ಇವರ ಆ ಡ್ರೆಸ್ಸೇ ಬೇರೇ!

ರಾಜಕಾರಣಿಗಳು 'ಬಿಳಿ' ಬಣ್ಣವನ್ನು ಆದಷ್ಟು ದೂರವಿಡುತ್ತಲೇ ಇದ್ದಾರೆ. ಅವರೀಗ ಹತ್ತಾರು ಬಣ್ಣಗಳನ್ನು ತೊಡುತ್ತಿದ್ದಾರೆ. ಆ ಬಣ್ಣಗಳು ಯಾವ ಅರ್ಥವನ್ನು ರವಾನಿಸುತ್ತವೋ ಗೊತ್ತಿಲ್ಲ, ಪರಿಶುದ್ಧತೆಗಂತೂ ಈ ರಾಜಕಾರಣದಲ್ಲಿ ಜಾಗವಿಲ್ಲ. ಬಿಳಿಯು ಕಪ್ಪು ಬಣ್ಣದಲ್ಲಿ ಕರಗುತಿದೆ!
ರಾಜಕಾರಣಿಗಳೆಂಬ 'ಬಿಳಿಯರ' ಸಾಮ್ರಾಜ್ಯದಲ್ಲೂ ಭಿನ್ನರಿದ್ದಾರೆ (ಭಿನ್ನಮತೀಯರಲ್ಲ!). ತಮ್ಮದೇ ಉಡುಪನ್ನು ಬ್ರ್ಯಾಂಡ್ ಮಾಡಿ, ಭಿನ್ನತೆಗೊಳಗಾದವರು. ಬಿಳಿ ಬಣ್ಣದಿಂದ ಇವರೆಲ್ಲ ದೂರ...
ಕಪ್ಪುಚುಕ್ಕಿಗಳನ್ನಿಟ್ಟು ನೀವು ರಂಗೋಲಿ ಬಿಡಿಸಿದರೆ, ಅದು ರಾಜಕಾರಣವೆನಿಸಿಕೊಳ್ಳುತ್ತದೆ. ಪರಿಶುದ್ಧತೆಯನ್ನು ಅಲ್ಲಿ ಯಾರೋ, ಯಾವತ್ತೋ ಅಪಹರಿಸಿದ್ದಾರೆ. ಗಾಂಧಿ ಯುಗದಲ್ಲಿ ಅಲಿಖಿತವಾಗಿ ಆದ ಜುಬ್ಬಾ- ಪೈಜಾಮಾ, ಜುಬ್ಬಾ- ಪಂಚೆಯ ಸಮವಸ್ತ್ರದ ಬಿಳುಪಿನ ಮೇಲೆ ಲಂಚದ ಇಂಕು ಸಿಡಿಸಿದ ಮೊದಲ ಕೊಳಕು ನಾಯಕ ಇವತ್ತೇನು ನಿಮ್ಮ ಕೈಗೆ ಸಿಗಲಿಕ್ಕಿಲ್ಲ. ಆದರೂ ನಮ್ಮನ್ನಾಳುವವರು ಧೋಬಿಯ ಕೈಗೆ ಬಟ್ಟೆ ಕೊಟ್ಟು ತೊಳೆಸಿ, ತಾವು ಪರಿಶುದ್ಧರು ಎಂಬಂತೆ ಬಿಳಿವಸ್ತ್ರ ಧರಿಸುತ್ತಲೇ ಇದ್ದಾರೆ. ಆ ಬಟ್ಟೆ ಪರಿಶುದ್ಧತೆಯ ಸಂಕೇತವಿರಬಹುದು, ದೇಶ ಸಾಯುತ್ತಿದೆ ಎಂಬ ಸಂತಾಪ ಸೂಚಕವೂ ಆಗಿರಬಹುದು!
ಇರಲಿ. ಈ 'ಬಿಳಿಯರ' ಸಾಮ್ರಾಜ್ಯದಲ್ಲೂ ಭಿನ್ನರಿದ್ದಾರೆ (ಭಿನ್ನಮತೀಯರಲ್ಲ!). ತಮ್ಮದೇ ಉಡುಪನ್ನು ಬ್ರ್ಯಾಂಡ್ ಮಾಡಿ, ಭಿನ್ನತೆಗೊಳಗಾದವರು. ಅದಕ್ಕಾಗಿ ಇವರೇನು ರ್ಯಾಂಪ್ ಮೇಲೆ ನಡೆದಾಡಿಲ್ಲ. ಫೋಟೋಶೂಟ್ ನಡೆಸಿಲ್ಲ. ಜಸ್ಟ್ ರೋಡ್ ಶೋನಲ್ಲಿ ಇದು ಸಾಧ್ಯವಾಗಿರಬಹುದು, ಇಲ್ಲಾ ಅಷ್ಟಿಷ್ಟು ಸಮಾರಂಭಗಳು ಅವರ ಬಟ್ಟೆಗೆ ಬೇಕಾಬಿಟ್ಟಿ ಪ್ರಚಾರ ತಂದುಕೊಟ್ಟಿರಬಹುದು. ನೆಹರುರಂತೆ ಹೈ ಫೈ ಬ್ರ್ಯಾಂಡ್ಗಳನ್ನು ಹೊದ್ದವರಲ್ಲ ಇವರು. ನೆಹರು ಲಂಡನ್ನಲ್ಲಿ ಬಟ್ಟೆ ಖರೀದಿಸಿ, ಪ್ಯಾರೀಸ್ನಲ್ಲಿ ಅದನ್ನು ಹೊಲಿಸಿ, ಬರ್ಲಿನ್ನಲ್ಲಿ ಐರನ್ ಮಾಡಿಸಿಕೊಂಡು ಧರಿಸುತ್ತಿದ್ದರಂತೆ. ರಾಜೀವ್ಗಾಂಧಿ ಹೆಗಲ ಮೇಲೆ ಯಾವಾಗಲೂ ಕಾಶ್ಮೀರಿ ಶಾಲು ಮಲಗಿರಲೇಬೇಕಿತ್ತು. ಬಿಡಿ, ಸವೆದುಹೋದ ಸಂಗತಿಗಳು.
ಇರುವ ಖಾದಿಗಳಲ್ಲಿ ನಮ್ಮ ಕಣ್ಣಿಗೆ ಡಿಫರೆಂಟಾಗಿ ಕುಕ್ಕುವ ಕಾಯ ನರೇಂದ್ರ ಮೋದಿಯವರದ್ದು. ಧರಿಸುವ ಬಟ್ಟೆ ಗಡ್ಡಕ್ಕೆ ಮ್ಯಾಚ್ ಆಗಬೇಕೆಂಬ ಶಿಸ್ತು. ಮೋದಿ ಆಗೆಲ್ಲ ಸಂಘಟನೆಗಾಗಿ ಊರೂರು ಸುತ್ತುತ್ತಿದ್ದರು. ಬಟ್ಟೆ ಒಗೆಯುವುದೇದೊಡ್ಡ ಚಿಂತೆಯಾಗಿತ್ತಂತೆ ಅವರಿಗೆ. ಹೀಗಾಗಿ, ಕುರ್ತಾದ ತೋಳನ್ನು ಅರ್ಧಕ್ಕೇ ತುಂಡರಿಸಿದರು. ಅಲ್ಲದೆ, ಈ ತಂತ್ರದಿಂದ ಅವರಿಗೆ ಇನ್ನೊಂದು ಉಪಕಾರವೂ ಆಯಿತು. ಅವರ ಪುಟ್ಟ ಬ್ಯಾಗಿನಲ್ಲಿ ಇನ್ನಷ್ಟು ಜಾಗ ಮಿಕ್ಕುತ್ತಿತ್ತು. ಐದಾರು ಪುಸ್ತಕಗಳನ್ನು ತುರುಕಿಕೊಂಡು ಹೋಗುತ್ತಿದ್ದರಂತೆ.
ಇದೇ ಅರ್ಧ ತೋಳಿನ ಕುರ್ತಾ ಧರಿಸಿಯೇ, ಮೋದಿ ಮುಖ್ಯಮಂತ್ರಿಯಾಗಿ ಮೊದಲ ಪ್ರಮಾಣ ವಚನ ಸ್ವೀಕರಿಸಿದರು. ಅದಾಗಿ ಒಂದೇ ವರ್ಷದಲ್ಲಿ 'ಮೋದಿ ಕುರ್ತಾ' ಆಗಿ ಅಂಥ ಬಟ್ಟೆಗಳು ಮಾರುಕಟ್ಟೆಗೆ ಬಂದಿದ್ದವು. ಮೋದಿಯ ಈ ವಸ್ತ್ರವಿನ್ಯಾಸದ ಹಿಂದೆ ಅಹಮದಾಬಾದ್ ಮೂಲದ ಬಿಪಿನ್ ಚೌಹಾಣರ ಕೈವಾಡವಿದೆ. ಮೋದಿ ಎಲ್ಲೇ ಪ್ರವಾಸ ಹೋಗುವುದಿದ್ದರೂ ಟೆಕ್ಸಾನ್ ಟೋಪಿಯನ್ನು ಮರೆಯುವುದಿಲ್ಲ. ಇಷ್ಟೆಲ್ಲ ಮಾಡಿಯಾದ ಮೇಲೆ ತುಟಿ ಕೆಂಪಗಿರದಿದ್ದರೆ ಹೇಗೆ? ಮೋದಿ ಅದಕ್ಕಾಗಿ ಬನಾರಸ್ ಪಾನ್ ಜಗಿಯುತ್ತಾರೆ. ಮತ್ತೊಂದು... ಮೋದಿ ಫೌಂಟೆನ್ ಪೆನ್ನನ್ನು ಬಿಟ್ಟು ಹೊರಗೆ ಕಾಲಿಟ್ಟವರೇ ಅಲ್ಲ.
ಇನ್ನು ಕೇಂದ್ರ ಇಂಧನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ವಸ್ತ್ರವಿಲಾಸ ಇನ್ನೂ ಆಕರ್ಷಕ. ಬಿಳಿತೋಳಿನ ಅಂಗಿ, ಅದರ ಮೇಲೆ ಗಾಢ ಬಣ್ಣದ ಕೋಟ್ ಧರಿಸಿ ಹೊರಡುವ ಸಿಂದಿಯಾ ಕೆಲವೊಮ್ಮೆ ಪೈಜಾಮದ ಬದಲು ಜೀನ್ಸ್ ಧರಿಸುತ್ತಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಸೂಟ್ ಧರಿಸಿ ಮಿಂಚುತ್ತಾರೆ. ಇದೇ ಡ್ರೆಸ್ಕೋಡನ್ನು ಸಚಿನ್ ಪೈಲಟ್ ಅನುಸರಿಸುತ್ತಾರೆ. ಆದರದು ರೆಗ್ಯುಲರ್ ಏನಲ್ಲ.
ಕೋಟ್ನ ಹಿಂದೆ ಬಿದ್ದ ಮತ್ತೊಬ್ಬರು, ಶಶಿ ತರೂರ್. ವಿಶ್ವಸಂಸ್ಥೆಯಲ್ಲಿದ್ದಾಗಲೂ ನೀಳತೋಳಿನ ಕೋಟು, ಆಕರ್ಷಕ ಹೇರ್ಸ್ಟೈಲಿನಿಂದ ಗಮನ ಸೆಳೆದ ತರೂರ್, ಪಾರ್ಲಿಮೆಂಟಿಗೆ ಕಾಲಿಟ್ಟ ಮೇಲೂ ಅದನ್ನು ಕೈಬಿಡಲಿಲ್ಲ. ಕೆಲವೊಮ್ಮೆ ಕೋಟಿನ ಎರಡು ಮೇಲ್ಗುಂಡಿಗಳನ್ನು ಬಿಚ್ಚಿ, ಟೈ ಕಾಣಿಸುವಂತೆ ತೋರುವುದೂ ಇವರ ಬ್ರ್ಯಾಂಡ್.
ಇನ್ನು ಪ್ರಸಕ್ತ ಸಾಲಿನ ಅತಿ ಕಿರಿಯ ಸಚಿವೆ ಅಗಾತ ಸಂಗ್ಮಾ ಬಿಳಿ ಬಣ್ಣದ ದ್ವೇಷಿ. ಇವತ್ತಿನವರೆಗೂ ಶೇ.100ರಷ್ಟು ಬಿಳಿ ಬಣ್ಣದ ಬಟ್ಟೆ ಧರಿಸಿ ಸಂಸತ್ತಿಗೆ ಕಾಲಿಟ್ಟೇ ಇಲ್ಲ ಅವರು. ವೆಸ್ಟರ್ನ್ ಮಾದರಿಯಲ್ಲೇ ಸದಾ ಮಿಂಚುತ್ತಾರೆ. ಆಗಾಗ್ಗೆ ಚ್ಯುಯಿಂಗ್ ಗಮ್ ಅಗಿಯುತ್ತಾ, ಬಾಯಿಯನ್ನು ಇನ್ನಷ್ಟು ಸುವಾಸನೆಯುಕ್ತವಾಗಿಟ್ಟುಕೊಳ್ಳುವುದು ಇವರ ಇನ್ನೊಂದು ಹವ್ಯಾಸ.
ಪಕ್ಷದ ಬಣ್ಣವೂ ಕೆಂಪು. ಸಿಪಿಐ (ಎಂ)ನ ಬೃಂದಾ ಕಾರಟ್ ಇಷ್ಟ ಪಡುವುದೂ ಕೆಂಪು ಮಿಶ್ರಿತ ಬಣ್ಣವನ್ನೇ. ವರ್ಷದ 365 ದಿನಗಳಲ್ಲಿ ಏನಿಲ್ಲವೆಂದರೂ ನೂರು ದಿನ ಅಂಥ ಸೀರೆಯುಟ್ಟೇ ಬೃಂದಾ ಗಮನ ಸೆಳೆಯತ್ತಾರೆ. ಕಾಸಗಲದ ಕುಂಕುಮ ಇವರ ಇನ್ನೊಂದು ಬ್ರ್ಯಾಂಡ್. ಹಿಂದೂ ಧರ್ಮದ ಯಾವ ಆಚರಣೆಗಳನ್ನೂ ನಂಬದ ಬೃಂದಾ ಇದೊಂದು ವಿಚಾರದಲ್ಲಿ ಮಡಿವಂತಿಕೆ ಪಾಲಿಸಿರುವುದಕ್ಕೆ ಪತಿ ಪ್ರಕಾಶ್ ಕಾರಟ್ರನ್ನೇ ಕೇಳಬೇಕು.
ಇನ್ನು ನಮ್ಮ ದೇಶದ ರಾಜಕಾರಣಿಗಳಲ್ಲಿ ಸರ್ವಾಲಂಕಾರಿ ಸುಂದರಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ. ಸೀರೆಯಿಂದ ಸಂಪೂರ್ಣವಾಗಿ ಮೈಮುಚ್ಚಿಕೊಂಡು, ವಜ್ರ, ಹವಳ, ಒಂದು ಕನ್ನಡಕ ಧರಿಸಿ ರಾಯಲ್ ಲುಕ್ ಪ್ರದರ್ಶಿಸುತ್ತಾರೆ.
ಸಿನಿಮಾ ನಟಿ, ಸಂಸದೆ ಹೇಮಾ ಮಾಲಿನಿಯೂ ಬಳಿ ಬಣ್ಣವನ್ನು ಅಷ್ಟೇನು ಇಷ್ಟಪಡುವುದಿಲ್ಲ. ಬಿಳಿಯ ಹೊರತಾಗಿ ಯಾವುದೇ ಗಾಢ ಬಣ್ಣದ ಸೀರೆಯನ್ನುಟ್ಟು, ಮಿಂಚುವುದು ಹೇಮಾ ಮಾಲಿನಿ ಸ್ಟೈಲು. ಜೊತೆಗೊಂದು ವ್ಯಾನಿಟಿ ಬ್ಯಾಗ್ ಇದ್ದರೆ ಅವರ ವಯ್ಯಾರದ ಸೊಗಸೇ ಬೇರೆ.
ಸಾಮಾನ್ಯವಾಗಿ ಸಿನಿಮಾ ತಾರೆಗಳ ಸೌಂದರ್ಯವನ್ನು ರಾಜಕಾರಣಿಗಳು ಹೊಗಳುವುದುಂಟು. ಆದರೆ, ರಾಜಕಾರಣಿಯ ಸೌಂದರ್ಯವನ್ನು ಸಿನಿಮಾ ಸ್ಟಾರ್ ಹೊಗಳಿದ್ದು ಪ್ರಿಯಾಂಕಾ ವಾದ್ರಾ ವಿಚಾರದಲ್ಲಿ ಮಾತ್ರ. ಪ್ರಿಯಾಂಕಾಳ ವೈವಿಧ್ಯ ಡ್ರೆಸ್ಸಿಂಗ್ ಕಂಡು ಜಾನ್ ಅಬ್ರಾಹಂ, 'ದೇಶದ ಅದ್ಭುತ ಸುಂದರಿ' ಅಂತಲೇ ಉದ್ಗಾರ ತೆಗೆದಿದ್ದ. ಇದಕ್ಕೆ ಆಗಿನ ಪ್ರೇಯಸಿ ಬಿಪಾಶಾ ಬಸು ಉರಿದುಬಿದ್ದಿದ್ದಳು. ಪ್ರಿಯಾಂಕಾ ಕಾಟನ್ ಸೀರೆ ಉಟ್ಟರೆ ಅಜ್ಜಿ ಇಂದಿರಾ ಗಾಂಧಿಯೇ ಎದ್ದುಬಂದರೇನೋ ಎಂಬ ಗುಮಾನಿ ಯಾರಿಗಾದರೂ ಆಗುತ್ತದೆ. ಅದಕ್ಕೆ ಇವರ ಬಾಬ್ ಕಟ್ ಕೂಡ ಪೂರಕವಾಗಿರಬಹುದು. ಸೂರ್ಯನ ಬಣ್ಣದ ಸೀರೆಯನ್ನು ಪ್ರಿಯಾಂಕಾ ಹೆಚ್ಚು ಇಷ್ಟಪಡುತ್ತಾರೆ. ಶಾಪಿಂಗ್ ವೇಳೆ ಜೀನ್ಸ್, ಟೀ ಶರ್ಟು ಇವರ ಇಷ್ಟದ ಡ್ರೆಸ್ಸು.
ಒಟ್ಟಿನಲ್ಲಿ ಈ ರಾಜಕಾರಣಿಗಳು 'ಬಿಳಿ' ಬಣ್ಣವನ್ನು ಆದಷ್ಟು ದೂರವಿಡುತ್ತಲೇ ಇದ್ದಾರೆ. ಅವರೀಗ ಹತ್ತಾರು ಬಣ್ಣಗಳನ್ನು ತೊಡುತ್ತಿದ್ದಾರೆ. ಆ ಬಣ್ಣಗಳು ಯಾವ ಅರ್ಥವನ್ನು ರವಾನಿಸುತ್ತವೋ ಗೊತ್ತಿಲ್ಲ, ಪರಿಶುದ್ಧತೆಗಂತೂ ಈ ರಾಜಕಾರಣದಲ್ಲಿ ಜಾಗವಿಲ್ಲ. ಬಿಳಿಯು ಕಪ್ಪು ಬಣ್ಣದಲ್ಲಿ ಕರಗುತಿದೆ!
ಕೂಲಿಂಗ್ ಗ್ಲಾಸ್ ರಾಜಕಾರಣಿಗಳು
ಕರುಣಾನಿಧಿ,ವಾಟಾಳ್ ನಾಗರಾಜ್, ಸಿ.ಎಂ. ಇಬ್ರಾಹಿಂ
ಪಂಚೆ ರಾಜಕಾರಣಿಗಳು
ಸಿದ್ದರಾಮಯ್ಯ, ಎ.ಕೆ. ಆಂಟನಿ, ಮಲ್ಲಿಕಾರ್ಜುನ ಖರ್ಗೆ, ವಿ.ಎಸ್. ಅಚ್ಯುತಾನಂದನ್, ಎಂ. ಕರುಣಾನಿಧಿ, ಪಿ. ಚಿದಂಬರಂ, ಅಳಗಿರಿ, ಎಚ್.ಡಿ. ದೇವೇಗೌಡರು
-ಕೀರ್ತಿ ಕೋಲ್ಗಾರ್
-ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


