

ಯಾವಾಗಲೂ ಏನಾದರೂ ಹೊಸದನ್ನು ಮಾಡುತ್ತಿರುವ ಹಾವೇರಿ ಜಿಲ್ಲೆಯ 'ಸಾಹಿತಿಗಳ ಕಲಾವಿದರ ಬಳಗ' ಈ ಬಾರಿ ಪ್ರಳಯಭೀತಿದ ವಿರುದ್ಧ ದನಿ ಎತ್ತಿತು. ಸಾಮಾಜಿಕ ಸಮಸ್ಯಗಳಿಗೆ ತಮ್ಮ ಹಾಡು, ಬೀದಿ ನಾಟಕ, ಭಾಷಣಗಳ ಮೂಲಕ ತಕ್ಷಣ ಪ್ರತಿಕ್ರಿಯಿಸುವ ಬಳಗ, ಪ್ರಳಯ ಹೊಸತನದ ಬೀದಿ ನಾಟಕದ ಮೂಲಕ ಪ್ರತಿಕ್ರಿಯಿಸಿತು.
ಹಾವೇರಿ ಗಾಂಧಿ ವೃತ್ತದಲ್ಲಿ 'ಕ್ಯಾಲೆಂಡರ್ ಕರ್ಮಕಥೆ' ಬೀದಿ ನಾಟಕವನ್ನು ರೋಚಕವಾಗಿ ಪ್ರದರ್ಶಿಸಿತು. ಪ್ರಳಯ ದಿನಾಂಕದ ಮುನ್ನಾದಿನ ನಗರದ ಜನತೆಗೆ ಹಾಸ್ಯಪೂರ್ವಕವಾಗಿ ಪ್ರಳಯವೆಂಬುದು ಅವೈಜ್ಞಾನಿಕ ಸಂಗತಿ ಎಂದು ಮನದಟ್ಟು ಮಾಡಿಕೊಟ್ಟಿತು. ನಾಟಕದ ರಚನೆ ಸತೀಶ ಕುಲಕರ್ಣಿ, ನಿರ್ದೇಶನ ಕೆ. ಆರ್. ಹಿರೇಮಠರದಾಗಿತ್ತು.
ಪ್ರಳಯಭೀತಿಯ ಮಾಯನ್ ಕ್ಯಾಲೆಂಡರ್ ಮಾರಾಟದ ಮೂಲಕ ಕಾಸು ಮಾಡಿಕೊಳ್ಳುವವರು, ಸಮಯಸಾಧಕ ಜ್ಯೋತಿಷಿಗಳನ್ನು ಗೇಲಿ ಮಾಡಿದ ಬಳಗ, 'ನಮಗೆ ಸಿಕ್ಕಿರುವ ಬದುಕೊಂದೇ. ಇದನ್ನು ಉತ್ಸಾಹದಿಂದ ಬದುಕಬೇಕೆಂಬ' ಕುವೆಂಪು ಸಂದೇಶವನ್ನು ಜನರಿಗೆ ಮನದಟ್ಟುಮಾಡಿಸಿದರು.
- ಕೆ.ಎಚ್. ಹಂಚಿನಮನಿ