ಕವಿ ವಸಂತ

ತಂಪು ನೀರಿನ ಸೆಲೆ, ಹೊಂಗೆಯ ನೆರಳು, ಮಾವಿನ ತಳಿರು, ಕಲ್ಲಂಗಡಿಯ ಸವಿ... ಚೈತ್ರ ವೈಶಾಖ ವಸಂತಋತು ಎಂಬ ಮಾತನ್ನು ನಿಜಗೊಳಿಸುತ್ತಿವೆ. ಗದ್ಯದ ಬಿಸಿಲಿನಿಂದ ದಣಿದವರಿಗೆ ಇಲ್ಲಿದೆ ಪದ್ಯಗಳ ನೆರಳು. ನಮ್ಮ ಹಿರಿಯ- ಕಿರಿಯ ಕವಿಗಳ ಗೀತಗುಚ್ಛ ಈ ಬಾರಿಯ ವಸಂತ ವಿಶೇಷ.
ನಿಶ್ಶಬ್ದದ ಹಾಡು
ಎಲ್ಲವನು ಕಳಚಿ
ಸೂರ್ಯನಿಗೆ ನಮಿಸಿ
ಬೆಳದಿಂಗಳಲಿ ನಡೆವ ನಿತ್ಯ ಪಯಣ.
ತಂಗಾಳಿ ತಂಪೆರೆದು ಮೋಡ ಮರಗಳ ನಡುವೆ
ಹಕ್ಕಿಗೊರಳಿನ ಗಾನ.
ಬಯಲು ಪಯಣಕೆ ಇಷ್ಟು ಸಾಕು.
ಸಾಕು... ಸಾಕು...
ಪಯಣವೆಂದರೆ ಕವಿತೆಯೆ?
ಕವಿತೆಯೆಂದರೆ ಬಯಲೆ?
ಬಯಲೆಂದರೆ ಎಲ್ಲ ಹಂಗುಗಳ ಕಿತ್ತೆಸೆವ
ಸೊಗಸೆ?
ನಿಶ್ಯಬ್ದವರಿಯಲು ಶಬ್ದಗಳ ಹಂಗುಂಟೆ?
ಪ್ರಭುವೇ
ಯಾವ ಶಬ್ದಗಳೂ ಅರ್ಥವಿಲ್ಲದೆ
ಸುಮ್ಮನೆ
ಹೊರಳಾಡದಿರಲಿ.
-ಗೀತಾ ಡಿ.ಸಿ., ಬೆಂಗಳೂರು
---
ಚೈತ್ರಮುಖ
ಯಾತನೆಯ ಮುಖವೆತ್ತಿ ಬೋಳು ಕೊಂಬೆಗಳ ಚಾಚಿ
ಮೊರೆಯಿಟ್ಟದ್ದು ಒಂದಾದರೂ ಮೋಡವಿರದಾಕಾಶಕ್ಕೆ;
ಕರೆಗೆ ಓಗೊಟ್ಟದ್ದು ಆಳ ನೆಲದಾಳದಿಂದ!
ಬೇರಿನ ಒಳಗೆ ಸರಸರ ಏರಿ, ಕೊಂಬೆ ರೆಂಬೆಯ
ತುಂಬ ಜುಳುಜುಳು ಹರಿದು, ಟೊಂಗೆ ಟಿಸಿಲುಗಳಲ್ಲಿ
ಸಣ್ಣಗೆ ಪುಟಿದು ಸೊಂಪಾಗಿ ತೂಗುತಿದೆ ಬಂದ ಆನಂದ.
ಕಣ್ಣುದ್ದಕ್ಕು ಚಾಚಿರುವ ನೆಲದ ಮೈ ಚರ್ಮವೆಲ್ಲಾ ಸುಕ್ಕು;
ಕೆರೆ ಕಟ್ಟೆಗಳ ಕೆನ್ನೆಯೆಲ್ಲಾ ಬತ್ತಿ, ಅಲ್ಲಲ್ಲಿ ಕದಡು ಹೊಂಡ
ಗಳ ಕಣ್ಣಲ್ಲಿ ಪರೆಗಟ್ಟಿನಿಂತ ಪಾಚಿ. ಆಗಾಗ ತರಗೆಲೆ ಚಿಂದಿ
ಯನ್ನುಟ್ಟು ಬಟ್ಟಬಯಲಲ್ಲಿ ಅಲೆವ ಸುಂಟರಗಾಳಿ. ಧಗೆಯ
ಬಾರುಕೋಲಿನ ಕೆಳಗೆ ದಿನ ಬಂಡಿಯನೆಳೆದು ಸಾಗಿವೆ
ಹಗಲೂ ರಾತ್ರಿ. ನಿರ್ಭಾವ ನೀಲಿಯ ನಡುವೆ ಉರಿಯುವ
ಕಣ್ಣು. ಈ ಸುಡುವ ನೆಲಮುಗಿಲುಗಳ ನಡೂಮಧ್ಯೆ
ಮರಮರದ ಹಾಸುಗೆಯಲ್ಲಿ ಮಂದಹಾಸದ ನಿದ್ದೆ.
-ಜಿ.ಎಸ್.ಶಿವರುದ್ರಪ್ಪ
----
ಶಬರಿಯ ಹಿಮ್ಮುಖಯಾನ
-1-
ಅಲೆಸುಕ್ಕಿನ ಮುದಿಗೊಳದ ತಡಿಗಿದೀಗ
ಬಂದಿದೀರಿ ಮೂವತ್ತು ವರ್ಷ ತಡವಾ
ಗಿ. ಮಂಕಾಗಿದ್ದಾವೆ ಕಣ್ಣು. ಮಂದೋ
ಮಂದ ಎರಡೂ ಕಿವಿ. ಹಾಲೊಣಗಿ ಬತ್ತಿ
ಬರಡಾಗಿವೆ ಜೋತಾಡುತ್ತ ಸ್ತನ. ಬಾ
ಗಿದೆ ಹುರಿ ಹಿಸಿದ ಸಪೂರ ಮಳೆಬಿಲ್ಲ
ಮೈ. ಹಿಡಿದೆನ್ನ ನಡುಗುವ ಕೈಯ,
ಉದ್ಧರಿಸು ಉದ್ಧರಿಸು ಮೋಡಗಣ್ಣಿನ ನೀ
ಲಾಂಗ; ಬಾನೊತ್ತಿಕೊಂಡ ಬಂಗಾರ
ಮೈಯ ಸೌಮಿತ್ರೀ. ನಿಂತಲ್ಲೇ ಮೂವತ್ತು
ವರ್ಷ ಚಿಕ್ಕವಳನ್ನಾಗಿ ಮಾಡಿರಿ ಮಾಡಿರಿ
ನನ್ನ. ಕಣ್ಣ ಪ್ರಣತಿಯ ತೈಲಬಿಂದು
ತೊಟ್ಟಿಕ್ಕೋ, ಬೆಂಕಿ ಬೊಂಬೆಗಳೇ...
-2-
'ತಥಾಸ್ತು' ಅಂದದ್ದೇ ತಡ ರಾಮ, ತಿರುಗಹತ್ತಿತು
ರಾಟೆಯ ಚಕ್ರ ಎಡಮುರಿಗೊಂಡು. ಪಡುವಲ
ಗಿರಿಯಿಂದ ಮೂಡಿದ ಸೂರ್ಯ. ಮತ್ತೆ ಮುಳುಗಿದ
ಕ್ಷಣಾಮತ್ತಲ್ಲಿ ಪೂರ್ವಸಾಗರದಲ್ಲಿ. ನೀ
ರ್ಮುಳುಗುಹಕ್ಕಿಯಂತೆದ್ದು ಧುತ್ತೆಂದು
ಯಮುನೆ, ಸೋರುತ್ತಿರಲು ಜೋ ಅಂತ
ತೊಪ್ಪನೆ ತೊಯ್ದ ಒದ್ದೆಮುಡಿ, ಬಣ್ಣ ಮೆತ್ತಿದ ಉಬ್ಬಿದೆದೆ,
ತಗ್ಗಿಳಿದ ಸೊಂಟ, ಮತ್ತೆ ಏರಿದ ನಿತಂಬ.
ನಡೆದಳು ಕಡಲ ತಡಿಯಿಂದ ಪರ್ವತಾಗ್ರದ
ತುಟ್ಟ ತುದಿಗೆ, ನೀರುಗಣ್ಣಿನ ತವರುಮನೆಗೆ,
ಮೈಮುರಿದ ಹೂ, ಹಾಹೂ ಎಂದು ಚಳಿಗೆಂಬಂತೆ
ಮುದುಡಿದವು ಮೊಗ್ಗಾಗಿ ತಮ್ಮಲ್ಲಿ ತಾವೆ.
ಧರಿತ್ರಿ ಚಡಪಡ ಬದಲಿಸಿದಳು ಬಣ್ಣಬಣ್ಣದ
ಸರಬರ ಸೀರೆ, ಹೊರಟವಳಂತೆ
ಹೊಸ ಮದುವಳಿಗರ ಸಂಜೆಯಾರತಕ್ಷತೆಗೆ
ಅತೃಪ್ತಿ, ಧಾವಂತ, ಗಡಿಬಿಡಿ ತುರ್ತಿಂದ.
ರೆಕ್ಕೆ ಮುದುರುತ್ತ ಹಕ್ಕಿ ಹೊಕ್ಕವು ತಮ್ಮ
ಮೊಟ್ಟೆಗೂಡತ್ತ ಹೊಸಹುಟ್ಟ ಕನವರಿಸುತ್ತ,
ಮೊಟ್ಟೆಗೊಳ್ಳದೆ ಹುಟ್ಟಲಿಕ್ಕಿಲ್ಲ ಚಿಲಿಪಿಲಿ ಹಕ್ಕಿ
ಎಂದು ಪಿಟಿಪಿಟಿಸುತ್ತ-ಮರೆತುಹೋದಂತಿದ್ದ
ಬೀಜಮಂತ್ರ.
-3-
ಮೂವತ್ತು ವರ್ಷ ಹಿಂದಕ್ಕೆ ಹೋದಾಗ
ಗಡಿಯಾರ, ತಿರುವಿಕೊಂಡರು ಎಲ್ಲ
ತಮ್ತಮ್ಮ ನಾಡಿಯ ನುಡಿತ, ಪುಟ್ಟ
ತೊಟ್ಟಿಲ ಕೂಸು ರಾಮ. ಅಳ್ಳಳ್ಳಾಯಿ
ಬಚ್ಚ ಲಕ್ಷ್ಮಣ. ವ್ರಾವ್ರಾ ಎಂದಳುವ
ಕೂಸನ್ನೆತ್ತಿ, ಮೂಸುತ್ತ ನೆತ್ತಿ, ಅಕ್ಕರಾಸ್ಥೆಯಿಂದ
ಹಸಿರು ನರವುಬ್ಬಿದ ಪುಷ್ಟ ಮೊಲೆಯ ನಿಮಿರು ತೊಟ್ಟ
ನ್ನೊಡ್ಡುವಳು ಶಬರಿ-ಮುಗಿಲು ಮೊಲೆಗೊಟ್ಟಂತೆ
ನೀಲಿಮಲೆಗೆ. ಹೀಗೇಮತ್ತೆ-ಮಕ್ಕಳು ನಡೆಯುತ್ತಾರೆ ಮುಂದೆ
ಗಡಿಬಿಡಿಯಿಂದ, ಆಗಲೇ ಬೇಕಂತ ಬೇಗ ಯೌವನಸ್ಥ.
ಮುದಿಮಂದಿ ನಡೆಯುತ್ತಾರೆ ತತ್ತರಿಸುತ್ತ ಹಿಂದೆ
ಹಾಡು ಚಲಿಸುವ ಹಾಗೆ ಮತ್ತೆ ಮತ್ತೆ ಒಡಲಿಂದ ಪಲ್ಲವಿಗೆ.
-ಎಚ್.ಎಸ್. ವೆಂಕಟೇಶ ಮೂರ್ತಿ
---
ಅಮ್ಮ ಕೊಟ್ಟ ರೇಷಿಮೆ ಸೀರೆ
ದುರ್ಬೀನು ಹಾಕಿ ಹುಡುಕಿದರೂ
ಎಲ್ಲೆಲ್ಲಿಯೂ ಒಂದೇ ಒಂದು ತೂತಿಲ್ಲ
ಮಡಚಿಟ್ಟ ಮಡಿಕೆಗಳಲ್ಲಿ
ಒಂದು ಎಳೆಯೂ ಕಡಿದಿಲ್ಲ
ಜಿರಳೆ- ತಿಗಣೆ ಮರಿಮೊಟ್ಟೆ ಸಂತತಿ ಸುತರಾಂ ಇಲ್ಲ
ಮೊನ್ನೆ ಊರಿಗೆ ಹೋದಾಗ
ತಿರುಗಿ ಹೊರಡುವ ಸಮಯದಲ್ಲಿ ಅಮ್ಮನ ಕಾಲಿಗೆರಗಿ
ನಮಸ್ಕರಿಸಿದಾಗ ಅವಳು ನನಗೆ ಕೊಟ್ಟ
ರೇಷಿಮೆ ಸೀರೆಯಲ್ಲಿ...
ಆ ಸೀರೆ ಅವಳದೂ ಅಲ್ಲ
ಅವಳ ಅಜ್ಜಿಯದು
ಸೀರೆಯ ತುದಿಯಂಚು ಸೆವೆಸದೇ
ನಿರಿಗೆ ಮುಕ್ಕಾಗಿಸದೇ
ಆ ಅಜ್ಜಿ- ಮಗಳು- ಮೊಮ್ಮಗಳು
ಸೀರೆಯನ್ನು ಹೇಗೆ ಕಾಪಿಟ್ಟರೋ ಏನೋ
ಅವರೆಲ್ಲ ಉಟ್ಟು ತೊಟ್ಟು ಓಡಾಡಿದ್ದು ಎಷ್ಟು ಬಾರಿಯೋ...
ಜೋಪಾನ ಮಾಡಿಟ್ಟ ಆ ಖದರೇ ಸೊಗಸು!
ನವಿಲು ಬಣ್ಣದ ಒಡಲು
ಕೆಳಸಾಲಿನಲ್ಲಿ ಚುಕ್ಕಿಚಂದ್ರಮರ ಬೊಟ್ಟು
ನವಿರು ಹೊಳಪಿನ ಥರಾವರಿ ವಿನ್ಯಾಸದ
ಸೀರೆಯ ಸೊಬಗೇ ಅಚ್ಚುಕಟ್ಟು
ಉಟ್ಟರೆ ಮೈಗಂಟದ
ನಡೆಯಲು ತೊಡಕಾಗದ ಈ ಸೀರೆಯ ಸೆರಗು ಬಿಚ್ಚಿ
ಬೆನ್ನ ತುಂಬಾ ಹೊದೆದರೆ
ನಕ್ಷತ್ರ ಲೋಕವೇ ಮೈಯಲ್ಲಿ ಆವರಿಸಿಕೊಳ್ಳುತ್ತದೆ!
ಲಾವಂಚದ ಕಡ್ಡಿಗಳ ಜೊತೆಗೆ
ಪರಿಶುದ್ಧ ಬಿಳಿಯ ಪಂಚೆಯ ತುಂಡಿನ ಪದರದೊಳಗೆ
ನವವಧುವಿನಂತೆ ಕುಳಿತಿದೆ ಈ ಸೀರೆ
ಅಮ್ಮ ಅತ್ಯಂತ ಕಾಳಜಿಯಿಂದ
ನನ್ನನ್ನು ಎಚ್ಚರಿಸಿದ್ದು ಹೀಗೆ-
'ಹುಷಾರು, ಈ ಸೀರೆ ನಿನ್ನ ಮಕ್ಕಳಿಗೆ,
ಮೊಮ್ಮಕ್ಕಳಿಗೆ, ಅವರಾಚಿನವರೆಗೂ...'!
ಸದಾಕಾಲ ಇರಬೇಕು ಈ ಜಗತ್ತೆಂಬ ಮಹಾಮನೆಯಲ್ಲಿ,
ನನ್ನಜ್ಜಿಯಂಥ ಅಜ್ಜಿಯರು-
ನನ್ನಮ್ಮನಂಥ ಅಮ್ಮಂದಿರು-
ಪೀಳಿಗೆಯಿಂದ ಪೀಳಿಗೆಗೆ ತಮ್ಮ ಜೀವನಾನುಭವದ
ಸುಧೆ ಹರಿಸಲು,
ಇತಿಹಾಸ- ವರ್ತಮಾನಗಳ ಪರಂಪರೆಯ
ಕೊಂಡಿ ಬೆಸೆಯಲು
ಮತ್ತು
ನೂರು ಕವಲಿನ ನೂರು ಒಲವಿನ
ನಂಬಿಕೆಗಳ ಹೆಜ್ಜೆ ಗುರುತುಗಳನ್ನು
ದಾಖಲಿಸಲು...
-ಸುಧಾ ಜಯಪ್ರಕಾಶ ತಲವಾಟ
---
ಹೊಸ ಬಾಳಿಗೆ ಹೊರಟ ಮಗಳಿಗೆ
ಹೊಸ ಬಾಳಿಗೆ ಹೊರಟ ಮಗಳು
ಕಣ್ಣ ತುಂಬ ಕನಸು.
ಶುಭವಾಗಲಿ ಮಗಳೆ ನಿಮ್ಮ
ಕನಸಾಗಲಿ ನನಸು.
ನಿಮ್ಮ ಪ್ರೀತಿಯ ಮಹಾಪೂರದಲ್ಲಿ ತೇಲುತ್ತ
ಬಂದೆವಿಲ್ಲಿಯತನಕ, ಇನ್ನು ಮುಂದೆ ಸುರುವಾಗಬೇಕು
ನಿಮ್ಮ ಪಯಣ.
ನಾವು ಗಳಿಸಿದ್ದು ಅಲ್ಲಿಗಲ್ಲಿಗೆ
ಸಮ ಲೆಖ್ಖ -
ಅಷ್ಟೋ ಇಷ್ಟೋ ದಾರಿ ನಾವು ನಡೆದದ್ದಿದೆ
ದಾರಿ ಸಾಗದೆ ಬದಿಗೆ ಕುಂತದ್ದಿದೆ.
ಬಂಡೆಬೆಟ್ಟದ ಮ್ಯಾಲೆ ಹೆಪ್ಪುಗಟ್ಟಿದ ಮುಗಿಲು
ಸಿಡಿಲು ಹೊಂಚಿದ್ದೂ ಇದೆ ಆಚೆ ಬದಿಗೆ.
ಮಳೆಗಾಲದಲ್ಲಿ ಆಗೀಗ ಹ್ಯಾಗೋ ಆಗಿ
ಜಾರಿ ಬಿದ್ದದ್ದು ಇದೆ, ಮುಂದೆ ಹ್ಯಾಗೆಂದು.
ಮ್ಯಾಲೆ ಸುರಿಯೋ ಮುಗಿಲು, ಕೆಳಗೆ ಜಾರೋ ನೆಲ,
ದಾರಿ ಸಾಗಿಸೊ ಶಿವನೆ ಅಂದದ್ದಿದೆ.
ಆಗ ಅವತರಿಸಿದಿರಿ ನಮ್ಮ ತೋಟದಲೇನೆ
ಹಸಿರು ಹಾಡುಗಳಲ್ಲಿ ನಮ್ಮನದ್ದಿ.
ಸ್ವಚ್ಛ ಬೆಳ್ದಿಂಗಳನು ಸುತ್ತ ಸುರಿದಿರಿ ತಾಯಿ
ಹುಣ್ಣಿಮೆಯ ಕಡಲಾಗಿ ನಾವು ಉಕ್ಕಿ.
ನೋಡ ನೋಡುವ ಹಾಗೆ ಕಣ್ಣೆದುರಿನಲೆ ಬೆಳೆದು
ಚಿತ್ರದ ಚಮತ್ಕಾರವಾದೆ ಮಗಳೆ.
ಚಿಗುರು ಹೂವಾಗುವ ಪವಾಡ ಕಡಮೆಯದಲ್ಲ,
ಅದು ಕೂಡ ತಿಳಿದದ್ದು ನಿನ್ನಿಂದಲೆ.
ಗುರಿಯ ತಲುಪಲು ಹೋಗಿ
ಇನ್ನೆಲ್ಲಿಗೋ ಮುಟ್ಟಿ
ಏನೇನೋ ಆದದ್ದು ಎಷ್ಟೊ ಇದೆ!
ಸೋಲಿಂದ ಬಹಳಷ್ಟು ಕಲಿಯೋದಿದೆ.
ನಾವು ಬಿತ್ತಿದ್ದೆಷ್ಟೋ ಬೆಳೆಯಲಾಗಲೆ ಇಲ್ಲ
ನಿಮ್ಮಲ್ಲಿ ಅದು ಬೆಳೆದು ಫಲ ನೀಡಲಿ.
ನಾವು ಮಾಡಿದ ಬೆಳಕು ಸಾಲದೆ ಬಂದಲ್ಲಿ
ನೀವೂನು ಮಾಡ್ರಿ ತುಸು ಬೆಳಕು.
ಸುಡಬೇಕು ಪ್ರೀತಿಯಲಿ ಸುಟ್ಟು ಬೆಳಕಾಗುತ್ತ
'ನೊಗವೆ ನಾರಾಯಣಾ' ಅನ್ನಬೇಕು.
ಸೂರ್ಯ ತಿಳಿದಿರಬೇಕು ಬೆಳಗೊ ಕರ್ತವ್ಯವನು
ತಿಳಿಯದಿದ್ದರೆ ಅವನ ಗೊಡವೆ ಬೇಡ.
ಸೂರ್ಯ ಇರದಿದ್ದರೂ ಹಸಿರು ತಿಳಿದಿರಬೇಕು
ಬಿರಿದು ಹಣ್ಣಾಗುವ ಪವಾಡವನ್ನ.
ಕಾಲರಾಯನ ಗೇಹ ಈ ದೇಹ; ಕೊನೆಯಲ್ಲ-
ಲೋಕ ಎಷ್ಟೋ ಉಂಟು ಇದರ ಆಚೆ.
ಕನಸು ವಿರಮಿಸದಿರಲಿ ತುದಿಯ ತಲುಪುವ ತನಕ
ತುದಿಯೆಲ್ಲಿ, ಗೊತ್ತಲ್ಲ? ಕ್ಷಿತಿಜದಾಚೆ!
-ಚಂದ್ರಶೇಖರ ಕಂಬಾರ
---
ದಾಸವಾಳ
ಸರೀ ಲೆಕ್ಕಕ್ಕೆ ಸಿಗುವ
ಐದೇ ಐದು ದಳ
ಹಿಗ್ಗಿನಿಂದ ಮೊಗವರಳಿಸಿ
ನಗುವ ದಾಸವಾಳ
ಒಳಗೊಂದು ಹೊರಗೊಂದು
ಬಗೆದು ತೆಗೆದರೂ ಸಿಗದು
ನಾಭಿಯಿಂದೆದ್ದು ನೇರ
ಸಲಾಕೆ ತುದಿಯಲ್ಲಿ
ಬಿಚ್ಚು ಮನದ ಕನವರಿಕೆಗಳು
ಮಾಲೆ ಕಟ್ಟುವವರಿಲ್ಲ
ಬೆಲೆ ನಿಗದಿಯಾಗುವುದಿಲ್ಲ
ಬೇಡ...!
ಕ್ರಯ ವಿಕ್ರಯಗಳ ತುಲನೆಯೊಳಗೆ
ಅದು ದಕ್ಕಿಯೇ ಇಲ್ಲ.
ಹೆರಳ ಸಿಂಗಾರವಾಗದ್ದಕ್ಕೆ
ಕೊಂಚವೂ ಬೇಸರ ಇಲ್ಲ
ಒಂದೋ ಗಿಡದ ಮುಡಿಯಲ್ಲಿ
ಇಲ್ಲವೇ ದೇವರ ಗುಡಿಯಲ್ಲಿ
ಒಂದಂತೂ ಸತ್ಯ
ಫಲ ಹೊತ್ತ ನಿರ್ಮಲ ಮಲಸ್ಸುಗಳು
ಸಲ್ಲಬೇಕಾದ ಕಡೆಗೇ ಸೇರುತ್ತವೆ
ಯಾರ ಅಪ್ಪಣೆಗೂ ಶಿಫಾರಸ್ಸಿನ
ಮುಲಾಜಿಗೂ ಬೀಳಬೇಕಿಲ್ಲ
ಗಂಧವಿಲ್ಲವೆಂದು ಮೂಗೆಳೆದವರೇ
ಮತ್ತೂ ಗಮನಿಸಿ
ಅರಳಿಕೊಳ್ಳುವ ಕಲೆ ಗೊತ್ತಿದ್ದರೆ
ಪರಿಮಳ ಅನಿವಾರ್ಯವೇ ಅಲ್ಲ!
-ಸ್ಮಿತಾ ಅಮೃತರಾಜ್ ಸಂಪಾಜೆ
----
ನಾನು ಮಾತನಾಡುತ್ತಿದ್ದೇನೆ!
ಒಮ್ಮೊಮ್ಮೆ ಬಂದುಬಿಡುತ್ತದೆ
ಮರಕ್ಕೆ ಮರವೇ ನನ್ನ ಕವಿತೆಯಲ್ಲಿ ಚಿತ್ರವಾಗಿ
ದಷ್ಟಪುಷ್ಟವಾಗಿ ಆಕಾಶವನ್ನೇ ಮುಟ್ಟುತ್ತಾ
ಅತ್ಯಂತ ಮೌನಿಯಾಗಿ,
ಮಾತನಾಡಲಾರಂಭಿಸಿದೆ ಈ ಮರ ನನ್ನೊಂದಿಗೆ
ಮುಟ್ಟಲಾರಂಭಿಸಿದೆ ನನ್ನ ಒಳಗುಗುಳನ್ನು
ಮೊಗ್ಗಿನಂತೆ ಮೂಡುತಿದೆ ಚಿಗುರೊಂದು ಆ ಮರದಲ್ಲಿ
ಪುಟ್ಟ ಪುಟ್ಟ ಮಿದು ಎಲೆಗಳಿಂದ
ಆ ಎಳೆ ಚಿಗುರಿನ ಹಳದಿ ಎಲೆಗಳು
ಮೃದು ಮಧುರವಾಗಿ ಪಿಸುಗುಡುತ್ತವೆ ನನ್ನೊಂದಿಗೆ
ಹಳದಿಯಿಂದ ಕೆಂಪಾಗುತ್ತಾ ಹಸಿರಾಗುತ್ತಾ
ನನ್ನನ್ನೂ ಒಳಗೊಂಡು ಬೆಳೆಯುತ್ತಲಿದೆ.
ಸುತ್ತುವರೆದಿದೆ ಆ ಮರದ ಬೇರುಗಳು
ನನ್ನ ಸುತ್ತಲೂ ಅಂತರ್ಜಾಲದಂತೆ
ಮುತ್ತಿಕ್ಕುತ್ತಾ ಮಿದುವಾಗಿ ನನ್ನೊಳಗೂ ಹೊರಗೂ
ನುಸುಳುತ್ತಿದೆ ಒಳಗೆ ಆಳವಾಗಿ
ಬೆಳೆಯುತ್ತಿದೆ ಈ ಮರ ಸರ್ವಶಕ್ತ ಚಿಲುಮೆಯಾಗಿ
ಕಾಲಾಂತರದಲ್ಲಿ ಮರವಾಗುತ್ತೇನೆ ನಾನು
ಬೇರಾಗುತ್ತವೆ ನನ್ನ ಪಾದಗಳು
ಆಸರೆಯ ಆಸೆಯಲಿ ಆವರಿಸಿಕೊಳ್ಳುತ್ತವೆ
ಭೂಗರ್ಭದ ಸುತ್ತಲೂ ಬೆಳೆಯುತ್ತಾ ಹೋಗುತ್ತವೆ ನನ್ನ ತಲೆಮೇಲೆ ಆಕಾಶದೆಡೆಗೆ.
ಮಾತನಾಡುತ್ತಿದ್ದೇನೆ ನಾನು ಸೂರ್ಯನೊಂದಿಗೆ
ಆದಿ ಅನಾದಿ ಕಾಲದ ಸೆಳೆತದೊಂದಿಗೆ
ತಿಳಿಯಲು ಯತ್ನಿಸುತ್ತಿದ್ದೇನೆ ಅವನ ಮಾತುಗಳನ್ನು
ತಣ್ಣಗಾಗಿಸುತ್ತಾನೆ ಅವನು ತಲ್ಲಣಗಳನ್ನು ತೋಳಲ್ಲಿ ಹಿಡಿದು
ನನ್ನೆಲ್ಲ ಜೀವಭಾವಗಳ ಸಲುಗೆಯಿಂದ
ಮಾತನಾಡುತ್ತಿದ್ದೇನೆ ನಾನು ಈಗ ಸೂರ್ಯನೊಂದಿಗೆ.
-ಮೂಲ (ಹಿಂದಿ): ತುಕಾರಾಮ್ ರಾಮಶೇಟ್
-ಅನುವಾದ: ಡಾ.ಎಚ್.ಎಲ್. ಪುಷ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


