾಜಿಕ್ ಏನು?

ಸಕ್ಕರೆ ನೀರಿನ ಮ್ಯಾಜಿಕ್ ಏನು?
Published On :

ಶಿಶು ಜೋರಾಗಿ ಅಳುತ್ತಿದೆ. ಏನು ಮಾಡಿದರೂ ಅಳು ನಿಲ್ಲಿಸುತ್ತಿಲ್ಲ. ದೃಷ್ಟಿ ತೆಗೆದದ್ದೂ ಆಗಿದೆ. ಅದರಿಂದಲೂ ಯಾವುದೇ ಪರಿಣಾಮ ಆಗಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಅಜ್ಜಿ ಏನು ಮಾಡುತ್ತಿದ್ದಳು ತುಸು ನೆನಪಿಸಿಕೊಳ್ಳಿ. ಅರ್ಧ ಲೋಟ ಸಕ್ಕರೆ ನೀರನ್ನು ಬಾಣಂತಿ ಮುಂದೆ ತಂದಿಟ್ಟು ಶಿಶುವಿಗೆ ಕುಡಿಸಲು ಹೇಳುತ್ತಿದ್ದಳು ಅಲ್ಲವೆ? ಅದನ್ನು ಕುಡಿದ ತಕ್ಷಣ ಮ್ಯಾಜಿಕ್ ಆಗುತ್ತಿತ್ತು. ಅಳು ನಿಲ್ಲುತ್ತಿತ್ತು. ಸಕ್ಕರೆ ನೀರು ಕುಡಿಸದೇ ಸಕ್ಕರೆ ಪುಡಿಯನ್ನು ಶಿಶುವಿನ ಬಾಯಲ್ಲಿ ಹಾಕಿದರೂ ಎಂಥ ಘನಘೋರ ಅಳುವಾದರೂ ನಿಂತು ಹೋಗುತ್ತಿತ್ತು. ನಮ್ಮ ಈ ಪುರಾತನ ಜಾನಪದ ಚಿಕಿತ್ಸೆ ವಿದೇಶಗಳಲ್ಲೂ ಈಗೀಗ ಜನಪ್ರಿಯವಾಗುತ್ತಿದೆ. ಉದರ ಶೂಲೆ ಸೇರಿದಂತೆ ಯಾವುದೇ ಬಗೆಯ ನೋವಿನಿಂದ ನರಳುವ ಶಿಶುಗಳಿಗೆ ಸಕ್ಕರೆ ನೀರು ಕುಡಿಸುವುದು ಈಗೀಗ ಅಲ್ಲಿ ಸಾಮಾನ್ಯವಾಗುತ್ತಿದೆ. ವೈದ್ಯರು ಕೂಡ ಅದನ್ನೇ ಶಿಫಾರಸ್ಸು ಮಾಡುತ್ತಿದ್ದಾರೆ.
ನ್ಯೂಯಾರ್ಕ್‌ನಲ್ಲಿನ ಕಾರ್ನೆಲ್ ಯೂನಿವರ್ಸಿಟಿ ಆಫ್ ಇಟಾಚಾದ ಡಾ.ಎಲಿಯಟ್ ಬ್ಲಾಸ್ ಅವರಿಗೆ ಸಕ್ಕರೆ ನೀರಿನ ಮ್ಯಾಜಿಕ್ ಬಗ್ಗೆ ಕುತೂಹಲ ಹುಟ್ಟಿತು. ತಮ್ಮ ಸಹೋದ್ಯೋಗಿಗಳೊಂದಿಗೆ ಸಂಶೋಧನೆ ಶುರುವಿಟ್ಟುಕೊಂಡರು. ಹೊಟ್ಟೆ ನೋವಿನಿಂದ ಅಳುವ ಕಂದಮ್ಮಗಳಿಗೆ ಮೊದಲು ಬರಿ ನೀರು ಕುಡಿಸಿದರು. ಏನೂ ಉಪಯೋಗ ಆಗಲಿಲ್ಲ. ಸಕ್ಕರೆ ನೀರು ಕುಡಿಸಿದಾಗ ಮ್ಯಾಜಿಕ್ ಮರುಕಳಿಸಿತ್ತು. ಹೀಗಾಗಿ 'ಸಕ್ಕರೆ ನೀರಿನಲ್ಲಿ ಏನೋ ಇದೆ' ಎನ್ನುವುದಂತೂ ಅವರಿಗೆ ಮನವರಿಕೆ ಆಯಿತು. ಒಂದು ಸಲ ಒಂದೆರಡು ಚಮಚ ಕುಡಿಸಿದರೆ ಹತ್ತು ನಿಮಿಷ ಸುಮ್ಮನಾಗುತ್ತಿದ್ದರು. ಕೊನೆಗೆ ಐದು ನಿಮಿಷಕ್ಕೆ ಒಮ್ಮೆಯಂತೆ ಐದಾರು ಸಲ ಕುಡಿಸಿದಾಗ ಕೆಲಹೊತ್ತಿನಲ್ಲಿ ಪುಟಾಣಿಗಳು ಸಂಪೂರ್ಣವಾಗಿ ಅಳು ನಿಲ್ಲಿಸುತ್ತಿದ್ದರು. ಅಳುವಿನ ಸಮಯ ಕೂಡ ಗಣನೀಯವಾಗಿ ಕಡಿಮೆಯಾಗಿತ್ತು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಅಳುವ ಮಕ್ಕಳ ಹೃದಯದ ಬಡಿತ ಪ್ರತಿ ನಿಮಿಷಕ್ಕೆ 155ರತನಕ ಹೋಗಿದ್ದು ಸಕ್ಕರೆ ನೀರಿನಿಂದಾಗಿ ಸಾಮಾನ್ಯ ಸ್ಥಿತಿಗೆ, ಅಂದರೆ 125ರಿಂದ 130ಕ್ಕೆ ಇಳಿದಿತ್ತು. ಸಕ್ಕರೆ ನೀರು ಶೇ 85ರಷ್ಟು ಶಿಶುಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಡಾ.ಬ್ಲಾಸ್ ಅಭಿಮತ.
ಹೊಟ್ಟೆ ನೋವಿರುವಾಗ ಸಕ್ಕರೆ ನೀರು ಕುಡಿಸಿದರೆ ನೋವು ಮತ್ತಷ್ಟು ಹೆಚ್ಚುವುದಿಲ್ಲವೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಗಮ್ಮತ್ತು ಇರುವುದೇ ಇಲ್ಲಿ. ಶಿಶುಗಳಲ್ಲಿ ಸಕ್ಕರೆ ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಒಪಿಯಾಡ್ ಎನ್ನುವ ರಾಸಾಯನಿಕವನ್ನು ಅದು ಸ್ರವಿಸುತ್ತದೆ. ಈ ರಾಸಾಯನಿಕವೇ ನೋವು ನಿವಾರಕವಾಗಿ, ಒತ್ತಡ ಕಡಿಮೆ ಮಾಡುವ ಔಷಧವಾಗಿ ಕೆಲಸ ಮಾಡುತ್ತದೆ. ಅಂದರೆ 'ಪೇನ್‌ಕಿಲ್ಲರ್‌' ಆಗಿ ಸಕ್ಕರೆ ಕೆಲಸ ಮಾಡುತ್ತದೆ. ಸಾಮಾನ್ಯ ಸಕ್ಕರೆಯಲ್ಲಿರುವ ಸುಕ್ರೋಸ್ ಮತ್ತು ಹಣ್ಣುಗಳಲ್ಲಿರುವ ಸಕ್ಕರೆ ಫ್ರುಕ್ಟೋಸ್ ಎರಡೂ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ.
ನಿಮ್ಮ ಮನೆಯ ಶಿಶು ಅಳುತ್ತಿದ್ದರೆ ಕೊಂಚ ಸಕ್ಕರೆ ನೀರು ಕುಡಿಸಲು ಮರೆಯಬೇಡಿ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.