ಕಲಾಚೇತನ
ಅಮೆರಿಕದ ರಾಬರ್ಟ್ ಹೆನ್ರಿ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಬದುಕಿದ್ದ ಕಲಾಚಿಂತಕ. ಆತ ಚಿತ್ರಕಲೆಯ ಶಿಕ್ಷಕನೂ ಆಗಿದ್ದವನು. ಆತ ಕಲೆಯ ಸಂಬಂಧದಲ್ಲಿ ಯಾವುದೇ ಪುಸ್ತಕ ಬರೆದವನಲ್ಲ. ಕೆಲವು ಕಡೆ ಆತ ಮಾಡಿದ ಭಾಷಣಗಳು ಮತ್ತು ಕಲೆಯ ಸಂಬಂಧದಲ್ಲಿ ಆತ ಮಾಡಿಟ್ಟುಕೊಂಡ ಟಿಪ್ಪಣಿಗಳನ್ನು 'ದಿ ಆರ್ಟ್ ಸ್ಪಿರಿಟ್' ಹೆಸರಿನಲ್ಲಿ ಪ್ರಕಟಿಸಲಾಗಿತ್ತು. ಕನ್ನಡದ ಹಿರಿಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ವಿ. ತಿರುಮಲೇಶ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಬರ್ಟ್ ಹೆನ್ರಿ ಒಂದು ಕಲಾ ಪರಂಪರೆಯಲ್ಲಿ ಹುಟ್ಟಿಬೆಳೆದಿದ್ದರೂ ಅದರ ಭಾಗವಾಗದೆ ಅದರಿಂದ ಭಿನ್ನವಾಗಿ ತನ್ನ ಆಲೋಚನೆಗಳನ್ನು ಮಂಡಿಸಿದ್ದಾನೆ. ಕಲೆಯು ವ್ಯಕ್ತಿನಿಷ್ಠವಾದದ್ದು. ಕಲಾವಿದನ ಕಣ್ಣಿಗೆ ಕಾಣುವ ಜಗತ್ತಿನ ಪಡಿಯಚ್ಚು ಕಲೆಯಲ್ಲ. ಅದು ಅವನಲ್ಲಿ ಮೂಡಿಸುವ ಭಾವನೆಗಳ ಅಭಿವ್ಯಕ್ತಿ ಕಲೆ ಎಂದು ಬಗೆದವನು ಹೆನ್ರಿ. ಭಾವನೆಗಳು ಕ್ಷಣಕ್ಷಣಕ್ಕೂ ಬದಲಾಗುವುದರಿಂದ ಒಂದೇ ಬೀಸಿನಲ್ಲಿ ಕಲಾಕೃತಿ ರಚಿಸುವುದಕ್ಕೆ ಅವನ ಒಲವು. ಕಲಾಭ್ಯಾಸಿಗಳಿಗೆ ಇದೊಂದು ಅಧ್ಯಯನಯೋಗ್ಯ ಕೃತಿಯಾಗಿದೆ.
ಕೃತಿ: ಕಲಾಚೇತನ, ಲೇ: ಕೆ.ವಿ. ತಿರುಮಲೇಶ
ಪ್ರಕಾರ: ಅನುವಾದ, ಏಕೆ ಓದಬೇಕು?: ಕಲೆಯ ಬಗ್ಗೆ ಅರಿಯಲು
ಪ್ರ: ಅಭಿನವ, ಬೆಂಗಳೂರು, ಪುಟಗಳು 260 ಬೆಲೆ ರು. 150
ಕಪ್ಪುಹಾಡು
ಕನ್ನಡದ ಪ್ರಮುಖ ವಿಮರ್ಶಕರಲ್ಲೊಬ್ಬರಾದ ಎಚ್.ಎಸ್. ರಾಘವೇಂದ್ರರಾವ್ ಅವರು ಆಫ್ರಿಕ ಖಂಡದ ವಿವಿಧ ದೇಶಗಳ ಕವಿಗಳು ಬರೆದ ನೂರು ಕವಿತೆಗಳನ್ನು ಆಯ್ದುಕೊಂಡು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಆರಿಸಿಕೊಂಡ ಕವಿತೆಗಳ ಕಾಲಮಾನ 1900ರಿಂದ 2009. ಈ ಖಂಡವನ್ನು ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು ಹೀಗೆ ಬೇರೆಬೇರೆ ದೇಶದವರು ಆಳಿದ್ದರಿಂದ ಅಲ್ಲಿಯ ಭಾಷೆಗಳೂ ಬೇರೆಬೇರೆ. ಆಳರಸರ ಭಾಷೆಯನ್ನೇ ಅಲ್ಲಿಯ ಸ್ಥಳೀಯರು ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಬಳಸಿಕೊಂಡಿದ್ದಾರೆ. ಆಫ್ರಿಕದ ಮೂಲ ನಿವಾಸಿಗಳು ತಮ್ಮ ಭಾಷೆಯಲ್ಲಿಯೇ ಕಾವ್ಯ ರಚಿಸಿದ್ದರೂ ಅದನ್ನು ಅವರೇ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಆಫ್ರಿಕದ ದೇಶಗಳು ಬೇರೆಬೇರೆಯಾದರೂ ಅವರು ಅನುಭವಿಸಿದ ನೋವಿನಲ್ಲಿ ಸಾಮ್ಯತೆ ಇದೆ. ಗುಲಾಮಗಿರಿ, ಪರಕೀಯರ ದಾಸ್ಯ, ಸ್ವಂತಿಕೆಯ ನಾಶ ಇವೆಲ್ಲ ಸಾಮಾನ್ಯವಾದ ಅನುಭವಗಳು. ಅವಮಾನ, ವಿಷಾದ, ಆತ್ಮನಿಂದನೆಗಳಿಂದ ಹೊಮ್ಮಿದ ಕೋಪವೇ ಇಲ್ಲಿ ಕಾವ್ಯವಾಗಿದೆ. ಈ ಅನುವಾದ ಕನ್ನಡಕ್ಕೆ ಅತ್ಯಮೂಲ್ಯ.
ಕೃತಿ: ಕಪ್ಪು ಕವಿತೆ
ಪ್ರಕಾರ: ಅನುವಾದ- ಆಫ್ರಿಕನ್ ಕವಿತೆಗಳು
ಏಕೆ ಓದಬೇಕು?: ಆಫ್ರಿಕದವರ ನೋವು ಅರಿಯಲು
ಪ್ರ: ಅಭಿನವ, ಬೆಂಗಳೂರು, ಪುಟಗಳು 264 ಬೆಲೆ ರು. 200
ಬೆಳಕಿನೆಡೆಗೆ
ಆಂಥೋನಿ ಡಿ ಮೆಲ್ಲೋ ಎಸ್.ಜೆ. ಅವರು ಇಂಗ್ಲಿಷಿನಲ್ಲಿ ಬರೆದ 'ದಿ ಪ್ರೇಯರ್ ಆಫ್ ದಿ ಫ್ರಾಗ್-2' ಕೃತಿಯನ್ನು ಡಾ.ಡಿ. ಶೀಲಾಕುಮಾರಿ ಅವರು 'ಬೆಳಕಿನೆಡೆಗೆ-2' ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಟ್ಟಪುಟ್ಟ ದೃಷ್ಟಾಂತಗಳ ಮೂಲಕ ಸತ್ಯವನ್ನು ಮನಗಾಣಿಸುವುದು ಈ ಕೃತಿಯ ಉದ್ದೇಶ. ಸತ್ಯವು ಆನಂದ ಮತ್ತು ವಿಮೋಚನೆಯನ್ನು ನೀಡುವ ಕಾರಣದಿಂದ ಮಾನವನಿಗೆ ಪ್ರಿಯವಾಗಬೇಕು. ವಾಸ್ತವೆಂದರೆ ಸತ್ಯಕ್ಕೆ ಮಾನವನ ಪ್ರತಿಕ್ರಿಯೆ ದ್ವೇಷ ಮತ್ತು ಭಯ. ಸತ್ಯವನ್ನು ಪ್ರಿಯವಾಗುವಂತೆ ಹೇಳಬೇಕು. ಅಪ್ರಿಯವಾಗುವಂತೆ ಸತ್ಯವನ್ನು ಹೇಳಬಾರದು ಎಂಬುದು ಅನುಭವದ ನುಡಿ. ಡಿ. ಮೆಲ್ಲೋ ಅದನ್ನು ಚೆನ್ನಾಗಿ ಅರಿತಿದ್ದರು. ಪುಟ್ಟ ಕತೆಗಳ ಮೂಲಕ ಸತ್ಯವನ್ನು ಅವರು ಇಲ್ಲಿ ಹೇಳಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಹೀಗೆ ಎಲ್ಲ ಧರ್ಮಗಳಿಂದ ಸತ್ಯದ ಸಾರವನ್ನು ಅವರು ಇಲ್ಲಿ ನೀಡಿದ್ದಾರೆ. ಒಮ್ಮೆ ಒಂದು ಅಥವಾ ಎರಡಕ್ಕಿಂತ ಹೆಚ್ಚಿಗೆ ಓದಬೇಡಿ ಎಂಬದು ಅವರ ಮನವಿ. ಓದಿದ್ದನ್ನು ಮನನ ಮಾಡಿಕೊಳ್ಳಬೇಕು ಎಂಬುದು ಇದರ ಹಿಂದಿನ ಆಶಯ.
ಕೃತಿ: ಬೆಳಕಿನೆಡೆಗೆ-2
ಪ್ರಕಾರ: ಅನುವಾದ
ಏಕೆ ಓದಬೇಕು?: ಸತ್ಯದ ಅನುಸಂಧಾನಕ್ಕೆ
ಪ್ರ: ಚಾರು ಪ್ರಕಾಶನ, ಮೈಸೂರು, ಪುಟಗಳು 188 ಬೆಲೆ ರು. 125
ಪದಬಂಧ
ಪದಬಂಧ ಇಂದು ಪತ್ರಿಕೆಗಳ ಅವಿಭಾಜ್ಯ ಅಂಗಗಳಾಗಿವೆ. ಇದು ಕೆಲವರಿಗೆ ಕಾಲಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟರೆ ಕೆಲವರಿಗೆ ಬುದ್ಧಿಗೆ ಕಸರತ್ತನ್ನು ಒದಗಿಸುತ್ತದೆ. ಪದಬಂಧಗಳನ್ನು ಬಿಡಿಸುವುದರಿಂದ ಶಬ್ದಸಂಪತ್ತು ಅಧಿಕವಾಗುತ್ತದೆ. ಪದಬಂಧವು ಒಡಪುಗಳನ್ನು ಹೊಂದಿರುತ್ತದೆ. ಪದಬಂಧ ರಚಿಸುವುದೂ ಒಂದು ಕಲೆ. ನಿರಂತರವಾಗಿ ಪದಬಂಧ ರಚಿಸುವಾಗ ಪುನರಾವರ್ತನೆಯ ಅಪಾಯ ಇರುತ್ತದೆ. ಇಂದು ಇಂಗ್ಲಿಷ್ನಲ್ಲಿ ಇದು ಕ್ರಾಸ್ವರ್ಡ್ ಎಂದು ಪ್ರಸಿದ್ಧವಾಗಿದೆ. ಮೊಟ್ಟಮೊದಲ ಪದಬಂದ ನ್ಯೂಯಾರ್ಕ್ ವರ್ಲ್ಡ್ ಪತ್ರಿಕೆಯಲ್ಲಿ ಅರ್ಥರ್ ವ್ಯಾನೆ ಎಂಬವರು ರಚಿಸಿದ್ದು. 1913ರ ಡಿಸೆಂಬರ್ 21ರಂದು ಇದು ಪ್ರಕಟವಾಗಿತ್ತು. ಅದನ್ನು ವರ್ಡ್ಕ್ರಾಸ್ ಎಂದು ಪ್ರಕಟಿಸಿದ್ದರು. ಈ ಕೃತಿಯಲ್ಲಿ ಮೊಟ್ಟಮೊದಲು ಪ್ರಕಟವಾದ ಆ ವರ್ಡ್ಕ್ರಾಸ್ನ ಚಿತ್ರಕೂಡ ಇದೆ. ಬುದ್ಧಿಯ ಚಾಲಾಕಿತನ ಹೆಚ್ಚಿಸುವ ಪದಬಂಧವನ್ನು ಬಿಡಿಸುವುದು ಆರೋಗ್ಯಕರ ಚಟ. ವಿದ್ಯಾ ವಿ. ಹಾಲಭಾವಿಯವರು ನೂರು ಪದಬಂಧಗಳನ್ನು ಇದೋ 'ಪದಬಂಧ' ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ನೀಡಿದ್ದಾರೆ.
ಕೃತಿ: ಇದೋ ಪದಬಂಧ, ಪ್ರಕಾರ: ಪದಬಂಧ, ಏಕೆ ಓದಬೇಕು?: ಬುದ್ಧಿ ಚುರುಕಾಗಿರಲು, ಪ್ರ: ಸಪ್ನ ಬುಕ್ಹೌಸ್ ಬೆಂಗಳೂರು, ಪುಟಗಳು 232 ಬೆಲೆ ರು. 120
ನೇತಾಜಿ ಕಣ್ಮರೆ ರಹಸ್ಯ
ಭಾರತೀಯರು ಅತಿಯಾಗಿ ಪ್ರೀತಿಸುವ ಮತ್ತು ಗೌರವಿಸುವ ರಾಷ್ಟ್ರನಾಯಕರಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರು ಒಬ್ಬರು. ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕದು ಎಂಬು ಭಾವಿಸಿ ಸಶಸ್ತ್ರ ಹೋರಾಟಕ್ಕೆ ಮುಂದಾಗಿದ್ದ ಅವರು ಆಜಾದ್ ಹಿಂದ್ ಫೌಜ್ ಎಂಬ ಸೇನೆ ಕಟ್ಟಿದ್ದರು. ವಿಮಾನ ಅಪಘಾತದಲ್ಲಿ ಕಣ್ಮರೆಯಾದ ಅವರ ಬಗ್ಗೆ ಅನೇಕ ಕತೆಗಳು ಹುಟ್ಟಿಕೊಂಡಿವೆ. ಇತಿಹಾಸವೆಂದು ಹೇಳುತ್ತಿರುವ ವರದಿಗಳನ್ನು ಬಹುತೇಕರು ಒಪ್ಪುತ್ತಿಲ್ಲ. ಸುಭಾಷರ ಕಣ್ಮರೆಯ ಹಿಂದಿನ ರಹಸ್ಯವೇನು ಎಂಬುದನ್ನು ವಿದ್ವಾಂಸರಾದ ಡಾ.ಕೆ.ಎಸ್. ನಾರಾಯಣಾಚಾರ್ಯ ಕೆದಕಿದ್ದಾರೆ. ಅನೇಕ ವಿಷಯಗಳನ್ನು ಬೇರೆಬೇರೆ ಮೂಲಗಳಿಂದ ಸಂಗ್ರಹಿಸಿದ್ದಾರೆ. ಸುಭಾಷರ ಕಣ್ಮರೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆಯೇ, ಯೋಗಿಯಾಗಿ ಅವರು ಬದುಕಿದರೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಕೃತಿಯಲ್ಲಿ ಸುಭಾಷರ ಹಲವು ಅಪರೂಪದ ಛಾಯಾಚಿತ್ರಗಳು ಇರುವುದು ವಿಶೇಷ.
ಕೃತಿ: ಸುಭಾಷರ ಕಣ್ಣರೆ ಅನ್ಯಾಯದ ಅಧ್ಯಾಯ
ಪ್ರಕಾರ: ಶೋಧ
ಏಕೆ ಓದಬೇಕು?: ಸುಭಾಷರ ಬಗ್ಗೆ ಅರಿಯಲು
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 128 ಬೆಲೆ ರು. 110
ಸಿನಿಮಾ ಚರಿತ್ರೆ
ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು ಅವರು ಕನ್ನಡದ ನೂರು ಸಿನಿಮಾಗಳ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಲವು ಘಟನೆಗಳನ್ನು ತಮ್ಮ 'ನೂರು ಚಿತ್ರಗಳು ನೂರಾರು ನೆನಪುಗಳು' ಕೃತಿಯಲ್ಲಿ ವಿವರಿಸಿದ್ದಾರೆ. ಇವರು ಇಲ್ಲಿ ಪ್ರಸ್ತಾಪಿಸಿರುವ ಸಿನಿಮಾಗಳು ಚಿತ್ರರಂಗದ ಇತಿಹಾಸದ ದೃಷ್ಟಿಯಿಂದ ಮಹತ್ವವಾದವು. ಯಾರಿಗೂ ಇದುವರೆಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಗಣೇಶ ಇಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರತಿಯೊಂದು ಚಿತ್ರದ ವಿವರಣೆಗೆ ಮುನ್ನ ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ನೀಡಿದವರು, ಹಾಡು ಬರೆದವರು, ನಟನಟಿಯರು ಹೀಗೆ ಎಲ್ಲ ವಿವರಗಳನ್ನು ನೀಡಿದ್ದಾರೆ. ಇಲ್ಲಿ ಅವರು ಯಾವುದೇ ಕಾಲಾನುಕ್ರಮಣಿಕೆಯಲ್ಲಿ ಸಿನಿಮಾಗಳ ಪಟ್ಟಿ ಮಾಡಿಲ್ಲ. ಸಿನಿಮಾದ ತಾಂತ್ರಿಕ ವಿವರಗಳಿಗಿಂತ ಆ ಚಿತ್ರಕ್ಕೆ ಸಂಬಂಧಿಸಿದ ಯಾವುದೋ ಒಂದು ಮಹತ್ವದ ಸಂಗತಿಯನ್ನು- 'ಶರಪಂಜರ'ದಲ್ಲಿ ಪುಟ್ಟಣ್ಣನವರು ಎಂಟು ಲಾರಿ ಕಿತ್ತಳೆಹಣ್ಣನ್ನು ಬೆಟ್ಟದ ತುದಿಯಿಂದ ಉರುಳಿಸಿದ್ದು- ತುಂಬ ಆಪ್ತವಾದ ಭಾಷೆಯಲ್ಲಿ ಗಣೇಶ ವಿವರಿಸಿದ್ದಾರೆ.
ಕೃತಿ: ನೂರು ಚಿತ್ರಗಳು ನೂರಾರು ನೆನಪುಗಳು, ಲೇ: ಗಣೇಶ ಕಾಸರಗೋಡು, ಪ್ರಕಾರ: ಸಿನಿಮಾ ಸಂಕಥನ, ಏಕೆ ಓದಬೇಕು?: ಚಿತ್ರರಂಗದ ಬಗ್ಗೆ ಅರಿಯಲು, ಪ್ರ: ಅಮ್ಮ ಪ್ರಕಾಶನ, ಬೆಂಗಳೂರು, ಪುಟಗಳು 348 ಬೆಲೆ ರು. 180
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

