ಕಿಂಡಿ ಹಿಂದಿನ ಬೆರಗು

ನಿಮಗೆ 'ಗುಲಾಬಿ ಟಾಕೀಸ್' ಕಥೆ ಗೊತ್ತಿರಬೇಕಲ್ಲವೇ? ಯಾರೂ ಮೆಚ್ಚುವಂಥ ಒಳ್ಳೆಯ ಕಥೆ. ಸಣ್ಣ ಪಟ್ಟಣಕ್ಕೆ ಕಾಲಿಡುವ ಟಾಕೀಸು, ಗೇಟ್ ಕೀಪರ್ ಆಗುವ ಸೂಲಗಿತ್ತಿ, ಗಂಡಂದಿರಿಗೆ ಗೊತ್ತಿಲ್ಲದೆ ಟಾಕೀಸಿನತ್ತ ಮುಖ ಮಾಡುವ ಮಹಿಳೆಯರು... ಹೀಗೆ ಶುರುವಾಗುವ ಬದಲಾವಣೆಯ ಗಾಳಿ ಆ ಪುಟ್ಟ ಪಟ್ಟಣದಲ್ಲಿ ಏನೆಲ್ಲ ಅವಘಡಗಳು, ಅನಿರೀಕ್ಷಿತ ವಿದ್ಯಮಾನಗಳಿಗೆ ಕಾರಣವಾಗುತ್ತದೆಂದು ಅತ್ಯಂತ ಮಾರ್ಮಿಕವಾಗಿ 'ಗುಲಾಬಿ ಟಾಕೀಸು' ಕಟ್ಟಿಕೊಡುತ್ತದೆ. ಇನ್ನು ಈ ಕಥೆಯನ್ನು ಆಧರಿಸಿ ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಚಿತ್ರ ಬಂದಿದ್ದು ಗೊತ್ತೇ ಇದೆ. ಕಥೆಗಾರ್ತಿ ವೈದೇಹಿ ಅವರ 'ಗುಲಾಬಿ ಟಾಕೀಸು' ಈಗ ನೆನಪಾಗುವಂತೆ ಮಾಡಿದ್ದು 'ಸಿನಿಮಾ ಪ್ಯಾರಡಿಸೋ' ಚಿತ್ರ. ವೈದೇಹಿ ಅವರ ಕಥೆಗೂ, ಇಟಲಿಯ ಪ್ಯಾರಡಿಸೋ ಚಿತ್ರಕ್ಕೂ ತುಂಬಾ ಹೋಲಿಕೆಗಳಿಲ್ಲ. ಆದರೆ, ಈ ಕಥೆ- ಚಿತ್ರದಲ್ಲಿ ಟಾಕೀಸು ಕೇಂದ್ರಬಿಂದು. ಹಾಗೆ ಆ ಟಾಕೀಸು ಪುಟ್ಟ ಊರಿನಲ್ಲಿ ಸಂಬಂಧಗಳನ್ನು ಬೆಸೆಯುತ್ತ, ಆಕಸ್ಮಿಕ ತಿರುವುಗಳಿಗೆ ಸಾಕ್ಷಿಯಾಗಿ ಕೊನೆಗೂ ನೆಲಸಮವಾಗುತ್ತದೆ. ಈ ಕಾರಣಕ್ಕೆ ಕನ್ನಡದ 'ಗುಲಾಬಿ' ಹಾಗೂ ಇಟಲಿಯ 'ಟಾಕೀಸು' ನೆನಪಾಗುತ್ತದೆ.
ಸರಿ, ಈಗ ಚಿತ್ರದ ವಿಷಯಕ್ಕೆ ಬನ್ನಿ. ಮನಸ್ಸಿನ ತುಂಬಾ ಕುತೂಹಲ, ಕಣ್ಣಲ್ಲಿ ಕಾತರ ಇಟ್ಟುಕೊಂಡು ಸಿನಿಮಾ ನೋಡುವ ಬಾಲ್ಯದ ದಿನಗಳು ಅನುಭವವೇ ಒಂದು ಮಜಾ. ಅಂಥ ಬೆರಗಿನ ದಿನಗಳು, ಅನುಭವ ನಮಗೆ ಈಗ ನೆನಪಿಲ್ಲದಿರಬಹುದು. ಒಂದುವೇಳೆ ನೆನಪಾದರೂ ಅದನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯವೇನೋ? ಆದರೆ ಯಾರಾದರೂ ಆ ದಿನಗಳ ಸಿನಿಮಾ ನೋಡುವ ಪರಿಯನ್ನು ಹೇಳಿಕೊಂಡರೆ, ಅದರ ಬಗ್ಗೆ ಕಥೆ, ಲೇಖನ ಬರೆದಿದ್ದನ್ನು ಓದಿದರೆ ನಾವು ನಮ್ಮ ದಿನಗಳಿಗೆ ಜಾರುತ್ತೇವೆ. ಅಲ್ಲಿ ನಮ್ಮನ್ನು ಕಲ್ಪಿಸಿಕೊಳ್ಳುತ್ತೇವೆ. 'ಸಿನಿಮಾ ಪ್ಯಾರಡಿಸೋ' ಕೂಡ ಹಾಗೆ ನಮ್ಮದೇ ಬ್ಯಾಲದ ದಿನಗಳ ಬೆರಗಿನ ನೋಟ. ಚಿತ್ರಜಗತ್ತಿನಲ್ಲಿ ಅಪಾರ ಮನ್ನಣೆ ಪಡೆದು, ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ನೂರಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾದ, ಸಿನಿಪ್ರೇಮಿಗಳ ಸಾರ್ವಕಾಲಿಕ ಮೆಚ್ಚಿನ ಚಿತ್ರ. ಎಷ್ಟು ಬಾರಿ ನೋಡಿದರೂ ಚಿತ್ರ ಸಲ್ವತೋರ್ ಅಲಿಯಾಸ್ ತೊತೊನಷ್ಟೇ ಕುತೂಹಲದಿಂದ ಮೂಡಿಸುತ್ತದೆ. 'ಅಬ್ಬಾ ಮುಗಿಯಿತು ಚಿತ್ರ', 'ಅಯ್ಯೋ ಸಿನಿಮಾ ಆಗಲೇ ಮುಗಿಯಿತೇ?!' ಪ್ರೇಕ್ಷಕನ ಈ ಎರಡು ಉದ್ಗಾರಗಳಲ್ಲಿ ಚಿತ್ರದ ಹಣೆಬರಹ ನಿಂತಿರುತ್ತದೆ. 'ಮುಗಿಯಿತು ಬಿಡಿ' ಎನ್ನುವ ಮಾತಿನಲ್ಲಿ ಯಾವುದೇ ಸಂಭ್ರಮ ಕಾಣದು. ಆದರೆ 'ಅಯ್ಯೋ ಇಷ್ಟು ಬೇಗ ಸಿನಿಮಾ ಮುಕ್ತಾಯವಾಯಿತೆ?' ಎನ್ನುವ ಪ್ರಶ್ನೆಯಲ್ಲಿ ಆ ಚಿತ್ರದ ಗೆಲುವು, ಸಂಭ್ರಮ ಕಾಣುತ್ತದೆ. 'ಸಿನಿಮಾ ಪ್ಯಾರಡಿಸೋ' ಈ ಎರಡನೇ ಮಾತಿಗೆ ಸೇರ್ಪಡೆ.
ತನ್ನ ಅರ್ಧ ಜೀವನ ಸಿನಿಮಾ ಪ್ರೊಜೆಕ್ಷನ್ ರೂಮಿನೊಂದಿಗೆ ಕಟ್ಟಿಕೊಂಡವನ ಕಥೆ, ಸಿನಿಮಾ ಹುಚ್ಚು ಹತ್ತಿಸಿಕೊಂಡ ಪೋರನ ಕನಸಿನ ಬದುಕಿನ ಕನ್ನಡಿ, ಪ್ರೀತಿಸಿದ ಹುಡುಗಿಯನ್ನು ಪಡೆಯದ ಭಗ್ನ ಪ್ರೇಮಿ, ಯುದ್ಧಕ್ಕೆ ಹೋದ ಗಂಡ ಮರಳಿ ಬರುವ ಭರವಸೆ ಇಲ್ಲದ ನಡು ವಯಸ್ಸಿನ ಮಹಿಳೆಯ ಒಂಟಿ ಜೀವನ, ಚರ್ಚ್ನ ಸಾಂಪ್ರದಾಯಿಕತೆ, ಪಾದ್ರಿಯ ಸೆನ್ಸಾರ್ ನೀತಿ, ಊರಿನ ಮುಖ್ಯ ವೃತ್ತ ತನ್ನದೇ ಎಂದು ಬೀಗುವ ಅರೆ ಹುಚ್ಚನ ಅಮಾಯಕತೆ, ತಪ್ಪು ಮಾಡಿದ ಮಕ್ಕಳನ್ನು ಬೀದಿಯಲ್ಲೇ ಹೊಡೆಯುವ ಪೋಷಕರು, ಚಿತ್ರಮಂದಿರದಲ್ಲಿ ಕದ್ದು ಸಿಗರೇಟು ಸೇದುವ ಪೋರರು, ಇದೆಲ್ಲದಕ್ಕೂ ಸಾಕ್ಷಿಯಾಗುವ ಹಾಗೂ ಆ ಊರಿನ ಸಂಬಂಧಗಳನ್ನು ಅತ್ಯಂತ ಆತ್ಮೀಯವಾಗಿ ಬೆಸೆಯುವ ಒಂದು ಪುಟ್ಟ ಥಿಯೇಟರ್ ಕಣ್ಮುಚ್ಚುವ ವ್ಯಥೆ... ಹೀಗೆ ಎಲ್ಲವನ್ನೂ ಒಡಲಿನಲ್ಲಿಟ್ಟುಕೊಂಡಿರುವ ಈ ಚಿತ್ರದ ಕಥೆ, ಪ್ರೊಜೆಕ್ಷನ್ ರೂಮಿನಲ್ಲಿ ತಿರುಗುವ ರೀಲಿನಂತೆ ಫ್ಲ್ಯಾಷ್ಬ್ಯಾಕ್ನಲ್ಲಿ ಸುರಳಿ ಬಿಚ್ಚಿಕೊಳ್ಳುತ್ತದೆ. ಅದು ಇಟಲಿಯ ಚಿಕ್ಕ ಪಟ್ಟಣ. ತಾಲೂಕು ಕೇಂದ್ರಗಳಿಗೆ ಅಂಟಿಕೊಂಡಿರುವ ನಮ್ಮದೇ ಊರಿನಂಥದ್ದು. ಅಪ್ಪನ ಮುಖವನ್ನು ನೋಡಿರದ, ಅಮ್ಮನ ಸೆರಗಿಕ್ಕಿಂತ ಆ ಊರಿನ ಪುಟ್ಟ ಥಿಯೇಟರ್ನ ಪ್ರೊಜೆಕ್ಷನ್ ರೂಮಿನ ರೀಲುಗಳೊಟ್ಟಿಗೆ ಬೆಳೆದವನಂತೆ ಕಾಣುವ ಆರು ವರ್ಷದ ಬಾಲಕ ತೊತೊ ಮತ್ತು ಪ್ರೊಜೆಕ್ಷನಿಸ್ಟ್ ಆಲ್ಫ್ರೆಡೋ ಇವರು ಕಥೆಯ ಕೇಂದ್ರಬಿಂದುಗಳು.
ವಯಸ್ಸಿನಲ್ಲಿ ತೊತೊ ಮತ್ತು ಆಲ್ಫ್ರೆಡೋ ನಡುವೆ 50 ವರ್ಷ ಅಂತರ. ಆದರೆ ಇವರ ಸ್ನೇಹಕ್ಕೆ ವಯಸ್ಸು ಅಡ್ಡಿಯಾಗದು. ತೊತೊ ಮಹಾನ್ ತುಂಟ. ಚರ್ಚ್ನಲ್ಲಿ ಪಾದ್ರಿ ಪೂಜೆ ಮಾಡುತ್ತಿದ್ದರೆ ಬೇಜವಾಬ್ದಾರಿಯಿಂದ ನಿದ್ದೆಗೆ ಜಾರುವ ಸೋಮಾರಿ. ಆದರೆ ಅದೇ ಪಾದ್ರಿ ಸಾರ್ವಜನಿಕ ಪ್ರದರ್ಶನಕ್ಕೂ ಮುನ್ನ ಚಿತ್ರಗಳಲ್ಲಿ ವಯಸ್ಕರ ದೃಶ್ಯಗಳಿಗೆ ಕತ್ತರಿ ಹಾಕುವಾಗ ಕಣ್ಣು ಮಿಟುಕಿಸದೆ ಕದ್ದು ಮುಚ್ಚಿ ಆ ಎಲ್ಲ ದೃಶ್ಯಗಳನ್ನು ನೋಡುವ ಜಾಣ. ಶಾಲೆಗೆ ಹೋಗದಿದ್ದರೂ ಸಿನಿಮಾ ಚಿಂತೆ, ಹಾಲು ಹಾಕಿ ಬರಲು ಹೇಳಿದರೆ ಸೀದಾ ಥಿಯೇಟರ್ಗೆ ನುಗ್ಗುವ ಆಸಾಮಿ. ಈತನಿಗೆ ಸಿನಿಮಾ ಹುಚ್ಚು ಯಾವ ಮಟ್ಟಿಗಿರುತ್ತದೆ ಎಂದರೆ ಎಲ್ಲರೂ ಪರದೆ ಮುಂದೆ ಕೂತರೆ ಈತ ಪ್ರೊಜೆಕ್ಷನ್ ರೂಮಿಗೆ ಓಡುತ್ತಾನೆ. ಅಲ್ಲಿ ಆಲ್ಫ್ರೆಡೋ ಇದ್ದಾನೆ. ಮೊದಮೊದಲು ತೊತೊ ಬರುವುದು ಈತನಿಗೆ ಕಿರಿಕಿರಿಯಾದರೂ ಮುಂದೆ ಇಬ್ಬರು ಪ್ರಾಣಸ್ನೇಹಿತರಾಗುತ್ತಾರೆ. ಕಿಂಡಿಯಿಂದ ಬೆಳಕು ಬಿದ್ದ ಕೂಡಲೇ ಅವಾಕ್ಕಾಗಿ ಆ ಕಿಂಡಿಯನ್ನು ದಿಟ್ಟಿಸುವ ತೊತೊನ ಬೆರಗಿನ ನೋಟ ಚಿತ್ರ ನೋಡುಗನ ಬಾಲ್ಯವನ್ನು ನೆನಪಿಸುತ್ತಾನೆ. ಒಮ್ಮೆ ಪ್ರೊಜೆಕ್ಷನ್ ರೂಮಿನಲ್ಲಿ ಬೆಂಕಿ ಹೊತ್ತಿಕೊಂಡು ಅಲ್ಫ್ರೆಡೋ ಕಣ್ಣು ಕಳೆದುಕೊಳ್ಳುತ್ತಾನೆ. ಮುಂದೆ ಈತನ ಜಾಗವನ್ನು ತೊತೊ ತುಂಬುತ್ತಾನೆ. ಇದು ಫ್ಲ್ಯಾಷ್ಬ್ಯಾಕ್.
ಈಗ ತೊತೊ ರೋಮ್ಗೆ ಹೋಗಿ ಪ್ರಸಿದ್ಧ ನಿರ್ದೇಶಕನಾಗಿದ್ದಾನೆ. ಅಮ್ಮನ ದೂರವಾಣಿ ಕೆರೆಯಿಂದ ತನ್ನೂರಿಗೆ ವಾಪಸಾದಾಗಲೂ ಪ್ರೊಜೆಕ್ಷನ್ ರೂಮು, ಅಲ್ಲಿನ ಕಿಂಡಿ ಬಗ್ಗೆ ಅದೇ ಕುತೂಹಲ ಇರುತ್ತದೆ. ಇಡೀ ಚಿತ್ರದಲ್ಲಿ ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳ ಹಳೇಚಿತ್ರಗಳು ಬೇಜಾನ್ ಕಾಣಿಸಿಕೊಂಡಿವೆ. ಹೊಟ್ಟೆ ನೋವು ಬಂದವನಂತೆ ನಟಿಸಿ ಪಾದ್ರಿಯಿಂದ ತಪ್ಪಿಸಿಕೊಳ್ಳುವುದು, ಚಿತ್ರಮಂದಿರದಲ್ಲಿ ಜಾಗ ಸಾಲದೆ ಹೆಚ್ಚಾದ ಜನಕ್ಕೆ ಹೊರಗೆ ಚಿತ್ರ ನೋಡುವಂತೆ ಮಾಡುವುದು, ಓಪನ್ ಸ್ಕ್ರೀನಿಂಗ್, ಚಿತ್ರದೊಳಗಿನ ಚಿತ್ರದಲ್ಲಿ ಇನ್ನೇನು ಮುತ್ತಿನ ದೃಶ್ಯ ಬರಬೇಕು ಎನ್ನುವಷ್ಟರಲ್ಲಿ ರೀಲು ಜಂಪ್ ಆದಾಗ ಎಲ್ಲರೂ ಬಯ್ದುಕೊಳ್ಳುತ್ತಿದ್ದರೆ. 'ನಾನು ಮೊದಲೇ ಆ ದೃಶ್ಯ ನೋಡಿದೆ' ಎಂದು ನಗುವ ತೊತೊ, ಇನ್ನು ಕ್ಲೈಮ್ಯಾಕ್ಸ್ಗಿಂತ ಮುಂಚೆ ಬರುವ ಚಿತ್ರಮಂದಿರ ನೆಲಸಮವಾಗುವ ದೃಶ್ಯ, ಅಲ್ಫ್ರೆಡೋನ ಅಂತಿಮಯಾತ್ರೆಯ ಭಾವುಕ ಸನ್ನಿವೇಶಗಳು, ಅಲ್ಫ್ರೆಡೋ ಸಾಯುವ ಮುಂಚೆ ಸೆನ್ಸಾರ್ ಆದ ಮುತ್ತಿನ ದೃಶ್ಯಗಳ ರೀಲುಗಳನ್ನು ಜೋಡಿಸಿ ಗಿಫ್ಟ್ ಆಗಿ ಕೊಟ್ಟಿದ್ದನ್ನು ನೋಡಿ ಕಣ್ಣೀರು ಹಾಕುವ ತೊತೊನ ಅಭಿನಯ ಪದಗಳಿಗೆ ಸಿಗದು.
ನಿತ್ಯ ಸಾವಿರಾರು ಪ್ರೇಕ್ಷಕರನ್ನು ಮಕ್ಕಳಂತೆ ನೋಡಿಕೊಂಡು ಅವರಿಗೆ ಬೇಕಾದ ಚಿತ್ರವನ್ನು ನೀಡಿ ಮನ ತಣಿಸಿದ ನಮ್ಮದೇ ಊರಿನ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗುತ್ತಿದ್ದರೆ ದೂರದ ಇಟಲಿಯ 'ಸಿನಿಮಾ ಪ್ಯಾರಡಿಸೋ', ಕಣ್ಮರೆಯಾಗುತ್ತಿರುವ ಆ ಎಲ್ಲ ಚಿತ್ರಮಂದಿರಗಳ ರಾಯಭಾರಿಯಾಗುತ್ತದೆ. ಹಾಗೆ 'ಹಳೇ ಸಿನಿಮಾ, ಚಿತ್ರಮಂದಿರಗಳು ಈಗ ನೆನಪು ಮಾತ್ರ. ಟಿವಿ, ಸಿಡಿ, ಡಿವಿಡಿಗಳ ಕಾಲ. ಪಾರ್ಕಿಂಗ್, ಟ್ರಾಫಿಕ್ಗಾಗಿ ಚಿತ್ರಮಂದಿರಗಳನ್ನು ಹೊಡೆಯುತ್ತಿದ್ದಾರೆ' ಎನ್ನುವ ಒಂದು ಸಂಭಾಷಣೆ ಕೂಡ. ಈ ಕಾರಣಕ್ಕೆ ಇದು ಕೇವಲ ಒಂದು ಕಾಲಘಟ್ಟದ ಕಥೆಯಲ್ಲ. ಅದು ಸಮಕಾಲೀನ ವಸ್ತುಸ್ಥಿತಿಯೂ ಹೌದು ಎನ್ನುವುದರಲ್ಲಿ ಚಿತ್ರದ ನಿಜವಾದ ಸತ್ವ ಅಡಗಿದೆ.
-ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


