ಸಾಪ್ತಾಹಿಕಪ್ರಭ

ಅನುವಾದಕನಾಗಿ ನನ್ನ ಅನುಭವ

ಅನುವಾದಕನಾಗಿ ನನ್ನ ಅನುಭವ
ಕೆ.ಕೆ. ನಾಯರ್
Published On :

ಕನ್ನಡದಿಂದ ಮಲಯಾಳಂಗೆ, ಮಲಯಾಳದಿಂದ ಕನ್ನಡಕ್ಕೆ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡುತ್ತ ಬಂದಿರುವ ಕೆ.ಕೆ. ನಾಯರ್ ಅವರಿಗೆ ಈ ವರ್ಷದ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಸಂದಿದೆ. ನಿನ್ನೆ (ಆ.24) ಚೆನ್ನೈಯ ಮದರಾಸು ವಿವಿಯಲ್ಲಿ ಪ್ರಶಸ್ತಿ ಪ್ರದಾನ. ಈ ಹಿನ್ನೆಲೆಯಲ್ಲಿ ಕೆ.ಕೆ. ನಾಯರ್ ಹೇಳಿರುವ ಸ್ವಾನುಭವ ಕಥನ ಇಲ್ಲಿದೆ.

ನಾನು ಅನುವಾದಕನಾದದ್ದು ತೀರಾ ತೀರಾ ಆಕಸ್ಮಿಕ. ನನ್ನ ಮಾತೃಭಾಷೆ ಮಲಯಾಳಂ. ಓದಿದ್ದು ನಾಲ್ಕನೆ ತರಗತಿಯ ತನಕ. ಅದೂ ಹೆತ್ತವರು ಬಿಡುವು ಕೊಟ್ಟ ದಿನಗಳಲ್ಲಿ ಮಾತ್ರ. ಆ ಅವಧಿಯಲ್ಲಿ ನನಗೆ ಸಿಕ್ಕಿದ್ದು ಚೌಕಟ್ಟಿಲ್ಲದ, ಮೂಲೆ ಮುರಿಯಲ್ಪಟ್ಟ ಒಂದು ಕರಿಹಲಗೆ. ಅದರ ಮೂಲೆಯನ್ನು ಮುರಿದು ತೆಗೆದ ತುಣುಕನ್ನೆ  ಬಳಪವಾಗಿ ಬಳಸುತ್ತಿದ್ದೆ. ಆಗ ಅಧ್ಯಾಪಕರು ಉಕ್ತ ಪದಗಳನ್ನು ಬರೆಯಲು ಹೇಳಿದಾಗ ನನಗೆ ನಡುಕ ಶುರುವಾಗುತ್ತಿತ್ತು. ಆ ನಡುಕ ಇತರರೆದುರು ಬರೆಯಬೇಕಾಗಿ ಬಂದಾಗ ಈ ಎಪ್ಪತ್ತೆಂಟನೆ ವಯಸ್ಸಿನಲ್ಲು ನನ್ನನ್ನು ಬಾಧಿಸುತ್ತದೆ.

ನಾನು ಐದನೆ ತರಗತಿಗೆ ಉತ್ತೀರ್ಣನಾದಾಗ ಹೆತ್ತವರಲ್ಲಿ ಕಾಡಿ ಬೇಡಿ ಒಂದು ಹಳೆಯ ಸ್ಲೇಟನ್ನು ಗಿಟ್ಟಿಸಿದೆ. ಆದರೆ ಅದನ್ನು ಒಮ್ಮೆ ಕೂಡ ಬಳಸುವ ಭಾಗ್ಯ ನನಗೆ ದೊರೆಯಲಿಲ್ಲ. ಆಗಲೆ ಆ ಒಂಬತ್ತನೆ ವಯಸ್ಸಿನಲ್ಲೆ ದೂರದ ತಲಶ್ಶೇರಿಗೆ ಒಬ್ಬ ಮನೆಸೇವಕನಾಗಿ ಸ್ವಂತ ಹೆತ್ತವರಿಂದ ನನ್ನ ಎತ್ತಂಗಡಿಯಾಗಿತ್ತು.  ಮುಂದೆ ಹದಿನೈದನೆ ವಯಸ್ಸಿನಿಂದ ಏಳೆಂಟು ವರ್ಷ ಮಲಯಾಳಿ ಕುಟುಂಬವೊಂದರ ಸೇವಕನಾಗಿ ನಾನು ಕನ್ನಡ ನಾಡಿನಲ್ಲಿದ್ದೆ. ಹಾಗಾಗಿ, ಅಂಗಡಿ ಮುಂಗಟ್ಟುಗಳ ನಾಮ ಫಲಕಗಳನ್ನೂ ರದ್ದಿ ಪತ್ರಿಕೆಗಳ ಸುದ್ದಿಶೀರ್ಷಿಕೆಗಳನ್ನೂ ಓದುತ್ತಾ ಕಾಲಾಂತರದಲ್ಲಿ ಕನ್ನಡವನ್ನು ತಪ್ಪಿಲ್ಲದೆ ಓದಲೂ ಅರ್ಥ ಮಾಡಿಕೊಳ್ಳಲೂ ಸಮರ್ಥನಾದೆ. ಬಳಿಕ ಯಾವ್ಯಾವುದೋ ಚುಟುಕುಗಳನ್ನು ಅನುಕರಿಸುತ್ತ ಕೆಲವು ಕನ್ನಡ ಚುಟುಕಗಳನ್ನು ರಚಿಸಿದೆ. ಆ ಚುಟುಕಗಳಲ್ಲಿ ಒಂದು ಇದು: 'ಬೆಣ್ಣೆ ಕದ್ದ ಕಳ್ಳ, ಬಾರೊ ಪುಟ್ಟ ಗೊಲ್ಲ, ನಿನ್ನ ಹಿಡಿವ ನನ್ನ ಹಟವ, ನಾನು ಬಿಡುವುದಿಲ್ಲ' ಅವನ್ನು ಹೆಮ್ಮೆಯಿಂದ ಇತರರಿಗೆ ಹೇಳಿದಾಗ ಕೇಳಿಸಿಕೊಂಡವರೆಲ್ಲರೂ ಅವೆಲ್ಲ ಕೃತಿಚೌರ್ಯ ಎಂದು ತೀರ್ಪಿತ್ತರು.
ಆಗಲೂ ನನಗೆ ಕನ್ನಡ ಬರೆಯಲೂ ಸರಿಯಾಗಿ ಮಾತಾಡಲೂ ಬರುತಿರಲಿಲ್ಲ. ಮನೆಗೆಲಸದವನಾಗಿದ್ದ ನನ್ನ ಮೈಗೆ ಬಿಡುವು ಸಿಗುತ್ತಿದ್ದದ್ದು ರಾತ್ರಿಯ ನಿದ್ದೆಯ ಹೊತ್ತು ಮಾತ್ರ. ಆದರೆ ಮನಸ್ಸಿಗೆ ಬಟ್ಟೆ ಒಗೆಯುವ, ತೊಟ್ಟಿಲು ತೂಗುವ, ಮಸಾಲೆ ಕಡೆಯುವಂಥ ಕಾಯಕದ ವೇಳೆಗಳಲ್ಲಿ ಬಿಡುವು ಸಿಗುತ್ತಿತ್ತು. ಆಗ ಮನಸ್ಸು ತನಗೆ ತೋಚಿದ ಹಾಗೆ ಕನ್ನಡದಲ್ಲಿ ಪದ್ಯ ಕಟ್ಟುತ್ತಿತ್ತು. ಅವುಗಳಲ್ಲೊಂದು ಇದು: 'ಅಮ್ಮನ ಸೆರಗಿನ ಲತೆಯಲ್ಲಿ, ಅರಳಿದ ಹೂವಿನ ತೆರದಲ್ಲಿ, ನಗುವಿನ ಪರಿಮಳವನು ಚೆಲ್ಲಿ, ನಲಿಯುವ ಮಗುವನು ನೋಡಲ್ಲಿ'.
ಒಮ್ಮೆ (1950ನೆ ದಶಕದ ಉತ್ತರಾರ್ಧ) ನನ್ನ ಪದ್ಯಗಳನ್ನೆಲ್ಲ ಒಟ್ಟುಮಾಡಿ ಪ್ರಜಾವಾಣಿ ಪತ್ರಿಕೆಯ ಬಾಲಭಾರತಿ ವಿಭಾಗಕ್ಕೆ ರವಾನಿಸಿದೆ.

ಅದರ ಕುರಿತು ಆ ಪತ್ರಿಕೆಯಲ್ಲಿ ನನ್ನ ಹೆಸರಿನ ಕೆಳಗೆ ಹೀಗೆ ಮುದ್ರಿಸಲ್ಪಟ್ಟಿತ್ತು: 'ಪ್ರಯತ್ನ ಮೀರಿ ಬರೆದಿದ್ದೀರಿ ಆದರೂ ಬಲು ಸೊಗಸಾಗಿವೆ'. ಇದನ್ನೋದಿದ ನನ್ನ ಮನಸ್ಸು ಸ್ವರ್ಗಕ್ಕೇ ನೆಗೆದಿತ್ತು. ಆ ನೆಗೆತದಲ್ಲಿ ನನಗೊಂದು ಮಲಯಾಳ ಕವಿತೆ ನೆನಪಿಗೆ ಬಂತು. ಅದನ್ನು ತಿಂಗಳುಗಟ್ಟಲೆ ತಿಣುಕುತ್ತ ಕನ್ನಡಕ್ಕೆ ಅನುವಾದಿಸಿದೆ. ಆ ಅನುವಾದದ ಮೊದಲ ಸಾಲುಗಳು ಇವು: 'ಬಳ್ಳೀ ಬಳ್ಳೀ ಹೇಳೊಂದು, ಹೂವನು ಕೊಯ್ಯಲೆ ನಾನಿಂದು, ಅಯ್ಯೋ ಮಗುವೆ ಕೊಯ್ಯದಿರು, ಮೈಯಲಿ ನೋವೆನಗಾಗುವುದು'.

ಇಪ್ಪತ್ತನಾಲ್ಕನೆ ವಯಸ್ಸಿನಿಂದ ನಾಲ್ಕಾರು ವರ್ಷ ನಾನು ಹೆತ್ತವರ ಹಾಗೂ ಒಡಹುಟ್ಟಿದವರ ಜೊತೆ ಹುಟ್ಟೂರಿನಲ್ಲೆ ನೆಲಸಿದ್ದೆ. ಆಗ ಓದಿದ ಮಲಯಾಳ ಕೃತಿಗಳಲ್ಲಿ ಮಹಾಕವಿ ಕುಮಾರನ್ ಆಶಾನ್ ಅವರ 'ಚಿಂತಾವಿಷ್ಟಮಾಯ ಸೀತ' ಎಂಬ ಕಿರು ಕಾವ್ಯ ನನ್ನನ್ನು ವಿಶೇಷವಾಗಿ ಆಕರ್ಷಿಸಿತು. ಹಾಗಾಗಿ ಅದನ್ನು ಕನ್ನಡಕ್ಕೆ ಅನುವಾದಿಸಿದೆ. ಅದರಲ್ಲಿ ನೂರ ತೊಂಬತ್ತೆರಡು ಚೌಪದಿಗಳಿವೆ. ಮೊದಲ ಚೌಪದಿಯ ನನ್ನ ಅನುವಾದ ಇದು: 'ಸುತರು ಮುನಿವರನ ಜೊತೆ ಕೋಸಲಕ್ಕೆ/ ತೆರಳಿರುವ ಅವಧಿಯಲಿ ಒಂದು ಸಂಜೆ/ ಬಲು ಚಿಂತೆಯನು ಹೊತ್ತ ಸೀತೆ ತೆರಳಿ/ ನೆಲೆಗೈದಳಾಶ್ರಮದ ಉಪವನದಲಿ' ಆ ಅನುವಾದ ಪೂರ್ಣಗೊಳ್ಳುವವರೆಗೆ ನಾನು ಅನುವಾದಿಸುತ್ತಿರುವ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ಹೀಗೆಯೇ ಲಲಿತಾಂಬಿಕಾ ಅಂತರ್ಜನಂ ಅವರ ಅಗ್ನಿಸಾಕ್ಷಿ ಕಾದಂಬರಿಯ ನನ್ನ ಅನುವಾದವೂ ಇತರರಿಗೆ ಗೊತ್ತಾದದ್ದು ಅನುವಾದ ಕೊನೆಗೊಂಡ ಬಳಿಕವೇ. ಈ ಎರಡು ಕೃತಿಗಳನ್ನೂ ಅನುವಾದಿಸುವಾಗ ನಾನು ಕನ್ನಡ ಶಬ್ದಕೋಶದ ನೆರವನ್ನಷ್ಟೆ ಪಡೆದಿದ್ದೆ. ನನ್ನ ಇತರ ಅನುವಾದಗಳ ಮಟ್ಟಿಗೆ ನನಗೆ ತಿಳಿಯಬೇಕಾದ ವಿಷಯಗಳನ್ನು ತಿಳಿದುಕೊಳ್ಳಲು ಪಂಡಿತ- ಪಾಮರ ಎಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಕೇಳುತ್ತಿದ್ದೆ. ಒಮ್ಮೆ ಒಂದು ಹೂವಿನ ಕನ್ನಡ ಹೆಸರಿಗಾಗಿ ಮಣಿಪಾಲ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಮನೆಗೂ ನುಗ್ಗಿದ್ದೆ.

ನನ್ನ ಚಿಂತಾಮಗ್ನ ಸೀತೆ ಅನುವಾದದ ಕುರಿತು ಕನ್ನಡ ಮಲಯಾಳ ಉಭಯ ಭಾಷಾಕವಿ ದಿ. ಉಬೈದ್ ಸಾಹೇಬರು ನನಗೆ ಮೆಚ್ಚುಗೆ ಪತ್ರ ಬರೆದಿದ್ದರು. ಅಗ್ನಿಸಾಕ್ಷಿ ಕಾದಂಬರಿಯ ಅನುವಾದದ ಬಗ್ಗೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ 'ಕನ್ನಡ ಭಾಷೆಯ ಮೇಲಿನ ನಿಮ್ಮ ಪ್ರಭುತ್ವ ಪ್ರಶಂಸಾರ್ಹವಾಗಿದೆ' ಎಂದು ಬರೆದುಕೊಟ್ಟು ನನ್ನ ಕೀಳರಿಮೆಯನ್ನು ಹೋಗಲಾಡಿಸಿದ್ದರು. ಸಾಹಿತ್ಯ ಅಕಾಡೆಮಿಯ ಅಂದಿನ ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ನಾನು ಅಶಿಕ್ಷಿತನೆಂಬುದನ್ನು ಲವಮಾತ್ರವೂ ಲಕ್ಕಿಸದೆ ನನ್ನ ಅನುವಾದಗಳ ಗುಣಮಟ್ಟವನ್ನಷ್ಟೆ ಗಣನೆಗೆ ತೆಗೆದುಕೊಳ್ಳುತ್ತ ಮಲಯಾಳ ಸಾಹಿತ್ಯದ ಮಹತ್ವದ ಕೃತಿಗಳ ಸುಮಾರು 3,500 ಪುಟಗಳನ್ನು ಕನ್ನಡಕ್ಕೆ ಅನುವಾದಿಸಲು ನನಗೆ ಅನುವು ಮಾಡಿಕೊಟ್ಟಿದ್ದರು. ಅದನ್ನು ಸಾರ್ಥಕಗೊಳಿಸಲು ನನ್ನ ಮಿತ್ರ ಡಾ.ಅಶೋಕ್ ಕುಮಾರ್ ನನಗೆ ನೆರವಾಗಿದ್ದರು. ನನ್ನ ಹೆಚ್ಚಿನ ಅನುವಾದಗಳನ್ನು ಪ್ರಕಟಿಸಿದ್ದು ಉದಯವಾಣಿ ಬಳಗದ ನಿಯತಕಾಲಿಕಗಳು. ತರಂಗ ನನ್ನ ಹತ್ತಕ್ಕಿಂತಲೂ ಹೆಚ್ಚು ಧಾರಾವಾಹಿಗಳನ್ನು ಪ್ರಕಟಿಸಿದೆ. ಕನ್ನಡ ಸಹೃದಯ ಜಗತ್ತು ತನ್ನ ಅಂತರಾಳದಲ್ಲೊಂದು ನೆಚ್ಚಿನ ಸ್ಥಾನವನ್ನು ನನಗೆ ಕಲ್ಪಿಸಿದೆ.

ಅನುವಾದದ ವೇಳೆ ನನಗೆ ಎದುರಾಗುತ್ತಿದ್ದ ಮೊದಲ ಹಾಗೂ ಮುಖ್ಯ ಸಮಸ್ಯೆ ಅಕ್ಷರ ಬರೆಯುವಿಕೆ. ಕಾಗುಣಿತ ತಪ್ಪುಗಳನ್ನು ತಪ್ಪಿಸಲು ಸಾಧ್ಯವಾಗುವುದೇ ಇಲ್ಲ. ಈಗ ನಾನು ಗಣಕವನ್ನು ರೂಢಿಸಿಕೊಂಡು ಬರೆಯುವ ಬವಣೆಯನ್ನು ನಿವಾರಿಸಿದ್ದೇನೆ. ಇನ್ನೊಂದು ಸಮಸ್ಯೆ ಮೂಲ ಲೇಖಕರ ಅನುಮತಿ. ಲಲಿತಾಂಬಿಕ ಅಂತರ್ಜನಂ ಅವರ ಅಗ್ನಿಸಾಕ್ಷಿ ಕಾದಂಬರಿ ಮಾತೃಭೂಮಿ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿರುವಾಗಲೆ ಅದರ ಪ್ರತಿಯೊಂದು ಕಂತನ್ನೂ ಆಯಾ ವಾರದಲ್ಲೆ ನಾನು ಕನ್ನಡಕ್ಕೆ ಅನುವಾದಿಸಿದ್ದೆ. ನನ್ನ ಅನುವಾದದ ಪ್ರಕಟಣೆಗೆ ಅನುಮತಿ ಪತ್ರ ಕೋರಿದ ನನಗೆ ಅಂತರ್ಜನಂ ಹಾಕಿದ ನಿಬಂಧನೆ ಇದು: 'ನಿಮ್ಮ ಅನುವಾದ ಸಮರ್ಪಕವಾಗಿದೆಯೆಂದು ಡಾ. ಕಾರಂತರಿಂದ ಅಥವಾ ಡಾ. ಅನಂತಮೂರ್ತಿ ಅವರಿಂದ ಅರ್ಹತಾಪತ್ರ ಪಡೆದು ಕಳಿಸಿಕೊಟ್ಟರೆ ಅನುಮತಿ ಪತ್ರ ಕಳಿಸಿಕೊಡ್ತೇನೆ'. ಅಂದು ಸಾಹಿತ್ಯ ಕ್ಷೇತಕ್ಕೆ ತೀರಾ ಅಪರಿಚಿತನಾಗಿದ್ದ ನನ್ನ ನೆರವಿಗೆ ಬಂದದ್ದು ಉದಯವಾಣಿ ದೈನಿಕದ ಮ್ಯಾಗಸಿನ್ ಸಂಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ 'ಕನ್ನಡದ ಮೇಲಿನ ಪ್ರಭುತ್ವ'ದ ನುಡಿಮುತ್ತು. ಅದನ್ನು ಓದಿ ಅಂತರ್ಜನಂ ನನಗೆ ಅನುವಾದದ ಪ್ರಕಟಣೆಗೆ ಅನುಮತಿ ಪತ್ರ ಕಳಿಸಿಕೊಟ್ಟರು. ಆದರೂ ಸಮಸ್ಯೆ ಬಳಿಕವೂ ಮುಂದುವರಿಯಿತ್ತು. ಅಂತರ್ಜನಂ  ನಿರೀಕ್ಷಿಸಿದ ಅವಧಿಯೊಳಗೆ ಅನುವಾದ ಪ್ರಕಟವಾಗಲಿಲ್ಲ. ಅದೇ ವೇಳೆ ಕೇರಳದ ಬಹುತೇಕ ಎಲ್ಲ ಸಾಹಿತ್ಯಕ ಪ್ರಶಸ್ತಿಗಳನ್ನೂ ಅಗ್ನಿಸಾಕ್ಷಿ ಗಳಿಸಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿತ್ತು. ಆಗ ಅಂತರ್ಜನಂ ನನಗೆ ಹೀಗೆ ಬರೆದರು: 'ಕರ್ನಾಟಕದಿಂದ ಪ್ರೊಫೆಸರುಗಳ ಸಹಿತ ಹಲವು ಮಂದಿ ನನ್ನೊಡನೆ ಅಗ್ನಿಸಾಕ್ಷಿ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಲು ಅನುಮತಿ ಕೇಳುತ್ತಿದ್ದಾರೆ. ನಿಮಗೆ ಸಾಧ್ಯವಿಲ್ಲವಾದರೆ ಕೂಡಲೆ ತಿಳಿಸಿ'. ನಾನು ಉತ್ತರಿಸಿದ್ದು: 'ಅಗ್ನಿಸಾಕ್ಷಿಯತ್ತ ನೀವು ಹೇಳುವ ಪ್ರೊಫೆಸರುಗಳು ಕಣ್ಣುಹಾಯಿಸಿದ್ದು ಅದಕ್ಕೆ ಅಕಾಡೆಮಿ ಪ್ರಶಸ್ತಿ ದೊರೆತ ಬಳಿಕ. ನಾನು ಧಾರಾವಾಹಿಯ ಮೊದಲ ಕಂತು  ಪ್ರಕಟಗೊಂಡ ವಾರದಲ್ಲೆ ಅದನ್ನು ಅನುವಾದಿಸಿದ್ದೆ. ಅದನ್ನು ಓದಿಯೇ ಬನ್ನಂಜೆಯವರು ಅಗ್ನಿಸಾಕ್ಷಿ ಅಂತಹ ಪ್ರಶಸ್ತಿಗಳಿಗೂ ಅರ್ಹ ಕಾದಂಬರಿ ಎಂದು ಸೂಚಿಸಿರುವುದೂ ನನಗೆ ಹೆಮ್ಮೆಯ ಸಂಗತಿ. ನನ್ನ ಅನುವಾದ ತುಷಾರ ಮಾಸಿಕದಲ್ಲಿ ಧಾರಾವಾಹಿಯಾಗಿ ಪ್ರಕಟಣೆಗೆ ಸ್ವೀಕೃತವಾಗಿದೆ. ನಾನು ಇನ್ನೇನೂ ಮಾಡುವ ಹಾಗಿಲ್ಲ' ಎಂದು. ಈ ಪತ್ರಕ್ಕೆ ಅಂತರ್ಜನಂ ಉತ್ತರಿಸಲಿಲ್ಲ. ಅನುವಾದ ತುಷಾರದಲ್ಲಿ ಬರತೊಡಗಿದಾಗ ತುಷಾರದ ಪ್ರತಿಗಳನ್ನು ಕನ್ನಡ ಬಲ್ಲ ಖ್ಯಾತ ಮಲಯಾಳಂ ಸಾಹಿತ್ಯ ವಿಮರ್ಶಕ ಪ್ರೊ.ಕೆ.ಪಿ. ಶಂಕರನ್ ಅವರಿಗೆ ಕಳಿಸಿಕೊಡಲು ಹೇಳಿದರು.ಧಾರಾವಾಹಿ ತುಷಾರದಲ್ಲಿ ಕೊನೆಗೊಂಡ ಬಳಿಕ ನನಗೆ ಅಂತರ್ಜನಂ ತಮಗೆ ಪ್ರೊ.ಶಂಕರನ್ ಬರೆದ ಪತ್ರವನ್ನು ಕಳಿಸಿಕೊಟ್ಟರು. ಅನುವಾದದಲ್ಲಿ ಕೆಲವೆಡೆ ಹುಡುಗಿ ಎಂಬ ಪದಕ್ಕೆ ಬದಲಾಗಿ ಬಾಲಕಿ ಎಂಬ ಪದ ಬಳಸಿರುವುದು ಅನುವಾದದ ಅಸಮರ್ಪಕತೆಗೆ ಉದಾಹರಣೆಯಾಗಿ ಆ ಪತ್ರದಲ್ಲಿ ಬರೆದಿತ್ತು. ಮರುಮುದ್ರಣದ ವೇಳೆಯಲ್ಲಾದರೂ ಅಂತಹ ದೋಷಗಳನ್ನು ತಿದ್ದಬೇಕೆಂದು ಅಂತರ್ಜನಂ ನನಗೆ ಆಣತಿಯಿತ್ತರು. ಅದಕ್ಕೆ ನಾನು ಉತ್ತರಿಸಿದ್ದು ಹೀಗೆ: ಮೂಲ ಕೃತಿಯಲ್ಲಿ ಅಂತರ್ಜನಂ ಸ್ವತಃ ಪೆಣ್ಕುಟ್ಟಿ ಎಂಬ ಪದಕ್ಕೆ ಬದಲು ಬಾಲಿಕ ಎಂಬ ಪದವನ್ನು ಬಳಸಿದ್ದಾರೆ.
ಅದಕ್ಕನುಗುಣವಾಗಿ ನಾನು ಬಾಲಕಿ ಎಂದಿರುವುದು. ಹಾಗೆ ಮಾಡದೆ ಇರುತ್ತಿದ್ದರೆ, ಅದೇ ವಿಮರ್ಶಕರ ದೃಷ್ಟಿಯಲ್ಲಿ ನನ್ನ ತಪ್ಪಾಗುತ್ತಿತ್ತು. ನಾನದನ್ನು ಬದಲಾಯಿಸುವುದಿಲ್ಲ'. ಯಾವುದೇ ಬದಲಾವಣೆ ಮಾಡದೆಯೂ ಮುಂದೆ ಈ ಅನುವಾದಕ್ಕೆ ಕೇಂದ್ರ ಸರಕಾರದ ಭಾರತೀಯ ಭಾಷಾ ಸಂಸ್ಥೆಯ ಶ್ರೇಷ್ಠ ಅನುವಾದ ಪ್ರಶಸ್ತಿ ಲಭಿಸಿದೆ.
ನಾನು ಒಬ್ಬ ಅನುವಾದಕ ಎಂಬ ನೆಲೆಯಲ್ಲಿ ನನ್ನ ತೀರಾ ಕಹಿ ಅನುಭವವೊಂದನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಸುಮಾರು ಮೂವತ್ತು ವರ್ಷ ಹಿಂದೆ ನಾನು ಖ್ಯಾತ ಸಾಹಿತಿ ಓ.ವಿ. ವಿಜಯನ್ ಅವರಿಗೆ ಅವರ ಮಲಯಾಳ ಕಾದಂಬರಿ 'ಖಸಾಕ್ಕಿಂಡೆ ಇತಿಹಾಸಂ'ದ ಕನ್ನಡ ಅನುವಾದಕ್ಕೆ ಅನುಮತಿ ಕೋರಿ ಒಂದು ಪತ್ರ ಬರೆದಿದ್ದೆ. ಅದು ಕೈಸೇರಿದ ತಕ್ಷಣ ವಿಜಯನ್ ನನಗೆ ಮರುಪತ್ರ ಕಳಿಸಿದರು. 'ತೀರಾ ಅಪರಿಚಿತರಾದ ನಿಮಗೆ ನಾನು ಒಮ್ಮೆಲೆ ಅನುಮತಿ ಕೊಡುವುದಾದರೂ ಹೇಗೆ? ನಿಮ್ಮ ಪ್ರಕಟಣೆಗಳಿದ್ದರೆ ಕೂಡಲೆ ಕಳಿಸಿಕೊಡಿ'. ಆಗಲೆ ನಾನು ನನ್ನ ಪ್ರಕಟಣೆಗಳನ್ನು ಕಳಿಸಿಕೊಟ್ಟೆ. ಅದರ ಬೆನ್ನಲ್ಲೆ ಖಸಾಕ್ಕಿಂಡೆ ಇತಿಹಾಸಂನ ಅನುವಾದಕ್ಕೂ ಕೈ ಹಾಕಿದೆ. ನನ್ನ ಅನುವಾದ ಕಾಯಕ ಮುಗಿದ ಬಳಿಕವೂ ವಿಜಯನ್‌ರಿಂದ ಪ್ರತಿಕ್ರಿಯೆ ಬರಲಿಲ್ಲ. ಅಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿತ್ತು. ವಿಜಯನ್‌ಗೆ ನಾನು ಮತ್ತೊಂದು ಪತ್ರ ಕಳಿಸಿದೆ. ಅದಕ್ಕೆ ದೊರೆತ ಉತ್ತರ: 'ಖಸಾಕ್ಕಿಂಡೆ ಇತಿಹಾಸಂ ನನ್ನ ಮೂವತ್ತು ವರ್ಷದ ತಪಸ್ಸಿನ ಫಲ. ಅದು ಭಾಷಾಂತರಕ್ಕೆ ಬಗ್ಗುವುದಿಲ್ಲ. ಆದುದರಿಂದ ಅನುಮತಿ ಕೊಡುವುದಿಲ್ಲ. ನಿಮ್ಮ ಪುಸ್ತಕಗಳು ಕಳೆದು ಹೋಗಿವೆ. ನೀವು ತೆಗೆದುಕೊಳ್ಳುವುದಾದರೆ ಬೆಲೆಯನ್ನು ಕಳಿಸಿಕೊಡುತ್ತೇನೆ'. ಆ ಬಳಿಕವೂ ನಮ್ಮಿಬ್ಬರ ನಡುವೆ ಪತ್ರಗಳ ವಿನಿಮಯವಾಗಿತ್ತು. ಅವರು ಬರೆದದ್ದು, 'ನಾನು ಅನುಮತಿ ನಿರಾಕರಿಸಿದ್ದು ನಿಮಗೊಬ್ಬರಿಗೇ ಅಲ್ಲ, ನನಗಿಂತಲೂ ಸಮರ್ಥರೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರೂ ಆದ ಬಂಗಾಳಿ ಸಾಹಿತಿಯೊಬ್ಬರಿಗೆ ಕೂಡಾ ಅನುಮತಿ ನಿರಾಕರಿಸಿದ್ದೇನೆ' ಎಂದು.
ಅನುಮತಿ ಕೊಡುವುದೂ ಬಿಡುವುದೂ ಮೂಲ ಲೇಖಕನ ಹಕ್ಕು. ತನ್ನ ಕೃತಿಯನ್ನು ಮುಟ್ಟುವ ಯೋಗ್ಯತೆ ಯಾವ ಅನುವಾದಕನಿಗೂ ಇಲ್ಲ ಎಂದು ಬೀಗುವ ಲೇಖಕ ಅನುವಾದಕನ ಸಾಮರ್ಥ್ಯವನ್ನು ಪರೀಕ್ಷಿಸಿದ್ದು ಯಾಕೆ? ದಾಂಪತ್ಯಕ್ಕೆ ಅಸಮರ್ಥನಾದವನು ವಧು ಪರೀಕ್ಷೆ ಮಾಡಿದ್ದು ಯಾಕೆ ಎಂಬುದು ನನ್ನ ಪ್ರಶ್ನೆ. ಈ ಪ್ರಕರಣದ ಕುರಿತು ಕನ್ನಡ ಸಾಹಿತಿಯೊಬ್ಬರ ಲೇಖನವೊಂದರ ಮಲಯಾಳ ಅನುವಾದವನ್ನು ಪ್ರಕಟಿಸಲು ಕೂಡ ಮಲಯಾಳ ನಿಯತಕಾಲಿಕಗಳು ಧೈರ್ಯ ವಹಿಸಲಿಲ್ಲ. ತಮ್ಮ ಅಸಹಾಯಕತೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದವು!

- ಕೆ.ಕೆ. ನಾಯರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.