ಎರಡು ಹೆಣ್ಣು ಗೊಂಬೆಗಳು
ಅವೆರಡೂ ಹೆಣ್ಣು ಗೊಂಬೆಗಳು. ಅವನ್ನು ಅದು ಯಾವ ಪುಣ್ಯಾತ್ಮ ಸೃಷ್ಟಿಸಿದನೋ, ಯಾವ ಪುಣ್ಯಾತ್ಮ ಪ್ರತಿಷ್ಠಾಪಿಸಿದನೋ ಆ ಪರಮಾತ್ಮನೇ ಬಲ್ಲ. ಅವನ್ನು ಸೃಷ್ಟಿಸಿದವನು ಅವುಗಳಿಗೆ ಕಣ್ಣುಗಳನ್ನು ಕೊಟ್ಟ, ನೋಡಬಾರದ್ದನ್ನು ನೋಡಲು. ಬುದ್ಧಿ ಕೊಟ್ಟ, ನೆಮ್ಮದಿಯನ್ನು ಹಾಳು ಮಾಡಿಕೊಳ್ಳಲು. ಕಿವಿಗಳನ್ನು ಕೊಟ್ಟ, ಹೆಣ್ಣುಗಳ ಆಕ್ರಂದನ ಕೇಳಲು. ಬಾಯಿ ಕೊಡಲಿಲ್ಲ ದನಿ ಎತ್ತಲು. ಕೈಗಳನ್ನು ಕೊಡಲಿಲ್ಲ ಕಣ್ಣು ಕಿವಿಗಳನ್ನು ಮುಚ್ಚಿಕೊಳ್ಳಲು. ಯಾಕೆಂದರೆ ಅವೆರಡೂ ಎದೆ ಮಟ್ಟದ ಗೊಂಬೆಗಳು. ಅವು ಪ್ರತಿಷ್ಠಾಪನೆಯಾಗಿರುವುದು ಯಾರಿಗೂ ನಿಲುಕಲಾರದಷ್ಟು ಎತ್ತರದಲ್ಲಿ. ಪ್ರಪಂಚದಲ್ಲಿ ಯಾವುದನ್ನು ಬೇಕಾದರೂ, ಏನನ್ನು ಬೇಕಾದರೂ ನೋಡುವ ಅವಕಾಶ ಅವಕ್ಕಿವೆ. ಅದೆಷ್ಟು ಶತಮಾನಗಳ ಹಿಂದೆ ಅವು ಹುಟ್ಟಿದವೋ ಯಾರಿಗೂ ಗೊತ್ತಿಲ್ಲ. ಮಾನವನ ಉಗಮವಾದಂದಿನಿಂದ ಹೆಣ್ಣುಗಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ನೋಡುತ್ತಲೇ ಇರುವ ಆ ಗೊಂಬೆಗಳು ಅನುಭವಿಸುತ್ತಿರುವ ಯಾತನೆಗೆ ಕೊನೆಯೇ ಇಲ್ಲ. ಯಾಕೆಂದರೆ ಆ ಗೊಂಬೆಗಳಿಗೆ ಸಾವೇ ಇಲ್ಲ.
ಹಸುಗೂಸುಗಳ, ಹುಡುಗಿಯರ, ಯುವತಿಯರ, ಮಧ್ಯವಯಸ್ಕ ಹೆಣ್ಣುಗಳ, ಮುದುಕಿಯರ ಮೇಲೆ ಹುಡುಗರಿಂದ, ಯುವಕರಿಂದ, ಮಧ್ಯವಯಸ್ಕರಿಂದ, ಮುದುಕರಿಂದ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಲೆಕ್ಕವಿಟ್ಟವರ್ಯಾರು? ಇಟ್ಟರೂ, ಆಕಾಶದಲ್ಲಿನ ನಕ್ಷತ್ರಗಳೂ ಅವಕ್ಕೆ ಸಾಟಿಯಾಗಲಾರವು. ಅಧಿಕಾರ, ಆಸ್ತಿ, ಅಂತಸ್ತು, ರೂಪ, ಗುಣ ಯಾವುವೂ ಈ ಅತ್ಯಾಚಾರಗಳಿಗೆ ಅಡ್ಡಿಯೊಡ್ಡದು. ಯಾವ ಹೆದರಿಕೆಯೂ ಇಲ್ಲ, ಯಾವ ಶಿಕ್ಷೆಯೂ ಇಲ್ಲ ಆ ರಕ್ಕಸರಿಗೆ. ದೂರು, ಪೊಲೀಸು, ಕೋರ್ಟು, ಕಚೇರಿ, ಜೈಲು, ಬೆಯ್ಲು, ಅಸೆಂಬ್ಲಿಗಳಲ್ಲಿ ಚರ್ಚೆ, ಫೇಸ್ಬುಕ್ಕುಗಳಲ್ಲಿ ಅಪ್ಡೇಟುಗಳು, ಕಿರುತೆರೆಗಳಲ್ಲಿ, ಪತ್ರಿಕೆಗಳಲ್ಲಿ ಅವುಗಳ ಬ್ಲೋ ಅಪ್ಗಳು, ದೇಶದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು, ದೊಡ್ಡ ತಲೆಗಳ ತಿಕ್ಕಲುತನದ ಹೇಳಿಕೆಗಳು, ಇನ್ನಷ್ಟು ದೊಡ್ಡ ತಲೆಗಳ ಪ್ರತಿ ಹೇಳಿಕೆಗಳು, ಇತ್ಯಾದಿ ಇತ್ಯಾದಿ ಮಣ್ಣು-ಮಸಿಗಳೆಲ್ಲ ನೀರ ಮೇಲಿನ ಗುಳ್ಳೆಗಳು. ಆ ರಾಕ್ಷಸರಿಗೆ ಎಲ್ಲ ಬೀದಿಗಳೂ ರಾಜಬೀದಿಗಳೇ. ಯಾರ ಭಯವೂ, ಯಾವುದರ ಭಯವೂ ಅವರಿಗಿಲ್ಲ.
'ಇದಕ್ಕೆ ಕೊನೆಯೇ ಇಲ್ಲವೇ ಕುಸುಮಾ?'
'ಹ್ಹ ಹ್ಹ ಹ್ಹ. ಈ ಪ್ರಶ್ನೆ ಅದೆಷ್ಟು ಸಾರಿ ನಮ್ಮ ತಲೆಯಲ್ಲಿ ಬಂದಿದೆ ಅನ್ನೋದನ್ನೇನಾದರೂ ಲೆಕ್ಕ ಇಟ್ಟಿದ್ದೀಯಾ ಸುಮಾ?'
'ಲೆಕ್ಕ ಇಡೋಕೆ ಅಷ್ಟು ದೊಡ್ಡ ಸಂಖ್ಯೆಗಳೇ ಇಲ್ಲವಲ್ಲ?'
'ಸುಮಾ' ಆಶ್ಚರ್ಯದಿಂದ ಪಿಸುಗುಟ್ಟಿದಳು ಕುಸುಮ.
'ಏನು?' ಅಷ್ಟೇ ಮೃದುವಾಗಿ ಸುಮ ಕೇಳಿದಳು.
'ನಾವಿಬ್ಬರೂ ಮಾತಾಡ್ತಾ ಇದ್ದೀವಿ. ಗೊತ್ತಾಗ್ತಾ ಇದೆಯಾ?'
'ಹೌದಲ್ಲೇ, ಇಬ್ಬರೂ ಮಾತಾಡ್ತಾ ಇದ್ದೀವಿ! ನಾವು ಮಾತಾಡ್ತಿರೋದು ಇಬ್ಬರಿಗೂ ಕೇಳಿಸ್ತಾನೂ ಇದೆ. ಅಂದರೆ, ಇವತ್ತಿಗೆ ನಮಗೆ ಶಾಪ ವಿಮೋಚನೆಯಾಯಿತು ಅಂತಾಯ್ತು. ನಾವೂ ದನಿ ಎತ್ತುವ ಹಾಗಾಯಿತು'
'ನಾವು ದನಿ ಎತ್ತಿ ಏನು ತಾನೇ ಮಾಡಬಹುದು?'
'ಶತಮಾನಗಳಿಂದ ಎಲ್ಲವನ್ನೂ ನೋಡಿಕೊಂಡು ಕಣ್ಣೀರಿಡೋದೇ ಆಯ್ತು. ಏನೂ ಪ್ರಯೋಜನವಾಗಿಲ್ಲ. ಈಗಲಾದರೂ ಏನಾದರೂ ಮಾಡಲೇಬೇಕು'
'ಏನು ಮಾಡೋಣ?'
'ಕಣ್ಮುಚ್ಚಿ ಕೂತಿರೋ ಆ ದೇವರು ಅನ್ನಿಸಿಕೊಂಡಿರುವವನನ್ನು ಕುರಿತು ತಪಸ್ಸು ಮಾಡೋಣ'
'ಮಾಡಿ...?'
'ಇವಕ್ಕೆಲ್ಲ ಅಂತ್ಯ ಕಾಣಿಸುವಂತೆ ವರ ಕೇಳೋಣ'
'ನಾವು ತಪಸ್ಸು ಮಾಡಿದರೆ ಅವನು ಪ್ರತ್ಯಕ್ಷವಾಗ್ತಾನಾ?'
'ಆಗಲೇಬೇಕು. ಯಾಕೆಂದ್ರೆ ನಮ್ಮಷ್ಟು ಭಕ್ತಿಯಿಂದ, ಏಕಾಗ್ರಚಿತ್ತದಿಂದ ಈ ಭೂಲೋಕದಲ್ಲಿ ಯಾರೂ ತಪಸ್ಸು ಮಾಡಲಾರರು'
'ಮಾಡಿದರೂ ಅದು ತಮ್ಮ ಸ್ವಾರ್ಥಕ್ಕಷ್ಟೇ ಹೊರತು ನಮ್ಮಗಳ ತರಹ ಪರಹಿತಕ್ಕಾಗಿ ಖಂಡಿತ ಅಲ್ಲ'
'ಸರಿ ಸರಿ. ಶುರು ಮಾಡೋಣವಾ ಹಾಗಾದರೆ?'
'ಒಂದು ಹತ್ತು ವರ್ಷ ಮಾಡಿದರೆ ಸಾಕಾ?'
'ಹತ್ತು ವರ್ಷಾನಾ? ಒಂದು ಜುಜುಬಿ ಕೇಸು ಇತ್ಯರ್ಥ ಆಗೋಕೇ ಕೋರ್ಟಿನಲ್ಲಿ ಹದಿನೈದಿಪ್ಪತ್ತು ವರ್ಷ ಬೇಕಾಗತ್ತೆ. ಅಂಥಾದ್ದರಲ್ಲಿ ಯುಗಯುಗಗಳಿಂದ ನಡೀತಿರೋ ಇದು ಇತ್ಯರ್ಥ ಆಗೋಕೆ ಅದೆಷ್ಟು ನೂರು ವರ್ಷಗಳು ಬೇಕೋ ಏನೋ?'
'ಸರಿ ಸರಿ. ಶುರು ಮಾಡಿಬಿಡೋಣ ಹಾಗಾದರೆ. ಒನ್... ಟೂ... ಥ್ರೀ... ಕಣ್ಮುಚ್ಚು'
ಶತಮಾನಗಳು ಉರುಳಿದವು. ಅದೊಂದು ಶುಭ ದಿನ ದೇವರು ಪ್ರತ್ಯಕ್ಷನಾಗಿಯೇಬಿಟ್ಟ.
ಸುಮ-ಕುಸುಮರು ದೇವರನ್ನು ಕಣ್ತುಂಬಿಕೊಂಡರು. ಆನಂದತುಂದಿಲರಾದರು.
'ಹೆಣ್ಣು ಗೊಂಬೆಗಳೇ, ಎಷ್ಟೊಂದು ದೀರ್ಘ ಕಾಲ ತಪಸ್ಸು ಮಾಡಿದ್ದೀರಿ. ನಿಮ್ಮ ಭಕ್ತಿಗೆ ನಿಜವಾಗಿಯೂ ಮೆಚ್ಚಿದ್ದೇನೆ. ಹೇಳಿ ಮಕ್ಕಳೇ ನಿಮಗೇನು ಬೇಕು?'
ಕುಸುಮ: ದೇವರೇ, ಈ ಭೂಲೋಕದಲ್ಲಿ ಶತಶತಮಾನಗಳಿಂದ ಹೆಣ್ಣುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ನಿನಗೆ ತಿಳಿದೇ ಇದೆ. ಇದನ್ನು ಅಂತ್ಯಗೊಳಿಸಬೇಕು ಪ್ರಭೂ
ದೇವರು: ಅದು ಹೇಗೆ ಸಾಧ್ಯ? ಉಪಾಯವೇನು ನೀವೇ ತಿಳಿಸಿ.
ಕುಸುಮ: ಒಂದು ಕೆಲಸ ಮಾಡು ದೇವರೇ. ಅತ್ಯಾಚಾರ ಮಾಡಲು ಪ್ರಯತ್ನಿಸುವ ರಾಕ್ಷಸರು ಹೆಣ್ಣನ್ನು ಮುಟ್ಟಿದ ತಕ್ಷಣ ಅವರು ಸತ್ತುಹೋಗಬೇಕು, ಭಸ್ಮಾಸುರ ತನ್ನ ತಲೆಯ ಮೇಲೆ ಕೈ ಇಟ್ಟುಕೊಂಡ ತಕ್ಷಣ ಸುಟ್ಟು ಭಸ್ಮವಾದನಲ್ಲಾ ಹಾಗೆ.
ದೇವರು: ಮಗೂ, ಹಾಗೆ ಮಾಡಿದರೆ ಪ್ರಪಂಚದಲ್ಲಿ ಮುಕ್ಕಾಲು ಪಾಲು ಗಂಡಸರು ಭೂಮಿ ಮೇಲೆ ಉಳಿಯುವುದಿಲ್ಲವಲ್ಲಾ!
ಸುಮ: ಬೇಡ. ಅಂಥವರು ಯಾಕೆ ಭೂಮಿ ಮೇಲೆ ಉಳೀಬೇಕೂ?
ದೇವರು: ಹಾಗಾದರೆ ವರವನ್ನು ಕೊಟ್ಟುಬಿಡಲೇ?
ಕುಸುಮ: ತಡಮಾಡಬೇಡ ದೇವರೇ.
'ತಥಾಸ್ತು' ಎನ್ನುವ ಮುಂಚೆ ದೇವರು ಅಭಯಹಸ್ತದ ಭಂಗಿಯಲ್ಲಿ ನಿಲ್ಲಬೇಕಲ್ಲಾ. ಕೈಯ್ಯನ್ನೆತ್ತಿ ಆ ಭಂಗಿಯಲ್ಲಿ ನಿಂತು ತಥಾಸ್ತು ಎನ್ನಲು ಬಾಯಿ ಬಿಡಬೇಕೆನ್ನುವಷ್ಟರಲ್ಲಿ ಸುಮ, 'ದೇವ್ರೇ ದೇವ್ರೇ ದೇವ್ರೇ' ಅನ್ನುತ್ತ ಏನೋ ದೊಡ್ಡ ಅನಾಹುತ ಸಂಭವಿಸಿಬಿಡುತ್ತಿದೆಯೇನೋ ಎನ್ನುವಂತೆ ಅಡ್ಡ ಮಾತಾಡಿದಳು. ದೇವರಿಗೂ ಭಯವಾಯಿತು, ತಾನೇನೋ ಮಾಡಬಾರದ್ದನ್ನು ಮಾಡುತ್ತಿದ್ದೇನೇನೋ ಎನ್ನಿಸಿ.
ದೇವರು: ಯಾಕೆ ಯಾಕೆ ಏನಾಯಿತು?
ಸುಮ: ದೇವರೇ, ಒಂದು ಸಣ್ಣ ಬದಲಾವಣೆ.
ದೇವರು: ಬದಲಾವಣೆಯೇ, ಏನು?
ಸುಮ: ದೇವರೇ, ಅತ್ಯಾಚಾರ ಮಾಡಲು ಪ್ರಯತ್ನಿಸುವ ರಾಕ್ಷಸರು ಹೆಣ್ಣನ್ನು ಮುಟ್ಟಿದ ತಕ್ಷಣವೇ ಆ ನೀಚರ ಮನದಲ್ಲಿರುವ ದುರಾಲೋಚನೆಯು ನಾಶವಾಗಿ ಹೋಗಿಬಿಡಬೇಕು. ಅಂತಹ ವರವನ್ನು ಕೊಟ್ಟುಬಿಡಪ್ಪಾ ಸಾಕು. ಈ ಪಿಡುಗಿಗೆ ಒಂದು ಅಂತ್ಯವನ್ನೂ ಕಾಣಿಸಿದಂತಾಗುತ್ತದೆ.
ದೇವರು: ತಥಾಸ್ತು.
- ಎಸ್.ರಾಮಮೂರ್ತಿ9886646207
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

