ಬೈಟುಕಾಫಿ

ಸಮಸ್ಯೆ ಎಂಬ ರೋಗದ ಸಂಜೀವಿನಿ

Published On :

ಸಂಸ್ಕೃತ ಕೃತಿ 'ಅಮರಕೋಶ'ದಲ್ಲಿ ವಾಸ್ತು ಎಂಬ ಪದಕ್ಕೆ 'ಮನೆ ಕಟ್ಟುವಂತಹ ಭೂಮಿ' ಎಂಬರ್ಥವಿದೆ. ವಾಸ್ತುವಿನ ಬಗ್ಗೆ ವೇದಗಳಲ್ಲಿ ಅತ್ರಿ ಆದಿಯಾಗಿ ಮಹಾ ಋಷಿಮುನಿಗಳು ಉಲ್ಲೇಖಿಸಿರುತ್ತಾರೆ. ನಾಗರಿಕತೆ ಬೆಳೆದಂತೆ ವಾಸ್ತು ಶಾಸ್ತ್ರದ ಪ್ರಾಮುಖ್ಯತೆ ವೃದ್ಧಿಯಾಗುತ್ತಿದೆ. ಸಕಲ ಚರಾಚರ ವಸ್ತುಗಳಿಗೂ, ಜೀವರಾಶಿಗಳಿಗೂ ಆಧಾರವಾಗಿರುವ ನಮ್ಮೆಲ್ಲರ ಪ್ರತ್ಯಕ್ಷ ಪರಮಾತ್ಮನಾದ ಸೂರ್ಯ ಭಗವಾನನೇ ವಾಸ್ತುಕಾರಕನು. ಭವನಗಳ ನಿರ್ಮಾಣ, ದೇವಾಲಯ, ಮನೆ, ಸೌಧ ಮುಂತಾದವುಗಳ ನಿರ್ಮಾಣದಲ್ಲಿ ವಾಸ್ತುವಿನ ಪಾತ್ರ ಬಹಳ ಪ್ರಮುಖವಾದುದು. ನಮ್ಮ ಶರೀರದ ಅವಯವಗಳು ನಿರ್ದಿಷ್ಟ ಸ್ಥಾನ ಮತ್ತು ಪ್ರಮಾಣದಲ್ಲಿ ಇಲ್ಲದಿದ್ದರೆ, ಶರೀರವು ಹೇಗೆ ವಿಕಾರ ಹೊಂದುವುದೋ ಹಾಗೆಯೇ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸದೇ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಳೆ ಮನೆಗಳಲ್ಲಿರುವ ವಾಸ್ತು ದೋಷಗಳನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ವಾಸ್ತು ಶಾಸ್ತ್ರವು ಸಮಸ್ಯೆ ಎಂಬ ಅನಾರೋಗ್ಯಕ್ಕೆ ದಿವ್ಯ ಸಂಜೀವಿನಿಯೇ ಹೌದು.

= ಎಚ್.ಎಸ್. ವಿಶ್ವನಾಥ್, ಮೈಸೂರು

ಬದುಕಿನ ದಾರಿ ಬದಲಾಗಲ್ಲ

ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಸುಖ ಇದ್ದಿದ್ದೇ. ಯಾವುದೂ ಶಾಶ್ವತವಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಮನೆಯಾಗಲಿ ಅಥವಾ ಯಾವುದೇ ಕಟ್ಟಡವಾಗಲಿ, ಗಾಳಿ ಬೆಳಕು ಸಾಕಷ್ಟು ಪ್ರಮಾಣದಲ್ಲಿ ಒಳ ಬರುವಂತಿರಬೇಕು. ಮನೆಯ ಕೊಠಡಿಗಳು ಆಯಾಯ ಸ್ಥಳದಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು. ಅದು ಬಿಟ್ಟು ವಾಸ್ತು ಅಂದುಕೊಂಡು ದೇವರ ಮನೆ ಪಕ್ಕದಲ್ಲಿ ಸಂಡಾಸು ಮಾಡಿದರೆ ಮೂಗು ಮುಚ್ಚಿಕೊಂಡು ಪೂಜೆ ಮಾಡಬೇಕಾಗಬಹುದು. ವಾಸ್ತು ಅಂದುಕೊಂಡು ಮನೆಯ ಬಾಗಿಲುಗಳ ದಿಕ್ಕನ್ನು ಬದಲಾಯಿಸಿದರೆ ನಾವು ಓಡಾಡುವ ದಾರಿ ಬದಲಾಗಬಹುದೇ ಹೊರತು ನಮ್ಮ ಬದುಕಿನ ದಾರಿ ಬದಲಾಗಲು ಸಾಧ್ಯವಿಲ್ಲ. ಬಹಳಷ್ಟು ಜನರಿಗೆ ಜೀವನದಲ್ಲಿ ಒಮ್ಮೆ ಮಾತ್ರ ಮನೆ ಕಟ್ಟುವ ಯೋಗ, ಹಾಗಾಗಿ ಶ್ರಮದ ದುಡಿಮೆಯಿಂದ ಕಟ್ಟುವ ನಮ್ಮ ಕನಸಿನ ಮನೆ ನಮಗೆ ಅನುಕೂಲವಾಗುವಂತಿರಬೇಕೇ ವಿನಾ ವಾಸ್ತು ಪ್ರಕಾರ ಕಟ್ಟಿಕೊಂಡು ಜೀವನವೆಲ್ಲಾ ಒದ್ದಾಡುವುದೇಕೆ? ಆತ್ಮವಿಶ್ವಾಸ ಹಾಗೂ ಪರಿಶ್ರಮದಿಂದ ಯಶಸ್ಸು ಲಭಿಸುವುದೇ ಹೊರತು ವಾಸ್ತುವಿನಿಂದಲ್ಲ.

= ಸವಿತಾ ಶ್ರೀಧರ್, ಅರಕಲಗೂಡು

ಸಕಾರಾತ್ಮಕ ಚಿಂಚನೆಗೆ ನೆರವು

ಮಾನವನಲ್ಲಿ ಎರಡು ಆಲೋಚನಾ ಶಕ್ತಿಗಳಿರುತ್ತವೆ. ಒಂದು ನಕಾರಾತ್ಮಕ ಮತ್ತೊಂದು ಸಕಾರಾತ್ಮಕ. ನಂಬಿಕೆ ಅಪನಂಬಿಕೆಗಳ ನಡುವೆ ಬದುಕು ಸಾಗಿಸುವ ನಾವು ಈ ಎರಡರಿಂದ ಬಯಸುವುದು ಸುಖ, ಶಾಂತಿ, ನೆಮ್ಮದಿಯನ್ನು. ನಮ್ಮ ಆಲೋಚನಾ ಶಕ್ತಿ ಸಕಾರಾತ್ಮಕವಾಗಿ ಸ್ಪಂದಿಸಬೇಕಾದರೆ ಕೆಲವು ಆಚಾರ ವಿಚಾರ ಸಂಪ್ರದಾಯಗಳನ್ನು ನಾವು ಮೈಗೂಡಿಸಿಕೊಂಡಿರಬೇಕು. ಹಾಗೆಯೇ ವಾಸ್ತು ಪ್ರಕಾರ ನಮ್ಮ ಮನೆ ಅಫೀಸುಗಳು ಇದ್ದರೆ ನಮ್ಮ ಮನಸ್ಸು ಒಳ್ಳೆಯದನ್ನೆ ಯೋಚಿಸುತ್ತದೆ ಎಂಬುದು ನಂಬಿಕೆ. ಈ ಸಿದ್ಧಾಂತದ ಮೇಲೆಯೇ ಎಲ್ಲಾ ನಡೆಯುತ್ತಿರುವಾಗ ವಾಸ್ತು ಖಂಡಿತ ಬೇಕು. ಒಳ್ಳೆಯದೇ ಕೆಟ್ಟದ್ದೇ ಎಂದು ನಾವು ವಿಮರ್ಶಿಸುವ ಬದಲು ನಮ್ಮ ಮನಸ್ಸು ಸಕಾರಾತ್ಮಕವಾಗಿ ಚಿಂತಿಸಲು ವಾಸ್ತು ಅಗತ್ಯ ಎಂಬುದು ಈಗಾಗಲೇ ಸಾಬೀತಾಗಿದೆ. ಏನೇ ಕೆಲಸ ಮಾಡಿದರೂ ರಾಹುಕಾಲ, ಗುಳಿಕಕಾಲ ನೋಡುವ ನಾವು, ವಾಸ್ತು ಬೇಕೆಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಹ ಮನಸ್ಸಿಗೆ ಮುದ, ಸಂತೋಷ ಸಿಗಬೇಕಾದರೆ ವಾಸ್ತು ಅತ್ಯಗತ್ಯ ಎಂಬುದು ನನ್ನ ನಂಬಿಕೆ.

= ವೆಂಕಟೇಶ್ ತೂಬಿನಕೆರೆ, ಬೆಂಗಳೂರು

'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.