ಸಾಪ್ತಾಹಿಕಪ್ರಭ

ವರುಣ್ ಗಾಂಧಿ ಸದ್ದು ಕಡಿಮೆ

ವರುಣ್ ಗಾಂಧಿ ಸದ್ದು ಕಡಿಮೆ
Published On :

ಮೂಲತಃ ಕಾಶ್ಮೀರಿ ಪಂಡಿತ ಸಮುದಾಯದ, ಆದರೆ ಹಲವು ತಲೆಮಾರುಗಳಿಂದ ಅಲಹಾಬಾದ್‌ನ ಪ್ರತಿಷ್ಠಿತ ಕುಟುಂಬವಾಗಿಯೇ ಬಾಳಿದ ನೆಹರೂ ಮನೆತನದ ಹೆಸರನ್ನು ಉಳಿಸಲು ಈಗ ಯಾರೂ ಉಳಿದಿಲ್ಲ. ಮೋತಿಲಾಲ್ ನೆಹರೂ ಕುಟುಂಬದ ನಾಲ್ಕನೇ ತಲೆಮಾರಿನಲ್ಲಿ ಉಳಿದಿರುವುದು ಮೂವರೇ. ರಾಹುಲ್ ಗಾಂಧಿ, ವರುಣ್ ಗಾಂಧಿ ಮತ್ತು ಪ್ರಿಯಾಂಕಾ.
ಅವರ ನಾಲ್ಕನೇ ತಲೆಯ ದಾಯಾದಿ ಅರುಣ ನೆಹರೂ ಈಚೆಗೆ ನಿಧನರಾದ ನಂತರ ಲಖನೌದಲ್ಲಿದ್ದ ನೆಹರೂ ಮನೆತನದ ಮತ್ತೊಂದು ಶಾಖೆಯೂ ಇಲ್ಲದಂತಾಗಿದೆ. ಇಂದಿರಾಗಾಂಧಿಯ ಮೂವರು ಮೊಮ್ಮಕ್ಕಳಲ್ಲಿ ಈಗ ಹೆಚ್ಚು ಸದ್ದು ಮಾಡದೇ ಇರುವವರು ಸಂಜಯ್- ಮನೇಕಾ ಪುತ್ರ ವರುಣ ಗಾಂಧಿ ಒಬ್ಬರೇ. ರಾಹುಲ್ ಗಾಂಧಿಗೆ ದೇಶದಲ್ಲಿ ಸಾಕಷ್ಟು ಸ್ಥಾನಮಾನ ಸಿಕ್ಕಿದೆ. ಪ್ರಿಯಾಂಕಾ, ಅವರಿಗೆ ಬೇಕಾಗಿರಲಿ, ಬೇಡದೇ ಇರಲಿ, ಆಗಾಗ ಪ್ರಚಾರದ ಪ್ರಖರ ಬೆಳಕಿನಲ್ಲಿ ಬಂದು ನಿಲ್ಲುತ್ತಾರೆ.
ಅವರ ಅಮ್ಮ ಸೋನಿಯಾ, ಅಣ್ಣ ರಾಹುಲ್ ಪ್ರತಿನಿಧಿಸುವ ರಾಯ್‌ಬರೈಲಿ, ಅಮೇಥಿ ಕ್ಷೇತ್ರಗಳಿಗೆ ಹೋಗಿ ಪ್ರತಿ ಮೂರು ತಿಂಗಳಿಗೊಮ್ಮೆ ಅಲ್ಲಿನ ಜನರ ಜತೆ ಸಂಪರ್ಕವನ್ನಿಟ್ಟುಕೊಂಡಿರುವುದು ಪ್ರಿಯಾಂಕಾ ಒಬ್ಬರೇ. ವರುಣ್ ಗಾಂಧಿ ಆ ಸಂಬಂಧವನ್ನು ಉಳಿಸಿಕೊಂಡಿಲ್ಲ. ತೀರಾ ಚಿಕ್ಕಂದಿನಲ್ಲೇ ವರುಣ್, ಅಮ್ಮ ಮನೇಕಾ ಜತೆ ಇಂದಿರಾ ಗಾಂಧಿಯ ಮನೆಯನ್ನು ಬಿಟ್ಟು ಹೋದರು. ಕಾಂಗ್ರೆಸ್‌ನೊಂದಿಗೆ ಸಂಪರ್ಕ ಇಟ್ಟುಕೊಳ್ಳಲಿಲ್ಲ.
ವರುಣ್ ಮೂರು ತಿಂಗಳ ಮಗುವಾಗಿದ್ದಾಗಲೇ, ಅವರ ತಂದೆ ಸಂಜಯಗಾಂಧಿ ವಿಮಾನ ಅಪಘಾತದಲ್ಲಿ ಮಡಿದರು. ಮುಂದೆ, ನಾಲ್ಕನೇ ವರ್ಷದಲ್ಲೇ ಅಜ್ಜಿ ಇಂದಿರಾ ಗಾಂಧಿಯ ಹತ್ಯೆ. ಆ ಘಟನೆಯ ಅನಂತರವೇ ಸೋನಿಯಾ- ಮನೇಕಾ ಬೇರೆ ಬೇರೆ ದಿಕ್ಕಿನಲ್ಲಿ ಸಾಗಿದರು.
ಮೇನಕಾ ಗಾಂಧಿಗೆ ಪುತ್ರನನ್ನು ತೀರಾ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲೇ ಇಟ್ಟುಕೊಳ್ಳುವುದಕ್ಕೆ ಧೈರ್ಯ ಬರಲಿಲ್ಲ. ಅದಕ್ಕೇ ವರುಣ್, ಪ್ರಾಥಮಿಕ ಶಿಕ್ಷಣಕ್ಕೆ ಮದನಪಲ್ಲಿಯ ಖುಷಿವ್ಯಾಲಿ ಶಾಲೆಗೆ ಬಂದಿದ್ದು. ಸ್ವಲ್ಪ ದೊಡ್ಡವರಾದ ಅನಂತರ ದೆಹಲಿಯಲ್ಲಿ ಶಾಲೆ- ಕಾಲೇಜು ಶಿಕ್ಷಣ. ಅನಂತರ ಲಂಡನ್‌ಗೂ ಹೋದರು.
ಕೆಲವು ದಾಖಲೆಗಳಲ್ಲಿ ವರುಣ್‌ಗಾಂಧಿ ಪ್ರಖ್ಯಾತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿದ್ಯಾರ್ಥಿಯಾಗಿದ್ದರು ಎನ್ನುವ ಉಲ್ಲೇಖವಿದೆ. ಆದರೆ ಆ ಕಾಲದಲ್ಲಿ ಅಲ್ಲಿದ್ದ ಕೆಲವು ಬಂಗಾಳಿ ವಿದ್ಯಾರ್ಥಿಗಳ ಪ್ರಕಾರ, ವರುಣ್ ನೇರವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿದ್ಯಾರ್ಥಿಯಲ್ಲ. ದೂರ ಶಿಕ್ಷಣ ವ್ಯವಸ್ಥೆಯಲ್ಲಿ, ಲಂಡನ್ ಸ್ಕೂಲ್‌ನ ಸಂಬಂಧವಿದ್ದ ಸಂಸ್ಥೆಯೊಂದರ ಮೂಲಕವೇ ವರುಣ್ ಶಿಕ್ಷಣ ಪಡೆದಿದ್ದು. ಅನಂತರ ಲಂಡನ್ ಯುನಿವರ್ಸಿಟಿಯಲ್ಲೂ ಎರಡು ವರ್ಷ ಕಲಿತರಂತೆ. ವಿವರಗಳು ಅಷ್ಟಾಗಿ ಗೊತ್ತಿಲ್ಲ.
ಆದರೆ ಅದೇನೂ ಮುಖ್ಯವಲ್ಲ. ಈಗ ವರುಣ್‌ಗಾಂಧಿ ತಮ್ಮ 33ನೇ ವಯಸ್ಸಿನಲ್ಲಿ ಬಿಜೆಪಿಯ ಅತಿ ಚಿಕ್ಕ ವಯಸ್ಸಿನ ಪ್ರಧಾನ ಕಾರ್ಯದರ್ಶಿ. ಪಕ್ಷದಲ್ಲಿ ಪಶ್ಚಿಮ ಬಂಗಾಳದ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದು.
ನಿಜ. ಅದೇನೂ ದೊಡ್ಡ ಜವಾಬ್ದಾರಿಯಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಉತ್ತರ ಪ್ರದೇಶದ ತಿರಾಯಿ ಪ್ರದೇಶದ ಪಿಲಿಬಿಟ್ ಕ್ಷೇತ್ರದಿಂದ 2009ರಲ್ಲಿ ವರುಣ್‌ಗಾಂಧಿ ಲೋಕಸಭೆಗೆ ಆಯ್ಕೆಯಾದರು. ಅದಕ್ಕೆ ಮೊದಲು ಆ ಕ್ಷೇತ್ರವನ್ನು ಮೇನಕಾ ಗಾಂಧಿ ಪ್ರತಿನಿಧಿಸಿದ್ದರು. ಈಗ ಅವರು ಬೇರೆ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ಮೇನಕಾ ಗಾಂಧಿಯವರ ಆರೋಗ್ಯ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲವೆಂಬ ಸುದ್ದಿಯೂ ಇದೆ. ಅವರು ಲೋಕಸಭೆಯ ಅಧಿವೇಶನದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ವರುಣ್ ಗಾಂಧಿ ಆಗಾಗ ಸದನದಲ್ಲಿ ಕಾಣಿಸುತ್ತಾರೆ. ಆದರೆ ಅವರ ವಾಗ್ಮಿತೆಯನ್ನು ಬಿಜೆಪಿ ಸಂಸತ್ತಿನಲ್ಲಿ ಬಳಸಿಕೊಂಡಿಲ್ಲ.
ಲೋಕಸಭೆಯ ಸದಸ್ಯರಾಗಿ ವರುಣ್‌ಗಾಂಧಿ ಸಾಧಿಸಿರುವ ಒಂದು ವಿಕ್ರಮ ಎಂದರೆ, ಅವರಿಗೆ ಸಿಗುವ ಸಂಸದರ ಕ್ಷೇತ್ರಾಭಿವೃದ್ಧಿಯ ನಿಧಿಯನ್ನು ಸಂಪೂರ್ಣವಾಗಿ ಬಳಸಿರುವುದು. ಪಿಲಿಬಿಟ್ ಕ್ಷೇತ್ರದಲ್ಲಿ ವರುಣ್ ಹೆಸರಿನಲ್ಲಿ 25 ಕೋಟಿ ರು.ಗಳ ಮೌಲ್ಯದ ಕೆಲಸವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ವರುಣ್ ಆ ಕೆಲಸದ ಪ್ರಗತಿಯ ವಿವರಗಳನ್ನು ಖುದ್ದಾಗಿ ಪರಿಶೀಲಿಸಿದ್ದೂ ಉಂಟು.
ಮೊದಲು ಮೇನಕಾ ಗಾಂಧಿ ಅನಂತರ ವರುಣ್ ಗಾಂಧಿ ಬಿಜೆಪಿಯನ್ನು ಸೇರಿದಾಗ, ಅನೇಕರು ಸೋನಿಯಾ-ಮೇನಕಾ, ರಾಹುಲ್- ವರುಣ್ ನಡುವಣ ಜಂಗೀ ಜಗಳವನ್ನು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ವಾಜಪೇಯಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಮೇನಕಾ ಗಾಂಧಿಯ ಅತಿ ದೊಡ್ಡ ಸಾಧನೆ ಎಂದರೆ, ದೇಶದಲ್ಲಿ ಪರಿಸರ ರಕ್ಷಣೆಗೆ ಹೆಸರಿಗಾದರೂ ಒಂದು ವಿಶೇಷ ಮಂತ್ರಾಲಯ ಇದೆ ಎನ್ನುವುದು ಜನರ ಗಮನಕ್ಕೆ ಬಂದಿದ್ದು.
ವರುಣ್ ಗಾಂಧಿಯ ಚಟುವಟಿಕೆ, ಅನೇಕ ದಿನಗಳ ಕಾಲ ಪುಸ್ತಕ ಬರೆಯುವುದಕ್ಕೆ, ಬಳಕೆಯಾಗುತ್ತಿತ್ತು. ಮನೇಕಾ, ವರುಣ್ ಅವರಿಬ್ಬರೂ ಅಪ್ಪಿತಪ್ಪಿಯಾದರೂ ಸೋನಿಯಾ- ರಾಹುಲ್‌ರ ಹೆಸರನ್ನೆತ್ತಿಕೊಂಡು ಯಾವ ಟೀಕೆಯನ್ನೂ ಮಾಡಿಲ್ಲ. ಅದಕ್ಕೆ ಸೋನಿಯಾ- ರಾಹುಲ್ ಮೌನದಿಂದಲೇ ಪ್ರತಿಕ್ರಿಯಿಸಿದ್ದಾರೆ.
ವರುಣ್ ಸಾರ್ವಜನಿಕವಾಗಿ ಮಾತನಾಡುವುದು ಕಡಿಮೆ. ಆದರೂ ಅವರಲ್ಲಿ ವಾಗ್ಮಿತೆಯ ವೈಭವವಿದೆ. ಹಿಂದಿನ ಚುನಾವಣೆ ಸಮಯದ ಉದ್ವೇಗದ ಭರದಲ್ಲಿ ಎರಡು ಸಭೆಗಳಲ್ಲಿ ಮಾಡಿದ ಭಾಷಣಗಳು ಅವರನ್ನು ಸಾಕಷ್ಟು ತೊಂದರೆಯಲ್ಲಿ ಸಿಕ್ಕಿಸಿತ್ತು. ನ್ಯಾಯಾಲಯಗಳಿಗೆ ಅಲೆದಾಡಬೇಕಾಗಿ ಬಂದಿತ್ತು. ಈಗ ಆ ಪ್ರಕರಣಗಳಿಂದ ಬಿಡುಗಡೆ ಹೊಂದಿದ್ದಾರೆ.
ಈಗೀಗ ವರುಣ್ ಬಿಜೆಪಿಯ ಸಂಘಟನೆಯ ಕೆಲಸದಲ್ಲಿ ಹೆಚ್ಚು ಮಗ್ನರಾಗಿದ್ದಾರಂತೆ. ಕಳೆದವಾರ ಒಂದು ಪ್ರಖ್ಯಾತ ಇಂಗ್ಲಿಷ್ ಪತ್ರಿಕೆಯಲ್ಲಿ ವರುಣ್ ಬರೆದಿರುವ ಒಂದು ಲೇಖನ ಅನೇಕರ ಗಮನ ಸೆಳೆದಿದೆ. ಅದರಲ್ಲಿ ಭಾರತದ ವಿದೇಶಾಂಗ ನೀತಿಯ ಕಟು ಟೀಕೆ ಕಂಡು ಬಂದರೂ ಅದೊಂದು ಅಧ್ಯಯನ ಆಧರಿತ, ಹೊಣೆಗಾರಿಕೆಯ ಅರಿವಿನಿಂದ ಬರೆದಿರುವ ಲೇಖನ.
ಭಾರತ ತನ್ನ ಸಮೀಪದ ಎಲ್ಲ ರಾಷ್ಟ್ರಗಳ ವಿರೋಧವನ್ನು ಕಟ್ಟಿಕೊಂಡಿರುವುದರ ಚಿತ್ರವನ್ನು ವರುಣ್ ಸ್ಫುಟವಾಗಿ ಬಿಡಿಸಿದ್ದಾರೆ. ಪಾಕಿಸ್ತಾನದ ಜತೆ ಜಗಳ ಇದ್ದಿದ್ದೇ. ಅದೇ ರೀತಿ, ಬೇರೆ ಬೇರೆ ಕಾರಣಗಳಿಂದ ಬಂಗ್ಲಾದೇಶದ ವಿರೋಧವೂ ಈಗ ಕಂಡುಬಂದಿದೆ.
ಮಾನಸಿಕವಾಗಿ ನೇಪಾಳ ಈಗ ಭಾರತದಿಂದ ದೂರ ದೂರ ಸಾಗುತ್ತಿದೆ. ಭೂತಾನ್‌ನಂಥ ಸಣ್ಣ ರಾಜ್ಯವನ್ನು ಡೀಸೆಲ್ ಬೆಲೆಯ ಏರಿಕೆ ಮೂಲಕ ತೋಳು ತಿರುಚುವಂಥ ಸ್ಥಿತಿಗೆ ಭಾರತ ತಲುಪಿತ್ತು. ಬಾಹುಬಲದಿಂದ ಅದನ್ನು ಭಾರತ ನಿಭಾಯಿಸಿದ್ದರೂ, ಭವಿಷ್ಯದಲ್ಲಿ ಭೂತಾನ್, ಚೀನಾದತ್ತ ಕೈಚಾಚುವ ಸಂಭವ ಇದ್ದೇ ಇದೆ.
ಇನ್ನು ಮ್ಯಾನ್ಮಾರ್ ಜತೆ ಸರಿಯಾದ ರೀತಿಯಲ್ಲಿ ರಾಜತಾಂತ್ರಿಕ ಸಂಬಂಧ ರೂಪಿಸುವುದು ಭಾರತಕ್ಕೆ ಸಾಧ್ಯವಾಗಿಲ್ಲ. ಅಲ್ಲಿ ಈಗ ಚೀನೀ ಉದ್ಯಮಿಗಳದ್ದೇ ವ್ಯಾಪಾರ- ವ್ಯವಹಾರದಲ್ಲಿ ಕಾರುಬಾರು.
ಶ್ರೀಲಂಕದ ಪರಿಸ್ಥಿತಿಯನ್ನಂತೂ ಹೇಳಲೇಬೇಕಾಗಿಲ್ಲ. ಮಾರಿಷಸ್ ಕೂಡಾ ಭಾರತದ ವಿರುದ್ಧ ಗೊಣಗಲು ಆರಂಭಿಸಿದೆ.
ವರುಣ್‌ಗಾಂಧಿ ಲೇಖನದಲ್ಲಿ ಇದೆಲ್ಲದರ ವಿವರಣೆ ಇದೆ. ಇದಕ್ಕೆಲ್ಲ ಯಾರು ಕಾರಣ? ಇದೇನು ಅನಿವಾರ್ಯವಾಗಿತ್ತೇ? ಎನ್ನುವ ಪ್ರಶ್ನೆಯೂ ಇದೆ. ಇನ್ನು ಯಾರೂ ಉತ್ತರ ಕೊಟ್ಟಿಲ್ಲ.
ಅಂದಹಾಗೆ, ವರುಣ್ ಅವರು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಹಠಾವೋ ಆಂದೋಲನದ ಕಾರ್ಯಕರ್ತರೂ ಹೌದು. ದೆಹಲಿಯಲ್ಲಿ ಅಣ್ಣಾ ಹಜಾರೆಗೆ ಬಹಿರಂಗ ನಿರಶನ ಸತ್ಯಾಗ್ರಹಕ್ಕೆ ಸರ್ಕಾರ ಅವಕಾಶ ನಿರಾಕರಿಸಿದಾಗ, ವರುಣ್ 'ನಮ್ಮ ಮನೆಗೇ ಬನ್ನಿ' ಎಂದು ಕರೆದಿದ್ದರು. ಇನ್ನು ಮುಂದಿನ ದಿನಗಳಲ್ಲಿ ವರುಣ್ ಗಾಂಧಿ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು.


-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.