ಬೈಟುಕಾಫಿ

ಪ್ರೀತಿ ವಾತ್ಸಲ್ಯವಿರಲಿ

Published On :

ನಮ್ಮ ಹಳ್ಳಿಯ ಜನ ತಮ್ಮ ಮಕ್ಕಳು ಓದಿ ಜಾಣರಾಗಲೆಂದು ಮಹಾನಗರಗಳಿಗೆ ಕಳಿಸುತ್ತಿದ್ದಾರೆ.ಸಮಯ ಸಿಕ್ಕಾಗ ಹಿರಿಯರನ್ನು ನೋಡಲು ಮಕ್ಕಳು ಹಳ್ಳಿಗಳಿಗೆ ಬರುತ್ತಾರೆ. ಅವರಿಗೆ ರಜಾ ದೊರೆತ ಅಷ್ಟೂ ದಿನ ಹಳ್ಳಿಯಲ್ಲಿ ಇರುತ್ತಾರೆ. ವೃದ್ಧರಾದವರೂ ಸಹ ಮಕ್ಕಳ ಇಚ್ಚೆಯಂತೆ ನಗರಗಳಿಗೆ ಹೋಗಿ ಬರುತ್ತಾರೆ. ಸೊಸೆಯರನ್ನು ತಮ್ಮ ಹೆಣ್ಣು ಮಕ್ಕಳಂತೆ ನೋಡಿಕೊಂಡರೆ ಅವರಿಗೂ ವಿಶ್ವಾಸ ಮೂಡುತ್ತದೆ. ಮೊಮ್ಮಕ್ಕಳನ್ನು ಅಜ್ಜ-ಅಜ್ಜಿಯರ ಬಳಿ ಶಾಲೆಯ ರಜಾದಿನಗಳಲ್ಲಿ ಕಳಿಸಬೇಕು. ಆಗ ಅಜ್ಜ-ಅಜ್ಜಿ-ಮೊಮ್ಮಕ್ಕಳ ಬಾಂಧವ್ಯ ಹೆಚ್ಚಾಗುತ್ತದೆ. ನಗರದ ಜನ ಹಳ್ಳಿಗೆ ಹೊಂದಿಕೊಂಡು ಹೋದರೆ ಹಳ್ಳಿ ಎಂದಿಗೂ ವೃದ್ಧಾಶ್ರಮ ಆಗಲಾರದೆಂದು ನಾನು ಸಹ ವೃದ್ಧಳಾದ, ನಿವೃತ್ತ ಶಿಕ್ಷಕಿಯಾಗಿ ನನ್ನ ಅನುಭವ.
= ಕೆ.ಪರಿಮಳ ಧೀರೇಂದ್ರ ರಾವ್, ಬೆಂಗಳೂರು

ದುಡಿಮೆಗೆ ಅವಕಾಶಗಳ ಕೊರತೆ

ನಗರಗಳಿಗೆ ಬರುವ ಜನರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ ಮತ್ತು ದಿನಗೂಲಿಗಾಗಿ ಯಾವುದೋ ಒಂದು ದುಡಿಮೆಯ ಮೂಲ ನಗರದಲ್ಲಿ ಇರುವುದೆಂಬ ಭರವಸೆ ಜನರಿಗೆ ಬಹಳವಾಗಿ ಮೂಡುತ್ತಾ ಬಂದಿದೆ. ಆದರೆ, ಹಳ್ಳಿಗಳಲ್ಲಿ ಕೇವಲ ಕೃಷಿ ಮಾತ್ರ ಉಳಿದು ಇದಕ್ಕೂ ಕೂಡ ಮಳೆ ಮತ್ತು ವಿದ್ಯುತ್ ಅಭಾವ ಬಹಳವಿರುವುದರಿಂದ ಜನರಿಗೆ ಕೃಷಿಯಲ್ಲಿ ಒಲವು ಕಡಿಮೆಯಾಗುತ್ತಾ ಬಂದಿದೆ. ಜೀವನೋಪಾಯಕ್ಕಾಗಿ ನಗರಗಳಿಗೆ ಬರುವುದು ಅನಿವಾರ್ಯವಾಗಿದೆ. ದುಡಿಮೆಯ ಶಕ್ತಿ ಕಳೆದುಕೊಂಡ ಹಿರಿಯರು ಮಾತ್ರ ಹಳ್ಳಿಗಳಲ್ಲಿ ಉಳಿದುಕೊಳ್ಳುವಂತಾಗಿದೆ. ಇದಕ್ಕೆಲ್ಲಾ ಪರಿಹಾರವೆಂದರೆ ಹಳ್ಳಿಗಳಲ್ಲಿರುವ ಜನರಿಗೆ ಮನೆಯಲ್ಲಿ ಮಾಡುವಂತಹ ಯಾವುದಾದರೂ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುವುದು. ಅಲ್ಲದೆ ದುಡಿಯುವ ಕೈಗೆ ಕೆಲಸ ಕೊಟ್ಟು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಿ ಹಳ್ಳಿಯಲ್ಲೇ ಜೀವನ ನಡೆಸುವ ಚೈತನ್ಯವನ್ನು ನೀಡಬೇಕಾಗಿದೆ. ಇದರಿಂದ ಹಿರಿಯರಿಗೆ ಕೂಡ ಅನುಕೂಲವಾಗುತ್ತದೆ. ಹಳ್ಳಿಗಳು ವೃದ್ಧಾಶ್ರಮವಾಗುವುದನ್ನು ತಡೆಯಬಹುದು.
= ಎಸ್. ಅಮೃತಾ, ಹಿರೇಜಂತಕಲ್, ಗಂಗಾವತಿ.

ಪಾಶ್ಚಿಮಾತ್ಯರ ಪ್ರಭಾವ

ಇತ್ತೀಚಿನ ನಾಗರೀಕತೆಯಲ್ಲಿ ಹಳ್ಳಿಯ ವಾತಾವರಣದ ಬಗ್ಗೆ ಯುವಕರಿಗೆ ಜುಗುಪ್ಸೆ ಬಂದಿದೆ. ಹಳ್ಳಿಯ ಭಾಷೆ, ನಡೆ-ನುಡಿ ಉಡುಗೆ ಇವೆಲ್ಲವೂ ಅವರಿಗೆ ಬೇಡವಾಗಿದೆ. ಆದರೆ, ಪಾಶ್ಚಿಮಾತ್ಯಕ್ಕೆ ಮಾರು ಹೋಗಿದ್ದಾರೆ. ಹಳ್ಳಿಯ ಶಾಲೆಯಲ್ಲಿ ಕಲಿತರೂ ತಾನು ಹಳ್ಳಿಯವನೆಂದು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ತಮ್ಮ ತಂದೆ-ತಾಯಿ ಹಳ್ಳಿಯವರೆಂದು ಅವರನ್ನು ಪರಿಚಯ ಮಾಡಿಸಲು ಸಂಕೋಚ ಪಡುತ್ತಾರೆ. ಹಳ್ಳಿಯಿಂದನೇ ದಿಲ್ಲಿಯೆಂಬುದನ್ನು ಮರೆತ್ತಿದ್ದಾರೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ತಂದೆ-ತಾಯಿಯರನ್ನು ಮರೆಯಬಾರದು. ಅಲ್ಲದೇ ತಮ್ಮ ನೆಲೆಯ ಕೊಂಡಿ ಕಳಚಿಕೊಳ್ಳಬಾರದು. ಪೂಜ್ಯರಾದ ಪೋಷಕರನ್ನು ಪೂಜ್ಯಭಾವದಿಂದಲೇ ನೋಡಬೇಕು. ಇವರನ್ನು ಅನಾಥರನ್ನಾಗಿ ಮಾಡಬೇಡಿ.
= ಶೈಲಾ ಸುಭಾಸ ನಾಯಿಕ, ಲೋಳಸೂರ.

'ಜಗುಲಿ'ಯಲ್ಲಿ ಈ ಸಲದ ವಿಷಯ 'ಪರೀಕ್ಷೆ ಸಮಯದಲ್ಲಿ ಪಾಲಕರ ಪಾತ್ರ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು.

ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.