ನಮ್ಮೂರ ಮಲ್ಲಿಗೆ ಹೂವೇ...

ಆ ಮಲ್ಲಿಗೆ ಹೂವು, ಅದು ಚೆಲ್ಲುವ ಪರಿಮಳ, ಅದರ ಸುಕೋಮಲತೆ, ದುಂಡದುಂಡಗೆ ಒಂದೇ ಗಾತ್ರದಲ್ಲಿ ಅದು ಸೃಷ್ಟಿಗೊಂಡ ಪರಿ, ಅತ್ತ ಪೂರ್ತಿ ಅರಳಿಯೂ ಇಲ್ಲದ, ಅತ್ತ ಮೊಗ್ಗಾಗಿಯೂ ಉಳಿಯದ ಅದರ ಸ್ನಿಗ್ಧತೆ ಇವೆಲ್ಲವೂ ನನ್ನನ್ನು ಆಕರ್ಷಿಸುತ್ತಲೇ ಇರುತ್ತವೆ. ಅಂಥ ಮೊಲ್ಲೆಯ ಮೋಹಕತೆಯನ್ನು ನೋಡಿಯೂ ಮೂತಿ ತಿರುವವರು ಇದ್ದಾರೆಂದರೆ ಅದು ಜಗತ್ತಿನ ಇನ್ನೊಂದು ಅಚ್ಚರಿ. ಆ ಹಾದಿಯಲ್ಲಿ ಹಾದು ಹೋದರೆ ಸಾಕು, ಮಾರು ದೂರದಿಂದಲೇ ಮಲ್ಲಿಗೆಯ ಘಮ ಮೂಗಿಗೆ ಅಡರಿರುತ್ತದೆ. ಅಪ್ರಯತ್ನಪೂರ್ವಕ ಅತ್ತ ಕಣ್ಸೆಳೆಯದಿದ್ದರೆ ಅದು ಅನಾರೋಗ್ಯಕರ ಮನದ ಲಕ್ಷಣ.
ಪ್ರತಿ ನಸುಕಿಗೆ ಆ ಸರ್ಕಲ್ಲಿನ ಮಾರಮ್ಮನ ಗುಡಿಯ ಮುಂದಿನ ಕಟ್ಟೆಯ ಮೇಲೆ ಕುಳಿತು ಅಂಥದ್ದೇ ಮುಗ್ಧತೆಯೊಂದಿಗೆ ಮಾಲೆ ಪೋಣಿಸುತ್ತಾ ಕುಳಿತುಕೊಳ್ಳುವ ಆ ಚೆಲುವೆಯಿದ್ದಾಳಲ್ಲಾ, ಆಕೆಯೆಡೆಗೆ ಇನ್ನೊಂದು ರೀತಿಯ ಆಕರ್ಷಣೆ. ಒಮ್ಮೊಮ್ಮೆ ಯೋಚಿಸುತ್ತೇನೆ, ಆಕೆಯ ಚೆಲುವನ್ನೇ ಮೊಲ್ಲೆ ಮೊಗ್ಗುಗಳು ಪಡೆದವೋ ಅಥವಾ ಮಲ್ಲಿಗೆಯ ಸಹವಾಸವೇ ಆಕೆಯನ್ನು ಅಷ್ಟು ಸುಂದರಿಯಾಗಿಸಿತೋ? ಕೊನೆಗೂ ನನ್ನೊಳಗಿನ ಪ್ರಶ್ನೆಗೆ ಉತ್ತರ ದೊರಕಲೇ ಇಲ್ಲ. ಅದೇ ಮೈಕಾಂತಿ, ಅದೇ ಪುಟ್ಟ ನಿಲುವು, ಅದೇ ಸ್ವಚ್ಛ ನಗು, ಮುದ್ದುಮುದ್ದು ಮುಖ, ನೋಟದಲ್ಲೇ ಸೆರೆಹಿಡಿದುಬಿಡುವ ತೀಕ್ಷ್ಣತೆ, ಒಮ್ಮೆ ಕೈತುಂಬ ತುಂಬಿಕೊಂಡು ಚುಂಬಿಸಿಬಿಡಬೇಕೆಂಬ ಬಯಕೆಯನ್ನು ಹೊಮ್ಮಿಸುವ ಗುಣ, ನೆತ್ತಿಯನ್ನೊಮ್ಮೆ ದೀರ್ಘವಾಗಿ ಆಘ್ರಾಣಿಸಿಬಿಡಲೋ ಎಂಬ ವಾಂಛೆಯನ್ನು ಬಲಗೊಳಿಸುವ ಸುಗಂಧ... ಎಲ್ಲದರಲ್ಲೂ ಅದೇ ಸಾತತ್ಯ, ಅದೇ ತಾದಾತ್ಮ್ಯ.
ಅಂಥ ಸಿರಿವಂತಿಕೆಯನ್ನು ಅವರಿಬ್ಬರಲ್ಲೂ ತುಂಬಿದ ಕಸುಬುದಾರನ ಮನಸ್ಸು ಅದೆಷ್ಟು ಕ್ರಿಯಾಶೀಲವಿರಬಹುದು. ಆತ ಇನ್ನೆಷ್ಟು ರಸಿಕನಿರಬಹುದು? ಅವನಾದರೂ ಯಾರು? ಸತ್ಯ ಹೇಳಬೇಕೆಂದರೆ ನಾನು ಗುಡಿಗೆ ದಿನವೂ ತಪ್ಪದೇ ಹೋಗುತ್ತಿದ್ದುದೇ ಆ ಮಲ್ಲಿಗೆ ಹುಡುಗಿಗಾಗಿಯೋ ಎಂಬ ಅನುಮಾನ ಇತ್ತಿತ್ತಲಾಗಿ ಕಾಡಲಾರಂಭಿಸಿದೆ. ಆಕೆ ಹೂವನ್ನು ಮಾರುತ್ತಿದ್ದ ಪರಿಯೇ ಅಂಥದ್ದು. ತಾನು ಮಾರುವ ಹೂವಿನ ಒಂದೊಂದೂ ಗುಣವಿಶೇಷಣಗಳನ್ನು ಕೂಗಿಕೂಗಿ ಹೇಳುತ್ತಿದ್ದರೆ ನನಗೆ ಆಕೆ ತನ್ನನ್ನೇ ಬಣ್ಣಿಸಿಕೊಳ್ಳುತ್ತಿದ್ದಾಳೆ ಎಂಬ ಭಾವನೆ. ಕಾಲು ತೊಳೆದು ಗುಡಿಯ ಒಳಹೊಕ್ಕುವ ಮುನ್ನ ಆಕೆಯೆದುರು ಒಂದು ಮೊಳ ಹೂವಿಗಾಗಿ ಕೈಚಾಚಿರುತ್ತಿದ್ದೆ. ಆ ಸುಕೋಮಲ ಕೈಗಳಿಂದ ಆಕೆ ಹೂವಿನ ಹಾರವನ್ನು ಮೊಳ ಹಾಕಿ ತುಂಡರಿಸಲೆಂದು ಬೆರಳಿಗೆ ದಾರ ಸುತ್ತಿ ಎಳೆಯುತ್ತಿದ್ದರೆ ಕ್ಷಣದಲ್ಲಿ ಒಂದೆರಡು ಮಲ್ಲಿಗೆಗಳು ತೊಟ್ಟು ಕೊಯ್ದು ಕೆಳಬೀಳುತ್ತಿದ್ದವು. ಅಯ್ಯೋ, ಎಂಥ ಸುಕೋಮಲ, ಎಷ್ಟು ಮೃದುವಾದ ತೊಟ್ಟಿನೊಳಕ್ಕೆ ಅಷ್ಟೇ ಮೆತ್ತನೆಯ ಹೂವು ಆ ದಾರದ ಬಿರುಸಿಗೆ ಸಿಕ್ಕಿ ನಲುಗಿ ಹೋಯಿತಲ್ಲಾ! ಈ ತಲ್ಲಣ ಪ್ರತಿ ಬಾರಿಯೂ ನನ್ನೊಳಗೆ ತಳಮಳಿಸುತ್ತಿತ್ತು. ಆಕೆ ಹೂವಿನ ಹಾರವನ್ನು ತುಂಡು ಮಾಡಲು ಹೊರಟಳೆಂದರೆ ನನ್ನ ಕಣ್ಣು ಅದರೊಳಗೆ ಪೋಣಿಸಲ್ಪಟ್ಟ ಹೂವಿನ ಮುಂದಿನ ಸ್ಥಿತಿಯ ಬಗ್ಗೆ ಮರುಗುತ್ತಿತ್ತು. ಮುಂದಿನ ಆತಂಕ ಆಕೆಯ ಬೆರಳುಗಳ ಬಗ್ಗೆ. ಮೊದಲೇ ಹೇಳಿಬಿಟ್ಟಿದ್ದೇನೆ ಆಕೆ ಹೂಹುಡುಗಿ. ಅದು ಆ ಕಟುಕ, ನಿರ್ದಯಿ ದಾರಕ್ಕೆ ಹೇಗಾದರೂ ಅರ್ಥವಾಗಬೇಕು. ಹಾಗೊಮ್ಮೆ ಹೂಮಾಲೆಯನ್ನು ಬೆರಳಿಗೆ ಸುತ್ತಿಕೊಂಡು ಕತ್ತರಿಸುವ ಭರದಲ್ಲಿ ಹೂವಿನ ತೊಟ್ಟು- ಪಕಳೆಗಳು ನಲುಗಿದಂತೆ ಆಕೆಯ ಬೆರಳೂ... ಛೇ, ಎಲ್ಲಿ ಆ ಮೃದು ಬೆರಳಿನ ಅಚ್ಚಬಿಳಿಯ ಚರ್ಮ ಕೊಯ್ದು, ಚಿಲ್ಲನೆ ರಕ್ತ ಚಿಮ್ಮಿಬಿಟ್ಟೀತೋ ಎಂಬ ಭಯದಲ್ಲೇ ಕಣ್ಣು ಕಿರಿದಾಗಿಸಿಕೊಂಡು ನೋಡುತ್ತಿರುತ್ತಿದ್ದೆ. ಸದ್ಯ, ಅಂಥ ದುರದೃಷ್ಟದ ಕ್ಷಣ ಈವರೆಗೆ ನನಗೆ ಎದುರಾಗಿಲ್ಲ.
ಹೂ ಹುಡುಗಿ ಎರಡಕ್ಕೂ ಅದೆಂಥದ್ದೋ ಸಾಮ್ಯ. ಆಕೆ ಕೊಟ್ಟ ಹೂವು ದೇವರ ಪ್ರತಿಮೆಯನ್ನೇರಿ ಬೀಗಿದೆ. ಸುಂದರಿಯರ ಮುಡಿಗೇರಿ ಸಾರ್ಥಕವಾಗಿದೆ. ಹೆಣದ ಸಿಂಗಾರದಲ್ಲಿ ಸುಕ್ಕಾಗಿದೆ. ಪ್ರಥಮ ರಾತ್ರಿಗಳ ಪಲ್ಲಂಗವನ್ನು ಇನ್ನಷ್ಟು ರಸಮಯವಾಗಿಸಿದೆ. ರಸಿಕನ ತೋಳಬಳಸಿ ರಂಗೇರಿಸಿದೆ. ಆದರೆ ಅದೆಲ್ಲಾ ಸರಿ, ಸದಾ ಮಲ್ಲಿಗೆಯ ಸಾಂಗತ್ಯದಲ್ಲೇ ಇರುವ ಮುದ್ದು ಮುಖದ ಹುಡುಗಿಯ ಮುಡಿ ಮಾತ್ರ ಒಂದು ದಿನವೂ ಅಂಥ ಮೊಲ್ಲೆಯೊಂದಿಗೆ ನಳನಳಿಸಿದ್ದು ಕಾಣಲೇ ಇಲ್ಲ. ಎಲ್ಲರ ಮನದಲ್ಲಿ ಮಲ್ಲಿಗೆಯ ಮೂಲಕವೇ ಬಣ್ಣಬಣ್ಣದ ಕಲ್ಪನೆಗಳನ್ನು ಹೊಮ್ಮಿಸುವ ಆಕೆಯ ಹಾಲ ಮೈಗೊಪ್ಪುವ ಬಣ್ಣದ ಬಟ್ಟೆಗಳು ಇಂದಿಗೂ ಬಂದಿಲ್ಲ. ಹೀಗೇಕೆ ಎಂದು ಸಾಕಷ್ಟು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ವಿಧವೆಯರು ಬಣ್ಣದ ಬಟ್ಟೆಗಳನ್ನು ತೊಡಬಾರದು, ಮುಡಿಯ ತುಂಬ ಮಲ್ಲಿಗೆ ಮುಡಿಯಬಾರದು ಎಂಬ ಗೊಡ್ಡು ನಂಬಿಕೆಯನ್ನು ಧಿಕ್ಕರಿಸುವ ಶಕ್ತಿ ನಮಗೆ ಬಂದೀತಾದರೂ ಯಾವಾಗ?
- ರಾಧಾ ಸೋಚನಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


