ದಿವಾಕರರ ರಾಜಕೀಯ ದುರಂತ

ದಿವಾಕರರು ಉಜ್ವಲ ದೇಶಭಕ್ತರು, ಸ್ವಾತಂತ್ರ್ಯ ಯೋಧರು, ಗಾಂಧಿವಾದಿ, ತಂತ್ರಜ್ಞಾನಿ, ಶ್ರೇಷ್ಠ ಸಾಹಿತಿ, ಇಡೀ ಕರ್ನಾಟಕದಲ್ಲಿ ಸಾಕಷ್ಟು ಹೆಸರು ಪಡೆದಿದ್ದರು. ಲೋಕಶಿಕ್ಷಣ ಟ್ರಸ್ಟಿನ ಮುಖಾಂತರ ಇಡೀ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕೆಂಬ ಅಭಿಲಾಷೆ ಅವರಿಗೆ ತುಂಬಾ ಇತ್ತು. ಆದರೆ ಅದಕ್ಕೆ ಅವಕಾಶವಾಗಲಿಲ್ಲ. ಪುತ್ರಮೋಹ ಅವರನ್ನು ಬಲಿ ತೆಗೆದುಕೊಂಡಿತು. ಅವರ ರಾಜಕೀಯ ಭವಿಷ್ಯವನ್ನು ಅಳಿಸಿ ಹಾಕಿತು.
ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳನ್ನು ವಜಾ ಮಾಡಿದ ರಾಜ್ಯದ ಹೈಕೋರ್ಟ್ ಟ್ರಸ್ಟ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಮತ್ತು ಪತ್ರಿಕೆಗಳನ್ನು ನಡೆಸಿಕೊಂಡು ಹೋಗುವುದಕ್ಕಾಗಿ ಐವರು ಧರ್ಮದರ್ಶಿಗಳ ಮಂಡಲಿಯೊಂದನ್ನು ರಚಿಸಲು ತೀರ್ಮಾನಿಸಿತಲ್ಲದೆ, ಯಾವ ರೀತಿಯ ಆಡಳಿತ ನಡೆಸಬೇಕೆಂಬ ಬಗ್ಗೆ ನಿಯಮಗಳ ಒಂದು ಯೋಜನೆಯನ್ನೂ ಹೈಕೋರ್ಟ್ ರಚಿಸಿದ ಮೊದಲನೆಯ ಧರ್ಮದರ್ಶಿ ಮಂಡಲಿಗೆ, ಭಾರತದ ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಕೆ.ಎಸ್.ಎನ್. ಅಡಿಗ, ಆರ್.ಎ. ಮುಂಡಕೂರ್, ಎಸ್.ಪಿ. ಭಟ್ ಮತ್ತು ಜಿ.ಎಂ. ಪಾಟೀಲ್ರನ್ನು ಧರ್ಮದರ್ಶಿ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಮಂಡಳಿಯ ಅಧ್ಯಕ್ಷರಾದ ಜತ್ತಿಯವರು ಅದುವರೆಗೆ ಟ್ರಸ್ಟಿನ ಚರ ಮತ್ತು ಸ್ಥಿರಾಸ್ತಿಗಳ ಆಡಳಿತ ನಡೆಸುತ್ತಿದ್ದ ಇಬ್ಬರು ಕೋರ್ಟ್ ರಿಸೀವರುಗಳಿಂದ ತಾ. 10.03.1986 ರಂದು ಅಧಿಕಾರ ವಹಿಸಿಕೊಂಡರು.
ಸುರ್ಪ್ರೀಂಕೋರ್ಟಿಗೆ ಮೇಲ್ಮನವಿ
ಅಂತೂ ಸುಮಾರು ಹನ್ನೆರಡು ವರ್ಷ ಕಾಲ ನಡೆದ ಕೋರ್ಟ್ ವ್ಯವಹಾರಗಳು ಮುಗಿದು, ಟ್ರಸ್ಟಿನ ಎಲ್ಲಾ ಆಸ್ತಿಗಳು ಮತ್ತು ಪತ್ರಿಕೆಗಳನ್ನು ನಡೆಸುವ ಅಧಿಕಾರ ಪುನಃ ಟ್ರಸ್ಟಿಗೆ ಬಂದಂತಾಯಿತು. ಇದರಿಂದ ನನಗೆ ಸಂತೋಷವಾದರೂ, ದಿವಾಕರರಿಗೆ ಮತ್ತು ಅನಂತನಿಗೆ ಭಾರಿ ಅಸಮಾಧಾನವಾಗಿತ್ತು. ಈ ತೀರ್ಪಿನ ವಿರುದ್ಧ ತಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿಯೂ ಅದಕ್ಕಾಗಿ ಮೂರು ತಿಂಗಳವರೆಗೆ ತೀರ್ಪು ಜಾರಿಗೆ ಬರದಂತೆ ತಡೆಯಾಜ್ಞೆ ಕೊಡಬೇಕೆಂದು ದಿವಾಕರರ ವಕೀಲರು ಹೇಳಿದರು. ಆದರೆ ಕೋರ್ಟು ಒಪ್ಪಲಿಲ್ಲ. ಆದರೂ ದಿವಾಕರರು ದೆಹಲಿಗೆ ಹೋಗಿ ತಮ್ಮ ಹೆಸರಿನಲ್ಲಿಯೇ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೊಡಬೇಕೆಂದು ವಿಶೇಷ ಅರ್ಜಿ ಸಲ್ಲಿಸಿದರು. ಮುಂಬಯಿಯ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾಗಿದ್ದ ವಿ.ಎಂ. ತಾರ್ಖುಂಡೆಯವರು ದಿವಾಕರರ ವಕೀಲರಾಗಿದ್ದರು. ಅವರಿಗೆ ತಕ್ಕ ಸ್ಥಾನಮಾನದ ವಕೀಲರನ್ನು ನಮ್ಮ ಪರವಾಗಿ ನೇಮಿಸುವಂತೆ ನಾನು ನಮ್ಮ ಸಲಹೆಗಾರರಾಗಿದ್ದ ಮುಂಬಯಿಯ ಸುಪ್ರಸಿದ್ದ ವಕೀಲಿ ಸಂಸ್ಥೆ ಮುಲ್ಲ ಮತ್ತು ಮುಲ್ಲ ಎಂಬುವರನ್ನು ಕೇಳಿದ್ದೆ. ಅವರು ಸುಪ್ರಸಿದ್ದ ವಕೀಲರಾಗಿದ್ದ ಸೋಲಿ ಸೊರಾಬ್ಜಿಯವರ ಹೆಸರನ್ನು ಹೇಳಿ, ಅವರನ್ನೇ ನೇಮಿಸಿದ್ದರು. ಕರ್ನಾಟಕ ಹೈಕೋರ್ಟಿನ ತೀರ್ಪನ್ನು ತಡೆ ಹಿಡಿದು, ಟ್ರಸ್ಟ್ನ ಆಸ್ತಿಗಳ ಆಡಳಿತಕ್ಕಾಗಿ ಮತ್ತು ಪತ್ರಿಕೆಗಳನ್ನು ನಡೆಸುವುದಕ್ಕಾಗಿ ಇಬ್ಬರು ಕೋರ್ಟ್ ರಿಸೀವರುಗಳನ್ನು ನೇಮಿಸಿಬೇಕೆಂದು ದಿವಾಕರರು ಸುಪ್ರೀಂ ಕೋರ್ಟ್ನ್ನು ತಮ್ಮ ಮೇಲ್ಮನವಿಯಲ್ಲಿ ಕೇಳಿಕೊಂಡಿದ್ದರು. ಈ ಅರ್ಜಿ ವಿಚಾರಣೆಗೆ ಬಂದಾಗ ನಾನು ಮತ್ತು ನಮ್ಮ ವಕೀಲರಾದ ಕೆ.ಐ. ಭಟ್ಟರು ಹಾಗೂ ನನ್ನ ಮಿತ್ರರೂ, ಟ್ರಸ್ಟಿನ ಆಡಿಟರರೂ ಆಗಿದ್ದ ಎಚ್.ಕೆ. ಅಪರಂಜಿಯವರೂ ದೆಹಲಿಗೆ ಹೋಗಿದ್ದೆವು. ಈ ಪ್ರಯಾಣಕ್ಕಾಗಿ ನಾನು ಸಾವಿರಾರು ರೂ. ಖರ್ಚು ಮಾಡಬೇಕಾಯ್ತು. ಈ ಖರ್ಚಿಗಾಗಿ ನಾನು ನನ್ನ ಹೆಂಡತಿಯ ಮೈಮೇಲಿನ ಒಡವೆಗಳನ್ನೂ ಒತ್ತೆ ಇಟ್ಟು ಹಣ ಹೊಂದಿಸಿಕೊಂಡೆನೆಂದು ಹೇಳಿದರೆ ಅನೇಕರು ನಂಬಲಿಕ್ಕಿಲ್ಲ.
ದಿವಾಕರರ ರಾಜಕೀಯ ದುರಂತ
ಸುಮಾರು ನಲವತ್ತು ವರ್ಷಗಳಿಂದ ಲೋಕ ಶಿಕ್ಷಣ ಟ್ರಸ್ಟಿನ ಆಶ್ರಯದಲ್ಲಿ ನಡೆಯುತ್ತಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮತ್ತು ಕಸ್ತೂರಿ ಮಾಸ ಪತ್ರಿಕೆಗಳ ತಾ. 11.11.1974 ರಂದು ಪರಭಾರೆಯಾಗಿದ್ದವು. ಕರ್ನಾಟಕ ಪತ್ರಿಕಾ ಪ್ರೈ.ಲಿ. ಎಂಬ ಬಂಡವಾಳವಿಲ್ಲದ ಖಾಸಗಿ ಕಂಪನಿಗೆ ಈ ಪತ್ರಿಕೆಗಳನ್ನು ಕೊಡಲಾಯಿತು. ಆಗಿನ ಧರ್ಮದರ್ಶಿಗಳ ಹೆಸರಿನಲ್ಲಿ ರಂಗನಾಥ ದಿವಾಕರರು ಮತ್ತು ಅವರ ಮಗ ಅನಂತ ಸಂಚು ಮಾಡಿ ಗುಪ್ತವಾಗಿ ಪತ್ರಿಕೆಗಳನ್ನು ಪರಭಾರೆ ಮಾಡಿದ್ದರಲ್ಲದೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿರುವ ಟ್ರಸ್ಟಿನ ಸ್ಥಿರಾಸ್ತಿಗಳನ್ನು ಗುತ್ತಿಗೆ ಮೇಲೆ ಆ ಕಂಪನಿಗೇ ಕೊಟ್ಟಿದ್ದರು. ಕೆ.ಪಿ.ಪಿ. ಕಂಪನಿಯ ಅಧಿಕೃತ ಬಂಡವಾಳ ಕೆವಲ 2 ಲಕ್ಷ ರೂ. ಸಂಗ್ರಹವಾದ ಬಂಡವಾಳ ಕೇವಲ ನಲವತ್ತು ಸಾವಿರ ರೂ. ಇಬ್ಬರೇ ಷೇರುದಾರರು. ಅವರೇ ಕಂಪನಿಯ ಡೈರಕ್ಟರುಗಳು. ಅವರಿಬ್ಬರೂ ರಾಜ್ಯದ ಅಂದಿನ ಹಣಕಾಸು ಮಂತ್ರಿ ಎಂ.ವೈ. ಘೋರ್ಪಡೆಯವರ ಶಿಷ್ಯರು. ಅವರ ಷೇರು ಹಣವನ್ನು ಘೋರ್ಪಡೆಯವರೇ ಕೊಟ್ಟಿದ್ದರೆಂದು ಹೇಳಲಾಗಿದೆ. ಕಂಪನಿಗೆ ಸಿಬ್ಬಂದಿ ಇಲ್ಲ, ಬಂಡವಾಳವಿಲ್ಲ, ವಿಳಾಸವೂ ಇಲ್ಲ, ಸಂಯುಕ್ತ ಕರ್ನಾಟಕ ಕಚೇರಿಯೇ ಅದರ ಕಚೇರಿ. ಪತ್ರಿಕೆಯ ಸಿಬ್ಬಂದಿಯೇ ಅವರ ಸಿಬ್ಬಂದಿ.
ಇಂತಹ ಕಂಪನಿಗೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಟ್ರಸ್ಟಿನ ಸ್ಥಿರಾಸ್ತಿಗಳನ್ನು ಅದಕ್ಕಿಂತ ಮುಖ್ಯವಾಗಿ ಇಡೀ ಕನ್ನಡ ನಾಡಿನಲ್ಲಿ ಜನಪ್ರಿಯವಾಗಿದ್ದ ವೃತ್ತ ಪತ್ರಿಕೆಗಳನ್ನು 'ದಾನ'ವಾಗಿ ಕೊಡಲಾಯಿತೆಂದು ಹೇಳಿದರೆ ತಪ್ಪಾಗಲಾರದು. ಈ ರೀತಿ ಪತ್ರಿಕೆಗಳು ಮಾರಾಟವಾದ ದಿನ ಟ್ರಸ್ಟಿಗೆ ಒಂದು ಪೈಸೆ ಬರಲಿಲ್ಲವೆಂದರೆ ಇದು ಎಂತಹ ವ್ಯವಹಾರ, ಇದರ ರಹಸ್ಯವೇನು, ಈ ವ್ಯವಹಾರದಿಂದ ಯಾರಿಗೆ ಯಾವ ರೀತಿ ಲಾಭವಾಯಿತು ಎಂಬ ಬಗ್ಗೆ ಚರ್ಚೆ ಈಗ ಅನಗತ್ಯ. ಅದು ಮುಗಿದ ಅಧ್ಯಾಯ. ಇಂತಹ ದುರ್ವ್ಯವಹಾರಗಳನ್ನು ವಿರೋಧಿಸಿ, ಟ್ರಸ್ಟಿನಲ್ಲಿ ಆಸಕ್ತಿಯುಳ್ಳ ಕೆಲವರು ಸುಮಾರು ಹನ್ನೆರಡು ವರ್ಷಗಳವರೆಗೆ ನ್ಯಾಯಾಲಯಗಳಲ್ಲಿ ಹೋರಾಡಿ ಟ್ರಸ್ಟಿನ ಆಸ್ತಿಗಳು ಮತ್ತು ಪತ್ರಿಕೆಗಳು ಪುನಃ ಸ್ವತಂತ್ರವಾಗುವಂತೆ ಮಾಡಿದ ಪ್ರಯತ್ನ ಯಶಸ್ವಿಯಾಗಿರುವುದರಿಂದ ಈಗ ದಿವಾಕರರ ನಡುವಳಿಕೆಯನ್ನು ಪ್ರಶ್ನಿಸುವುದು ಅಥವಾ ಟೀಕಿಸುವ ಅಗತ್ಯವಿಲ್ಲ. ಆದರೆ ಕರ್ನಾಟಕದ ಜನರ ಜಾಗೃತಿಗಾಗಿ, ಕಲ್ಯಾಣಕ್ಕಾಗಿ, ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾವಿರಾರು ದೇಶ ಪ್ರೇಮಿಗಳು, ರಾಷ್ಟ್ರೀಯ ಮನೋಭಾವದಿಂದ ತ್ಯಾಗ, ಬಲಿದಾನಗಳಿಂದ ಕಟ್ಟಿದ ಪತ್ರಿಕೆಗಳನ್ನು ಅದರ ಮಾತೃ ಸಂಸ್ಥೆಗೆ ದ್ರೋಹ ಬಗೆದು ಪರಭಾರೆ ಮಾಡಿದ ದಿವಾಕರರು ಈ ಅಪರಾಧಕ್ಕಾಗಿ ಘೋರ ಶಿಕ್ಷೆಯನ್ನೇ ಅನುಭವಿಸಬೇಕಾಯಿತು. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದಿದ್ದ ಅವರು ಕೊನೆಗೆ ಅನಾಮಧೇಯರಾಗಿಯೇ ತೀರಿಕೊಂಡರು. ಇಂದಿಗೂ ಅವರ ಜೀವನವನ್ನು, ನಾಡು ನುಡಿಗಳಿಗೆ ಅವರು ಸಲ್ಲಿಸಿದ ಸೇವೆಯನ್ನು, ಆಧ್ಯಾತ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಕೃಷಿಯನ್ನು ಸ್ಮರಿಸುವವರು ಸಹ ಇಲ್ಲದಂತಾಗಿದೆ. ಗಾಂಧೀಜಿ, ಅರವಿಂದರು, ಗೀತೆಯ ಗುಟ್ಟು, ವಚನ ಶಾಸ್ತ್ರ, ರಹಸ್ಯ, ಉಪನಿಷತ್ ಕಥಾವಳಿ ಮೊದಲಾದ ಅವರ ಅಮೂಲ್ಯ ಗ್ರಂಥಗಳನ್ನು ಈಗ ಓದುವವರೇ ಇಲ್ಲ. ಅಂತೂ ಅವರ ಜೀವನ ಒಂದು ದುರಂತ. ಇಂದಿನ ಜನರಿಗೆ ಅದರ ಹೆಸರು ಸಹ ಮರೆತು ಹೋಗಿದೆ. ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನದ ಬಹುಭಾಗವನ್ನು ಸೆರೆಮನೆಯಲ್ಲಿ ಕಳೆದ, ಸದಾ ಸಾಧು ಸಂತರಂತೆ ನಡೆದುಕೊಳ್ಳುತ್ತಿದ್ದ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿಯೇ ಕಾಲ ಕಳೆಯುತ್ತಿದ್ದ ದಿವಾಕರರು ಕೊನೆಗೆ ಪುತ್ರ ಮೋಹವೆಂಬ ಪಾಶದಲ್ಲಿ ಸಿಕ್ಕು ಕಣ್ಮರೆಯಾದರು. ಆದರೆ ನಾನು ಲೋಕ ಶಿಕ್ಷಣ ಟ್ರಸ್ಟಿನ ಸ್ಥಾಪಕರಾಗಿದ್ದ ಮತ್ತು ಉತ್ತರ ಕರ್ನಾಟಕದ ಅದ್ವಿತೀಯ ರಾಜಕಾರಣಿ ಎನಿಸಿದ್ದ ಆರ್.ಆರ್. ದಿವಾಕರರ ಜನ್ಮ ದಿನದಂದು ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಲು ಸುಮಾರು ಒಂದು ಲಕ್ಷ ರೂ. ದೇಣಿಗೆಯನ್ನು ಟ್ರಸ್ಟಿನ ಪರವಾಗಿ ಭಾರತೀಯ ವಿದ್ಯಾ ಭವನಕ್ಕೆ ಕೊಟ್ಟಿದ್ದೇನೆ. ಪ್ರತಿ ವರ್ಷವೂ ಅವರ ಜನ್ಮ ದಿನದಂದು (ಸೆಪ್ಟೆಂಬರ್ 30) ಅವರ ಹೆಸರಿನಲ್ಲಿ ಭಾರತೀಯ ವಿದ್ಯಾಭವನದಲ್ಲಿ ದೇಶದ ಪ್ರಖ್ಯಾತ ವ್ಯಕ್ತಿಗಳಿಂದ ಉಪನ್ಯಾಸಗಳು ನಡೆಯುತ್ತಿವೆ.
ಅವರ ಪುತ್ರ ಅನಂತ, ಹೆಂಡತಿ ಮಕ್ಕಳಿಂದ ದೂರವಾಗಿ ಅನಾಥನಂತೆ ಅಲೆಯುತ್ತಿದ್ದ. ಇದು ದಿವಾಕರರ ಪುತ್ರ ವ್ಯಾಮೋಹದ ಫಲವೋ ಅಥವಾ ಟ್ರಸ್ಟಿನ ಶಾಪವೋ ಹೇಳುವುದು ಕಷ್ಟ. ಸ್ವಾತಂತ್ರ್ಯ ಸೇನಾನಿಯಾಗಿ, ಕರ್ನಾಟಕದ ಏಕೀಕರಣದ ಹರಿಕಾರನಾಗಿ, ಸಾಹಿತಿಯಾಗಿ, ವೇದಾಂತಿಯಾಗಿ, ಆಡಳಿಗಾರನಾಗಿ, ದಿವಾಕರರು ಗಳಿಸಿದ್ದ ಕೀರ್ತಿಯನ್ನು ಕೊನೆಗೆ ಅವರ ಪುತ್ರ ವ್ಯಾಮೋಹ ಅಳಿಸಿ ಹಾಕಿತು. ಇದು ಒಂದು ದುರಂತವಲ್ಲವೇ?
ಟ್ರಸ್ಟಿನ ಪ್ರಕಟಣೆಗಳನ್ನು ಪರಭಾರೆ ಮಾಡಿದ ನಂತರ ಆರ್.ಆರ್. ದಿವಾಕರರು ಬೆಂಗಳೂರಿನಲ್ಲಿ ಸದಾಶಿವನಗರದಲ್ಲಿದ್ದ ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಸುಮಾರು 14 ವರ್ಷ ಏಕಾಂತ ವಾಸದಲ್ಲಿದ್ದರೆಂದು ಹೇಳಬಹುದು. ಆಗಾಗ್ಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಆಗಾಗ್ಗೆ ಪಾಂಡಿಚೇರಿಗೆ ಹೋಗಿ ಅರವಿಂದಾಶ್ರಮದಲ್ಲಿ ಅರವಿಂದರ ಸಮಾಧಿಯ ಮುಂದೆ ಕುಳಿತು ಕಾಲ ಕಳೆಯುತ್ತಿದ್ದರು. ಅದೇ ರೀತಿ ಅವರ ಆಪ್ತ ಮಿತ್ರ ಎನ್.ಜಿ. ಗಣಪತಿಯವರು ವೈಟ್ಫೀಲ್ಡ್ನಲ್ಲಿ ಖರೀದಿಸಿದ್ದ ಬಂಗಲೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಪುಟ್ಟಪರ್ತಿಗೆ ಹೋಗಿ ಸತ್ಯಸಾಯಿಬಾಬಾರೊಡನೆ ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಈ ಸಮಯದಲ್ಲಿ ನಾನು ಹಲವಾರು ಬಾರಿ ಮಾತಾಡಿದ್ದೆ. ಒಂದು ಬಗೆಯ ಮನೋರೋಗ ಅವರನ್ನು ಪೀಡಿಸುತ್ತಿದ್ದಂತೆ ನನಗೆ ಅನಿಸಿತು. ಪಶ್ಚಾತ್ತಾಪದಿಂದ ನರಳಿ, ನರಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಂತೆ ಭಾವನೆಯಾಯಿತು. ತಮ್ಮ ಜೀವನದ ಸಂಜೆಯನ್ನು ಘಟಪ್ರಭಾದಲ್ಲಿ ಕಳೆಯಲು ನಿರ್ಧರಿಸಿ, ಒಂದು ಕಾಗದದ ಮೂಲಕ ಅದನ್ನು ನನಗೆ ತಿಳಿಸಿ, ಸಾಧ್ಯವಾದರೆ 15 ನಿಮಿಷ ಬಂದು ತಮ್ಮನ್ನು ನೋಡಬೇಕೆಂದು ಬರೆದಿದ್ದರು. ಅದರಂತೆ ಅವರ ಮನೆಗೆ ಹೋದೆ. ಮುಂದಿನ ರೂಮಿನಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಕುಳಿತಿದ್ದರು. ನನ್ನನ್ನು ಆತ್ಮೀಯತೆಯಿಂದ ಸ್ವಾಗತಿಸಿ ಯೋಗಕ್ಷೇವು ವಿಚಾರಿಸಿದರು. ಪತ್ರಿಕೆಗಳು ಹೇಗೆ ನಡೆಯುತ್ತಿದೆ ಎಂದು ಕೇಳಿದರು. ಅಷ್ಟು ಹೊತ್ತಿಗೆ ಅನಂತನೂ ಬಂದ. ಒಳಗೆ ನನಗೆ ಮತ್ತು ದಿವಾಕರರಿಗೆ ಎರಡು ಕಪ್ ಚಹಾ ತಂದು ಕೊಟ್ಟ. ದಿವಾಕರರು ಚಹಾವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಕಡೆಗೆ ತಿರುಗಿ 'ಶಾಮರಾವ್, ಕಳೆದ ಆರು ದಿನದಲ್ಲಿ ನಾನು ಕುಡಿಯುತ್ತಿರುವುದು ಇದೇ ಮೊದಲನೆಯ ಚಹಾ' ಎಂದು ನುಡಿದರು. ಅದನ್ನು ಕೇಳಿ ನನಗೆ ಆಘಾತವಾದಂತಾಯಿತು. ನನಗಂತೂ ಆ ಚಹಾ ಬಹಳ ಕಹಿ ಅನಿಸಿತು. ಆದರೆ ದಿವಾಕರರು ಅದನ್ನೇ ಕುಡಿದು ಕಪ್ಪನ್ನು ಕೆಳಗಿಟ್ಟರು. ಒಂದು ಮಾತನ್ನೂ ಆಡಲಿಲ್ಲ. ಅವರ ಮುಖ ನೋಡಲು ನನಗೆ ಸಾಧ್ಯವಾಗಲಿಲ್ಲ. ಮತ್ತೆ ಬರುತ್ತೇನೆಂದು ಹೇಳಿ ಎದ್ದು ಬಂದೆ.
ಮುಂದೆ ಒಂದು ತಿಂಗಳ ನಂತರ ನಾನು ಸಿರ್ಸಿಯಲ್ಲಿದ್ದಾಗ, ದಿವಾಕರರ ಸ್ಥಿತಿ ಗಂಭೀರವಾಗಿದೆಯೆಂದು ಸುದ್ದಿ ಬಂದಿತು. ಕೂಡಲೇ ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಬೆಳಗಾವಿಗೆ ಬಂದು, ರಾತ್ರಿಯೇ ಘಟಪ್ರಭಾಕ್ಕೆ ಬಂದೆ. ಮರುದಿನ ಬೆಳಗ್ಗೆ ಆರೋಗ್ಯ ಧಾಮಕ್ಕೆ ಹೋದಾಗ, ದಿವಾಕರರು ಒಂದು ಕೋಣೆಯಲ್ಲಿ ಮಲಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಯಾರು ಮಾತನಾಡಿದರೂ ಅದನ್ನೇ ಪುನರುಚ್ಚರಿಸುತ್ತಿದ್ದರು. ಉತ್ತರ ಕೊಡುತ್ತಿರಲಿಲ್ಲ. ಆಗ ನಾನು ಸ್ವಲ್ಪ ಹೊತ್ತು ಅವರ ಹತ್ತಿರ ಕುಳಿತಿದ್ದು ನಂತರ ವೈದ್ಯಾಧಿಕಾರಿ ಡಾ. ವೈದ್ಯರನ್ನು ಕಂಡು ದಿವಾಕರರು ಆರೋಗ್ಯದ ಬಗ್ಗೆ ವಿಚಾರಿಸಿದೆ. ಒಂದೆರಡು ದಿನ ಬದುಕಬಹುದೆಂದು ಅವರು ಹೇಳಿದರು. ಬಳಿಕ ನಾನು ಹುಬ್ಬಳ್ಳಿಗೆ ಬಂದು ದಿವಾಕರರ ವೈದ್ಯಕೀಯ ವೆಚ್ಚಕ್ಕಾಗಿ ಟ್ರಸ್ಟಿನಿಂದ ಐದು ಸಾವಿರ ರೂ. ಚೆಕ್ಕನ್ನು ಘಟಪ್ರಭಾ ಆರೋಗ್ಯ ಧಾಮದ ವೈದ್ಯಾಧಿಕಾರಿ ಡಾ. ವೈದ್ಯರಿಗೆ ಕಳಿಸಿಕೊಟ್ಟೆ. ಮುಂದೆ ಎರಡು ದಿನದಲ್ಲಿ ದಿವಾಕರರು ನಿಧನರಾದ ಸುದ್ದಿ ಬಂದಿತು.
ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು. ದಿವಾಕರರು ಉಜ್ವಲ ದೇಶಭಕ್ತರು, ಸ್ವಾತಂತ್ರ್ಯ ಯೋಧರು, ಗಾಂಧಿವಾದಿ, ತಂತ್ರಜ್ಞಾನಿ, ಶ್ರೇಷ್ಠ ಸಾಹಿತಿ, ಇಡೀ ಕರ್ನಾಟಕದಲ್ಲಿ ಸಾಕಷ್ಟು ಹೆಸರು ಪಡೆದಿದ್ದರು. ಲೋಕಶಿಕ್ಷಣ ಟ್ರಸ್ಟಿನ ಮುಖಾಂತರ ಇಡೀ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕೆಂಬ ಅಭಿಲಾಷೆ ಅವರಿಗೆ ತುಂಬಾ ಇತ್ತು. ಆದರೆ ಅದಕ್ಕೆ ಅವಕಾಶವಾಗಲಿಲ್ಲ. ಪುತ್ರಮೋಹ ಅವರನ್ನು ಬಲಿ ತೆಗೆದುಕೊಂಡಿತು.
(ಮುಂದುವರಿಯುವುದು)
-ಕೆ.ಶ್ಯಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


