ಸಾಪ್ತಾಹಿಕಪ್ರಭ

ಒಳಗೊಬ್ಬ ವೀರಪ್ಪನ್!

Published On :

'ನೀವೇನಾ ವಜ್ರಮುನಿ ಹೆಂಡ್ರು?'. ಹೌದು ಎಂದಿತು ಪತ್ನಿ ಲಕ್ಷ್ಮಿಯವರ ಕಣ್ಣು. ಸೆರಗನ್ನು ಬಾಯಿಗೆ ಅಡ್ಡಹಿಡಿದ ಆ ಹೆಂಗಸು ಇನ್ನೊಂದು ಪ್ರಶ್ನೆ ಉರುಳಿಸಿದಳು, 'ಮತ್ತೆ ನಿಮ್ಗೇನು ಅಂವ ಕಾಟ ಕೊಡಾಕ್ಕಿಲ್ವಾ!?'. ಗಂಡನನ್ನೂ ಮೀರಿ ಬೆಳೆದ ಖಳನಾಯಕ, ಲಕ್ಷ್ಮಿಯವರಿಗೆ ಕಂಡ ಕಂಡಲ್ಲೆಲ್ಲ ಇಂಥ ಪ್ರಶ್ನೆಗಳಿಂದ ಅಡ್ಡಹಾಕುತ್ತಿದ್ದ. ಕಂಟ್ರೋಲಿಗೂ ಸಿಗದೆ ಕುಖ್ಯಾತಿ ಹೆಚ್ಚಿಸಿಕೊಂಡಿದ್ದ.
ಅವರೇನು ರೇಪಿಸ್ಟ್ ಅಲ್ಲ. ಕೊಲೆಯಿರಲಿ, ಕೊನೆಪಕ್ಷ ಮನಸ್ಸಿಗೂ ಘಾಸಿ ಮಾಡುವವರಲ್ಲ. ಆದರೂ, ವಜ್ರಮುನಿಯವರ ಸಚ್ಚಾರಿತ್ರ್ಯಗಳನ್ನು ಕನ್ನಡ ಪ್ರೇಕ್ಷಕನ ಇಂದ್ರಿಯಗಳು ಹೀರಿಕೊಳ್ಳದೇ ಹೋದವು. ಪ್ರೇಕ್ಷಕ ಹಾಗಿರಲಿ, ದುಷ್ಟ ಹೆಜ್ಜೇನುಗಳೂ ವಜ್ರಮುನಿಯವರ ಯಾವ ಪಿಕ್ಚರನ್ನು ನೋಡಿ ಸೇಡಿಗೆ ಕಾದಿದ್ದವೋ ಕಾಣೆ!
ಇನ್ನೇನು ಕತ್ತಲಾಗುತ್ತದೆ. 'ಸಿಪಾಯಿರಾಮು'ವಿನ ಶೂಟಿಂಗು ಆ ಸ್ಥಳದಿಂದ ಪ್ಯಾಕಪ್ ಆಗಬೇಕಿತ್ತು. ಜೇನುಗಳನ್ನು ಬಟ್ಟೆಯೊಳಗೆ ಸೆರೆಹಿಡಿದು ಅಣ್ಣಾವ್ರ ಮೈಮೇಲೆ ಬಿಡುವ ದೃಶ್ಯವೊಂದು ಬಾಕಿ. ಆದರೆ, ಮೈಗೆ ಹಚ್ಚಿಕೊಳ್ಳಬೇಕಿದ್ದ ತೈಲ ಇರಲಿಲ್ಲ. ಇದಕ್ಕೋಸ್ಕರ ನಾಳೆ ಬರೋದ್ಯಾಕೆ? ನಿರ್ದೇಶಕ ವೈ.ಆರ್. ಸ್ವಾಮಿ ಹೇಳಿದರು, 'ವಜ್ರಣ್ಣ ಮೈಗೆ ಹಚ್ಚಲು ಎಣ್ಣೆ ಅಂತೂ ಇಲ್ಲ, ಧೈರ್ಯ ಮಾಡಿ, ಆ ಜೇನುಗಳನ್ನು ತಂದು ನಾಯಕನ ಮೇಲೆ ಸುರಿಯಿರಿ'. ಇವರು ಒಪ್ಪಿದರು. ನಾಯಕನ ಮೈಮೇಲೆ ತಂದು ಸುರಿದು ಗಹಗಹಿಸಿ ನಕ್ಕರು. ಜೇನುಗಳ್ಯಾವೂ ಅಣ್ಣಾವ್ರನ್ನು ಕಡಿಯಲಿಲ್ಲ. ಆದರೆ, ವಜ್ರಮುನಿಯವರನ್ನು ಒಂದು ಹುಳುವೂ ಬಿಡಲಿಲ್ಲ.
ನಟನೆಯೆನ್ನುವುದು ಹಿಪ್ನೋಟಿಸಂ. ನಮ್ಮ ಅನುಮತಿ ಕೇಳದೆ ನಮ್ಮೊಳಗೊಬ್ಬ ಎದ್ದುಕೂರಬೇಕು; ಕುಣಿಯಬೇಕು; ನಟಿಸಬೇಕು; ಹಾರಬೇಕು; ಹೊಡೆದಾಡಬೇಕು. ಅದಕ್ಕಾಗಿ ನಮ್ಮೊಳಗೊಬ್ಬನನ್ನು ಸಾಕಬೇಕು. ಅವನೇನು ಊಟ, ಬಟ್ಟೆ, ದೇಣಿಗೆ ಕೇಳನು. ಕೇವಲ ಈ ಬರಡು ಕಾಯದ ಸಮರ್ಪಣೆ ಬಯಸುತ್ತಾನಷ್ಟೇ. ವಿಲನ್‌ನಲ್ಲಾದರೆ ಒಬ್ಬ ದಾವುದ್ದೋ, ವೀರಪ್ಪನ್ನೋ ಒಳಗೆ ಹೊಕ್ಕಲೇಬೇಕು. ಪುಕ್ಕಲು ಸ್ವಭಾವದ ವಜ್ರಮುನಿ ತಮ್ಮೊಳಗೆ ಅಂಥ ಭಯಂಕರನಿಗೆ ಬಂಗಲೆ ಕಟ್ಟಿದ್ದರು. ಆದರೆ, ಆ ವಿಲನ್ ಯಾವಾಗ ಎಚ್ಚರಗೊಳ್ಳುತ್ತಿದ್ದ?
ಒಂದು ಸಿಗರೇಟಿನ ಹೊಗೆಯಲ್ಲಿ! ನೀವು ವಜ್ರಮುನಿಯವರ ಕಣ್ಣನ್ನು ಗಮನಿಸಿರಬಹುದು, ಸೂರ್ಯ ಉಗುಳಿದ ಎರಡು ಸಣ್ಣ ಉಂಡೆ ಶೂಟಿಂಗಿಗೂ ಮುನ್ನ ಸಿಗರೇಟು ಹಚ್ಚಿ, ಮುಖಕ್ಕೆ ಕೈ ಅಡ್ಡಹಿಡಿದು ಅದರ ಹೊಗೆಯನ್ನು ಕಣ್ಣುಗಳಿಗೆ ಹೀರಿಕೊಳ್ಳುತ್ತಿದ್ದರು. ಕಣ್ಣು ಕೆಂಪಾಗಿಬಿಟ್ಟರೆ, ಅವರೊಳಗೊಬ್ಬ ವಿಲನ್ ನಿಮಿರಿಕೊಂಡ ಅಂತಲೇ. ನಿಜವಾದ ವಜ್ರ ಆಗ ಬೆಳಗುವುದನ್ನು ನಿಲ್ಲಿಸುತ್ತಿತ್ತು.
ಹಾಗೆಯೇ ಮಾಸ್ಟರ್ ಹಿರಣ್ಣಯ್ಯ ಕೂಡ. ಕುಡಿತದ ಮೂಲಕ ಅವರೊಳಗೊಬ್ಬ ರಾಕ್ಷಸನನ್ನು, ಪಿಶಾಚಿಯನ್ನು ಪೋಷಿಸಿದ್ದರು. ಕಳೆದವಾರವೇ ಜೀವಂತವಾಗಿಬಿಟ್ಟ ಪ್ರಶ್ನೆ, ಯಾಕೆ ಹಿರಣ್ಣಯ್ಯ ಹಾಗೆ ಕುಡಿದರು?
ಈ ಭ್ರಷ್ಟ ರಾಜಕಾರಣಿಗಳಿಗೆ ಹಿಗ್ಗಾಮುಗ್ಗಾ ಬಯ್ಯಬೇಕು. ಆದರೆ, ಮೈದಾಹಿಟ್ಟಿಗಿಂತ ಮೆದುವಿದ್ದ ಹಿರಣ್ಣಯ್ಯರಿಗೆ ಆ ಧೈರ್ಯ ಎಲ್ಲಿಂದ ಬರಬೇಕು? ಬ್ರ್ಯಾಂಡಿ ಅದನ್ನು ಸಾಧ್ಯವಾಗಿಸುತ್ತಿತ್ತು. ಒಳ್ಳೆಯ ವ್ಹಿಸ್ಕಿ ಒಳಗೊಂದು ರೌದ್ರ ವಿದ್ಯುತ್ ಉತ್ಪಾದಿಸುತ್ತಿತ್ತು.
ಒಮ್ಮೆ ಶಿವಮೊಗ್ಗದಲ್ಲಿ 'ಲಂಚಾವತಾರ' ನಾಟಕ. ಇವರು ವೇದಿಕೆ ಮೇಲಿಂದ ಬಂಗಾರಪ್ಪನವರ ದುರಾಡಳಿತ ಖಂಡಿಸುತ್ತಿದ್ದರು. ಇದು ಗೊತ್ತಿದ್ದೇ ಬಂಗಾರಪ್ಪನವರು ಯಾರಿಗೋ ಎಣ್ಣೆ ಹೊಡೆಸಿ, ನಾಟಕಕ್ಕೆ ಕಳುಹಿಸಿದ್ದರು. ಆತ ಎದ್ದು ಅಬ್ಬರಿಸಿದ, 'ಏನೋ ಬೊ..ಬ್ಬೊ...ಬೊ ಬೋಳಿಮಗನೆ, ನಮ್ಮ ಬಂಗಾರಪ್ಪರನ್ನು ಬಯ್ತೀಯೇನೋ ಸೂ..ಸು ಸೂಳೇಮಗ್ನೆ'. ಸಾವಿರಾರು ಪ್ರೇಕ್ಷಕರಿದ್ದಾರೆ. ಅವರೆಲ್ಲರ ಮಧ್ಯ ಆತನಿಗೆ ಬ್ರಾಹ್ಮಣ ಭಾಷೆಯಲ್ಲೋ, ಭಗವದ್ಗೀತೆಯಲ್ಲೋ ಬಯ್ದರೆ ಮುಟ್ಟುತ್ತಾ? ಇವರೂ ಎರಡೂವರೆ ಏರಿಸಿಕೊಂಡೇ ವೇದಿಕೆಗೆ ಹೋಗಿದ್ದರಲ್ಲ! ಎಳಿರೋ ಪರದೆ ಅಂದರು. 'ಅವನ್ಯಾವ ಮಿಂಡ್ರಿಗೆ ಹುಟ್ದೋನು ಬಾರೋ ಇಲ್ಲಿ. ಸ್ಟೇಜ್ ಮೇಲೆ ಬಂದ್ ಮಾತಾಡು. ನಿನ್ ಬಂಗಾರಪ್ಪ ಎಷ್ಟು ಸಾಚಾ ಅಂತ ಹೇಳ್ತೀನ್ ಬಾ' ಅಂತ ತೊಡೆ ತಟ್ಟಿ ಆಹ್ವಾನಿಸಿದರು. ಉಟ್ಟ ಲುಂಗಿಯನ್ನೂ ಬಿಟ್ಟು, ಅಂವ ಎದ್ದು ಓಡಿಯೇಬಿಟ್ಟ.
ಷೇಕ್ಸ್‌ಪಿಯರ್‌ನ ನಂತರ ಅತ್ಯುತ್ತಮ ನಾಟಕಗಳನ್ನು ಕೊಟ್ಟವನು ನಾರ್ವೆಯ ಹೆನ್ರಿಕ್ ಇಬ್ಸೆನ್. ಅವನ  'ಗೋಸ್ಟ್ಸ್‌' ನಾಟಕ ಹಿರಣ್ಣಯ್ಯನವರ ಬದುಕಿಗಾಗಿಯೇ ಬರೆದಂತಿದೆ. ಇದನ್ನು 'ಭೂತಗಳು' ಎಂಬ ಶೀರ್ಷಿಕೆಯಲ್ಲಿ ಪರ್ವತವಾಣಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಅದರ ನೈಜರೂಪ ಹೀಗಿದೆ; ಅವಳು ವಿಧವೆ, ಹೆಲೆನ್ ಅಲ್ವಿಂಗ್. ಅವಳ ಮಗ ಆಸ್ವಾಲ್ಡ್ ಅಲ್ವಿಂಗ್. ಗಂಡ ಕುಡಿತ, ಸೂಳೆಯರ ಸಹವಾಸದಿಂದಲೇ ಸತ್ತ. ಆ ಸಾವಿಗೆ ದುಶ್ಚಟವೆಂಬ ಪಿಶಾಚಿಯೇ ಕಾರಣ. ಆದರೆ, ಮಗನಿಗೆ ಆ ಪಿಶಾಚಿಯ ಪರಿಚಯವಾಗಬಾರದು ಎಂದು ಕಡಿಮೆ ಜನವುಳ್ಳ ದ್ವೀಪದಲ್ಲಿ ಆತನನ್ನು ಬೆಳೆಸುತ್ತಾಳೆ ಹೆಲೆನ್. ಆ ದ್ವೀಪದಲ್ಲಿ ತನ್ನ ಹೊರತಾಗಿ ಯಾವ ಹೆಂಗಸೂ ಇರುವುದಿಲ್ಲ. ಬುದ್ಧನಾಗುವ ಮುನ್ನ ಸಿದ್ಧಾರ್ಥ ಹೇಗಿದ್ದನೋ ಹಾಗೆ. ಸಕಲ ಅಗತ್ಯಗಳನ್ನು ಮಗನಿಗೆ ಕರುಣಿಸಿ, ಆತನ ಉಜ್ವಲ ಭವಿಷ್ಯದ ನಕ್ಷೆ ರೂಪಿಸುತ್ತಾಳೆ. ಇನ್ನೇನು ಆಸ್ವಾಲ್ಡ್‌ಗೆ ವಯಸ್ಸು ಇಪ್ಪತ್ತೆರಡಾಯಿತು ಎಂದಾಗ ಅವಳಿಗೊಂದು ಸಾರ್ಥಕ ಹೆಮ್ಮೆ. ಮಗನನ್ನು ಇನ್ನು ಯಾವ ದುಶ್ಚಟ ಪಿಶಾಚಿಗಳೂ ಕಬಳಿಸುವುದಿಲ್ಲ ಅಂತ. ಒಮ್ಮೆ ಆತನನ್ನು ಹೊರಗೆ ಸುತ್ತಾಡಲು ಕಳುಹಿಸುತ್ತಾಳೆ. ಸಂಜೆಯಾದರೂ ಆಸ್ವಾಲ್ಡ್ ಹಿಂದಿರುಗುವುದಿಲ್ಲ. ಹೆಲೆನ್ ಮಗನಿಗಾಗಿ ಇಡೀ ದ್ವೀಪ ಹುಡುಕುತ್ತಾಳೆ. ಕೊನೆಗೆ ಒಂದು ದೋಣಿ ಬಂದು ಸಮುದ್ರದ ತೀರದಲ್ಲಿಳಿಯುತ್ತದೆ. ವಿಪರೀತ ಕುಡಿದ ಆಸ್ವಾಲ್ಡ್‌ಗೆ ನಿಲ್ಲಲಾಗುತ್ತಿಲ್ಲ. ಅಕ್ಕಪಕ್ಕದಲ್ಲಿ ಇಬ್ಬರು ಸುಂದರಿಯರೇ ಅವನ ಹೆಗಲಿಗೆ ಆಧಾರ. ಇಷ್ಟು ದಿನ ಕಟ್ಟಿದ ಕನಸು ನುಚ್ಚುನೂರಾಯಿತಲ್ಲ ಎಂದು ಕಣ್ಣೀರಿಳಿಸುವ ಹೆಲೆನ್, ಗೋಸ್ಟ್ಸ್ (ಪಿಶಾಚಿಗಳು) ಪೀಡಿತ ಮಗ ತನಗೆ ಬೇಡ ಎಂದು ಗುಂಡಿಟ್ಟು ಸಾಯಿಸಿ, ನಾಟಕಕ್ಕೆ ದುಃಖಾಂತ್ಯ ಬರೆಯುತ್ತಾಳೆ.
ಇಲ್ಲಿ ಕುಡಿತ ಎಂಬ ಪಿಶಾಚಿಯನ್ನು ಹಿರಣ್ಣಯ್ಯನವರೂ ಸಾಯಿಸುತ್ತಾರೆ. ಪ್ರತಿ ಬಾರಿ ರಂಗಪ್ರವೇಶಿಸುವಾಗಲೂ ಮತ್ತೇರಿಸಿಕೊಂಡೇ ಹೋಗುತ್ತಿದ್ದ ಮಾಸ್ಟರ್, ಕುಡಿತದಿಂದ ಅಂದುಕೊಂಡಿದ್ದನ್ನು ಸಾಧಿಸಿಯೇಬಿಟ್ಟರು. ಅವರ ಬಾಯಿಗೆ ಭ್ರಷ್ಟರು ಹೆದರತೊಡಗಿದರು. ನಿಜಲಿಂಗಪ್ಪನವರಂಥ ಪ್ರಾಮಾಣಿಕರೂ ಮಾಸ್ಟರ್‌ರನ್ನು ಒಪ್ಪಿಕೊಂಡರು. ಈಗವರಿಗೆ ಸಹಸ್ರಾರು ಅಭಿಮಾನಿಗಳು. ಅವರೆಲ್ಲರ ಬೆಂಬಲವಿರುವಾಗ, ಈ ಕುಡಿತ ಪಿಶಾಚಿಯ ಬೆಂಬಲದ ಅಗತ್ಯವೇ ಇಲ್ಲ. ಹೀಗಾಗಿ, ಬಾಟಲಿ ಎಂಬ ಆಯುಧ ಕೆಳಗಿಟ್ಟಿದ್ದಾರೆ ಮಾಸ್ಟರ್.
ದುಶ್ಚಟವನ್ನು ಬೇಕಾದಂತೆ ಬಳಸಿಕೊಂಡು, ಕೊನೆಗೆ ಆ ಚಟವನ್ನು ಕೊಂದೂ ಬದುಕಬಹುದು. ಆದರೆ, ತರಾಸು ಸತ್ತಾಗ ಅವರ ಜೇಬಲ್ಲಿ ಸಿಗರೇಟಿನ ಪ್ಯಾಕು ಜೀವಂತವಿತ್ತು!



-ಕೀರ್ತಿ
kolgarkeerthi@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.