ಸಾಪ್ತಾಹಿಕಪ್ರಭ

ಉತ್ತರ ಕಾಂಡ

ಉತ್ತರ ಕಾಂಡ
Published On :

ಎರಡು ಮೂರು ವರ್ಷಗಳ ಹಿಂದೆ 2012 ಅಂತ ಒಂದು ಹಾಲಿವುಡ್ ಸಿನೆಮಾ ಬಂತು, ನೀವು ನೋಡಿದೀರಿ ಅಂದುಕೊಳ್ತೀನಿ. ಅದರ ಕ್ಲೈಮ್ಯಾಕ್ಸ್‌ನಲ್ಲಿ ತಮ್ಮ ಪ್ರಾಣ ಉಳಿಸಬಲ್ಲ ಹಡಗನ್ನ ಹತ್ತಿಕೊಳ್ಳೋದಕ್ಕೆ ಜನ ನುಗ್ಗಿ ಬರ್ತಾರೆ. ಅವರನ್ನ ತಡೆಯೋದಕ್ಕೆ ಮಿಲಿಟರಿಯವರ ಹರಸಾಹಸ. ಬದರೀನಾಥದ ಹೆಲಿಪ್ಯಾಡ್‌ನಿಂದ ಅನತಿದೂರದಲ್ಲಿ ನಿಂತುಕೊಂಡಿದ್ದವನಿಗೆ ಮತ್ತೆ ಮತ್ತೆ ನೆನಪಾದದ್ದು ಆ ಸೀನು. ಹೆಲಿಕಾಪ್ಟರ್ ಧೂಳೆಬ್ಬಿಸಿಕೊಂಡು ಬಂದು ಇಳಿಯುತ್ತಿದ್ದಿದ್ದೇ ತಡ, ಆಸೆಯ ಕಣ್ಣುಗಳಲ್ಲಿ ಎದ್ದು ನಿಲ್ಲುತ್ತಿದ್ದರು ಜನ. ಕೆಲವರು ಅದರತ್ತ ನುಗ್ಗೋದಕ್ಕೆ ಪ್ರಯತ್ನಿಸೋರು. ಮಿಲಿಟರಿಯವರು ತಡೆದು ನಿಲ್ಲಿಸೋರು. ಹೆಲಿಕ್ಯಾಪ್ಟರ್‌ನಿಂದ ಇಳಿದ ಫ್ಲೈಟ್ ಎಂಜನಿಯರು ಬೆರಳು ಮಡಿಸಿ ಸನ್ನೆ ಮಾಡಿ ಎಷ್ಟು ಜನ ಅಂತ ಹೇಳೋನು. ಅಷ್ಟೇ ಜನರನ್ನ ಎಣಿಸಿ ಹೆಲಿಕಾಪ್ಟರ್‌ನತ್ತ ಕಳಿಸುತ್ತಿದ್ದವರು ಮೇಜರ್ ಮನೀಷ್. ಮತ್ತೆ ಮೇಲೆದ್ದು ಎರಡು ಬೆಟ್ಟಗಳ ನಡುವಿನ ಸಂದಿಯತ್ತ ಹಾರಿಹೋಗುತ್ತಿದ್ದ ಹೆಲಿಕ್ಯಾಪ್ಟರನ್ನೇ ನೋಡುತ್ತ ಮುಂದಿನ ಟ್ರಿಪ್‌ಗಾದರೂ ತಮ್ಮ ಪಾಳಿ ಬರಬಹುದು ಅಂದುಕೊಳ್ಳುತ್ತ ನಿಟ್ಟುಸಿರಾಗುತ್ತಿದ್ದ ಯಾತ್ರಿಕರು. ಮತ್ತೆ ಅದೇ ಬೆಟ್ಟದ ಸಂದಿಗೆ ಕಣ್ಣು ಕೀಲಿಸಿಕೊಂಡು- ಕಿವಿ ನೆಟ್ಟುಕೊಂಡು ಕುಳಿತಿರಬೇಕು. ಹೆಲಿಕಾಪ್ಟರ್‌ನ ಶಬ್ದವೇ ಅಲ್ಲಿ ರಕ್ಷಣೆಯ ಅಭಯದ ಅಶರೀರವಾಣಿ. ಅದು ಕಂಡರೆ, ಜೀವದ ಆಸೆ ಮತ್ತೆ ಚಿಗುರೊಡೆಯೋದು. ಮೂರೂವರೆ ಸಾವಿರ ಜನರ ಆಸೆ- ನಿರಾಸೆ- ಸುಖ- ದುಃಖಗಳೆಲ್ಲ ಒಂದು ಹಾರಾಡುವ ಯಂತ್ರದ ಮೇಲೆ ಆಧಾರಪಟ್ಟಿದ್ದವು. ಇಲ್ಲೀತನಕ ಬಂದಿರದಿದ್ದರೆ ಉತ್ತರ ಸುನಾಮಿಯ ನಿಜವಾದ ಸಂಕಟಗಳು ಅರ್ಥ ಆಗ್ತಾನೇ ಇರಲಿಲ್ಲ ಅನ್ನಿಸಿದ್ದೇ ಆವಾಗ.
ಬೆಂಗಳೂರಿನಲ್ಲಿ ಕುಳಿತು ಬದರಿನಾಥ- ಕೇದಾರದಲ್ಲಾದ ಅನಾಹುತದ ವರದಿ ನೋಡುತ್ತಿದ್ದವನಿಗೆ ಚಡಪಡಿಕೆ ಆಗುತ್ತಿತ್ತು. ದಮ್ಮಯ್ಯ ಗುಡ್ಡೆ ಹಾಕಿ ಆಫೀಸಿನಲ್ಲಿ ಒಪ್ಪಿಗೆ ಪಡೆದು ಡೆಹ್ರಾಡೂನ್‌ನ ವಿಮಾನ ಹತ್ತಿದವನಿಗೆ ಅಲ್ಲಿ ಹೋಗಿ ಏನು ಮಾಡಬೇಕು ಅನ್ನೋದರ ಕಿಂಚಿತ್ ಕಲ್ಪನೆ ಕೂಡ ಇರಲಿಲ್ಲ. ಹೋಗುವುದು ಖಚಿತವಾದಾಗ ಒಂದು ಸಲ ಇಂಟರ್‌ನೆಟ್‌ನಲ್ಲಿ ನಕಾಶೆ ತೆಗೆದು ಯಾವ್ಯಾವ ಜಾಗ ಎಲ್ಲೆಲ್ಲಿ ಬರ್ತವೆ ಅಂತ ನೋಡಿಕೊಂಡಿದ್ದಷ್ಟೇ. ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿಳಿದು ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ 'ಕೇದಾರನಾಥಕ್ಕೆ ಹೋಗಬೇಕು, ಬರ್ತೀರಾ..?' ಅಂತ ಕೇಳಿದರೆ ಜೋಕು ಕೇಳಿಸಿಕೊಂಡವರು ನಗುವಂತೆ ನಕ್ಕುಬಿಟ್ಟರು ಅಲ್ಲಿನ ಡ್ರೈವರ್‌ಗಳು. 'ಅಲ್ಲಿಗೆ ಟ್ಯಾಕ್ಸಿ ಅಲ್ಲ, ಹೆಲಿಕ್ಯಾಪ್ಟರ್ ಮಾತ್ರ ಹೋಗೋದು' ಅಂದರು. 'ಸರಿ ಹಂಗಾದ್ರೆ, ಹೆಲಿಪ್ಯಾಡ್‌ಗೆ ಕರೆದುಕೊಂಡು ಹೋಗಿ' ಅಂತ ಟ್ಯಾಕ್ಸಿ ಹತ್ತಿದ್ದಾಯಿತು. ಟ್ಯಾಕ್ಸಿ ಡ್ರೈವರ್ ಜೆರಿಲ್ ದಾರಿಯುದ್ದಕ್ಕೂ ಜಲ ಪ್ರಳಯದ ಕಥೆ ಹೇಳುತ್ತಿದ್ದ. ಟಿವಿಯಲ್ಲಿ ಬಿಲ್ಡಿಂಗ್‌ಗಳು ಕುಸಿಯುವ- ಕಾರುಗಳು ಕೊಚ್ಚಿಕೊಂಡು ಹೋಗುವ ದೃಶ್ಯ ನೋಡದವರು, ಅವನು ಹೇಳಿದ್ದೆಲ್ಲವೂ ಸುಳ್ಳು ಅಂದುಕೊಳ್ಳುತ್ತಿದ್ದರೇನೋ.  
ದಾರಿಯಲ್ಲಿ ಒಂದು ಕಡೆ 'ಆಪದಾ ರಾಹತ್ ಶಿಬಿರ್‌' ಅನ್ನೋ ಬ್ಯಾನರ್ ಕಾಣಿಸಿ ಕಾರು ಸೈಡಿಗೆ ತೆಗೆದುಕೊಳ್ಳೋದಕ್ಕೆ ಹೇಳಿದೆ. ಡೆಹ್ರಾಡೂನ್ ಏರ್‌ಪೋರ್ಟ್‌ನ ಇನ್ನೊಂದು ಗೇಟಿಗೆ ತಾಗಿಕೊಂಡೇ ಶುರುವಾಗಿದ್ದ ಪರಿಹಾರ ಶಿಬಿರ ಅದು. ಕಾರಿನಿಂದ ಇಳಿದವರು ಮಾಧ್ಯಮದವರು ಅನ್ನೋದು ಗೊತ್ತಾದ ತಕ್ಷಣ ಕೈಯಲ್ಲಿ ಫೋಟೊಗಳನ್ನ ಹಿಡಿದುಕೊಂಡ ನೂರಾರು ಜನ ಸುತ್ತುವರೆಯೋರು. ಬದರಿನಾಥ- ಕೇದಾರನಾಥಗಳಲ್ಲಿ ನಾಪತ್ತೆಯಾದವರ ಸಂಬಂಧಿಕರವರು. ಅಲ್ಲಿಂದ ಹಾರಿ ಬರುವ ಹೆಲಿಕಾಪ್ಟರ್ ತಮ್ಮವರನ್ನ ಹೊತ್ತು ತರುತ್ತೆ ಅಂದುಕೊಂಡು ಹೆಲಿಪ್ಯಾಡ್‌ನ ಕಬ್ಬಿಣದ ಗೇಟಿನಾಚೆ ನಿಂತಿದಾರೆ. ಪ್ರತಿ ಹೆಲಿಕಾಪ್ಟರ್ ಇಳಿದಾಗಲೂ- ಅದರಲ್ಲಿ ಬಂದವರು ಗೇಟು ತೆರೆದುಕೊಂಡು ಆಚೆ ಬಂದಾಗಲೂ ನಿರೀಕ್ಷೆಯ ಕಣ್ಣುಗಳನ್ನಿಟ್ಟುಕೊಂಡು ಬಂದು ನಿಲ್ಲೋರು. ಕೆಲವರದು ಆನಂದಭಾಷ್ಪ, ಸುರಕ್ಷಿತವಾಗಿ ಬಂದ ತಮ್ಮವರಿಗೆ ಅಪ್ಪುಗೆ, ದೇವರು ದೊಡ್ಡವನು ಅನ್ನೋ ಉದ್ಗಾರ. ಉಳಿದ ಬಹುತೇಕರದು ನಿರಾಸೆಯ ನಿಟ್ಟುಸಿರು. ಅವರನ್ನು ಕರೆ ಕರೆದು ಊಟ- ತಿಂಡಿ- ಚಹ- ಬಿಸ್ಕೀಟು ಕೊಡುವ ಸ್ವಯಂಸೇವಕರಿಗೆ ಅವರದೇ ಧ್ಯಾನ.
ಕಾಯುತ್ತಿರುವ ಬಹುತೇಕರ ಸಂಬಂಧಿಕರು ಅಲ್ಲಿ ಜೀವಂತ ಸಮಾಧಿಯಾಗಿದ್ದಾರೆ, ವೇಟ್ ಮಾಡೋದು ವೇಸ್ಟು ಅಂತ ತಮ್ಮತಮ್ಮಲ್ಲೇ ಮಾತಾಡಿಕೊಳ್ಳೋ ಇತರರು. ಈ ದೃಶ್ಯ ಅಲ್ಲಿ ಏಳೆಂಟು ದಿನಗಳಿಂದ ನಡೆದಿರಬೇಕು.
ಅರಗಿಸಿಕೊಳ್ಳಲಾರದ ಕಥೆ
ಅಲ್ಲಿ ಸಿಕ್ಕಿಕೊಂಡಿದ್ದ ಯಾತ್ರಿಗಳನ್ನ ಹೊತ್ತು ತರುತ್ತಿದ್ದ ಹೆಲಿಕಾಪ್ಟರ್ ಅವರನ್ನ ಡೆಹ್ರಾಡೂನ್ ಏರ್‌ಪೋರ್ಟ್‌ನಲ್ಲಿ ಇಳಿಸಿ ವಾಪಸ್ ಖಾಲಿ ಹೋಗುತ್ತಿತ್ತು. ಅದರಲ್ಲಿ ನಾವು ಕೇದಾರನಾಥಕ್ಕೆ ಹೋಗಬಹುದಾ ಅಂತ ಕೇಳಿದ್ದಕ್ಕೆ ಗೇಟಿಗೆ ನಿಂತಿದ್ದ ಸಿಆರ್‌ಪಿಎಫ್ ಸೈನಿಕ ಕೆಕ್ಕರುಗಣ್ಣಿನಲ್ಲಿ ನೋಡಿದ. ಸಹಸ್ರಧಾರಾ ಅನ್ನೋ ಸ್ಥಳದಲ್ಲಿರೋ ಇನ್ನೊಂದು ಹೆಲಿಪ್ಯಾಡ್‌ನಲ್ಲಿ ಪ್ರಯತ್ನಿಸಿದರೆ ಏನಾದರೂ ವ್ಯವಸ್ಥೆ ಆಗಬಹುದು ಅನ್ನುವ ಅಮೂಲ್ಯ ಸಲಹೆ ಕೊಟ್ಟವನಿಗೆ ಧನ್ಯವಾದ ಹೇಳಿ ಆ ದಿಕ್ಕಿಗೆ ಹೊರಟಿದ್ದಾಯಿತು. ಹತ್ತು- ಹನ್ನೆರಡು ಹೆಲಿಕಾಪ್ಟರ್‌ಗಳು ನಿಂತಿದ್ದವು ಅಲ್ಲಿ. ಅಲ್ಲೂ ನಾಪತ್ತೆಯಾದವರ ಸಂಬಂಧಿಕರ ಸಂತೆ. ಜೊತೆಗೆ ಪತ್ರಕರ್ತರ ಜಾತ್ರೆ. ಐದು ನಿಮಿಷದಲ್ಲಿ ಒಂದು ಹೆಲಿಕಾಪ್ಟರ್ ಬಂತು. ಅದರ ಪೈಲಟ್ ಹೊರಗೆ ನಿಂತಿದ್ದವರಿಗೆ ಅದೇನೋ ಸನ್ನೆ ಮಾಡಿದ. ತಕ್ಷಣ ವ್ಹೀಲ್‌ಚೇರ್ ಸಮೇತ ವೈದ್ಯ ಸಿಬ್ಬಂದಿ ಅದರ ಕಡೆ ಓಡಿದರು. ಎಂಟು ಜನರ ಜೊತೆ ಕೇದಾರನಾಥದ ಯಾತ್ರೆಗೆ ಬಂದಿದ್ದ ಆತ ಮೂಲತಃ ಮಧ್ಯಪ್ರದೇಶದವನು. ಒಮ್ಮಿಂದೊಮ್ಮೆಲೆ ನೀರು ಹುಚ್ಚೆದ್ದು ನುಗ್ಗಿ ಬಂತು. ಪ್ರಾಣ ಭಯದಲ್ಲಿ ಹತ್ತಿರದ ಬೆಟ್ಟದತ್ತ ಓಡಿದ. ಆ ಭರದಲ್ಲಿ ಬಿದ್ದು ಕಾಲಿನ ಮೂಳೆ ಮುರಿದುಹೋಯಿತು. ಮೂರು ದಿನ ಅದೇ ಸ್ಥಿತಿಯಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡವನನ್ನ ಸೈನಿಕರು ಪತ್ತೆಹಚ್ಚಿ ಹೆಲಿಕಾಪ್ಟರ್‌ನಲ್ಲಿ ಲಿಫ್ಟ್ ಮಾಡಿದ್ದರು. ಆತನ ಜೊತೆ ಬಂದಿದ್ದ ಉಳಿದ ಏಳು ಜನ ಬದುಕಿರುವ ಸಾಧ್ಯತೆ ಕಡಿಮೆ. ಹಾಗೆ ನಿಂತಿದ್ದಾಗಲೇ ಪಕ್ಕದಲ್ಲೊಂದು ಧ್ವನಿ. 'ಯಾವಾಗ ಬಂದ್ರಿ ಸಾರ್..?' ಅಂದವರು ವರಪ್ರಸಾದ್ ರೆಡ್ಡಿ.
ರೆಡ್ಡಿ ಕೆಎಎಸ್ ಅಧಿಕಾರಿ. ಸಕಾಲ್ ಯೋಜನೆಯ ಅಸಿಸ್ಟಂಟ್ ಕಮೀಷನರ್. ಬದರಿ- ಕೇದಾರದಲ್ಲಿ ಸಿಕ್ಕಿಕೊಂಡಿರುವ ಕನ್ನಡಿಗರನ್ನ ವಾಪಸ್ ಕರೆದು ತರೋದಕ್ಕೆ ಕರ್ನಾಟಕ ಸರಕಾರ ಕಳಿಸಿದ್ದ ತಂಡದಲ್ಲಿದ್ದವರು. 'ನಮ್ಮ ಸ್ಟೇಟ್ ಗೌರ್ಮೆಂಟ್ ಕಳಿಸಿರೋ ಹೆಲಿಕ್ಯಾಪ್ಟರ್ ಬರತ್ತೆ. ಹೇಮಂತ್ ನಿಂಬಾಳ್ಕರ್ ಸಾಹೇಬರು ಮನಸು ಮಾಡಿದರೆ ಅದರಲ್ಲಿ ಹೋಗಬಹುದು' ಅಂದರು. ತುಸು ಹೊತ್ತಿನಲ್ಲಿ ನಿಂಬಾಳ್ಕರ್ ಬಂದರು. ಮುಖದ ಮೇಲೆ ಒಂದು ವಾರದ ಗಡ್ಡ, ಕೈಯಲ್ಲಿ ಕನ್ನಡದ ಯಾತ್ರಿಕರ ಲಿಸ್ಟು, ಇನ್ನೂ ಪತ್ತೆಯಾಗದ ಹದಿನಾಲ್ಕು ಯಾತ್ರಿಕರು ಸಿಕ್ಕರಾ ಅನ್ನೋ ಪ್ರಶ್ನೆ.
ಹತಾಶೆಯ ಛಾಯೆ
ನಿರಾಶ್ರಿತರ ಶಿಬಿರದಲ್ಲಿ ಅರೆಬೆಂದ ಅನ್ನದ ಜೊತೆ ಸಪ್ಪೆ ದಾಲ್ ಕಿವುಚಿಕೊಳ್ಳುತ್ತಾ, 'ಕೇದಾರನಾಥಕ್ಕೆ ಹೋಗೋದನ್ನ ಮರೆತುಬಿಡಿ' ಅಂದರು ನಿಂಬಾಳ್ಕರ್. ದೈನೇಸಿ ಪ್ರಾರ್ಥನೆ. 'ಬೇಕಾದರೆ, ಬದರೀನಾಥಕ್ಕೆ ಕಳಿಸಬಲ್ಲೆ. ವಾಪಸ್ ಕರೆಸಿಕೊಳ್ಳೋದು ನನ್ನ ಕೈಯಲ್ಲಿಲ್ಲ' ಅಂದರು. 'ವಾಪಸ್ ಬರೋದನ್ನ ಆಮೇಲೆ ನೋಡೋಣ, ಮೊದಲು ಕಳಿಸಿ ಅಲ್ಲಿಗೆ' ಅನ್ನೋದಕ್ಕೂ- ಗಾಢ ನೀಲಿ ಬಣ್ಣದ ಬೆಲ್ 407 ಹೆಲಿಕಾಪ್ಟರ್ ಬಂದು ಇಳಿಯೋದಕ್ಕೂ ಸರಿ ಹೋಯಿತು. ನಮ್ಮ ರಾಜ್ಯ ಸರಕಾರ ಕನ್ನಡಿಗರನ್ನ ಸುರಕ್ಷಿತವಾಗಿ ಕರೆದುತರೋದಕ್ಕೆ ಕೋಲ್ಕತ್ತಾದ ಪ್ರಯಾಗ್ ಏವಿಯೇಷನ್ ಸಂಸ್ಥೆಯಿಂದ ಬಾಡಿಗೆ ಪಡೆದು ಕಳಿಸಿದ್ದ ಹೆಲಿಕಾಪ್ಟರ್ ಅದು. ಅದರಲ್ಲಿ ನಾನು, ನನ್ನ ಕ್ಯಾಮೆರಾಮ್ಯಾನ್ ಕೈಲಾಷ್ ಮತ್ತು ಡೆಕ್ಕನ್ ಕ್ರಾನಿಕಲ್ ವರದಿಗಾರ ಅಮಿತ್‌ನನ್ನ ಕೂರಿಸಿ ಕೈಬೀಸಿದರು ನಿಂಬಾಳ್ಕರ್. ಹಾರುತ್ತಿದ್ದ ಹೆಲಿಕಾಪ್ಟರ್‌ನಿಂದ ಕೆಳಗೆ ನೋಡಿದರೆ ಹುಚ್ಚೆದ್ದು ಹರಿಯುತ್ತಿದ್ದ ಗಂಗಾನದಿ ಮಾಡಿದ್ದ ಅನಾಹುತ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಉತ್ತರ ಕಾಶಿಯ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪ್‌ನಲ್ಲಿ ಒಂದು ಸ್ಟಾಪ್. ನಂತರ ಜೋಷಿ ಮಠದ ಆಮರ್ ಹೆಲಿಪ್ಯಾಡ್ಗೆ ಹೋಗಿ ಇಳಿದಾಗ ಸಂಜೆ ಏಳುಗಂಟೆ. ಅಲ್ಲಿ ಎದುರುಗೊಂಡವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ನವೀನ್‌ರಾಜ್ ಸಿಂಗ್.
ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ಬದರೀನಾಥದಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದ ಉತ್ತರ ಕರ್ನಾಟಕದ ಹನ್ನೆರಡು ಜನ ಯಾತ್ರಿಕರು ಘರವಾಲ್ ಸ್ಕೌಟ್ಸ್‌ನ ಬ್ಯಾರಕ್ಕೊಂದರಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಒಬ್ಬೊಬ್ಬರದೂ ಒಂದೊಂದು ಕಥೆ. ಸಾಯೋದಕ್ಕೂ ಮೊದಲು ಚಾರ್‌ಧಾಮ್ ಯಾತ್ರೆ ಮಾಡಬೇಕಂತೆ. ಇವರ ಯಾತ್ರೆ ಸಾವನ್ನ ಸವರಿ ಬಂದಿತ್ತು. ಸಂತೋಷ್ ಲಾಡ್ ಬರದಿದ್ದರೆ ಸತ್ತೇ ಹೋಗ್ತಿದ್ವಿ ಅಂದರು.
ಮಾರನೇ ದಿನ ಸೈನ್ಯದ ಎಂ.ಐ. 17 ಹೆಲಿಕಾಪ್ಟರ್ ನಮ್ಮನ್ನ ಕರೆದೊಯ್ದು ಬದರೀನಾಥ್ ಹೆಲಿಪ್ಯಾಡ್ನಲ್ಲಿ ಇಳಿಸಿತ್ತು. ಅಲ್ಲಿ ಕಾಣಿಸಿದ್ದೇ 2012 ಹಾಲಿವುಡ್ ಸಿನೆಮಾದಂಥದ್ದೆ ಕ್ಲೈಮ್ಯಾಕ್ಸ್ ಸೀನ್. ಬದರೀನಾಥ್ ಅನ್ನೋ ಪುಣ್ಯ ಕ್ಷೇತ್ರದ ತುಂಬ ಹತಾಶೆಯ ಛಾಯೆ. ವೃದ್ಧರು ನರಳುತ್ತಿದ್ದರು, ಮಕ್ಕಳು ಅಳುತ್ತಿದ್ದವು, ಉಳಿದವರೆಲ್ಲ ಆ ಕೊರೆವ ಚಳಿಯಲ್ಲಿ ನಡುಗುತ್ತಿದ್ದರು. ಅವರೆಲ್ಲರ ಪಾಲಿನ ಏಕೈಕ ಭರವಸೆ ಹೆಲಿಕಾಪ್ಟರು. ಅಲ್ಲೇ ಸಿಕ್ಕ ಕನ್ನಡಿಗರನ್ನ, ಸಂತೋಷ್ ಲಾಡ್ ಎಲ್ಲಿ ಅಂತ ವಿಚಾರಿಸಿದ್ವಿ. ಅಲ್ಲಿಂದ ಒಂದೂವರೆ ಕಿಲೋಮೀಟರ್ ದೂರದ ಇನ್ನೊಂದು ಹೆಲಿಪ್ಯಾಡ್ನತ್ತ ಕೈ ತೋರಿಸಿದರು. ಅಲ್ಲಿಗೆ ಹೋದರೆ ಇನ್ನೊಂದು ಸಂತ್ರಸ್ತರ ದಂಡು ಬೇರೆ ಬೇರೆ ಸರಕಾರಗಳು ಕಳಿಸಿದ್ದ ನಾಗರಿಕ ಹೆಲಿಕಾಪ್ಟರ್‌ಗಳತ್ತ ಆಸೆಗಣ್ಣಿನಿಂದ ನೋಡುತ್ತ ಕುಳಿತಿತ್ತು. ನಾಲ್ಕು ಅಥವಾ ಐದು ಜನರನ್ನ ಮಾತ್ರ ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್‌ಗಳವು. ಹೆಚ್ಚೂಕಡಿಮೆ ಹತ್ತು ನಿಮಿಷಕ್ಕೊಂದರಂತೆ ಬರುತ್ತಿದ್ದ ಅವುಗಳಲ್ಲಿ ನಿತ್ರಾಣಗೊಂಡವರನ್ನ ಹತ್ತಿಸಿ ಕಳಿಸಲು ಹಿರಿಯ ಐಎಎಸ್ ಅಧಿಕಾರಿ ಪಂಕಜ್‌ಕುಮಾರ್ ಪಾಂಡೆ- ಸಚಿವ ಸಂತೋಷ್ ಲಾಡ್ ಹರಸಾಹಸ ಪಡುತ್ತಿದ್ದರು. ಎಂಟು- ಹತ್ತು ದಿನಗಳಿಂದ ತಮ್ಮ ಸರದಿಗಾಗಿ ಕಾಯ್ದು- ಕಾಯ್ದು ಜನರ ಸಹನೆ ಸತ್ತು ಹೋಗಿತ್ತು. ಬಾಯಿಗೆ ಬಂದಂತೆ ಬೈಯ್ತಿದ್ದರು. ಎಂಟು ದಿನ ಹಿಮಾಲಯದ ಮಧ್ಯದ ಬದುಕು- ಜನರ ಬವಣೆ- ಪ್ರಕೃತಿಯೆದುರು ನಮ್ಮ ಹಣ, ಅಧಿಕಾರಗಳೆಲ್ಲ ಏನೂ ಅಲ್ಲ ಅನ್ನೋ ಸತ್ಯದರ್ಶನ ಲಾಡ್ ಅವರನ್ನ ತುಂಬ ಬದಲಿಸಿವೆ ಅನ್ನಿಸಿತು.
ಪೈದಲ್ ಜಾನಾ
'ಕೇದಾರನಾಥ್‌ಗೆ ಹೆಂಗೆ ಹೋಗಬೇಕು..?' ಕನಿಷ್ಠ ಇಪ್ಪತ್ತು ಜನರೆದುರು ಕೇಳಿದ್ದ ಪ್ರಶ್ನೆಯನ್ನೇ ಲಾಡ್ ಮತ್ತು ಅಧಿಕಾರಿಗಳನ್ನೂ ಕೇಳಿದ್ದೆ. ಅಲ್ಲಿಗೆ ಹೋಗುವ ಪ್ರಯತ್ನಕ್ಕೆ ಒಬ್ಬೊಬ್ಬರು ಕೊಟ್ಟ ಉತ್ತರದಿಂದಲೂ ಹಿನ್ನಡೆಯಾಗ್ತಿತ್ತು. ತುಂಬ ಜನ ಅಂದುಕೊಂಡಂತೆ ನದಿಯಲ್ಲಿ ಹೆಣಗಳು, ವಾಹನಗಳು, ಮನೆಗಳು ತೇಲುವಂಥದ್ದೇನೂ ಇರಲಿಲ್ಲ. ಅಲಕಾನಂದೆ ಹಿಂದೆಂದಿಗಿಂತಲೂ ಹೆಚ್ಚು ರಭಸದಿಂದ ಹರಿಯುತ್ತಿದ್ದದ್ದು ಹೌದು.
ಮಾರನೇ ದಿನ ಪೂರ್ತಿ ಬದರಿನಾಥ್ ಸುತ್ತಿದ್ದಾಯಿತು. ಎಲ್ಲಿ ಹೋದರೂ ವಿಷಾದ. ಯಾತ್ರಿಕರಲ್ಲಿ, ವ್ಯಾಪಾರಿಗಳಲ್ಲಿ, ಸಾಧು- ಸಂತರಲ್ಲಿ, ಪೂಜಾರಿಗಳಲ್ಲಿ, ಎಲ್ಲರಲ್ಲೂ. ಮುಂಬೈನ ಅಕ್ಕ- ತಂಗಿಯರಿಬ್ಬರೂ ತಮ್ಮ ಗಂಡಂದಿರ ಜೊತೆ ಯಾತ್ರೆಗೆ ಬಂದಿದ್ದರು. ಬಂದ ದಿನವೇ ಪ್ರವಾಹ. ನಂತರ ಬೆಚ್ಚಗಿನ ಒಂದು ಜಾಗ ಸಿಗಲಿಲ್ಲ. ತಂಗಿ ಚಳಿಗಿಳಿ ತಾಳಿಕೊಳ್ಳೋದಕ್ಕಾಗದೇ ಸತ್ತುಹೋದಳು. ಅಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು. ತಂಗಿಯ ಗಂಡ ಅನುಕಂಪದ ಆಧಾರದ ಮೇಲೆ ಹೆಲಿಕಾಪ್ಟರ್‌ನಲ್ಲಿ ಸೀಟು ಪಡೆದು ಮುಂಬೈಗೆ ಹೋದ. ಅಕ್ಕ ಮತ್ತು ಅಕ್ಕನ ಗಂಡ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅವರಿಬ್ಬರೂ ಹೇಳುತ್ತಿದ್ದ ಸಂಕಟದ ಕಥೆ ಕಣ್ಣೀರು ತರಿಸಿತ್ತು. ಅದೇ ಹೊತ್ತಿಗೆ ಬದರೀನಾಥ್ ತುಂಬ 'ಪೈದಲ್ ಜಾನಾ' ಅನ್ನೋ ಮಾತು ಕೇಳಿಬರೋದಕ್ಕೆ ಶುರುವಾಗಿತ್ತು.
ಒಂದು ಅಂದಾಜಿನ ಪ್ರಕಾರ ಐದು ಸಾವಿರ ಯಾತ್ರಿಕರಿದ್ದದ್ದು ಬದರೀನಾಥದಲ್ಲಿ. ಅವರನ್ನೆಲ್ಲ ಹೆಲಿಕಾಪ್ಟರ್ ಮೂಲಕ ಶಿಫ್ಟ್ ಮಾಡೋದಕ್ಕೆ ನಿಂತರೆ ಕನಿಷ್ಠ ಹದಿನೈದು ದಿನದ ಕೆಲಸ. ಅದಕ್ಕೇ ಜೋಶಿ ಮಠಕ್ಕೆ ತಲುಪಿಕೊಳ್ಳೋದಕ್ಕೆ ಸೈನ್ಯದವರು ಒಂದು ಕಾಲು ದಾರಿ ಮಾಡಿದ್ದರು. 'ಮೈಯಲ್ಲಿ ಕಸುವಿರೋ ಗಂಡಸರು ಆ ಕಾಲು ದಾರಿಯಲ್ಲಿ ಹೋಗಿ' ಅಂದರು.  ಸಂಜೆ ಹೊತ್ತಿಗೆ ಕ್ಯಾಮೆರಾಮ್ಯಾನ್ ಕೈಲಾಷ್‌ನನ್ನ ಹೆಲಿಕಾಪ್ಟರ್ ಹತ್ತಿಸಿ ನಾನು ಮಾರನೇ ದಿನ ನಡೆದು ಹೋಗಲು ತಯಾರಾದೆ.  ನಾನು ಬೆಳಗಿನ ಆರೂವರೆಗೆಲ್ಲ ತಯಾರಾಗಿ ಹೋಗಿದ್ದೆ. ನಡೆದುಕೊಂಡೇ ಸುರಕ್ಷಿತ ಜಾಗ ತಲುಪಲು ಬಂದವರ ಪೈಕಿ ಯಾತ್ರಿಕರು ಕಡಿಮೆ- ಸ್ಥಳೀಯರೇ ಜಾಸ್ತಿ. ನಡೆದುಕೊಂಡು ಹೋಗಲು ಕೂಡ ಸೈನ್ಯದ ಅನುಮತಿ ಬೇಕು. ವೃದ್ಧರು- ಅನಾರೋಗ್ಯದವರು- ಬೊಜ್ಜಿನ ಮೈಯ್ಯವರನ್ನೆಲ್ಲ ಬಿಡೋದಿಲ್ಲ.
ಅಂತೂ ಇಂತೂ ಒಂದು ತಂಡ ತಯಾರಾದ ಮೇಲೆ ಸೈನ್ಯದ ಆಂಬ್ಯುಲೆನ್ಸ್‌ನಲ್ಲಿ ನಮ್ಮನ್ನೆಲ್ಲ ಹತ್ತಿಸಲಾಯಿತು. ಬದರಿನಾಥದಿಂದ ಹೊರಟು ಹಾವು ಹೊರಳಿನ ಚಿಂದಿಯೆದ್ದು ಹೋದ ರಸ್ತೆ, ರಸ್ತೆಯ ಮಧ್ಯದಲ್ಲೇ ಹರಿಯುವ ತೊರೆಗಳನ್ನೆಲ್ಲ ದಾಟಿ ಹನುಮಾನ್ ಜೆಟ್ಟಿ ಅನ್ನೋ ಸಣ್ಣ ಊರು ತಡಾಯ್ದು ಬೆನಾಕುಲಿ ಬೆಂಡ್ ಅನ್ನೋ ಜಾಗಕ್ಕೆ ತಂದು ಇಳಿಸಿತು ಆಂಬ್ಯುಲೆನ್ಸ್. ಅಲ್ಲೇ ನಿಂತಿದ್ದ ಘರವಾಲ್ ಸ್ಕೌಟ್ಸ್ ಸೈನಿಕರು ಈ ಕಡೆ ಹೋಗಿ ಅಂತ ಕಾಡಿನ ಕಡೆ ಕೈ ತೋರಿಸಿದರು. ಎಲ್ಲಿತ್ತು ಅಲ್ಲಿ ರಸ್ತೆ... ಮೊದಲು ಪ್ರಪಾತ ಇಳೀಬೇಕು. ಮೇಲೆ ಜಿಟಿಜಿಟಿ ಮಳೆ. ಸ್ವಲ್ಪ ಎಚ್ಚರ ತಪ್ಪಿದರೂ ಸರಕ್ಕನೇ ಜಾರುವ ಕಾಲು. ಮರದಿಂದ ಮರಕ್ಕೆ- ಬಂಡೆಯಿಂದ ಬಂಡೆಗೆ ಕಟ್ಟಿದ ಹಗ್ಗ ಹಿಡಿದುಕೊಂಡು ಹೆಜ್ಜೆ ಇಡ್ತಾ ಹೋಗಬೇಕು. ಅಲ್ಲಲ್ಲಿ ನಿಂತಿರುವ ಸೈನಿಕರು ಕೈ ಹಿಡಿದು ದಾಟಿಸ್ತಾರೆ. ಸ್ವಲ್ಪ ಹೊತ್ತು ಕೂರಿಸಿ ಕುಡಿಯಲು ನೀರು ಕೊಡ್ತಾರೆ. ಒಂದಷ್ಟು ದೂರ ಸಾಗಿದ ಮೇಲೆ ಜೊತೆಗೆ ತಂದ ಎಲ್ಲವೂ ಭಾರ ಅನ್ನಿಸೋದಕ್ಕೆ ಶುರುವಾಗತ್ತೆ. ಇನ್ನೇನು ಇಳಿಯುವುದು ಮುಗಿಯಿತು ಅನ್ನುವಾಗ ಧುತ್ತನೆ ಎದುರಾಗುವ ಗುಡ್ಡ. 'ಧೀರೇಸೆ ಆ ಜಾಯಿಯೆ' ಅಂತ ಕೈಚಾಚಿ ನಿಂತಿರೋ ಸೈನಿಕ.
ಅಂಥದ್ದೊಂದು ಮ್ಲಾನ ಮನಸ್ಥಿತಿಯಲ್ಲಿ ಗುಡ್ಡ ಇಳಿಯುತ್ತಿದ್ದಾಗಲೇ 'ಪಾನಿ ಪಿಲಾನಾ ಉನ್ಕೋ' ಅನ್ನೋ ಧ್ವನಿ ಕೇಳಿಸಿತ್ತು. ಎದುರಿಗೊಂದು ಹೆಲಿಪ್ಯಾಡು. ಮೈದುಂಬಿ ಬಂದ ಅಲಕಾನಂದಾ ನದಿ ಅಲ್ಲಿ ಒಂದಿಡೀ ಜಲ ವಿದ್ಯುತ್ ಕೇಂದ್ರವನ್ನ- ಅದರ ಪಕ್ಕದಲ್ಲಿದ್ದ ಟಾರು ರಸ್ತೆಯನ್ನ- ಲಾರಿಗಳು ದಾಟಿಹೋಗುತ್ತಿದ್ದ ಕಬ್ಬಿಣದ ಸೇತುವೆಯನ್ನ ಸತ್ಯಾನಾಶ ಮಾಡಿದೆ. ಸ್ವಲ್ಪ ಎತ್ತರದಲ್ಲಿರುವ ಜೆ.ಪಿ ಗ್ರೂಪ್‌ನವರ ಹೆಲಿಪ್ಯಾಡ್ ಒಂದೇ ಉಳಿದುಕೊಂಡಿರೋದು. ಅದರ ಒಂದು ಮೂಲೆಯಲ್ಲಿ ನಡೆದು ಬಂದು ಸುಸ್ತಾಗಿ ಕುಳಿತಿರೋ ಜನ. ಅವರಿಗೆ ಚಿಕಿತ್ಸೆ ಕೊಡ್ತಿರೋ ಆಮರ್ ಮೆಡಿಕಲ್ ಕಾರ್ಪ್ಸ್‌ನ ವೈದ್ಯರು. ಬಂದವರಿಗೆಲ್ಲ ನೀರು- ಬಿಸ್ಕತ್ತು ಕೊಡುತ್ತಿದ್ದ ಘರವಾಲ್ ಸ್ಕೌಟ್ಸ್‌ನ ಸೈನಿಕರು. ನಡೆದು ಬಂದವರನ್ನ ಅಲಕಾನಂದಾ ನದಿ ದಾಟಿಸುವ ಜವಾಬ್ದಾರಿ ಘರವಾಲ್ ಸ್ಕೌಟ್ಸ್‌ವರದು. ಅದರ ಕರ್ನಲ್ ಲೋಕೇಶ್ ಕುಮಾರ್. ಅವರಿಗೆ ಒಂದು ಬಾಟಲಿ ನೀರಿನಿಂದ ಹಿಡಿದು- ಮಾತ್ರೆಯ ತನಕ ಏನೇ ಬಂದರೂ ಹೆಲಿಕಾಪ್ಟರ್‌ನಲ್ಲೇ ಬರಬೇಕು.
ಅಲ್ಲಿ ತುಸು ಹೊತ್ತು ವಿಶ್ರಾಂತಿಯ ನಂತರ ಎದ್ದು ಹೊರಟವನ ಜೊತೆ ಕರ್ನಲ್ ಲೋಕೇಶ್‌ಕುಮಾರ್ ಹೆಜ್ಜೆ ಹಾಕಿದರು. ಬಲಗಡೆ ಧುಮ್ಮಿಕ್ಕಿ ಹರಿಯುವ ಅಲಕಾನಂದಾ- ಎಡಗಡೆ ಇನ್ನೇನು ಕುಸಿದು ಬೀಳತ್ತೆ ಅನ್ನುವಂತಿರೋ ಗುಡ್ಡ. ಆ ಎರಡು ಕಿಲೋಮೀಟರ್ ದಾರಿ ಮನುಷ್ಯನ ಧೈರ್ಯದ ಪರೀಕ್ಷೆ ಮಾಡತ್ತೆ. ಅದು ಮುಗಿಯಿತು ಅನ್ನುವಾಗ, ನದಿ ಎರಡು ಬಂಡೆಗಳ ಮಧ್ಯದ ಇಕ್ಕಟ್ಟಿನಲ್ಲಿ ಹರಿಯುವ ಜಾಗ ಗುರುತಿಸಿ ಒಂದೇ ದಿನದಲ್ಲಿ ಕಬ್ಬಿಣದ ತಾತ್ಕಾಲಿಕ ಸೇತುವೆ ಮಾಡಿದಾರೆ ಸೈನ್ಯದವರು.
ಹಳ್ಳಿಯೇ ನಾಪತ್ತೆ
ಸೇತುವೆ ದಾಟಿ ಮುಂದೆ ಹೋದರೆ, ಕೈ ಹಿಡಿದು ಬಂಡೆ ಮೇಲೆ ಹತ್ತಿಸಿಕೊಳ್ಳೋದಕ್ಕೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್‌ನ ಯೋಧರು ನಿಂತಿದಾರೆ. ಅಲ್ಲಿ ಕೊಚ್ಚಿಕೊಂಡು ಹೋದ ರಸ್ತೆಯ ಒಂದು ತುದಿಯ ಮೇಲೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಅದನ್ನ ದಾಟಿಕೊಂಡು ಮುಂದೆ ಹೋದರೆ ಸಿಗೋದು ಲಾಂಬಾಗಢ್. ಹದಿನೈದು ದಿನದ ಮುಂಚೆ ಇತ್ತು ಲಾಂಬಾಗಢ್. ಈಗ ಇಲ್ಲ. ಇಲ್ಲ, ಅಷ್ಟೇ. ಅದು ಕೂಡ ಒಂದು ತೀರ್ಥಕ್ಷೇತ್ರ. ಊರ ಒಂದು ಬದಿಯಲ್ಲಿ ಶಿವಾಲಯ. ಅದರಾಚೆ ಅಲಕಾನಂದಾ ನದಿ. ಈಚೆ ಮಾರ್ಕೆಟ್ಟು - ಯಾತ್ರಿಗಳ ವಾಹನಗಳಿಗೆ ಪಾರ್ಕಿಂಗು- ಹೋಟೆಲ್, ಲಾಡ್ಜುಗಳು, ಕೊನೆಯಲ್ಲಿ ಸ್ಥಳೀಯರ ಮನೆಗಳಿದ್ದವು. ರಾತ್ರಿ ಹನ್ನೊಂದು ಗಂಟೆಗೆ ಉಕ್ಕಿ ಬಂದ ನದಿ ಏಳೆಂಟು ಮನೆಗಳನ್ನ ಬಿಟ್ಟು ಉಳಿದದ್ದನ್ನೆಲ್ಲ ತನ್ನ ಹೊಟ್ಟೆಯೊಳಗೆ ಹಾಕಿಕೊಂಡು ಮುಂದೆ ಹೋಯಿತು. ಶಿವಾಲಯದೊಳಕ್ಕೆ ಯಮಗಾತ್ರದ ಬಂಡೆಗಳು ನುಗ್ಗಿದವು. ಆ ಭಾರಕ್ಕೆ ದೇವಸ್ಥಾನ ಕೊಚ್ಚಿಕೊಂಡು ಹೋಗಲಿಲ್ಲ. ಅದನ್ನ ಶಿವನ ಲೀಲೆ ಅಂತ ಈಗ ಕೊಂಡಾಡಲಾಗ್ತಿದೆ. ಈಗ ಅಲಕಾನಂದಾ ಶಿವಾಲಯದ ಬಲಬದಿಗೆ ಹರೀತಿದೆ. ಊರಿದ್ದ ಜಾಗದಲ್ಲಿ ಕಣಿವೆ ಇದೆ. ನಾಪತ್ತೆಯಾದ ಯಾತ್ರಿಕರ ಲೆಕ್ಕ ಹಾಕೋದರಲ್ಲೇ ಬಿಜಿಯಾಗಿರೋ ಸರಕಾರಕ್ಕೆ ಈ ಲಾಂಬಾಗಢದ ನಿವಾಸಿಗಳೆಲ್ಲ ಎಲ್ಲಿ ಹೋದರು ಅಂತ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ.
ಮುಂದೆ ಹೋದರೆ, ಪಢಗಾಸಿ ಅನ್ನೋ ಸಣ್ಣ ಹಳ್ಳಿ ಸಿಗತ್ತೆ. ಜನ ಹಿತ್ತಲಲ್ಲಿ ಸೇಬು ಬೆಳೀತಾರೆ. ಮೇಕೆ- ಕುರಿ ಸಾಕಿಕೊಂಡಿದಾರೆ. ಜೊತೆಗೆ ಒಂದಷ್ಟು ಕೃಷಿ. ಪಢಗಾಸಿ ಮುಗೀತು ಅನ್ನುತ್ತಿದ್ದಂತೆ ಕಡಿದಾದ ಬೆಟ್ಟ. ಅದನ್ನ ಇಳಿದ ತಕ್ಷಣ ರಸ್ತೆ. ಅಲ್ಲಿ ಗಾಡಿ.. ಅಂತೂ ಮುಗೀತು ಅಂತ ಗಾಡಿ ಹತ್ತಿ ಸುಧಾರಿಸಿಕೊಳ್ಳಬೇಕು. ಬಿನಾಚೆಟ್ಟಿ ಅನ್ನೋ ಅಣ್ಣ ಹಳ್ಳಿ ದಾಟಿಸಿಕೊಂಡು ಮುಂದೆ ಕರೆದುಕೊಂಡು ಹೋಗುವ ಡ್ರೈವರು ರಸ್ತೆಗೆ ಬಂದು ಬಿದ್ದಿರುವ ದೊಡ್ಡ ಬಂಡೆಯೆದುರಿಗೆ ಗಾಡಿ ನಿಲ್ಲಿಸಿ ಬಲಗಡೆಯ ಬೆಟ್ಟದ ಕಡೆ ಕೈ ತೋರಿಸ್ತಾನೆ. ಅಲ್ಲಿಂದ ಮತ್ತೆ ಬೆಟ್ಟ ಹತ್ತೋದಕ್ಕೆ ಶುರುಮಾಡಬೇಕು. ಅಲ್ಲಿ, ಸಿಖ್ ರೆಜಿಮೆಂಟ್‌ನ ಸೈನಿಕರು ನಿಂತಿರ್ತಾರೆ. ಯಾತ್ರಿಕರ ಮಕ್ಕಳನ್ನ ಹೆಗಲ ಮೇಲೆ ಹೊತ್ತುಕೊಂಡು- ಅವರ ಲಗೇಜುಗಳನ್ನ ಎರಡೂ ಕೈಯಲ್ಲಿ ಹಿಡಿದುಕೊಂಡು 'ಆಪ್ ಆರಾಮ್ಸೆ ಆಯಿಯೆ' ಅಂತ ಮುಂದೆ ಹೋಗುವ ಯೋಧ ಯಾವ ಜನ್ಮದ ಬಂಧುವೋ.. ಅಂತೂ ಇಂತೂ ಎರಡನೇ ಸುತ್ತಿನ ಬೆಟ್ಟದ ದಾರಿ ಮುಗಿದ ನಂತರ ಮತ್ತೆ ವಾಹನ. ಅದು, ಗೋವಿಂದ ಘಾಟ್ ಅನ್ನೋ ಪಟ್ಟಣ ದಾಟಿಸಿ ಯಥಾ ಪ್ರಕಾರ ಕೊಚ್ಚಿಹೋದ ರಸ್ತೆಯ ತನಕ ತಂದು ಬಿಡತ್ತೆ. ಮತ್ತೆ ಬೆಟ್ಟ ಹತ್ತಬೇಕು- ಬೆಟ್ಟ ಇಳೀಬೇಕು. ಕೊನೆಯಲ್ಲಿ ಸೈನ್ಯದ ತಾತ್ಕಾಲಿಕ ಆಸ್ಪತ್ರೆ. ಅಲ್ಲಿಂದ ಜೋಶಿ ಮಠಕ್ಕೆ ಹದಿಮೂರು ಕಿಲೋಮೀಟರ್ ದೂರ. ಪರಿಹಾರ ಕಾರ್ಯಾಚರಣೆಯ ಬಸ್ಸು ಕರೆದುಕೊಂಡು ಹೋಗಿ ತಲುಪಿಸುತ್ತೆ. ಹೆಲಿಕಾಪ್ಟರ್‌ನಲ್ಲಿ ಅಬ್ಬಬ್ಬಾ ಅಂದರೆ ಹನ್ನೊಂದು ನಿಮಿಷದ ಹಾದಿ ಬದರೀನಾಥದಿಂದ ಜೋಶಿ ಮಠಕ್ಕೆ. ಅರ್ಧ ನಡೆದುಕೊಂಡು- ಅರ್ಧ ವಾಹನದಲ್ಲಿ ಬಂದರೆ ಎಂಟು ತಾಸು.
ಕ್ಯಾಮೆರಾಮ್ಯಾನ್ ಕೈಲಾಷ್ ನನಗಾಗಿ ಇಪ್ಪತ್ತನಾಲ್ಕು ತಾಸುಗಳಿಂದ ದಾರಿ ಕಾಯ್ತಿದ್ದ. ಈ ಕಡೆ ಕಟ್ಟಕಡೆಯ ಕನ್ನಡಿಗನನ್ನ ಕರೆದುಕೊಂಡು ಮಧ್ಯಾಹ್ನ ಬದರೀನಾಥದಿಂದ ಹೊರಟಿದ್ದ ಸಂತೋಷ್ ಲಾಡ್ ಮತ್ತು ತಂಡ ಹೆಲಿಕಾಪ್ಟರ್‌ನಲ್ಲೇ ಡೆಹರಾಡೂನ್‌ಗೆ ಹೊರಟಿದೆ ಅನ್ನೋದು ಗೊತ್ತಾಯಿತು. ಲಗೇಜ್ ಸಮೇತ ಚಮೋಲಿಯ ಬಸ್ ಹತ್ತಿದ್ವಿ. ಬೆಳಗ್ಗೆದ್ದರೆ ಕೇದಾರನಾಥಕ್ಕೆ 86 ಕಿ.ಮಿ. ಅನ್ನೋ ಬೋರ್ಡು. ಕಾಡಿನ ಮಧ್ಯದ ಕಾಲು ದಾರಿಯಲ್ಲಿ ಹೋದರೆ ಕಡಿಮೆ ಆದೀತು. ದಾರಿ ತೋರಿಸೋರಿಲ್ಲ. ಆವತ್ತು ರಾತ್ರಿ ಚಮೋಲಿಯಲ್ಲಿ ವಸತಿ. ಬೆಳಗ್ಗೆದ್ದು ಲಾಡ್ಜಿನ ಮೆಟ್ಟಿಲು ಇಳಿಯೋದಕ್ಕೆ ಹೊರಟಾಗಲೇ ಗೊತ್ತಾಗಿದ್ದು ಕಾಲು ಮಾತು ಕೇಳ್ತಿಲ್ಲ ಅನ್ನೋದು. ಚಮೋಲಿಯಿಂದ ಡೆಹ್ರಾಡೂನ್‌ಗೆ ಇರೋದು ಇನ್ನೂರ ಆರು ಕಿಲೋಮೀಟರ್ ಅಂತರ. ಆದರೆ, ಹತ್ತು ತಾಸು ಬೇಕು. ಒಂದು ರಾತ್ರಿ ಡೆಹ್ರಾಡೂನ್‌ನಲ್ಲಿ ಕಳೆದು ಬೆಳಗ್ಗೆ ವಿಮಾನ ಹತ್ತಿದರೆ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹೊರಗೆ ಬರ್ತಿದ್ದಂತೆ ಮೊಬೈಲ್‌ನ ಮೆಸೇಜ್ ಟೋನ್ ಕೇಳಿಸಿತು. 'ಹೋಪ್ ಯು ರೀಚ್‌ಡ್ ಸೇಫ್‌ಲಿ- ರಿಗಾರ್ಡ್ಸ್ ಕರ್ನಲ್ ಲೋಕೇಶ್‌' ಅನ್ನೋ ಮೆಸೇಜ್. ನಾನು ಮನೆ ಸೇರಿಕೊಂಡು ಬೆಚ್ಚಗಾದೆ. ಅವರು...

ಹೆಲಿಕಾಫ್ಟರ್ ಎಂಬ ಆಪದ್ಬಾಂಧವ
ಜೋಶಿ ಮಠದ ಮಿಲಿಟರಿ ಹೆಲಿಪ್ಯಾಡ್‌ನಲ್ಲಿ ಕುಳಿತಿದ್ವಿ. ಒಂದು ಮೂಲೆಯಲ್ಲಿ ಟೆಂಟ್‌ಗಳನ್ನ ಹಾಕಲಾಗಿತ್ತು. ಪಕ್ಕದಲ್ಲಿ ಚೀತಾ ಅಂತ ಕರೆಸಿಕೊಳ್ಳೋ 2 ಸೀಟಿನ ಸಣ್ಣ ಹೆಲಿಕಾಪ್ಟರ್‌ಗಳು 4 ನಿಂತಿದ್ದವು. ದೂರದಲ್ಲಿ ಹೆಲಿಕಾಪ್ಟರ್ ಶಬ್ದ ಕೇಳಿದ್ದೇ ತಡ, ಸೈನಿಕರು ದಡಬಡಾ ಅಂತ ಓಡಾಡತೊಡಗಿದರು. ಏಳೆಂಟು ಜನ ಸೇರಿ ಒಂದೊಂದು ಟೆಂಟ್‌ನ ಭದ್ರವಾಗಿ ಹಿಡಿದುಕೊಂಡರೆ, ಒಂದೊಂದು ಚೀತಾದ ಪ್ರೊಫೆಲ್ಲರನ್ನೂ ನಾಲ್ಕು ಸೈನಿಕರು ಹಿಡಿದುಕೊಂಡರು. ಯಾಕೆ ಅನ್ನೋದು ಆಮೇಲೆ ಗೊತ್ತಾಯ್ತು. ಅಲ್ಲಿ ಬಂದು ಇಳಿದದ್ದು ಎಂ.ಐ 17.
ಎಂ.ಐ 17 ಇಲ್ಲದಿದ್ದರೆ ಈ ಪರಿಹಾರ ಕಾರ್ಯಾಚರಣೆ ತಿಂಗಳಾದರೂ ಮುಗೀತಿರಲಿಲ್ಲ. ರಷ್ಯಾ ನಿರ್ಮಿತ ಮಿನಿ ಲಾರಿ ಸೈಜಿನ ಹೆಲಿಕಾಪ್ಟರ್ ಅದು. ಏಳು ಟನ್ ತೂಕ ಹೊತ್ತು ಹಾರಬಲ್ಲದು. ಇಪ್ಪತ್ತೈದರಿಂದ ಮೂವತ್ತು ಜನ ಕುಳಿತರೂ ಕೆಮ್ಮಂಗಿಲ್ಲ.
'ಒಂದು ಬಕೆಟ್ ನೀರು ಕೊಟ್ಟು, ಅದನ್ನ ಇನ್ನೊಂದು ಬಕೆಟ್‌ಗೆ ಉಪ್ಪಿಟ್ಟು ತಿನ್ನೋ ಚಮಚದಿಂದ ಹಾಕಿ ಅಂದ್ಹಂಗೆ ಈ ವ್ಯವಹಾರ' ಮಧ್ಯಪ್ರದೇಶದ ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿಷೇಕ್ ಶರ್ಮಾ ಹೇಳಿದರು. 407ನಂಥ ಸಣ್ಣ 6 ಹೆಲಿಕಾಪ್ಟರ್‌ಗಳು ಮಾಡುವ ಕೆಲಸವನ್ನ ಒಂದು ಎಂ.ಐ 17 ಮಾಡತ್ತೆ. ಆದರೆ, ಅದಕ್ಕೆ ದೊಡ್ಡ ಹೆಲಿಪ್ಯಾಡ್ ಬೇಕು. ಬೆಟ್ಟಗಳ ಸಂದಿಯಲ್ಲಿ ಹಾರಿಸೋದು ಕಷ್ಟ. ಇಬ್ಬರು ಪೈಲಟ್‌ಗಳು, ಒಬ್ಬ ಫ್ಲೈಟ್ ಎಂಜಿನಿಯರ್, ಒಬ್ಬ ಫ್ಲೈಟ್ ಅಸಿಸ್ಟಂಟ್ ಬೇಕು. ಅಂಥ ಒಂದು ಎಂ.ಐ 17ನ ಫ್ಲೈಟ್ ಎಂಜಿನಿಯರ್, ಕನ್ನಡಿಗ ದೇವೇಂದ್ರ ಮಿಶ್ರಾ. ಮೆಕ್ಯಾನಿಕ್ ಆಗಿದ್ದವನು ಗುಲ್ಬರ್ಗದ ಸಿದ್ದಲಿಂಗ. ಇಂಥ ಆರು ಎಂ.ಐ 17ಗಳನ್ನ ಈ ಕಾರ್ಯಾಚರಣೆಗೆ ಕರೆಸಲಾಗಿತ್ತು. ಒಂದು ಕೇದಾರನಾಥದಿಂದ ವಾಪಸ್ ಬರ್ತಿದ್ದಾಗ ಬೆಟ್ಟಕ್ಕೆ ಬಡಿದು ಸುಟ್ಟುಹೋಯಿತು. ಅದರಲ್ಲಿದ್ದ ಹತ್ತೊಂಬತ್ತು ಜನ ಸತ್ತರು. ಇನ್ನೊಂದು ಬದರೀನಾಥದಿಂದ ಬಂದು ಜೋಶಿಮಠಕ್ಕೆ ಬಿಡುತ್ತಿತ್ತು. ನಾಲ್ಕು ಎಂ.ಐ 17ಗಳು ಗೋಚಾರ್‌ದ ಹೆಲಿಪ್ಯಾಡ್‌ನಲ್ಲಿ ನಿಂತಿದ್ದವು. ಆದ ಅಪಘಾತ ಪೈಲಟ್‌ಗಳ ಸ್ಥೈರ್ಯ ಕುಗ್ಗಿಸಿತ್ತು. ಕೊನೆಗೆ 29ನೇ ತಾರೀಖು ಶನಿವಾರ ಮೂರು ಎಂ.ಐ 17ಗಳು ಒಟ್ಟೊಟ್ಟಿಗೇ ಹಾರತೊಡಗಿದವು. ಮಾರನೇ ದಿನ ಬದರೀನಾಥ ಖಾಲಿಯಾಗಿತ್ತು. ಇದು ಭಾರತದ ವಾಯು ಸೇನೆಯ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ. ಒಟ್ಟು ಅರವತ್ತು ಹೆಲಿಕಾಪ್ಟರ್‌ಗಳು ಬಳಕೆಯಾದವು. ಎರಡೂವರೆ ಸಾವಿರ ಸಲ ಹಾರಾಡಿದವು. ಎಷ್ಟು ಜನರನ್ನ ರಕ್ಷಿಸಲಾಯಿತು ಅನ್ನೋದರ ಸರಿಯಾದ ಲೆಕ್ಕಾಚಾರ ಇನ್ನೂ ಸಿಗಬೇಕು.

ಹತಾಶೆಗೆ ಬಿದ್ದು ನಾಟಕವಾಡಿದರು
ನಾವು ಉಪವಾಸ ಸಾಯ್ತಿದೀವಿ, ಇಲ್ಲಿ ಜನ ನಮ್ಮನ್ನ ಲೂಟಿ ಮಾಡ್ತಿದಾರೆ, ಕುಡಿಯೋ ನೀರಿನ ಬಾಟಲಿಗೆ ಸಾವಿರ ರುಪಾಯಿ ರೇಟು... ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವರು ಮಾಡಿದ ಇಂಥ ಆರೋಪಗಳನ್ನ ನೀವು ಕೇಳಿರಬೇಕು. ನಿಜ ಹೇಳಬೇಕು ಅಂದರೆ, ಅಂಥ ಪರಿಸ್ಥಿತಿ ಇರಲಿಲ್ಲ. ಕೊನೆಪಕ್ಷ ಬದರೀನಾಥದಲ್ಲಂತೂ ಇರಲಿಲ್ಲ. ಅನಂತಮಠದವರು ಕನ್ನಡಿಗರ ದೇಖರೇಖಿಯ ವ್ಯವಸ್ಥೆ ಮಾಡಿದ್ದರು. ಬೆಳಗಿನ ಚಹಾದಿಂದ ಹಿಡಿದು- ರಾತ್ರಿಯ ಊಟದ ತನಕ ಎಲ್ಲವನ್ನೂ ಉಚಿತವಾಗಿ ಕೊಡುವ ನಾಲ್ಕು ಧರ್ಮಶಾಲೆಗಳು ನಡೆಯುತ್ತಿದ್ದವು. ಅಲ್ಲಿ ಸೀಮೆಎಣ್ಣೆಗೂ- ಡೀಸೆಲ್‌ಗೂ ಒಂದೇ ರೇಟು. ಅಡುಗೆ ಕೆಲಸ ಎಲ್ಲ ಬಹುತೇಕ ಡೀಸೆಲ್ ಸ್ಟೋವ್‌ನಲ್ಲೇ ನಡೆಯೋದು. ಒಂದು ಹಂತದಲ್ಲಿ ಸಿಲಿಂಡರ್‌ಗಳು ಖಾಲಿಯಾಗಿ, ಡೀಸೆಲ್ ಮುಗಿದು ಹೋಗಿ ಅಡುಗೆ ಮಾಡೋದಕ್ಕೆ ಇಂಧನ ಇಲ್ಲದಂಥ ಪರಿಸ್ಥಿತಿ ನಿರ್ಮಾಣ ಆಗಿದ್ದು ಹೌದು. ಆದರೆ, ರೇಷನ್‌ಗೆ ಕೊರತೆ ಅಂತ ಆಗಲಿಲ್ಲ. ಎಂ.ಐ 17ಗಳು ಜೋಶಿಮಠದಿಂದ ಬರುವಾಗ ಸೀಮೆಎಣ್ಣೆ ಕ್ಯಾನ್‌ಗಳನ್ನ ತಂದು ಬದರೀನಾಥಕ್ಕೆ ಇಳಿಸೋದಕ್ಕೆ ಶುರುಮಾಡಿದವು. ಹಾಗಾದರೆ, ಯಾತ್ರಿಕರು ಹಾಗೆ ಹೇಳಿದ್ದು ಯಾಕೆ?
ಹತಾಶೆ... ಸಿಕ್ಕುಬಿದ್ದು ಹನ್ನೆರಡು ದಿನಗಳಾಗಿದ್ದವು. ಸುತ್ತಲೂ ಅವೇ ಬೆಟ್ಟ- ಭೋರ್ಗರೆಯುವ ನದಿಯ ಶಬ್ದ. ಹೊರಗಿನ ಜಗತ್ತಿನ ಜೊತೆ ಸಂಪರ್ಕ ಬೇರೆ ಕಡಿತಗೊಂಡಿತ್ತು. ದಕ್ಷಿಣ ಭಾರತದಿಂದ ಹೋದವರಿಗೆ ಭಾಷೆಯ ಸಮಸ್ಯೆ. ಗಾಯದ ಮೇಲೆ ಬರೆ ಎಳೆದಂತೆ ಒಂದರ ನಂತರ ಒಂದರಂತೆ ಗಾಳಿ ಸುದ್ದಿಗಳು. ನಾಳೆ ಎಲ್ಲಕ್ಕಿಂತ ದೊಡ್ಡ ಮಳೆ ಬರುತ್ತಂತೆ, ವಾರದಲ್ಲಿ ಹಿಮ ಬೀಳೋದಕ್ಕೆ ಶುರುವಾಗಿ ಎಲ್ಲ ಕೊರಡಾಗಿಬಿಡ್ತಾರಂತೆ, ಕೇದಾರದಲ್ಲಿ ಹೆಣಗಳು ಕೊಳೆತು ರೋಗ ಹರಡಿ ಜನ ಸಾಯ್ತಿದಾರಂತೆ, ರೋಗ ಬದರಿ ಕಡೆಯೂ ಹರಡ್ತಿದೆಯಂತೆ, ಸರಕಾರ ಹೆಲಿಕಾಪ್ಟರ್‌ಗಳನ್ನ ವಾಪಸ್ ಕರೆಸಿಕೊಳ್ಳುತ್ತದಂತೆ, ಇತ್ಯಾದಿ- ಇತ್ಯಾದಿ...
ಇಲ್ಲಿ ನಾವು ನರಕ ಯಾತನೆ ಅನುಭವಿಸ್ತಿದೀವಿ ಅಂತ ಹೇಳಿದರೆ ಬೇಗ ಹೆಲಿಕಾಪ್ಟರ್‌ನಲ್ಲಿ ಕರೆಸಿಕೊಳ್ತಾರೆ ಅನ್ನಿಸಿತು ಜನರಿಗೆ. ಯಾವಾಗ ಅನಾರೋಗ್ಯ ಪೀಡಿತರನ್ನ ಮೊದಲ ಆದ್ಯತೆ ಮೇರೆಗೆ ಕರೆದುಕೊಂಡು ಹೋಗಲಾಗತ್ತೆ ಅಂದರೋ, ಗಟ್ಟಿಮುಟ್ಟಾಗಿದ್ದವರು ಕೂಡ ಗಡಗಡ ನಡುಗಿ ಬೀಳೋದಕ್ಕೆ ಶುರುಮಾಡಿದರು. ಅದು ನಾಟಕ ಅಲ್ಲ. ಹತಾಶೆಯಿಂದ ಉಂಟಾದ ಮಾನಸಿಕ ಸ್ಥಿತಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯವರು ಬದರೀನಾಥಕ್ಕೆ ನೊಂದವರಿಗೆ ಆಪ್ತ ಸಲಹೆ ಕೊಡಬಲ್ಲ ಕೆಲ ಮನಶ್ಶಾಸ್ತ್ರಜ್ಞರನ್ನೂ ಕಳಿಸಿತು.

ಸಂತನಂತಾದ ಸಂತೋಷ್
ನಿಜ ಹೇಳಬೇಕು ಅಂದರೆ, ಪಕ್ಕದಲ್ಲಿದ್ದ ಅನಂತ ಮಠದ ಹುಡುಗ ಹೇಳುವ ತನಕ ಸಂತೋಷ್ ಲಾಡ್ ಗುರುತು ಕೂಡ ನನಗೆ ಸಿಕ್ಕಿರಲಿಲ್ಲ. ಒಂದು ನೀಲಿ ಜೀನ್ಸ್, ಹಾಲು ಬಿಳುಪಿನ ಲೆದರ್ ಜಾಕೆಟ್, ರಕ್ತಗೆಂಪಿನ ಟೋಪಿ ಹಾಕಿಕೊಂಡು ನಿಂತಿದ್ದ ಅವರನ್ನ ಒಂದು ರಾಜ್ಯದ ಮಂತ್ರಿ ಅಂದರೆ ಅಪರಿಚಿತರು ನಂಬುವುದು ಸಾಧ್ಯ ಇರಲಿಲ್ಲ. ಆಗಷ್ಟೇ ಜೋಶಿ ಮಠದಲ್ಲಿ ಹೆಲಿಕಾಪ್ಟರ್ ಏರಿ ಬದರೀನಾಥದಲ್ಲಿ ಬಂದಿಳಿದಿದ್ದೆ. ಸಮುದ್ರ ಮಟ್ಟದಿಂದ ಆರು ಸಾವಿರ ಅಡಿ ಎತ್ತರದ ಜೋಶಿ ಮಠದಿಂದ ಹನ್ನೆರಡು ಸಾವಿರ ಅಡಿ ಎತ್ತರದ ಬದರೀನಾಥಕ್ಕೆ, ಸೆಖೆ ಸುರಿಯುವ ಜೋಶಿಮಠದಿಂದ ಹಿಮ ಸುರಿಯುವ ಬದರೀನಾಥಕ್ಕೆ ಕೇವಲ ಹನ್ನೊಂದು ನಿಮಿಷದ ಹೆಲಿಕಾಪ್ಟರ್ ಪ್ರಯಾಣ.
ಸಂತೋಷ್ ಲಾಡ್ ಪ್ರವಾಹ ಬಂದ ಎರಡನೇ ದಿನದಿಂದಲೂ ಬದರೀನಾಥದಲ್ಲೇ ಇದಾರೆ ಅನ್ನೋದು ಗೊತ್ತಿತ್ತು. ರಾಜಕಾರಣಿಯೊಬ್ಬ ಏನೇ ಮಾಡಿದರೂ ಸಂಶಯದಿಂದ ನೋಡುವ ಸ್ವಭಾವ ನಿಮಗಿರುವಂತೆ ನನಗೂ ಇತ್ತು. ಅಲ್ಲೇ ಸಿಕ್ಕ ಕನ್ನಡಿಗ ಟಿ.ಆರ್.ರಾಜೇಶ್‌ಕುಮಾರ್ ಬದರೀನಾಥದಲ್ಲಿ ಸಿಕ್ಕುಹಾಕಿಕೊಂಡಿದ್ದ ಹೆತ್ತವರ ದಾರಿ ಕಾಯ್ತಿದ್ದರು. 'ನಮ್ಮ ತಂದೆಗೆ ನ್ಯೂರಾಲಜಿ ಪ್ರಾಬ್ಲಂ ಸಾರ್, ಒಂದು ಟ್ಯಾಬ್ಲೆಟ್ ಮೂರು ದಿನ ತಪ್ಪಿಸಿಬಿಟ್ಟರೆ ಪ್ರಾಣಕ್ಕೆ ಅಪಾಯ. ಅದು ಬದರೀನಾಥದಲ್ಲಿ ಇರಲಿಲ್ಲ. ಸಂತೋಷ್ ಲಾಡ್‌ರಿಗೆ ಹೇಳಿದ್ವಿ. ಡೆಹ್ರಾಡೂನ್‌ನಿಂದ ಹೆಲಿಕಾಪ್ಟರ್‌ನಲ್ಲಿ ತರಿಸಿಕೊಂಡು, ವಾಟ್ಸ್ ಅಪ್‌ನಲ್ಲಿ ಅದರ ಫೋಟೊ ನನಗೆ ಕಳಿಸಿ, ಅದೇ ಮಾತ್ರೇನಾ ಅಂತ ಕನ್‌ಫರ್ಮ್ ಮಾಡಿಕೊಂಡರು. ನಂತರ ನಮ್ಮ ತಂದೆ- ತಾಯೀನ್ನ ಹುಡುಕಿಕೊಂಡು ಹೋಗಿ ಮಾತ್ರೆ ತಲುಪಿಸಿ, ಅವರ ಜೊತೆ ಊಟ ಮಾಡಿ ಧೈರ್ಯ ಹೇಳಿ ಬಂದಿದಾರೆ' ಅಂದರು. ಜೋಶಿ ಮಠಕ್ಕೆ ತಲುಪಿದ ಉತ್ತರ ಕರ್ನಾಟಕದ ಹನ್ನೆರಡು ಜನರನ್ನ ಮಾತನಾಡಿಸಿದಾಗ, 'ನಾವು ಊರಿಗೆ ವಾಪಸ್ ಹೋಗ್ತೀವಿ- ನಮ್ಮವರನ್ನ ನೋಡ್ತೀವಿ ಅನ್ನೋ ನಂಬಿಕೆ ಬಂದಿದ್ದೇ ಲಾಡ್ ಬಂದ ನಂತರ' ಅಂದರು.  ಎರಡು ದಿನ ಹೆಚ್ಚೂಕಡಿಮೆ ಲಾಡ್ ಜತೆಗೇ ಇದ್ದರು. ಅನಂತ ಮಠದವರ ಹಚ್ಚಹಳೆಯ ಆಲ್ಟೋ ಕಾರೊಂದನ್ನ ಇಸಿದುಕೊಂಡಿದ್ದ ಲಾಡ್, ಬೆಳಿಗ್ಗೆ ಆರು ಗಂಟೆಗೆಲ್ಲಾ ತಾವು ಉಳಿದುಕೊಂಡಿದ್ದ ಪಿಡಬ್ಲ್ಯುಡಿ ಗೆಸ್ಟ್‌ಹೌಸ್‌ನಿಂದ ಹೊರಟು ಕರ್ನಾಟಕದ ಯಾತ್ರಿಕರು ಉಳಿದುಕೊಂಡಿದ್ದ ಧರ್ಮಛತ್ರಕ್ಕೆ ಬರೋದು. ಅವರನ್ನೆಲ್ಲ ಕೂಡಿಸಿಕೊಂಡು ಹೆಲಿಪ್ಯಾಡ್‌ಗೆ ಬರೋದು. ಹೆಲಿಕಾಪ್ಟರ್ ಇಳಿಯುವ ಜಾಗ ತಲುಪೋದಕ್ಕೆ ಮುನ್ನೂರು ಮೀಟರ್‌ನಷ್ಟು ಕಲ್ಲು ದಾರಿಯಲ್ಲಿ ನಡೆಯಬೇಕು. ಅಷ್ಟು ಹೊತ್ತಿನ ತನಕ ಡ್ರೈವರ್ ಆಗಿರ್ತಿದ್ದ ಲಾಡ್ ನಂತರ ಹಮಾಲಿ. ಯಾತ್ರಿಕರ ಲಗೇಜು ಹೊತ್ತುಕೊಂಡು ಅವರ ಕೈಹಿಡಿದು ಕರೆತಂದು ಹೆಲಿಪ್ಯಾಡ್‌ಗೆ ಬಿಡೋದು. ನಂತರ ಅಲ್ಲೇ ಮೂಲೆಗೆ ನಿಂತು 'ಇನ್ನಷ್ಟು ಹೆಲಿಕಾಪ್ಟರ್ ಕಳಿಸಿ' ಅಂತ ಕೇಂದ್ರ ಗೃಹ ಕಾರ್ಯದರ್ಶಿಗೂ- ಗೃಹಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಮಗಳಿಗೂ ಫೋನ್ ಮಾಡೋದು. ಹೆಲಿಕಾಪ್ಟರು ಬಂದ ಮೇಲೆ ವೃದ್ಧರು, ಮಕ್ಕಳು, ಹೆಣ್ಣುಮಕ್ಕಳು, ಅನಾರೋಗ್ಯ ಪೀಡಿತರನ್ನ ಅದರಲ್ಲಿ ಕೂಡಿಸಿ ಟಾ ಟಾ ಮಾಡೋದು. ಮಾರನೇ ದಿನ ಮತ್ತದೇ ಕೆಲಸ. ಸಾವಿರಾರು ಕೋಟಿಯ ಗಣಿ ಸಾಮ್ರಾಜ್ಯ, ನೂರಾರು ಬೆಂಬಲಿಗರು, ಎಸ್ಕಾರ್ಟ್‌ಗೆ ಪೊಲೀಸ್ ಜೀಪು, ಗೂಟದ ಕಾರು... ಆ ಲಾಡ್ ಇವರೇನಾ...? ಮಹಾರಾಷ್ಟ್ರ ಸರಕಾರದ ಪರವಾಗಿ ಪರಿಹಾರ ಕಾರ್ಯದ ಉಸ್ತುವಾರಿಗೆ ಬಂದಿದ್ದ ಅಧಿಕಾರಿಯೊಬ್ಬರು ಲಾಡ್ ಕೈ ಕುಲುಕಿ 'ಒಂದು ಸಲ ಫುಲ್ ಯುನಿಫಾರ್ಮ್‌ನಲ್ಲಿ ಬಂದು ನಿಮಗೆ ಸೆಲ್ಯೂಟ್ ಮಾಡಬೇಕು ಅನ್ನೋ ಆಸೆ ಇದೆ' ಅಂದರು. ನಾನು ಸುಮ್ಮನಿದ್ದೆ.
'ಇಲ್ಲಿಗೆ ಬಂದು ಒಂದು ವಾರ ಇದ್ದ ಮೇಲೆ ನಾನು ಮತ್ತಷ್ಟು ಹಂಬಲ್ ಆದೆ ನೋಡ್ರಿ, ಈಗೊ ಕಡಿಮೆ ಆಯ್ತು... ದೇವರೆದುರಿಗೆ ನಮ್ಮ ಆಸ್ತಿ, ಅಂತಸ್ತು, ಅಧಿಕಾರಕ್ಕೆಲ್ಲ ನಯಾಪೈಸೆ ಕಿಮ್ಮತ್ತಿಲ್ಲ' ಅಂದರು ಲಾಡ್.

-ಅಜಿತ್ ಹನಮಕ್ಕನವರ್
ajitlovesall@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.