ಸಾಪ್ತಾಹಿಕಪ್ರಭ

ಕಾಮನೆಬಿಲ್ಲಿನ ಬಣ್ಣಗಳು

Published On :

ಅಕ್ಕಮ್ಮ - ಲಕ್ಕಮ್ಮ - ಕೊಟ್ಟಣದ ಸೋಮಮ್ಮ
ನೀರನೆರೆದುಂಬುವ ನಿಂಬೆವ್ವ ಬನ್ನಿ...
ಹಾಗೆ ಅಣ್ಣ ಕರೆದದ್ದು ನನಗೂ ಇರಬಹುದಲ್ಲವೇ? ಸೂಳೆಯಾದ ಮಾತ್ರಕ್ಕೆ ನನ್ನನ್ನು ತಿರಸ್ಕರಿಸುವಷ್ಟು ಸಣ್ಣ ಮನಸ್ಸಿನವ ಅಣ್ಣ ಬಸವಣ್ಣ ಅಲ್ಲವೇ ಅಲ್ಲ. ಆ ಕರೆಗೆ ನಾನು ಓಗೊಟ್ಟು ಹೋಗಿರದಿದ್ದರೆ ನಾನಾರೆಂಬುದು ನನಗೇ ಅರಿವಿಗೆ ಬರುತ್ತಿರಲಿಲ್ಲವೇನೋ.
ಅಯ್ಯಾ ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ನಾನಿನ್ನ ಹಾಡಿದಲ್ಲದೆ ಸೈರಿಸೆನಯ್ಯಾ
ಅಯ್ಯಾ ನೀನೊಲಿದರೆ ಒಲಿ ಒಲಿಯದಿದ್ದರೆ ಮಾಣು
ನಾ ನಿನ್ನ ಪೂಜಿಸದಲ್ಲದೆ ಸೈರಿಸೆನಯ್ಯಾ
ಅಯ್ಯಾ, ನೀ ಮೆಚ್ಚಿದರೆ ಮೆಚ್ಚು ಮೆಚ್ಚದಿದ್ದರೆ ಮಾಣು
ನಾ ನಿನ್ನ ಅಪ್ಪಿದಲ್ಲದೆ ಸೈರಿಸೆನಯ್ಯಾ, ಚನ್ನಮಲ್ಲಿಕಾರ್ಜುನ
ನಾ ನಿನ್ನ ಪೂಜಿಸಿ ಹರುಷದೊಳು ಓಲಾಡುವೆನಯ್ಯಾ...
ಹಾಗೆ ಮನದುಂಬಿ ಹಾಡಿಕೊಳ್ಳುತ್ತಿರುವಾಗಲೇ ಅಣ್ಣ ನನ್ನ ಮನೆಬಾಗಿಲಿಗೆ ಬಂದು ನಿಂತದ್ದು. ಅದು ನನ್ನಕ್ಕ ಮಹಾಶರಣೆ ಮಹಾದೇವಿಯ ಮುಖದಿಂದ ಉದುರಿದ ಸಾಲುಗಳಾಗಿದ್ದವು. ಅದಕ್ಕೆ ನನಗೆ ತೋಚಿದ ರಾಗವನ್ನು ಹಾಕಿ ನನ್ನಷ್ಟಕ್ಕೆ ನಾನು ಹಾಡಿಕೊಳ್ಳುತ್ತಲಿದ್ದೆ. ಅವತ್ತಿನ ದಿನ ಅಣ್ಣ ಕಸಬಗೇರಿಯೊಳಗ ಹಾದು ಅರಮನಿಗೆ ಹೊರಟಿದ್ದ ಸಮಯ. ಆಗ ನನ್ನ ಪಾಲಿಗೆ ನಾನು ಹಾಡಿಕೊಳ್ಳುತ್ತ ಕುಳಿತಿದ್ದೆ. ಸೂಜಿಗಲ್ಲಿನ ಹಾಗೆ ನನ್ನ ಧ್ವನಿ ಅಣ್ಣನ ಸೆಳೆಯಿತಂತೆ. ಅದರ ಜಾಡು ಹಿಡದು ಬಂದ ಅಣ್ಣ ಬಂದು ನಿಂತದ್ದು ನನ್ನ ಮನೆಯ ಮುಂಬಾಗಿಲಿಗೆ. ಭಕ್ತಿ ಭಂಡಾರಿ, ಸಚಿವ ಶ್ರೇಷ್ಠ ಬಸವಣ್ಣ ಸೂಳೆ ಸಂಕವ್ವೆಯ ಮನೆಯ ಮುಂದೆ ಬಂದು ನಿಂತಿದ್ದ.
ಅವತ್ತು ಅಣ್ಣ ಅನುಭವ ಮಂಟಪಕ್ಕೆ ಬಂದು ಕುಳಿತು ಉದ್ಗರಿಸಿದ ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. 'ನನ್ನ ಎದುರಿಗೆ ಒಂದು ಬೆಳಕಿನ ಗೊಂಬೆಯೇ ಕೂತು ಹಾಡತಿತ್ತು. ಸಂಕವ್ವೆ ಹಾಡತಿದ್ದದ್ದು ಅಕ್ಕನ ವಚನವನ್ನು. ಅಕ್ಕನಷ್ಟೇ ತೇಜೋಮಯಿಯಾದ ಅವಳ ಮಧುರ ಕಂಠದಿಂದ ಹೊಂಟ ಆ ಧ್ವನಿಯನ್ನು ಕೇಳುತ್ತ ಕೇಳುತ್ತ ಮೈಮರೆತೆ. ನನ್ನೊಳಗಿಂದ ನನಗೇ ಅರಿವಿಲ್ಲದಂತೆ ಹೊರಟ ಉದ್ಗಾರದಿಂದ ಸಂಕವ್ವೆ ವಾಸ್ತವ ಲೋಕಕ್ಕೆ ಬಂದು ನನ್ನ ಕಾಲ ಹಿಡಿದಳು...'  ಅಣ್ಣ ನನ್ನಂಥವರಿಗೂ ಅಂಥ ಮಹತ್ವದ ಸ್ಥಾನ ನೀಡಿದ್ದರು. ಆ ಕ್ಷಣದಲ್ಲಿ ಅಕ್ಷರಶಃ ನಾನು ಅಣ್ಣನ ಪಾದ ಧೂಳಿಯಾಗಿದ್ದೆ. 'ಮಗಳೇ, ಏನು ಮಾಡುತ್ತಿದ್ದೀಯ? ಯಾರೂ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡೋದು ನನಗಿಷ್ಟ ಇಲ್ಲಾ. ಕಿರಿಯರೊಳಗೆ ಕಿರಿಯ ನಾನು, ಶರಣ-ಶರಣೆಯರು ಹಿರಿಯರಲ್ಲಿ ಹಿರಿಯರು. ಅಂಥದ್ದರಲ್ಲಿ ಶರಣೆ ಸಂಕವ್ವೆ ನನ್ನ ಕಾಲ ಹಿಡಿಯೋದು ಅಂದರೆ ಏನು?' ಅಣ್ಣ ಅಷ್ಟು ಹೇಳುತ್ತಿದ್ದಂತೆಯೇ ನನ್ನ ಭಾವನೆಗಳನ್ನು ಹತ್ತಿಕ್ಕಿಕ್ಕೊಳ್ಳಲಾಗಲೇ ಇಲ್ಲ. ನೋಡನೋಡತಿದ್ದಂತೆಯೇ ಒಳಗಿನಿಂದ ಒಂದು ಥೈಲಿ ತಂದು ಅಣ್ಣನ ಮುಂದೆ ಸುರವಿಬಿಟ್ಟೆ. ಚಿನ್ನದ ನಾಣ್ಯಗಳಿದ್ದವು. 'ಯಪ್ಪಾ, ಇವು ನನ್ನ ಗಳಿಕೆಯೊಳಗೆ ಉಳಿಸಿದ್ದು, ಶಿವಪೂಜೆಗೆ, ಪ್ರಸಾದಕ್ಕೆ ಅಂತ ಒಪ್ಪಿಸಿಕೊಬೇಕು' ಅಂದೆ. ಅಣ್ಣ ನಕ್ಕು 'ಮಗಳೇ ಪರಧನವನೊಲ್ಲೆನೆಂಬ ವ್ರತ ನನ್ನದು,  ಛಲಾ ನನ್ನದು. ಶಿವಾ ನನ್ನ ಪಾಲಿಗೆ ದಿನಾ ಹೊನ್ನಿನ ಮಳೆಗರೆಯುತ್ತಿದ್ದಾನೆ. ಹಾಗಿದ್ದೂ ವ್ರತ ಮುರಿದರೆ ಶಿವದ್ರೋಹ ಆಗುತ್ತದೆ' ಎಂದು ಬಿಟ್ಟ.
ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದುದೆಳೆಯ,
ಅನ್ನದೊಳಗೊಂದಗುಳ ಇಂದಿಗೆ ನಾಳಿಂಗೆ ಬೇಕೆಂದೆನಾದಡೆ,
ನಿಮ್ಮಾಣೆ ನಿಮ್ಮ ಪ್ರಮಥ ರಾಣಿ...
ನಾನು ಮನದುಂಬಿ ಮತ್ತೆ ಹಾಡುತ್ತಿದ್ದೆ. ಸಂಕವ್ವೆ ಸಮಾಜದ ದೃಷ್ಟಿಯೊಳಗೆ ಒಬ್ಬ ಸೂಳೆ, ಮೈಮಾರಿಕೊಳ್ಳುವಾಕೆ. ಆದರೆ ಅಂತರಂಗದೊಳಗೆ ನಾನೊಬ್ಬ ಮಹಾ ಶರಣೆ, ಶರಣತ್ವ ಅನ್ನೋದು ಬಾಹ್ಯಾಡಂಬರ ಅಲ್ಲ, ಅದು ಅಂತರಂಗದ ಆಚರಣೆ ಅಂತ ತೋರಿಸಿಕೊಡಲು ಕಾರಣನಾದವನೇ ಅಣ್ಣ.
ಹಲವು ಮಣಿಯಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಪೂಸಿ
ಉಂಡು ತಾಂಬೂಲ ಕೊಂಡು ಹೋಹುದಲ್ಲಾ,
ಗಣಾ ಡಂಬರದ ನಡುವೆ ನಲಿನಲಿದಾಡಿ
ತನುಮನಧನಸಮೆಸದವರ ಕೂಡಲಸಂಗಮದೇವನೆಂತೊಲಿವನಯ್ಯಾ.
ಹಾಗೆಂದ ಮೇಲೆ ನನ್ನೊಳಗೂ ಒಬ್ಬ ಶಿವನಿರಲೇಬೇಕಲ್ಲಾ? ನಾನು ಮಾಡುವ ಕಾಯಕವೂ ಅವನದ್ದೇ ಆಗಿರಬೇಕಲ್ಲಾ? ಅಂತಾದ ಮೇಲೆ ನನ್ನ ಕೆಲಸ ಕೀಳು ಎಂಬುದು ಹೇಗಾದೀತು? ಅದನ್ನೇ ನಾನು ಪ್ರತಿಪಾದಿಸಿದ್ದು. ಸೂಳೆಯಾಗಿ ನಾನು ಮಾಡಿದ್ದೂ ಕಾಯಕವನ್ನೆ. ಎಲ್ಲ ಕಾಯಕವೂ ಶಿವನ ಸೇವೆಯೇ ಎಂದ ಮೇಲೆ ನಾನದನ್ನು ಶಿವ ಸೇವೆಯೆಂತಲೇ ಪರಿಗಣಿಸಿದ್ದೆ. ಅದು ಬರಿ ಪೂಜೆಯಲ್ಲ, ಮಹಾಪೂಜೆ. ಮನದ ಮನನದ ಮಹಾಪೂಜೆ. ನನ್ನ ಶಿವನಿಗದು ಮಾನಸ ಪೂಜೆ. ಹೌದು ನಾನೀಗ ಸಂಕವ್ವೆ, ಶರಣೆ ಸಂಕವ್ವೆ, ವ್ರತನಿಷ್ಠೆ ಸಂಕವ್ವೆ, ದಿಟ್ಟ ಸಂಕವ್ವೆ, ಕಾಯಾ, ವಾಚಾ, ಮನಸಾ ಶರಣ ಧರ್ಮಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡ ಸಂಕವ್ವೆ. ನನ್ನ ಪರಿಮಿತಿಯೊಳಗೆ ವೇಶ್ಯಾವೃತ್ತಿಯ ವಿರುದ್ಧ ಬಂಡೆದ್ದು ವೇಶ್ಯೆಯರ ಮನೋ ಪರಿವರ್ತನೆಗೆ ಕಾರಣವಾದಾಕೆ ನಾನು.
ಬೆಳೆವ ಭೂಮಿಯೊಳೊಂದು ಪ್ರಳಯದ ಕಸಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು...
ಎಮ್ಮವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗ ತಂದೆ...
ಏಕೆಂದರೆ ದೇವರೆಂದರೆ ನಾವು ಶರಣರ ಪಾಲಿಗೆ ರುದ್ರ... ಅವನು ವಿಶ್ವರೂಪಿ, ವಿಶ್ವ ವ್ಯಾಪಿ. ಅವನೇ ವಿಶ್ವೇಶ, ವಿಶ್ವನಾಥ. ಸೃಷ್ಟಿ- ಸ್ಥಿತಿ-ಲಯ ಮೂರ್ತಿವಂತ ಸ್ವರೂಪ. ಅವನೇ ಸತ್ಯ... ನಾನು ಶಿವ... ನಾನು ಸುಂದರ... ನಾನು ಸತ್ಯ... ಆದ್ದರಿಂದ ನಿತ್ಯನೂ ಹೌದು. ಅವನು ಲಿಂಗಸ್ವರೂಪಿ. ಅಣು-ರೇಣು-ತೃಣ-ಕಾಷ್ಠ ಎಲ್ಲದರೊಳಗೂ ಅವನಿದ್ದಾನೆಂದ ಮೇಲೆ, ಮತ್ತೆ ಎಲ್ಲವೂ ಅವನೊಳಗಿದ್ದಾವೆ ಎಂದ ಮೇಲೆ ನನ್ನ ದೇಹ ಬಯಸಿ ಬರುತ್ತಿದ್ದವರೊಳಗೂ ಅವನೇ ಇರಬೇಕಲ್ಲ. ನನ್ನೊಳಗಿನ ಶಿವ ನನ್ನ ಕಾಯಕದ ಮೂಲಕ ನನ್ನ ಬಳಿ ಸುಖವರಸಿ ಬರುತ್ತಿದ್ದವರೊಳಗೆ ಇದ್ದ ಶಿವನೊಳಗೆ ಐಕ್ಯನಾಗುತ್ತಿದ್ದ ಗಳಿಗೆಯೇ ಮಹಾ ಮುಹೂರ್ತ ಎಂದು ಭಾವಿಸುತ್ತಿದ್ದವಳು ನಾನು. ಪ್ರಳಯ ಕಾಲದೊಳಗೆ ಈ ಜಗತ್ತಿನ ಎಲ್ಲವೂ ಲಯ ಆಗುತ್ತದಂತೆ. ಸೃಷ್ಟಿ ಕಾಲದೊಳಗೆ ಅವನೇ ಆಕಾರ ಪಡೆದು ಹುಟ್ಟಿಬರುತ್ತಾನಂತೆ. ಶಿವ ಎಂದಿಗೂ ಸ್ಥಾವರ ಅಲ್ಲ. ಅವನು ಜಂಗಮ... ಅವನು ಚೇತನ, ಅಚೇತನ ಅಲ್ಲ. ಅವನು ಸದಾ ಚಲನಶೀಲ. ಆದ್ದರಿಂದ ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ...
'ಸ್ಥಾವರ' ಅಂದರೆ ನಿಂತಲ್ಲೇ ನಿಂತದ್ದು, 'ಜಂಗಮ' ಅಂದರೆ ಚಲನಶೀಲವಾದದ್ದು. ಕಟ್ಟಿಸಿದ್ದು, ಕೆತ್ತಿಸಿದ್ದು-ನಿಲ್ಲಿಸಿದ್ದು ಒಂದಿಲ್ಲ ಒಂದು ದಿನ ಹಾಳಾಗಿ ಧೂಳು ಸೇರಲೇಬೇಕು. ಹೇಳ ಹೆಸರಿಲ್ಲದಂತೆ ನಾಶ ಆಗುತ್ತವವು. ನಿಂತ ನೀರು ಮಲತುನಾರುತ್ತದೆ. ರೋಗಕ್ಕೆ ಕಾರಣವಾಗುತ್ತದೆ. ಹರಿಯೋ ನೀರು ಜೀವ ಜಲ. ಅದು ಜನ-ಜಾನುವಾರು, ಬೆಳೆಗಳಿಗೆಲ್ಲ ಚೈತನ್ಯ ನೀಡುತ್ತದೆ. ಹಾರುವ ಹಕ್ಕಿ ಬೀಜ ಪ್ರಸಾರ ಮಾಡಿ ಹೊಸಾ ಹುಟ್ಟಿಗೆ ಕಾರಣವಾಗುತ್ತದೆ. ಹರಿಯೋ ನೀರು ಹಾರೋ ಹಕ್ಕಿ ಇವೆಲ್ಲವೂ ಜಂಗಮ... ಆದ್ದರಿಂದ ನಾನು ನಿಂತ ನೀರಾಗಲಾರೆ. ಕುಳಿತು ತಿನ್ನುವ ಪ್ರಾಣಿಯಾಗಲಾರೆ. ಹರಿಯುವ ನದಿಯಾಗಿ ಪ್ರವಹಿಸುತ್ತಲೇ ಇರುತ್ತೇನೆ. ಹಾರುವ ಹಕ್ಕಿಯಾಗಿ ತೇಲುತ್ತಲೇ ಇರುತ್ತೇನೆ. ಹಾಗಿದ್ದರೇ ನನ್ನ ಶಿವಾ ನಾಶವಾಗುವಂಥ ಗುಡಿಯ ಬಿಟ್ಟು ನನ್ನೊಳಗೆ ಬಂದು ಸೇರುತ್ತಾನೆ. ಈ ದೇಹ ಅನ್ನುವ ನಡೆಯುವ, ನುಡಿಯುವ ಗುಡಿಯೊಳಗಿರುವವ... ಅವನೇ ಈ ದೇಹದ ಒಳಗಿದ್ದು ನಡೆಸುತ್ತಾನೆ, ನುಡಿಸುತ್ತಾನೆ... ನಾನು ನಡೆಯುತ್ತಲೇ ಇರುತ್ತೇನೆ. ನುಡಿಯುತ್ತಲೇ ಇರುತ್ತೇನೆ.
ನನ್ನ ಮನಸ್ಸೀಗ ನಿಚ್ಚಳವಾಗಿದೆ. ನಿರಂಬಳವಾಗಿದೆ. ಯಾವ ಕೀಳರಿಮೆ, ಪಾಪಭೀತಿ ನನ್ನೊಳಗಿಲ್ಲ. ಸುಂದರವಾದ ಬೆಳಕಿನಿಂದ ನನ್ನೆದೆ ತುಂಬಿ ಹರಿಯುತ್ತಿದೆ. ನನ್ನ ಮುಂದಿನ ದಾರಿ ಯಾವುದು ಅನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಎಲ್ಲರೊಳಗೂ ಎಲ್ಲದರೊಳಗೂ ದೇವರನ್ನು ಹುಡುಕುವ ಯತ್ನದಲ್ಲಿ ನಾನೀಗ ಗೆದ್ದಿದ್ದೇನೆ. 'ಬಂದವರನೆಲ್ಲಾ ಬನ್ನಿ, ಬನ್ನಿರಿ... ಹದುಳವಿದ್ದಿರೆ' ಎಂದು ಕೈಮುಗಿದು ಸ್ವಾಗತಿಸುತ್ತೇನೆ. ಕೈ ಹಿಡಿದು ಕರದೊಯ್ದು ಕುಳ್ಳಿರಿಸುತ್ತೇನೆ. ಅವರಿಗೇನು ಬೇಕೋ ಅದನ್ನೆಲ್ಲ ಶಿವ ಭಕ್ತಿಯಲ್ಲೇ ಧಾರೆ ಎರೆದು, ಜತೆಗೊಂದಿಷ್ಟು ವಿಚಾರ... ಆ ವಿಚಾರದ ಮಂಥನ ನಡೆಸಿ ಕಳುಹಿಸಿಕೊಡುತ್ತಿದ್ದೇನೆ. ಅದರ ಬೆಳಕಿನಲ್ಲಿ ಹೊಸ ಜ್ಞಾನ, ಹೊಸ ಅರಿವು... ಈಗ ನನ್ನ ಮನ 'ಮಹಾಮನ' ಆಗಿದೆ. ಮನೆ 'ಮಹಾಮನೆ' ಆಗಿದೆ.  ನಾನು 'ಶರಣೆ' ಆಗಿದ್ದೇನೆ. ಈ  ಶರಣ  ಅನ್ನೋ ಶಬ್ದ ಅಂತಿಂತಹುದಲ್ಲ... ಶರ ಅಂದ್ರ ಬಾಣ, ಅಂದ್ರ ಕಾಮನೆಗಳು. 'ಣ' ಅಥವಾ 'ನ' ಅಂದ್ರ ಇಲ್ಲದ್ದು. ಶರಣ ಅಂದ್ರ ಕಾಮನೆಗಳು ಇಲ್ಲದವ. ಕಾಮನೆಗಳಿಗೆ ಒಳಗಾಗದವ ಎಂದು. ಅಂಥಾ ಶರಣರಿಗೆ ನಾನು ಶರಣು ಅನ್ನುತ್ತಿದ್ದೇನೆ. ಅನ್ನುತ್ತಲೇ ಇರುತ್ತೇನೆ. ನಾನು ನನ್ನಂಥವರೆಲ್ಲರೊಳಗೆ ಅಣ್ಣ ಜ್ಯೋತಿಯಾಗಿ ಬೆಳಗುತ್ತಿದ್ದಾನೆ. ಆದರೆ ನಮ್ಮ ಬಳಿ ಬರುವ ಪುರುಷರಲ್ಲಿ ಅವನು ಮರೆಯಾಗಿದ್ದಾನೆ.



 - ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.