ಸೇತೂ ಸಲಾಂ

ಇಂದು ಆ್ಯಂಬುಲೆನ್ಸ್ ಸೈರನ್ ಸದ್ದು ಕಾಮನ್ನು. ಆದರೆ ಈ ಸೈರನ್ನಿನ ಸದ್ದು ಬೆಂಗಳೂರಿನ ರಂಗಶಂಕರದಲ್ಲೂ ಕೇಳಿಸಿತು! ಅಂಥದ್ದೇನೂ ಅಲ್ಲಿ ಘಟಿಸಲಿಲ್ಲ. ಆದರೆ ಹಿರಿಯ ನಟ ಎಸ್.ಎನ್. ಸೇತೂರಾಂ ರಂಗವರ್ತುಲ ತಂಡಕ್ಕಾಗಿ ರಚಿಸಿ, ವಿನ್ಯಾಸಗೊಳಿಸಿ, ನಿರ್ದೇಶಿಸಿದ ನಾಟಕ 'ನಿಮಿತ್ತ'ದ ಆರಂಭ ಆಗಿದ್ದೇ ಈ ಸೈರನ್ ಸದ್ದಿನಿಂದ!
ಸೈರನ್ ಹಿನ್ನೆಲೆಯಲ್ಲಿ ರಂಗದ ಮೇಲೆ ಬೆಳಕು ಚೆಲ್ಲಲು ಡಾಕ್ಟರ್ ಪಾತ್ರಧಾರಿಯಾಗಿ ತಮ್ಮದೇ ನಡೆ- ಮಾತಿನ ಧಾಟಿಯ ಸೇತೂರಾಂ ಹಾರ್ಟ್ ಸರ್ಜನ್ ಸ್ಪೆಷಲಿಸ್ಟ್ ಆಗಿದ್ದು ಹೀಗೆ ಎಂಬ ಹಿನ್ನೆಲೆಯನ್ನು ವಿವರಿಸುತ್ತಾ, ಸುಸಜ್ಜಿತ ಆಸ್ಪತ್ರೆಯನ್ನೂ ಮತ್ತು ಅಲ್ಲಿನ ಕಾರ್ಯವೈಖರಿಯನ್ನು ನವಿರು ಹಾಸ್ಯದಲ್ಲಿ ಪರಿಚಯಿಸುತ್ತಾರೆ.
ಕುಡುಕ, ಜೂಜುಕೋರ, ಸಾಲಗಾರ, ಮಹಾನ್ ಸುಳ್ಳುಗಾರ- ಹೀಗೆ ಕೆಟ್ಟ ಗುಣಗಳ ಪರಮಾವಧಿಯನ್ನು ವ್ಯಕ್ತಿಯ ಸುತ್ತ ಹೆಣೆದು ಈ ಸಂಸಾರದ ಮುಖೇನ ಸಮಾಜದ ಏರುಪೇರುಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ತಾಯಿ, ಹೆಂಡತಿಯ ತಾಳಿಯನ್ನು ಕದ್ದುಮಾರುವ ಕೆಟ್ಟ ವ್ಯಕ್ತಿಯಾಗಿ ಸಿಹಿಕಹಿ ಚಂದ್ರು ಲವಲವಿಕೆಯ ಅಭಿನಯದೊಂದಿಗೆ ಹಾರ್ಟ್ ಪೇಶೆಂಟ್ ಮರಣಶಯ್ಯೆಯಲ್ಲಿ ಅನುಭವಿಸುವ ಯಾತನೆಯನ್ನು ಪ್ರೇಕ್ಷಕನ ಮನಮುಟ್ಟಿಸಿದರು. ಸಪೂರವಾಗಿರುವ ಚಂದ್ರು, ಈ ಪಾತ್ರಕ್ಕಾಗಿಯೇ ಸ್ಲಿಮ್ಮಾದರೇನೋ ಅನ್ನಿಸುತ್ತದೆ.
ಈ ಕೆಟ್ಟ ವ್ಯಕ್ತಿಯ ತಾಯಿಯಾಗಿ ಪದ್ಮಶ್ರೀ ಡಾ. ಬಿ. ಜಯಶ್ರೀ ವಿಶೇಷ ಪಾತ್ರದಲ್ಲಿ ಗಮನ ಸೆಳೆದರು. ಮಗನ ಕೆಟ್ಟ ಚಾಳಿಗಳ ಗುಣಗಾನ ಮಾಡುತ್ತಾ ಪ್ರೇಕ್ಷಕನಿಗೆ ಹತ್ತಿರವಾದರು. ತಾಳಿಯನ್ನು ಮಗ ಕದ್ದೊಯ್ದನೆಂದೂ ಯಾರಿಗೂ ತಿಳಿಸದೇ, ಗಂಡನ ಮರಣಾನಂತರ ಬಂದ ಹಣದಲ್ಲಿ ತಾಳಿ ಮಾಡಿಸಿಕೊಳ್ಳುತ್ತಾಳೆ. ಯಾಕಂದ್ರೆ ತಾಳಿ ಕೀಳುವ ಕಾರ್ಯಕ್ರಮದಲ್ಲಿ ತಾಳಿ ಇರಬೇಕಲ್ಲ ಅದಕ್ಕೆ! ಸಂಸ್ಕಾರ, ಆಚಾರಗಳ ಬಗ್ಗೆ ಮನ ಹಿಂಡುವ ಸಂಭಾಷಣೆಯಲ್ಲಿ ಸೇತೂರಾಮ್ ಕಾಣುತ್ತಾರೆ.
ಹೊರದೇಶದಿಂದ ಬಂದ ರೋಗಿಯ ಹೆಂಡತಿಯ ಪಾತ್ರದಲ್ಲಿ ಮಂಗಳ ಅಭಿನಯಿಸಿದ್ದಾರೆ. ಮದುವೆಯಾದಾಗಿನಿಂದ ಗಂಡನನ್ನು ಸಾಕಿದ ಹೆಂಡತಿಯಾಗಿ, ಹೆಣ್ಣು ಮಕ್ಕಳ ತಾಯಿಯಾಗಿ, ವಯಸ್ಸಾದ ಅತ್ತೆಯ ಸೊಸೆಯಾಗಿ ಈ ಪಾತ್ರ ಇಡೀ ನಾಟಕವನ್ನು ಆವರಿಸುತ್ತದೆ. ಈ ಪಾತ್ರಕ್ಕೆ ಸಮ್ಮತವಾದ ನ್ಯಾಯವನ್ನು ಮಂಗಳ ನೀಡಿದ್ದಾರೆ. ವೈದ್ಯರ ಪ್ರಶ್ನೆಗೆ ಉತ್ತರಿಸುತ್ತಾ, 'ಹೆಣ್ಣು ಪ್ರಕೃತಿ. ಋತುಗಳು ಕಳೆದಂತೆ ಹೆಣ್ಣು ಮತ್ತೆ ಮತ್ತೆ ಚಿಗುರಿ, ಹೂವಾಗಿ, ಕಾಯಾಗಿ, ಹಣ್ಣಾಗಿ ಹಣ್ಣಿನಿಂದ ಬೀಜವಾಗಿ ಬಿತ್ತಿ ಮರವಾಗಿ ಬೇರು ಬಿಡುವವಳು ಹೆಣ್ಣು' ಎಂಬ ಮಂಗಳ ಅವರ ಮಾತು ಕಿವಿಯಲ್ಲಿ ನೆಲೆಯೂರುತ್ತದೆ. ಗಂಡು ಭೂತದಲ್ಲಿ ನಿಂತರೆ, ಹೆಣ್ಣು ಭವಿಷ್ಯದಲ್ಲಿ, ಕಲ್ಪನೆಯಲ್ಲಿ, ಭ್ರಮೆಗಳಲ್ಲಿ, ಕನಸುಗಳಲ್ಲಿ ಜೀವನ ನಡೆಸುತ್ತಾರೆ ಎಂಬ ಮೋಡಿಯ ಮಾತು ಪ್ರೇಕ್ಷಕನ ನಿರೀಕ್ಷೆಗೆ ಸ್ಪಷ್ಟ ಉತ್ತರ.
ಆಫೀಸರ್ ಆಗಿ ನಿತೀಶ್ರನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದ್ದಲ್ಲದೆ ಕೆಲವೊಮ್ಮೆ ವಿಶೇಷವಾಗಿ ತೋರಿಸಿ ಪಾತ್ರ ಪೋಷಣೆಯ ಜವಾಬ್ದಾರಿಯನ್ನು ಸರಿದೂಗಿಸಿದ್ದಾರೆ. ಈಗಿನ ಅತ್ಯಾಚಾರದ ಮೇಲೂ ನಾಟಕದ ವಿಚಾರ ಹೊರಳುತ್ತದೆ. ಹೊರದೇಶದ ವ್ಯಾಮೋಹವನ್ನು ಸ್ಪರ್ಶಿಸಲಾಗಿದೆ. ಈ ನೆಲಗಳಿಗೆ ಹೊಂದಿಕೊಂಡಿರುವ ಇಬ್ಬರು ಹೆಣ್ಣು ಮಕ್ಕಳು (ಶ್ವೇತಾ ಬಡಿಗೇರ್ ಮತ್ತು ನಂದಿನಿ ಮೂರ್ತಿ) ಕೆಟ್ಟ ತಂದೆಯನ್ನು ಎದುರಿಸುವ ಮತ್ತು ತಂದೆಯ ಸಾವನ್ನು ಬಯಸುವಂಥ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೀಗೆ, ಮಣ್ಣಿನ ವಾಸನೆಯನ್ನು ಲೇಪಿಸಲು ಹೊರಟಿದ್ದು ಒಂದರ್ಥದಲ್ಲಿ ಹೊಸ ಹೆಜ್ಜೆ.
ಮೆಟ್ಟಿಲುಗಳಂತೆ ಕಾಣುವ ಈ ಜಾಗವನ್ನು ಆಸ್ಪತ್ರೆಯ ಹೊರ ಭಾಗವಂತಲೂ, ರೋಗಿ ಇರುವ ಮಂಚದ ಪರಿಸರ ಐಸಿಯು ಅಂತಲೂ ಬಿತ್ತರಿಸಿ ಸರಳವಾಗಿ ರಂಗಸಜ್ಜಿಕೆಗೊಳಿಸಿದ್ದು ವಿಶೇಷ. ಒಬ್ಬ ಕೆಟ್ಟ ಚಾಳಿಯ ರೋಗಿಯನ್ನು ನಿಮಿತ್ತ ಮಾತ್ರ ಮಾಡಿಕೊಂಡು ಒಂದು ಕೆಟ್ಟ ಸಮಾಜವನ್ನು ಇಲ್ಲಿ ಪ್ರತಿಮಾರೂಪವಾಗಿ ಬಳಸಿ ಕಥೆಯನ್ನು ಹೆಣೆದು ಅತಿ ಕಡಿಮೆ ಪರಿಕರ, ಸರಳ ರಂಗಸಜ್ಜಿಕೆ ಕಡಿಮೆ ಪಾತ್ರಗಳಿಂದ ಸಮಾಜದ ಅಂಕುಡೊಂಕೊಂದನ್ನು ತಿದ್ದುತ್ತಾ ಕೆಟ್ಟವ್ಯಕ್ತಿಯ ಪಾತ್ರವನ್ನು ಸಾಯಿಸುವ ಮುಖೇನ ಸಮಾಜದ ಕೆಟ್ಟ ವ್ಯವಸ್ಥೆಗೆ ಮಣೆ ಹಾಕದೇ ಅದನ್ನು ದಮನ ಮಾಡಿ ಎಂಬ ಸಂದೇಶವನ್ನು ನಿರ್ದೇಶಕರು ಸಾರಿದ್ದಾರೆ. ಹೃದಯವಂತರಿಗೆ ಹೃದಯ ಚಿಕಿತ್ಸೆ ಮಾಡಬಹುದು. ಆಪರೇಷನ್ ಮಾಡಲು ಹೃದಯವೇ ಇರದಿದ್ದರೆ! ಮೊದಲೆಲ್ಲ ಹೃದಯ ಬಡಿತ ಡಬ್ ಡಬ್ ಡಬ್... ಈಗೆಲ್ಲಾ ದುಡ್ಡು.... ದುಡ್ಡು... ಸದ್ದು ಹೃದಯ ಬಡಿತದೊಳಗೆ ಬೆರೆತಿದೆ ಎಂಬ ಹೊಸ ವ್ಯಾಖ್ಯಾನ ಇಲ್ಲಿ ಸಿಗುತ್ತದೆ.
ಮನೋಜ್ ವಶಿಷ್ಠ ಹಿನ್ನೆಲೆ ಸಂಗೀತ ನೀಡಿದ್ದಲ್ಲದೇ, ಹಾಡನ್ನು ಹಾಡಿದ್ದಾರೆ. ಇವರ ಹಾಡಿಗೆ ಅನುಷಾರ ಸಾಥ್ ಇದೆ. ಲಘು ಗೀತೆಗಳು ತೂಕ ಹೆಚ್ಚಿಸಿವೆ. ಮುಸ್ತಾಫಾರ ಬೆಳಕು, ರಾಮಕೃಷ್ಣ ಬೆಳತ್ತೂರು ಅವರ ಮೇಕಪ್ ಅಷ್ಟೇ ಪೂರಕ.
-ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


