ಸಾಪ್ತಾಹಿಕಪ್ರಭ

ಗಾಂಧಿಸೀಟು

Published On :

ಹಿಟ್ಲರ್, ಮುಸಲೋನಿ, ಸದ್ದಾಂ ಹುಸೇನ್, ಗಡಾಫಿ, ಇದಿ ಅಮೀನ್ ಮುಂತಾದವರು ಪ್ರಪಂಚದ ಭೂಪಟದಲ್ಲಿ ಕಾಣುವ ಒಂದಿಷ್ಟು ಸರ್ವಾಧಿಕಾರಿಗಳು. ಹಿಟ್ಲರ್ ಹೊರತಾಗಿ ಜಗತ್ತಿನಲ್ಲಿ ಬಹುತೇಕರು 'ಸರ್ವಾಧಿಕಾರಿ' ಎನ್ನಿಸಿಕೊಂಡಿದ್ದು, ವಿಶ್ವಸಂಸ್ಥೆಯ ನಿಯಂತ್ರಣ ಶಕ್ತಿಗಳಿಂದ. ನೇರವಾಗಿ ಹೇಳುವುದಾದರೆ ಅಮೆರಿಕದ ಆರ್ಥಿಕ ನೀತಿ ಮತ್ತು ಮಿಲಿಟರಿ ಒಪ್ಪಂದಗಳ ವಿರುದ್ಧ ತಿರುಗಿ ಬಿದ್ದ ಪ್ರತಿಯೊಂದು ದೇಶದ ಆಡಳಿತ ವ್ಯವಸ್ಥೆಯೂ ಜಗತ್ತಿನ ಕಣ್ಣಲ್ಲಿ ಸರ್ವಾಧಿಕಾರಿಗಳೇ! ಅಮೆರಿಕದ ಈ ನೀತಿಯನ್ನು ಅರ್ಥ ಮಾಡಿಕೊಂಡರೆ ಭೂಪಟದಲ್ಲಿ ಇತ್ತೀಚೆಗೆ ಮರೆಯಾದ ಸರ್ವಾಧಿಕಾರಿಗಳ ಮುಖಗಳ ಹಿಂದಿನ ಸತ್ಯಗಳು ತೆರೆದುಕೊಳ್ಳುತ್ತವೆ. 'ದಿ ಡಿಕ್ಟೇಟರ್‌' ಚಿತ್ರದ ಕಥೆ ಮತ್ತು ಅಲ್ಲಿ ಸರ್ವಾಧಿಕಾರಿಯಾಗಿ ಕಾಣಿಸಿಕೊಂಡವನ ಹುಚ್ಚುತನಗಳನ್ನೂ ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ಈ ವರ್ಷ ಆಸ್ಕರ್‌ನಲ್ಲಿ ಪ್ರದರ್ಶನಗೊಂಡ ಈ ಚಿತ್ರ ವ್ಯಂಗ್ಯದ ಮೂಲಕ ಸರ್ವಾಧಿಕಾರಿ ಎನ್ನಿಸಿಕೊಂಡವನ ಹುಚ್ಚುತನಗಳನ್ನು ಅನಾವರಣಗೊಳಿಸುತ್ತದೆ.
 ಉತ್ತರ ಆಫ್ರಿಕದ ಗಣರಾಜ್ಯ ವಾದಿಯಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಜನರಲ್ ಅಲೆದೀನ್‌ನ ಸುತ್ತಲಿನ ಕಥೆ ಇದು. ಆತನ ನಡಿಗೆ, ಮಾತು, ನಗು, ಭಾಷಣ, ಅಂಗರಕ್ಷಕಿಯರ ಜೊತೆ ಮೋಜು, ಮನಸ್ಸು ಬಂದಾಗ 'ಇವನನ್ನು ಮುಗಿಸಿ ಬಿಡಿ' ಎಂದು ಸನ್ನೆ ಮಾಡುವುದು... ಹೀಗೆ ಎಲ್ಲವನ್ನೂ ವಿಕ್ಷಿಪ್ತವಾಗಿಯೇ ಚಿತ್ರಿಸುತ್ತ ಸಾಗುತ್ತದೆ.
ಅಪಾಯಕಾರಿ ನ್ಯೂಕ್ಲಿಯರ್ ಅಸ್ತ್ರಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ವಾದಿಯಾಗೆ ಸರ್ವಾಧಿಕಾರದಿಂದ ಮುಕ್ತಿ ಕಲ್ಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಭದ್ರತಾ ಸಭೆ  ಸೇರಿದೆ. ಆ ಸಭೆಗೆ ಆಗಮಿಸುವ ಅಲೆದೀನ್‌ನ ಅಪಹರಣವಾಗುತ್ತದೆ. ಅಪಹರಣಕಾರನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಆತನ ಜಾಗದಲ್ಲಿ ಬೇರೊಬ್ಬ ಅಲೆದೀನ್‌ನ ವೇಷ ಹಾಕಿ ಕೂತಿರುತ್ತಾನೆ. 'ನಾನು ನಿಜವಾದ ಅಲೆದೀನ್‌' ಎಂದು ಹೇಳಿಕೊಂಡರೂ ಯಾರೂ ನಂಬಲ್ಲ. ಹೀಗಾಗಿ ಆತ ಅಮೆರಿಕದ ಬೀದಿಗಳಲ್ಲಿ ಹುಚ್ಚನಂತೆ ಓಡಾಡಬೇಕಾಗುತ್ತದೆ. ಅಲೆದೀನ್‌ನ ಜೀವನದಲ್ಲಿ ಪ್ರೀತಿಯ ತಂಗಾಳಿಯೂ ಬೀಸುತ್ತದೆ.
 ಹತ್ತಾರು ತಿರುವುಗಳೊಂದಿಗೆ ಸಾಗುವ ಈ ಚಿತ್ರ ಹಾಸ್ಯಮಯವಾಗಿದ್ದರೂ ಇತ್ತೀಚಿನ ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳನ್ನು ಒಳಗೊಂಡು ಗಂಭೀರವಾಗಿಯೂ ತೋರುತ್ತದೆ. ಚಿತ್ರದ ಆರಂಭದಲ್ಲಿ ಅಲೆದೀನ್‌ನ ಸಂದರ್ಶನದ ದೃಶ್ಯ ಹೀಗಿದೆ:
'ನಿಮ್ಮ ಬಳಿ ನ್ಯೂಕ್ಲಿಯರ್ ವೆಪನ್ಸ್‌ಗಳಿವೆಯೆ?'
'ನಿಮ್ಮ ಪ್ರಶ್ನೆ ನನಗೆ ಕೇಳುತ್ತಿಲ್ಲ'
'ಓಕೆ, ನಿಮ್ಮ ಬಳಿ ನ್ಯೂಕ್ಲಿಯರ್ ವೆಪನ್ಸ್‌ಗಳಿವೆಯೇ?'
'ಕ್ಷಮಿಸಿ, ನಿಮ್ಮ ವಾಯ್ಸ್ ಕೇಳಿಸುತ್ತಿಲ್ಲ. ಸ್ವಲ್ಪ ಜೋರಾಗಿ ಕೇಳ್ತಿರಾ?'
'ಅರೇ, ನೀವು ಅಪಾಯಕಾರಿ ನ್ಯೂಕ್ಲಿಯರ್ ವೆಪನ್ಸ್‌ಗಳನ್ನು ತಯಾರು ಮಾಡುತ್ತಿದ್ದೀರಾ?'
'ಏನ್ ಕೇಳಿದ್ರಿ...?'
'ಓಕೆ, ನಿಮ್ ಮಾತೇ ನಡೆಯಲಿ, ಮುಂದಿನ ಪ್ರಶ್ನೆಗೆ ಹೋಗುತ್ತೇನೆ'
ಪತ್ರಕರ್ತ ತನ್ನೆದುರು ಕೂತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ಪೆದ್ದುಪೆದ್ದಾಗಿ ವರ್ತಿಸುತ್ತ ಅಹಂಕಾರ, ಉಡಾಫೆ ಪ್ರದರ್ಶಿಸುವ ಅಲೆದೀನ್‌ನನ್ನು ಈ ಚಿತ್ರ 'ಕಾಮಿಡಿ ಪೀಸ್‌' ಥರ ಚಿತ್ರಿಸುತ್ತದೆ. ಹೀಗಾಗಿ 'ದಿ ಡಿಕ್ಟೇಟರ್‌' ಚಿತ್ರವನ್ನು ನೋಡಿದಾಗ 'ಅಮೆರಿಕದ ಗರ್ಭನಾಳದಲ್ಲಿರುವ ಹಾಲಿವುಡ್ ಚಿತ್ರಗಳು ಆ ದೇಶದ ಮುಖವಾಣಿಗಳು' ಎನ್ನುವ ಜರ್ಮನ್ ನಿರ್ದೇಶಕ ಫಾತಿ ಅಕೀನ್‌ರ ಮಾತು ನೆನಪಾಗುತ್ತದೆ.

ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.