ಪ್ರೊ.ಕೆ.ಇ.ರಾಧಾಕೃಷ್ಣ ಅವರು 'ಪ್ರಭುತ್ವ ಕಥನ' ಹೆಸರಿನ ಕೃತಿಯಲ್ಲಿ ರಾಮಾಯಣ ರಾಜ್ಯದಲ್ಲಿ ಆಡಳಿತ ಸೂತ್ರಗಳನ್ನು ಕುರಿತು ವಿವರಿಸುತ್ತಾರೆ. ಅವರಿಗೆ ರಾಮಾಯಣ ಎಂದರೆ ಬರೀ ಕಾವ್ಯವಲ್ಲ. ಅದು ಫೈನಲ್ ಎಪಿಕ್. ರಾಮಾಯಣದ ಇಡೀ ಕಥೆ ರಾಮ-ಸೀತೆ-ರಾವಣರನ್ನು ಸುತ್ತುವ (ಊಡಿಜ್ಠಟಿಛಟ ಖ್ಠ್ಝಿಛಟ್ಜಿಟಜ) ತ್ರಿಕೋಣವಲ್ಲ. ಅದು ಒಳ್ಳೆಯ ಸಮಾಜ ಸಂಘಟನೆಯ ಸೂತ್ರ. ಕುಟುಂಬ ಮತ್ತು ಸಾಮಾಜಿಕ ಬಾಂಧವ್ಯಗಳಲ್ಲಿ ನೆಮ್ಮದಿ ಇರಬೇಕಾದರೆ ಅನುಸರಿಸಬೇಕಾದ ಸೂತ್ರಗಳನ್ನು ದರ್ಶಿಸುತ್ತದೆ ಎಂದು ನಂಬಿದವರು. ಪ್ರಜಾಪ್ರಭುತ್ವವನ್ನು ಹೊಸ ದೃಷ್ಟಿಕೋನದಿಂದ ಇಲ್ಲಿ ನೋಡಲಾಗಿದೆ. ಚುನಾವಣೆ ನಡೆದು ಜನರಿಂದ ಆಯ್ಕೆಯಾದವರು ನಡೆಸುವ ವ್ಯವಸ್ಥೆ ಮಾತ್ರ ಪ್ರಜಾಪ್ರಭುತ್ವವಲ್ಲ. ಜನರಿಗೆ ಹಿತವಾಗುವಂತೆ ಆಡಳಿತ ನಡೆಸುವುದು ಪ್ರಜಾಪ್ರಭುತ್ವ. ರಾಮರಾಜ್ಯದಲ್ಲಿ ಈ ಪ್ರಜಾಪ್ರಭುತ್ವ ಯಾವ ರೀತಿಯಲ್ಲಿ ಪ್ರತಿಪಾದನೆಯಾಗಿದೆ ಎಂಬುದರ ಹುಡುಕಾಟ ಇಲ್ಲಿದೆ. ಕುಂಭಕರ್ಣನನ್ನು ಹೊಸ ದೃಷ್ಟಿಕೋನದಿಂದ ನೋಡುವ ಲೇಖನವಿದೆ. 'ಕಂಭಕರ್ಣ- ಸರ್ವಾಧಿಕಾರದಡಿ ನಲುಗಿದ ರಾಕ್ಷಸ' ಎಂದು ಅವರು ವಿಶ್ಲೇಷಣೆ ಮಾಡುವರು. ಭಾಸಕವಿ ರಾಮಾಯಣ ಆಧರಿಸಿ ಬರೆದ 'ಯಜ್ಞಫಲ' ನಾಟಕದಲ್ಲಿಯೂ ರಾಜಕೀಯ ಪಾಠವಿದೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ. ರಾಮಕಥೆಗಳ ಹೊಸ ಬಗೆಯ ಓದನ್ನು ನಾವಿಲ್ಲಿ ಗುರುತಿಸಬಹುದು.
ಪ್ರ: ಸಪ್ನ ಬುಕ್‌ಹೌಸ್, ಬೆಂಗಳೂರು. ಪುಟಗಳು 214. ಬೆಲೆ ರು. 125.
ಬದುಕೊಂದು ಕೋಲಾಟ
ಕೋಲಾಟ ಒಂದು ಸೊಗಸಾದ ಕಲೆ. ಬದುಕು ಕೂಡ ಒಂದು ಕೋಲಾಟದಂತೆ ಎನ್ನುವ ಲೇಖಕಿ ಪ್ರೇಮಾಭಟ್ ತಮ್ಮ ಹೊಸ ಕಾದಂಬರಿಗೆ 'ಕೋಲು ಕೋಲೆನ್ನ ಕೋಲೆ' ಎಂಬ ಹೆಸರನ್ನು ಕೊಟ್ಟಿದ್ದಾರೆ. ವಿವಿಧ ಧರ್ಮಗಳ ನೆಲೆವೀಡಾದ ಭಾರತದಲ್ಲಿ 'ಧರ್ಮಕಾರಣ'ದಿಂದ ಬದುಕು ಅಶಾಂತವಾದ ಹಲವು ಪ್ರಕರಣಗಳಿವೆ. ಬ್ರಾಹ್ಮಣರು ಇಂಗ್ಲಿಷ್ ಕಲಿಯಬಾರದು. ಅದು ಕ್ರೈಸ್ತರ ಭಾಷೆ ಎಂಬ ಭಾವನೆ ಇದ್ದ ಕಾಲದಲ್ಲಿ ಬ್ರಾಹ್ಮಣ ಹುಡುಗಿ ಮಾಲಿನಿ ಕ್ರೈಸ್ತ ಯುವಕ ಅಂತೋನಿಯನ್ನು ಮದುವೆಯಾಗುತ್ತಾಳೆ. ಅವನು ಹಿಂದೂ ಸಂಪ್ರದಾಯವನ್ನು ಒಪ್ಪಿಕೊಳ್ಳುತ್ತಾನೆ. ಕೃಷ್ಣ ಎಂದು ಹೆಸರೂ ಬದಲಾಗುತ್ತದೆ. ಕ್ರಮೇಣ ಅವನಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಕಾದಂಬರಿಯ ಒಡಲಲ್ಲಿ ಧರ್ಮಾಂತರದ ಬಗ್ಗೆ ವಿವರವಾದ ಚರ್ಚೆಗಳು ಬರುತ್ತವೆ. ಅಂತೋನಿ ಉರ್ಫ್ ಕೃಷ್ಣ ಹಿಂದೂ ಮೂಲಭೂತವಾದಿ ಚೀಂಕ್ರನ ಗುಂಡಿಗೆ ಕೊನೆಯಲ್ಲಿ ಬಲಿಯಾಗುವುದು, ಸನಾತನ ಧರ್ಮದಲ್ಲಿ ನಂಬಿಕೆಯಿದ್ದ ಸುಬ್ಬತ್ತೆಯ ಕುಟುಕು ಜೀವ ಅಂತೋನಿಯ ಸಾವನ್ನು ಖಚಿತಪಡಿಸಿಕೊಂಡೇ ಹಾರಿಹೋಗುವುದು ಸ್ಥಗಿತ ಸಮಾಜದ ಪ್ರತಿಗಾಮಿಯಾದ ಚಿತ್ರಣವಾಗಿದೆ. ಧರ್ಮ ಮೀರಿದವರಿಗೆ ದುಃಖ ಎಂಬುದನ್ನು ಮಾಲಿನಿಯ ವೈಧವ್ಯದ ಮೂಲಕ ಲೇಖಕಿ ಹೇಳುತ್ತಾರೆ. ಕಾದಂಬರಿಯಲ್ಲಿ ರಭಸದ ಚಲನೆಯಿದೆ. ಸಂಭಾಷಣೆಯಲ್ಲಿ ಆಯಾ ಜಾತಿಯ ಡೈಲೆಕ್ಟ್ ಬಳಸಿ ಪರಿಣಾಮಕಾರಿಯಾಗಿಸಿದ್ದಾರೆ.
ಪ್ರ: ಸಪ್ನ ಬುಕ್‌ಹೌಸ್, ಬೆಂಗಲೂರು. ಪುಟಗಳು 198. ಬೆಲೆ ರು. 120.
ಕುಮಾರಗಂಧರ್ವ ನಾಟಕ
ಕನ್ನಡದಲ್ಲಿ ಸಂಗೀತಗಾರರ ಜೀವನವನ್ನು ಆಧರಿಸಿದ ಕೃತಿಗಳನ್ನು ಮಾಸ್ತಿ, ಅನಕೃ, ತರಾಸು, ಕೃಷ್ಣಮೂರ್ತಿ ಪುರಾಣಿಕ ಮೊದಲಾದವರು ಬರೆದಿದ್ದಾರೆ. ಸುಬ್ಬಣ್ಣ, ಸಂಧ್ಯಾರಾಗ, ಉದಯರಾಗ, ಹಂಸಗೀತೆ, ಸನಾದಿ ಅಪ್ಪಣ್ಣ ಇತ್ಯಾದಿಗಳೆಲ್ಲ ಕಾಲ್ಪನಿಕ ವ್ಯಕ್ತಿಗಳನ್ನು ಆಧರಿಸಿದ್ದು. ಶಿರೀಷ ಜೋಶಿಯವರು ಕುಮಾರ ಗಂಧರ್ವರೆಂದು ಹೆಸರಾದ ಶಿವಪುತ್ರ ಕೋಮಕಾಳಿಮಠ ಅವರ ಜೀವನವನ್ನು ನಾಟಕಕ್ಕೆ ಅಳವಡಿಸಿರುವರು. ಸಂಗೀತಗಾರರಲ್ಲಿ ಕುಮಾರಗಂಧರ್ವರಿಗೆ ವಿಶಿಷ್ಟವಾದ ಸ್ಥಾನವಿದೆ. ಜನಸಾಮಾನ್ಯರಿಗೆ ಈ ಮಹಾನ್ ವ್ಯಕ್ತಿಯ ಸಂಗೀತದ ಪರಿಚಯ ಮಾತ್ರ ಇದೆ. ಈ ಪರದೆಯನ್ನು ಸರಿಸಿದಾಗ ಅಲ್ಲಿ ಹಲವು ತಿರುವುಗಳು ಕಾಣುತ್ತವೆ. ಸಾಧನೆಯ ಶಿಖರ ತಲುಪುವ ಮೊದಲು ಅವರು ಹಲವು ಕಷ್ಟ ಅನುಭವಿಸಿರುತ್ತಾರೆ. ಕುಮಾರಗಂಧರ್ವರ ಇಡೀ ಬದುಕು ಈ ನಾಟಕದಲ್ಲಿ ಅನಾವರಣಗೊಂಡಿದೆ. ಸಂಗೀತಗಾರರಾಗಿ ಪ್ರಸಿದ್ಧರಾದ ಹಾಗೆಯೇ ಕುಮಾರ ಗಂಧರ್ವರು ಒಬ್ಬ ವ್ಯಕ್ತಿಯಾಗಿ ಘನವಂತರಾಗಿದ್ದರು ಎಂಬುದನ್ನು ಈ ನಾಟಕ ಹೇಳುತ್ತದೆ. ಚರಿತ್ರೆಯನ್ನು ಕುಶಲ ಕಲಾಕೃತಿಯನ್ನಾಗಿ ಮಾಡುವಲ್ಲಿ ಲೇಖಕರ ಶ್ರಮ ಕಾಣುತ್ತದೆ. ಪತ್ನಿ ಭಾನುಮತಿಯನ್ನು ಕಳೆದುಕೊಂಡ ದುಃಖವನ್ನು ಅತ್ತು ಹಗುರಾಗಿಸಿಕೊಳ್ಳುವ ಸನ್ನಿವೇಶದೊಂದಿಗೆ ನಾಟಕ ಆರಂಭವಾಗುತ್ತದೆ. ಬೆಳಗಾವಿ ನೆಲದ ಗಟ್ಟಿ ಭಾಷೆ ನಾಟಕವನ್ನು ಆಪ್ತಗೊಳಿಸುತ್ತದೆ.
ಪ್ರ: ವಚನ ಅಧ್ಯಯನ ಕೇಂದ್ರ, ಬೆಳಗಾವಿ. ಪುಟಗಳು 78, ಬೆಲೆ ರು. 50.
ಅಂತಸ್ಸತ್ವ
ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ ಎಸ್.ಸೀತಾರಾಮು ಅವರು ಭಾರತೀಯ ದರ್ಶನಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿ ಅದರಿಂದ ಗಳಿಸಿದ ಜ್ಞಾನವನ್ನು 'ಅಂತಸ್ಸತ್ವ' ಹೆಸರಿನ ಕೃತಿಯಲ್ಲಿ ನೀಡಿರುವರು. ಇದು ಅವರು ಮಾಡಿರುವ ಭಾಷಣಗಳ ಲೇಖನ ರೂಪ. ಅವು ಮೂಲದಲ್ಲಿ ಇಂಗ್ಲಿಷಿನಲ್ಲಿದ್ದು ಇಲ್ಲಿ ಅನುವಾದಿಸಿರುವರು. ವರ್ತನ ಶಾಸ್ತ್ರ ಮತ್ತು ಭಾರತೀಯ ಮನೋವಿಜ್ಞಾನ, ಜೈನಧರ್ಮ, ಶಿಲ್ಪಶಾಸ್ತ್ರದಲ್ಲಿ ಪರಬ್ರಹ್ಮನ ಕಲ್ಪನೆ, ಕಾರ್ಯಪ್ರೇರಣೆ ಮತ್ತು ಪುರುಷಾರ್ಥ, ವೇದವಾಙ್ಮಯದಲ್ಲಿ ವಿಜ್ಞಾನ, ಆತ್ಮದ ಅನಾವರಣ ಮೊದಲಾದವು ಇಲ್ಲಿಯ ಲೇಖನಗಳ ಶೀರ್ಷಿಕೆಗಳು. ಇದರಿಂದಲೇ ಸೀತಾರಾಮು ಅವರ ಅಧ್ಯಯನದ ವೈವಿಧ್ಯವನ್ನು ಗುರುತಿಸಬಹುದು. ಇದು ಉಪನ್ಯಾಸಗಳ ಪುಸ್ತಕವಾದುದರಿಂದ ಮುದ್ರಣದಲ್ಲಿ ಭಾಷಣದ ಶೈಲಿಯನ್ನೇ ಉಳಿಸಿಕೊಳ್ಳಲಾಗಿದೆ. ಭಾಷಣದ ಕಾಲಮಿತಿಗೆ ಒಳಪಟ್ಟು ಸಿದ್ಧಪಡಿಸಿರುವುದರಿಂದ ಹಲವು ಮಿತಿಗಳು ಅವಕ್ಕಿವೆ. ಆಧ್ಯಾತ್ಮದ ಹಲವು ಪದಗಳನ್ನು ಇಂಗ್ಲಿಷಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಅವುಗಳಿಗೆ ಕನ್ನಡ ಪದಗಳನ್ನು ಕೊಡುವ ಸಾಮರ್ಥ್ಯ ಲೇಖಕರಲ್ಲಿದ್ದರೂ ಯಾಕೋ ಪ್ರಯತ್ನ ಮಾಡಿಲ್ಲ. ಸೀತಾರಾಮು ಅವರ ವ್ಯಾಪಕ ಓದಿನ ಪ್ರಯೋಜನ ಓದುಗರಿಗೆ ದೊರೆಯುವುದಂತೂ ನಿಶ್ಚಿತ. ಈ ಕೃತಿಯ ಇನ್ನೊಂದು ವಿಶೇಷ ಎಂದರೆ ಇದರ ಮುಖಪುಟವನ್ನು ಲೇಖಕರೇ ರೂಪಿಸಿದ್ದಾರೆ.
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ಪುಟಗಳು 154, ಬೆಲೆ ರು. 80.
-ಡಾ. ವಾಸುದೇವ ಶೆಟ್ಟಿ