ಸಾಪ್ತಾಹಿಕಪ್ರಭ

ಕಥೆಯ ಕಚಗುಳಿ ತಂದ ಓಬಿರಾಯ

ಕಥೆಯ ಕಚಗುಳಿ ತಂದ ಓಬಿರಾಯ
Published On :

ಬ್ರಿಟಿಷರು ವ್ಯಾಪಾರಕ್ಕೆಂದೇ ಭಾರತಕ್ಕೆ ಬಂದಿದ್ದರೂ, ಇಲ್ಲಿನ ಒಟ್ಟು ಬದುಕಿನ ಸಾಂಸ್ಕೃತಿಕ ಆಯಾಮಗಳನ್ನು ಪರವಶಗೊಳಿಸಿದ ಹಿನ್ನೆಲೆಯಲ್ಲಿ (ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ) ಸಣ್ಣಕತೆಗಳು ಹೊಸನಿಟ್ಟನ್ನು ದಕ್ಕಿಸಿಕೊಂಡ ಕುತೂಹಲಕಾರಿ ಸಂಗತಿಯೊಂದನ್ನು ಕನ್ನಡದ ಹೊಸತಲೆಮಾರಿನ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಜನಾರ್ದನ ಭಟ್ಟರು ಇದೀಗಷ್ಟೇ ಪ್ರಕಟವಾಗುತ್ತಿರುವ 'ಓಬಿರಾಯನ ಕಾಲದ ಕತೆಗಳು' ಸಂಕಲನದ ಮೂಲಕ ವಿಶ್ಲೇಷಣೆಗೆ ಒಡ್ಡಿದ್ದಾರೆ. ಬ್ರಿಟಿಷ್ ಆಡಳಿತದ ಹಿನ್ನೆಲೆಯಲ್ಲಿ ಕನ್ನಡ ಬದುಕನ್ನು ವಸ್ತುವಾಗಿ ಹೊಂದಿದ ಐವತ್ತೊಂಬತ್ತು ಕತೆಗಳನ್ನು ಗುರುತಿಸಿ, ಒಂಭತ್ತು ಭಾಗಗಳಲ್ಲಿ (ಬ್ರಿಟಿಷ್ ಪೂರ್ವ, ಕುಂಪಣಿ ಸರಕಾರ, ಬ್ರಿಟಿಷ್‌ದೊರೆಗಳು, ಕಾನೂನು ಸುವ್ಯವಸ್ಥೆ, ನೇಟಿವ್ ಅಧಿಕಾರಿಗಳ ಮರ್ಜಿ, ಉಳ್ಳವರ ಶಿಕ್ಷಣಾವಕಾಶ- ದರ್ಪ, ಸುಧಾರಣೆಯ ಗಾಳಿ- ಸ್ವಾತಂತ್ರ್ಯ ಹೋರಾಟ, ವಿಶ್ವ ಯುದ್ಧಗಳ ಕಾವು ಮತ್ತು ಹಿಂದಿರುಗಿ ನೋಡಿದಾಗ) ಸಂಪಾದಿಸಿದ ಇಲ್ಲಿನ ಕೆಲಸಕ್ಕೆ ಸಾಹಿತ್ಯಿಕ ಮಹತ್ವದಷ್ಟೇ, ಸಾಂಸ್ಕೃತಿಕ ಮಹತ್ವವೂ ಸಲ್ಲುತ್ತದೆ.
ಓಬಿರಾಯ ಎಂಬ ಪದ ಪ್ರಯೋಗವೇ ಕುತೂಹಲ ಹುಟ್ಟಿಸುವಂಥದು. ಒಂದಾನೊಂದು ಕಾಲದಲ್ಲಿದ್ದ ಒಬ್ಬ ರಾಜನ ಹೆಸರು ನೆನಪಿಲ್ಲದ್ದಕ್ಕೆ ನಮ್ಮ ಅಜ್ಜಿ ಕಥೆಗಳಲ್ಲಿ ಓಬಿರಾಯನ ಪ್ರವೇಶವಾಗಿದ್ದಿರಬಹುದು. ಹಾಗೊಬ್ಬ ರಾಜನಿದ್ದನೇ ಎಂಬ ನನ್ನ ಬಾಲ್ಯಕಾಲದ ಪ್ರಶ್ನೆಗೆ ಕಾರಂತಜ್ಜ ಅದು 'ಓಲ್ಡ್ ಬೈಗಾನ್ ಕಾಲದ ಆಳ್ವಿಕೆ'ಯ ಸಂಕ್ಷಿಪ್ತ ಕನ್ನಡ ರೂಪ ಇದ್ದೀತು ಎಂದಿದ್ದರು. ಸ್ವಲ್ಪ ಸಮಯದ ಹಿಂದೆ ವಿಶ್ವೇಶ್ವರ ಭಟ್ಟರು ಓಲ್ಡ್ ಬ್ರಿಟಿಷ್ ರಾಯ ಎಂಬ ಬಳಕೆಯನ್ನು ಮಾಡಿದ್ದಿತ್ತು. ಜನಾರ್ದನ ಭಟ್ಟರು ಕನ್ನಡ ಸಣ್ಣಕಥಾಮಾರ್ಗವು ಬ್ರಿಟಿಷ್ ಆಡಳಿತದಂಥ ಸಂಗತಿಯೊಂದನ್ನು ಮೂಲದ್ರವ್ಯವಾಗಿ ಸ್ವೀಕರಿಸುತ್ತ ಕಂಡುಕೊಂಡ ತಿರುವುಗಳನ್ನು ಅಧ್ಯಯನಕ್ಕೆತ್ತಿಕೊಳ್ಳುವ ಉದ್ದೇಶದಿಂದ, ಆ ಹಿನ್ನೆಲೆಯ ಮಹತ್ವದ ಕಥೆಗಳನ್ನು ಸಂಪಾದಿಸಿ, ಓಲ್ಡ್ ಬ್ರಿಟಿಷ್ ರಾಯನ ಕಾಲದ ಕತೆಗಳೆಂಬ ಹೆಸರಿನಲ್ಲಿ ಪ್ರಸ್ತುತಪಡಿಸುತ್ತ ಹೀಗೆ ಬರೆದದ್ದಿದೆ, 'ಬ್ರಿಟಿಷರು ಹೋದನಂತರ, ಬ್ರಿಟಿಷರ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು ಎನ್ನುವ ಮಾತು ಆಗಾಗ ನಮ್ಮ ಜನಗಳ ಮಾತಿನಲ್ಲಿ ಬರುತ್ತಲೇ ಇರುತ್ತಿತ್ತು. ಹಾಗೂ ಈಗಲೂ ನಮ್ಮನ್ನಾಳುವವರ ಮರ್ಜಿ ಹಾಗೂ ಬ್ಯೂರೋಕ್ರಸಿಯ ದರ್ಪಗಳನ್ನು ಕಂಡಾಗ ಬ್ರಿಟಿಷರ ಶಿಸ್ತು, ನ್ಯಾಯಪರತೆ, ಲಂಚರಾಹಿತ್ಯ, ಸ್ವಜನಪಕ್ಷಪಾತ ಇಲ್ಲದಿರುವಿಕೆ ಮುಂತಾದುವುಗಳನ್ನು ನೆನಪಿಸಿಕೊಳ್ಳುವವರೂ ಇದ್ದಾರೆ. ಹಾಗೆ ಹಿಂದಿನ ಆಳ್ವಿಕೆಯನ್ನು ನೆನಪಿಸಿಕೊಂಡು ಹಳಹಳಿಸುತ್ತಿದ್ದವರನ್ನು ಹಂಗಿಸಲು ಹುಟ್ಟಿಕೊಂಡ ನುಡಿಗಟ್ಟು 'ಓಬಿರಾಯನ ಕಾಲ!'
ಈ ಸಂಪುಟದಲ್ಲಿ ಆ ಓಬಿರಾಯನ ಕಾಲದ ಸಮಾಜವನ್ನು ಸಮಾಜದ ಅನುಭವಗಳನ್ನು ದಾಖಲಿಸಿರುವ ದಕ್ಷಿಣ ಕನ್ನಡದ ಗದ್ಯಕಥನಗಳನ್ನು ಒಂದು ಕ್ರಮದಲ್ಲಿ ಸಂಕಲಿಸಿ, ದಕ್ಷಿಣ ಕನ್ನಡದ ವಸಾಹತುಶಾಹಿ ಚರಿತ್ರೆಯನ್ನು ನಮ್ಮ ಗದ್ಯಸಾಹಿತಿಗಳು ಕಟ್ಟಿದ ಬಗೆಯನ್ನು ತೋರಿಸಿಕೊಡುವ ತಮ್ಮ ಉದ್ದೇಶವನ್ನು ಅವರು ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. 'ದಕ್ಷಿಣ ಕನ್ನಡದ ವಸಾಹತುಶಾಹಿ ಅನುಭವಗಳು ನಮ್ಮ ರಾಜ್ಯದ ಮತ್ತು ನಮ್ಮ ದೇಶದ ಇತರ ಭಾಗಗಳ ಅನುಭವಕ್ಕಿಂತ ಭಿನ್ನವಾದುದು. ಅದು ಯಾಕೆ ಎನ್ನುವುದು ಅರ್ಥವಾಗಬೇಕಾದರೆ ಬ್ರಿಟಿಷರಿಗಿಂತ ಹಿಂದಿನ ನಮ್ಮ ಚರಿತ್ರೆ ತಿಳಿದಿರಬೇಕಾಗುತ್ತದೆ' ಎಂಬ ಉದ್ದೇಶದಿಂದ, ಸುದೀರ್ಘವಾದ ಒಂದು ಪ್ರಸ್ತಾವನೆಯನ್ನು ಬರೆದು, ಅದಕ್ಕೆ ಪೂರಕವಾಗಿರುವ ಕಥೆಗಳ ಸಂಪಾದನೆಯನ್ನು ಅವರಿಲ್ಲಿ ನಡೆಸಿದ್ದಾರೆ.
ಈ ಸಂಪುಟದ ಅತಿ ಮಹತ್ವದ ಸಂಗತಿಯೆಂದರೆ ಸುದೀರ್ಘ ಮತ್ತು ಅಧ್ಯಯನಾತ್ಮಕ ಮುನ್ನುಡಿ. ದಕ್ಷಿಣ ಕನ್ನಡದ ನವೋದಯ ಸಾಹಿತ್ಯದಲ್ಲಿ ವಸಾಹತುಶಾಹಿಗೆ ಸಮರ್ಥನೆ ಅಭಿಮಾನಗಳೇ ಇದ್ದವೆನ್ನುವ ವಿಶ್ಲೇಷಾರ್ಹ ಸಂಗತಿಯನ್ನು ಇಲ್ಲವರು ಕಾರಣಗಳೊಂದಿಗೆ ಬಗೆದು ನೋಡುವ ಕ್ರಮ ಸಾಹಿತ್ಯಾಭ್ಯಾಸಿಗಳಿಗೆ ಉಪಯುಕ್ತವಾಗುವಂತಿದೆ. ಸಾಹಿತ್ಯದ ನಿಲುವುಗಳಿಗೆ ಸಾಮಾಜಿಕ ಸಂಗತಿಗಳೇ ಕಾರಣವಾಗುವ ದಿಕ್ಕಿನತ್ತ ಅವರು ಹರಿಸಿದ ಗಮನ ಇಲ್ಲಿ ಪ್ರಶಂಸಾರ್ಹ. ಮಧ್ಯಯುಗದಿಂದೀಚಿನ ದಕ್ಷಿಣ ಕನ್ನಡದ ಇತಿಹಾಸವನ್ನು ಅವರಿಲ್ಲಿ ದಾಖಲಿಸುವ ಕ್ರಮವೂ ಗಮನಾರ್ಹ. ಅವರಿಲ್ಲಿ ದಾಖಲೆಗಳ ನೆರವಿನಿಂದ ತಳೆವ ಕೆಲವು ನಿಲವುಗಳು ಅದ್ಭುತ ಎನ್ನುವಷ್ಟು ಆರೋಗ್ಯಕಾರಿಯಾಗಿವೆ. ವಿಮರ್ಶಕನೊಬ್ಬ ಸಾಗಬೇಕಾದ ಹಾದಿಯ ಕೈಗಂಬದಂತಿವೆ. (ನವೋದಯದ ಸಾಹಿತಿಗಳು ಯಾವುದೇ ಒಂದು ಜಾತಿಯನ್ನು ಹೀಗಳೆಯುವ ಅಥವಾ ವೈಭವೀಕರಿಸುವ ತಪ್ಪನ್ನು ಮಾಡುವುದಿಲ್ಲ. ನವೋದಯದ ಸಾಹಿತಿಗಳು ಸಮಾಜ ವ್ಯವಸ್ಥೆಯ ಬಗ್ಗೆ ಒಂದು ಸ್ಪಷ್ಟವಾದ ನಿಲುವನ್ನು ಹೊಂದಿ ವರ್ಗವನ್ನು ಗುರುತಿಸುತ್ತಿದ್ದರಲ್ಲದೆ ಜಾತಿಯನ್ನಲ್ಲ. ನೇಟಿವ್ ಅಧಿಕಾರಿಗಳ ದರ್ಬಾರು ಇತ್ಯಾದಿ.)
ಇಲ್ಲಿ ಆಯ್ಕೆ ಮಾಡಿದ ಕತೆಗಳಲ್ಲಿ ಬೇಕಲ ರಾಮ ನಾಯಕ, ಸಾಂತ್ಯಾರು, ಮೊಳೆಯಾರ, ತುದಿಯಡ್ಕ, ಪಂಜೆ, ಕಡೆಂಗೋಡ್ಲು ಮೊದಲಾದವರ ಕೆಲವು ಕತೆಗಳು ತಮ್ಮ ಸಂವಿಧಾನ ಮತ್ತು ಆಕೃತಿಗಳ ಹಿನ್ನೆಲೆಯಲ್ಲಿಯೂ ಕನ್ನಡ ಸಣ್ಣಕಥಾಸಾಹಿತ್ಯವು ಕಾಲಕಾಲಕ್ಕೆ ದಕ್ಕಿಸಿಕೊಳ್ಳುತ್ತಾ ಬಂದ ಆಶಯಗಳ ದಾಖಲೆಯಾಗಿಯೂ ಗಮನ ಸೆಳೆಯುತ್ತವೆ. ಸಣ್ಣ ಕಥೆ ಬರೀ ಕಥೆ ಹೇಳುವ ಕೆಲಸವನ್ನಷ್ಟೇ ಮಾಡುವುದಲ್ಲ, ಅದಕ್ಕೂ ಆಚೆ ತನ್ನ ಕೈಚಾಚುತ್ತದೆ ಎನ್ನುವುದನ್ನು ಖಚಿತಪಡಿಸುವ ಕಥೆಗಳೂ ಇಲ್ಲಿವೆ.
ಈ ಸಂಕಲನದ ಕುರಿತು ನನ್ನ ವಿಮರ್ಶಕ ಮಿತ್ರರೊಬ್ಬರು ಎತ್ತಿದ ಮೂರು ಮುಖ್ಯ ಆಕ್ಷೇಪಗಳನ್ನು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು...
- ಕತೆಗಳನ್ನು ಆಯುವಾಗ ಇತಿಹಾಸದ ವಿಕೃತ ಚಿತ್ರಣ ನೀಡುವ ಕತೆ ಕಾದಂಬರಿಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟದ್ದನ್ನು ಒಪ್ಪಿಕೊಳ್ಳುವ ಸಂಪಾದಕರು, ಆ ಕಾರಣದಿಂದಲೇ ಅ.ಗೌ. ಕಿನ್ನಿಗೋಳಿಯವರನ್ನು ಕೈಬಿಟ್ಟ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಯಾವುದನ್ನು ಅವರು ಇತಿಹಾಸವೆಂದು ಒಪ್ಪಿಕೊಳ್ಳುತ್ತಾರೋ ಅದೇ ವಿಕೃತಚಿತ್ರಣವಾಗಿದ್ದು, ಯಾವುದನ್ನು ವಿಕೃತಿಯೆಂದು ಅವರು ನಿರ್ಣಯಿಸುತ್ತಾರೋ ಅದೇ ನಿಜವಾದ ಇತಿಹಾಸವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವಲ್ಲ? ಟಿಪ್ಪುಸುಲ್ತಾನನ ಬಗ್ಗೆ ನಾವು ಇತಿಹಾಸದ ಎರಡು ಮಗ್ಗುಲುಗಳನ್ನು ಕಂಡಿದ್ದೇವೆ. 'ರಾಮಾಯಸ್ವಸ್ತಿ, ರಾವಣಾಯ ಸ್ವಸ್ತಿ' ಎಲ್ಲ ಕಾಲದಲ್ಲೂ ಕೇಳಿಬಂದಂಥದ್ದೇ.
- ಇಂಥ ಆಯ್ಕೆಯ ಸಂದರ್ಭಗಳಲ್ಲಿ ಘಟನೆ ಘಟಿಸುವ ಕಾಲದಲ್ಲಿ ಬರುವ ಬರವಣಿಗೆಗೂ, ಘಟನೆಯ ಎಷ್ಟೋ ಸಮಯದ ನಂತರ ಬರುವ ಬರವಣಿಗೆಗೂ ಇರುವ ಅಂತರವನ್ನು ಸಂಪಾದಕರು ಮನದಟ್ಟು ಮಾಡಿಕೊಂಡಿರಬೇಕಾಗುತ್ತದೆ. ಘಟನೆಯ ನಂತರ ಬರುವ ಬರವಣಿಗೆ ಏಕಮುಖವಾಗಿರುವ ಸಾಧ್ಯತೆಗಳನ್ನು ನಾವು 'ತುರ್ತು ಪರಿಸ್ಥಿತಿಯ ನಂತರ ಆ ಕುರಿತು ಬಂದ ಕತೆ ಕವಿತೆಗಳ' ಸಂದರ್ಭದಲ್ಲಿ ನೋಡಿದ್ದೇವೆ. ಸ್ವಾತಂತ್ರ್ಯ ಹೋರಾಟದ ನಂತರ, ಬಾಂಗ್ಲಾ ಯುದ್ಧದ ನಂತರ ಬಂದ ಬರವಣಿಗೆಗಳನ್ನು ನೆನಪಿಸಿಕೊಂಡಾಗ, 'ಸಂತೆಯ ಹೊತ್ತಿಗೆ ನೆಯ್ದ ಮೂರುಮೊಳ' ಮಾತ್ರವಲ್ಲ, ಘಟನೆಗಳ ವೈಭವೀಕರಣದಿಂದ ಸತ್ಯಕ್ಕೆ ಸಲ್ಲುವ ಅಪಚಾರವನ್ನೂ ನಾವು ಕಂಡಿದ್ದೇವೆ. ಕಲ್ಯಾಣಪ್ಪನ ಕ್ರಾಂತಿ, ಅಬ್ಬಕ್ಕರಾಣಿಯ ಕಥೆ ಮೊದಲಾದವೆಲ್ಲ ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದ ತುಳುಕುವಾಗ, ನಾವು ಯಾವ ಇತಿಹಾಸವನ್ನು ಓದುತ್ತೇವೆ? ಯಾವ ಸಾಮಾಜಿಕ ಸಂದರ್ಭವನ್ನು ನೆನಪಿಸಿಕೊಳ್ಳುತ್ತೇವೆ?
- ಸಾಹಿತ್ಯಿಕ ತಂತ್ರ ಮತ್ತು ಮಾಗುವಿಕೆಯನ್ನು ಗಮನದಲ್ಲಿರಿಸಿಕೊಳ್ಳದ ಇಲ್ಲಿನ ಹೆಚ್ಚಿನ ಕಥೆಗಳು ಪೇಲವವಾಗಿದ್ದು ಸುಮ್ಮನೆ ಓದಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡುವುದಿಲ್ಲ. ಈ ಕಥೆಗಳು ಒಂದು ಸಂದರ್ಭದ ಕನ್ನಡ ಕಥೆಗಾರಿಕೆಯ ಪ್ರಾತಿನಿಧಿಕ ಬರಹಗಳೇ ಎಂದರೆ ನಮಗೆ ಸಿಗುವ ಉತ್ತರವೂ ಅಸ್ಪಷ್ಟವೇ. ಒಟ್ಟು ಕನ್ನಡದ ಓಬಿರಾಯನ ಸಂದರ್ಭದ ಕಥೆಗಳ ಆಯ್ಕೆಯಲ್ಲಿ ಮುಂದೊಂದು ದಿನ ಯಾರಾದರೂ ತೊಡಗಿದರೆ, ಇಲ್ಲಿನ ಕಥೆಗಳಲ್ಲಿ ನಾಲ್ಕಾರಕ್ಕಿಂತ ಹೆಚ್ಚಿನದನ್ನು ಅವರು ಉಲ್ಲೇಖಿಸಲಾರರು. ಕಾದಂಬರಿಯ ಉಲ್ಲೇಖಿತ ಭಾಗಗಳನ್ನು ಸಣ್ಣಕಥೆ ಎಂದು ಒಪ್ಪಿಕೊಳ್ಳಬಹುದೆ ಎನ್ನುವುದು ಇದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಶ್ನೆ.
ಆದರೆ ಒಂದು ಮಾತನ್ನು ಮಾತ್ರ ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಕನ್ನಡದಲ್ಲಿ ಇಂಥ ಪ್ರಯೋಗಗಳು ನಡೆದದ್ದು ಅಪರೂಪ. ಕಾವ್ಯದಲ್ಲಿ ನಡೆದಿದೆಯಾದರೂ ಸಣ್ಣಕಥೆಯ ಮಟ್ಟದಲ್ಲಿ ನಡೆದೇ ಇಲ್ಲ ಎಂಬಷ್ಟು ಅಪರೂಪ. ಇಲ್ಲಿ ಆಯ್ದ ಕತೆಗಳನ್ನು ಒಂದು ಮಾದರಿಯಲ್ಲಿ ಪೋಣಿಸುವ, ತಮ್ಮ ಆಯ್ಕೆಗೆ ಸಮರ್ಥನೆಯನ್ನು ನೀಡುವ ಮತ್ತು ವಿಶಿಷ್ಟವಾದ ವಿಶ್ಲೇಷಣೆಯೊಂದನ್ನು ನಡೆಸುವ ಮೂಲಕ ಜನಾರ್ದನ ಭಟ್ಟರು ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲು ಇರಿಸಿದ್ದಾರೆ. ಸಾಹಿತ್ಯ ವಿದ್ಯಾರ್ಥಿಗಳಿಗೆ, ಅಭ್ಯಾಸಿಗಳಿಗೆ ಮತ್ತು ಜಿಜ್ಞಾಸುಗಳಿಗೆ ಮಾದರಿಯೆನ್ನುವ ಕೆಲಸವೊಂದನ್ನು ಮಾಡಿಕೊಟ್ಟಿದ್ದಾರೆ.

ಕೃತಿ: ಓಬಿರಾಯನ ಕಾಲದ ಕತೆಗಳು
ಸಂಪಾದಕ: ಜನಾರ್ದನ ಭಟ್
ಪ್ರ: ಕೌಸ್ತುಭ ಪ್ರಕಾಶನ, ಬೆಂಗಳೂರು
ಪುಟಗಳು: 656  ಬೆಲೆ: 350 ರು.

- ವಿಭಾವರಿ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.