ಗಾಂಧಿ- ಆರ್ವೆಲ್
ಇಂಗ್ಲಿಷ್ ಸಾಹಿತ್ಯ ಬಲ್ಲವರಿಗೆಲ್ಲ ಜಾರ್ಜ್ ಆರ್ವೆಲ್ ಬಗ್ಗೆ ಗೊತ್ತು. ಭಾರತದಲ್ಲಿ ಹುಟ್ಟಿ, ಇಂಗ್ಲೆಂಡಿನಲ್ಲಿ ಬದುಕಿ, ಜಗತ್ತಿನಾದ್ಯಂತ ಖ್ಯಾತನಾದ ಈತನ 'ಅನಿಮಲ್ ಫಾರ್ಮ್' '1984' ಕಾದಂಬರಿಗಳು, ಪ್ರಬಂಧಗಳು ಜನಪ್ರಿಯ. ಈತ ಬರ್ಮಾದಲ್ಲಿ ಸೇವೆ ಸಲ್ಲಿಸಿದ್ದ. ಈತನ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿದ್ದ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಎಂಬಲ್ಲಿ ಈತ ಹುಟ್ಟಿದ ಮನೆ ಈಗಲೂ ಇದೆ.
ಇತ್ತೀಚೆಗೆ ಈತ ಹುಟ್ಟಿದ ಮನೆಗೆ ಸಂಬಂಧಿಸಿ ಸಮಸ್ಯೆಯೊಂದು ತಲೆದೋರಿತು. ಇಲ್ಲಿಗೆ ಎರಡೂವರೆ ಕಿಲೋಮೀಟರ್ ದೂರದಲ್ಲಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಸ್ಥಳವಿತ್ತು. ಅದು 1917ರಲ್ಲಿ, ಬ್ರಿಟಿಷರ ವಿರುದ್ಧ ಗಾಂಧಿ ಆರಂಭಿಸಿದ ಪ್ರಪ್ರಥಮ ಸತ್ಯಾಗ್ರಹದ ಸ್ಥಳ. ನಿಜಕ್ಕೂ ಐತಿಹಾಸಿಕವೇ. ಅಲ್ಲಿ 'ಸತ್ಯಾಗ್ರಹ ಪಾರ್ಕ್' ಸ್ಥಾಪಿಸಲು ಸರಕಾರ ಉದ್ದೇಶಿಸಿತ್ತು. ಪಾರ್ಕ್ನ ವಿಸ್ತಾರದಲ್ಲಿ ಆರ್ವೆಲ್ನ ಜನ್ಮಸ್ಥಳ ಧ್ವಂಸವಾಗಲಿತ್ತು.
ಈಗೊಂದು ವಿಚಿತ್ರ ಬಿಕ್ಕಟ್ಟು ತಲೆದೋರಿತು. ಸ್ವತಃ ಬ್ರಿಟಿಷನಾದ ಆರ್ವೆಲ್ನ ಸ್ಮಾರಕವನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂಬುದದು. ಉಳಿಸಿಕೊಂಡರೆ ಸತ್ಯಾಗ್ರಹ ಪಾರ್ಕ್ ಚಿಕ್ಕದಾಗುತ್ತದೆ. ಭಾರತೀಯರಾದ ನಮಗೆ ಆರ್ವೆಲ್ಗಿಂತ ಗಾಂಧಿ ಮುಖ್ಯ ಅಲ್ಲವೆ ಎಂಬುದು ಕೆಲವರ ವಾದ. ಸ್ವತಃ ಆರ್ವೆಲ್ ಎಲ್ಲ ಬಗೆಯ ಸರ್ವಾಧಿಕಾರಗಳಿಗೆ ವಿರೋಧಿಯಾಗಿದ್ದ. ಆತನಿಗೆ ಗಾಂಧಿ ವಿರೋಧಿಯಾಗಿರಲಿಲ್ಲ. ಜಗತ್ ಸಾಹಿತ್ಯದ ಸ್ಟಾರ್ ಆಗಿರುವ ಆತನ ಸ್ಮಾರಕ ಭಾರತಕ್ಕೊಂದು ಭೂಷಣ ಎಂಬುದು ಇನ್ನೊಂದು ಬಣದ ವಾದ. ಇವರಿಗೆ ಅಂತಾರಾಷ್ಟ್ರೀಯ ಬೆಂಬಲವೂ ಇತ್ತು.
ಸದ್ಯಕ್ಕೆ ಆರ್ವೆಲ್ ಮಹತ್ವ ಮನಗಂಡ ಸರಕಾರ, ಆತನ ಮನೆಯನ್ನು ಹಾಗೇ ಉಳಿಸಿಕೊಳ್ಳುತ್ತೇನೆ ಎಂದಿದೆ. ಗಾಂಧಿ ಇದ್ದಿದ್ದರೆ ಇದನ್ನು ಅನುಮೋದಿಸುತ್ತಿದ್ದರು ಎನ್ನಲಡ್ಡಿಯಿಲ್ಲ. ಇಲ್ಲೊಂದು ಚೋದ್ಯ: ಸ್ಮಾರಕಗಳ ವಿಚಾರದಲ್ಲೂ ಮಹಾತ್ಮ ಗಾಂಧಿಗೆ ಎದುರಾದದ್ದು ಆಂಗ್ಲನೇ.
ಬುದ್ಧ ಎಂದರೆ?
ಇದೊಂದು ಝೆನ್ ಕಥೆ. ತಮಾಷೆಯಾಗಿಯೂ, ಮಿಂಚು ಹೊಳೆದಂತೆಯೂ ಇದೆ.
ಝೆನ್ ಶಾಲೆಯಲ್ಲಿರುವ ಶಿಷ್ಯನೊಬ್ಬ ಅಲ್ಲಿರುವವರನ್ನು 'ಬುದ್ಧ ಎಂದರೇನು?' ಎಂದು ಪ್ರಶ್ನಿಸುತ್ತ ಹೋದಾಗ ಈ ಉತ್ತರಗಳು ಸಿಕ್ಕಿದವಂತೆ.
ಬುದ್ಧ ಎಂದರೆ, ಬಂಗಾರದ ಎಲೆ ಕೊನರಿಕೊಂಡಿರುವ ಮಣ್ಣಿನ ಚೂರು.
ಬುದ್ಧ ಎಂದರೆ, ವಿಹಾರ ಶಾಲೆಯಲ್ಲಿರುವ ವಸ್ತು ವಿಶೇಷ.
ಬುದ್ಧ ಎಂದರೆ, ಸಮುದ್ರದ ಮೇಲೆ ಅಲೆಗಳು ಯಾತ್ರೆ ಹೊರಟಿವೆ.
ಬುದ್ಧ ಎಂದರೆ, ಹೊರಗೆ ಹಿತ್ತಲಲ್ಲಿರುವ ಬಿದಿರು ಮೆಳೆ.
ಬುದ್ಧ ಎಂದರೆ, ಅದಲ್ಲ.
ಹಾಗಾದರೆ ಬುದ್ಧ ಎಂದರೆ ಯಾರು?
ಬುದ್ಧ ಯಾರು ಎಂದರೆ, ಮೂರು ಕಾಲಿನ ಕತ್ತೆಯನ್ನು ನೋಡಿ.
ಬುದ್ಧ ಯಾರೆಂದರೆ, ಮಾತು ಯಾತನೆಯ ದಿಡ್ಡಿ ಬಾಗಿಲು...
ಇನ್ನೊಬ್ಬ ಸೆಣಬು ಅಳೆಯುತ್ತಾ ಕುಳಿತವನನ್ನು ಈ ಪ್ರಶ್ನೆ ಕೇಳಲಾಯಿತು.
'ಬುದ್ಧ ಎಂದರೆ, ಹತ್ತು ಸೇರು ಸೆಣಬು' ಎಂದ.
ಹಾಯ್ಕುಗಳು
ದಿಡೀರ್ ಬ್ರೇಕು
ರಸ್ತೆಗೆ ಯಾಕೆ
ಬಂತೊ ಚಿಟ್ಟೆ?
ಹನಿ ಬಿದ್ದೀತು
ಕೊಡೆ
ಮಡಚಿ ನಡೆ.
-ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

