ಕೋಟೆಯ ಊರಿನಿಂದ ಬಂದ ಹುಡುಗ

ಎರಡನೆಯ ವರ್ಷ ಅರ್ಧ ಫೀಜು ಮಾತ್ರ ಮನ್ನಾ ಆಗಿತ್ತು. ಇದಕ್ಕೆ ನಿಜಲಿಂಗಪ್ಪನವರೇ ಕಾರಣರೆಂಬ ಸಿಟ್ಟಿನಿಂದ ಅವರ ಮನೆಗೆ ಹೋಗಿ ಜಗಳವಾಡಿದೆ. ನಿಜಲಿಂಗಪ್ಪನವರು ನನ್ನನ್ನು ಸಮಾಧಾನ ಪಡಿಸಿ, ಅರ್ಧ ಫೀಜನ್ನು ನನ್ನ ದೊಡ್ಡಪ್ಪನ ಕೈಯಿಂದ ಕೊಡಿಸಿದರು. ಆ ಸಮಯದಲ್ಲಿ ಅವರು 'ನೀನಿನ್ನೂ ಹುಡುಗ, ಇಷ್ಟಕ್ಕೆಲ್ಲ ಬೇಸರಪಟ್ಟುಕೊಳ್ಳಬಾರದು. ನಿನ್ನಲ್ಲಿ ಕಲ್ಲನ್ನು ಹಿಂಡಿ ನೀರು ತೆಗೆಯುವ ಶಕ್ತಿ ಇದೆ. ಇದನ್ನು ಸರಿಯಾಗಿ ಉಪಯೋಗಿಸಿಕೋ' ಎಂದು ಹೇಳಿದ ಮಾತುಗಳು ಇನ್ನೂ ನೆನಪಿನಲ್ಲಿದೆ.
ನಾನೊಬ್ಬ ಅನಾಥ. ಬಾಲ್ಯದಲ್ಲಿಯೇ ತಂದೆ ತಾಯಿಗಳಿಬ್ಬರನ್ನೂ ಕಳೆದುಕೊಂಡ ಪರದೇಶಿ. ನಾನು 1917ರ ಫೆಬ್ರವರಿ 4ರಂದು ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಹುಟ್ಟಿದೆನೆಂದೂ, ನಾನು ಹುಟ್ಟಿದ ಮೂರನೇ ದಿನವೇ ನನ್ನ ತಂದೆ ಸತ್ತರೆಂದೂ, ಆರು ತಿಂಗಳಲ್ಲಿ ತಾಯಿ ತೀರಿಕೊಂಡರೆಂದೂ ನನ್ನ ಹಿರಿಯರು ಹೇಳುತ್ತಿದ್ದರು. ಆದರೆ ನನಗೆ ಮಾತ್ರ ನನ್ನ ಬಾಲ್ಯದ ಬಗ್ಗೆ ಏನೂ ಗೊತ್ತಿರಲಿಲ್ಲ.
ನನಗೆ ತಿಳಿವಳಿಕೆ ಬಂದ ಮೇಲೆ, ಅಂದರೆ ಆರು ಅಥವಾ ಏಳು ವರ್ಷ ವಯಸ್ಸಿನವನಿದ್ದಾಗ, ನನಗೆ ತಂದೆ ತಾಯಿಗಳಿಲ್ಲವೆಂದೂ, ನನ್ನ ದೊಡ್ಡಪ್ಪನ ಮನೆಯಲ್ಲಿರುವುದಾಗಿಯೂ ತಿಳಿಯಿತು. ನನಗೆ ಒಬ್ಬ ಅಣ್ಣನಿದ್ದು ನನಗಿಂತ ಅವನು ಎರಡು ವರ್ಷ ದೊಡ್ಡವನು. ಇಬ್ಬರೂ ದೊಡ್ಡಪ್ಪನ ಮನೆಯಲ್ಲಿ ಓದುತ್ತಿದ್ದೆವು. ಐದು ವರ್ಷದ ವರೆಗೆ ನಮ್ಮಿಬ್ಬರಿಗೆ ನಾಮಕರಣವೇ ಆಗಿರಲಿಲ್ಲ. ಸ್ಕೂಲಿಗೆ ಸೇರಿಸುವಾಗ ನಮ್ಮ ದೊಡ್ಡಪ್ಪನೇ ನನಗೆ ಶಾಮ ಎಂದೂ ನನ್ನ ಅಣ್ಣನಿಗೆ ಶೇಷಗಿರಿ ಎಂದೂ ಹೆಸರು ಬರೆಸಿದ್ದನಂತೆ.
ನನ್ನ ದೊಡ್ಡಪ್ಪ ಚಿತ್ರದುರ್ಗದಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಅವರ ಹೆಸರು ಕಡ್ಲಬಾಳು ಭೀಮರಾಯರು ಎಂದು. ಎಷ್ಟೋ ಜನ ಕಿರಿಯ ವಕೀಲರು ಅವರ ಸಲಹೆ ಕೇಳಲು ಬರುತ್ತಿದ್ದರು. ಅವರಿಗೂ ಇಬ್ಬರು ಗಂಡು ಮಕ್ಕಳು. ನಾವು ನಾಲ್ಕೂ ಜನ ಒಟ್ಟಿಗೆ ಸ್ಕೂಲಿಗೆ ಹೋಗುತ್ತಿದ್ದೆವು. ಆದರೆ ನಮ್ಮ ದೊಡ್ಡಮ್ಮನಿಗೆ ಸ್ವಂತ ಮಕ್ಕಳ ಮೇಲೆ ಹೆಚ್ಚು ಪ್ರೀತಿ ಇತ್ತು. ತಮ್ಮನ ಪರದೇಶಿ ಮಕ್ಕಳಾದ ನಮ್ಮನ್ನು ಮನೆಯಲ್ಲಿ ದೊಡ್ಡಪ್ಪ ಇಟ್ಟುಕೊಂಡಿದ್ದು ಅವರಿಗೆ ಅಷ್ಟೊಂದು ಇಷ್ಟವಿರಲಿಲ್ಲ. ಆದರೂ ನನ್ನ ದೊಡ್ಡಪ್ಪನ ಎದುರಿಗೆ ವಾದಿಸುವ ಧೈರ್ಯವಿಲ್ಲದೆ ಸುಮ್ಮನಿರುತ್ತಿದ್ದರು. ತಮ್ಮ ಅಸಹನೆ ಆಗಾಗ್ಗೆ ತೋರಿಸಿಕೊಳ್ಳುತ್ತಿದ್ದರು. ಆದರೆ ದೊಡ್ಡಪ್ಪ ಮಾತ್ರ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವು ಪರದೇಶಿ ಮಕ್ಕಳೆಂಬ ಭಾವನೆ ಅವರಲ್ಲಿ ಇತ್ತು.
ಚಿತ್ರದುರ್ಗದ ಅಯ್ಯಣ್ಣ ಪೇಟೆ ತರಕಾರಿ ಮಾರ್ಕೆಟಿನ ಅಂಗಳದಲ್ಲಿ ನನ್ನ ಅಕ್ಷರಾಭ್ಯಾಸ ಪ್ರಾರಂಭವಾಯಿತು. ಮರದ ಹಲಗೆಯ ಮೇಲೆ ಹರಡಿದ್ದ ಮರಳಿನ ಮೇಲೆ ಕನ್ನಡ ಅಕ್ಷರಗಳನ್ನು ತಿದ್ದಿ ತಿದ್ದಿ ಬರೆಯಬೇಕಾಗಿತ್ತು. ಅಲ್ಲಿಂದ ಬುರುಜನ ಹಟ್ಟಿ ಪ್ರಾಥಮಿಕ ಶಾಲೆಗೆ ಸೇರಿದೆ. ಮನೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿದ್ದ ಆ ಶಾಲೆಗೆ ಹೋಗಿ ಬರುವುದು ಬಹಳ ಕಷ್ಟವಾಗುತ್ತಿತ್ತು. ಬಂದ ಮೇಲೆ ದೊಡ್ಡಮ್ಮ ಹೇಳಿದ ಮನೆಗೆಲಸಗಳನ್ನು ಮಾಡಬೇಕಾಗುತ್ತಿತ್ತು. ನಾನು ಮತ್ತು ನನ್ನ ಅಣ್ಣ ಮನೆಯ ಹಿಂದೊಂದು ಸಣ್ಣ ರೂಮಿನಲ್ಲಿರುತ್ತಿದ್ದೆವು. ನನ್ನ ಅಣ್ಣ ಹೆಚ್ಚು ಮಾತನಾಡುತ್ತಿರಲಿಲ್ಲ. ಯಾವಾಗಲೂ ಒಂದು ಮೂಲೆಯಲ್ಲಿ ಏನನ್ನೋ ಯೋಚಿಸುತ್ತಾ ಕುಳಿತಿರುತ್ತಿದ್ದ. ಆದರೆ ನಾನು ಎಲ್ಲರೊಡನೆಯೂ ಹರಟೆ ಹೊಡೆಯುತ್ತಿದ್ದೆ. ಮೊದಲಿನಿಂದಲೂ ನನಗೆ ಮಾತು ಬೇಕು. ಜನ ಬೇಕು. ಎಲ್ಲರೊಡನೆಯೂ ಮಾತನಾಡಬೇಕೆಂಬ ಸ್ವಭಾವ ನನ್ನದು. ಆದರೆ ನನ್ನ ಅಣ್ಣನ ಸ್ವಭಾವ ಇದಕ್ಕೆ ತದ್ವಿರುದ್ಧ.
(ಮುಂದುವರೆಯುವುದು)
- ಕೆ. ಶಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


