ಸಾಪ್ತಾಹಿಕಪ್ರಭ

ಬೇಂದ್ರೆ ಬಂದ್ರು!

ಬೇಂದ್ರೆ ಬಂದ್ರು!
Published On :

ಮೊನ್ನೆ ದ.ರಾ. ಬೇಂದ್ರೆ ಅವರು ಬೆಂಗಳೂರಿಗೆ ಬಂದಿದ್ದರು! ಬೆಂಗಳೂರಿನ ರಂಗಶಂಕರದಲ್ಲಿ ಎರಡು ತಾಸು ಇದ್ದು, ಕಾವ್ಯ ಪ್ರಚಾರ ನಡೆಸಿ ಹೋದರು!
ಬೇಂದ್ರೆ ಮತ್ತೇಕೆ ಬಂದರು, ಚುನಾವಣೆ ಪ್ರಚಾರ ನಡುವೆ ಇದೇನು ಕಾವ್ಯ ಪ್ರಚಾರ ಎಂದು ಪ್ರಶ್ನೆಗಳನ್ನುದುರಿಸುವ ಸರದಿ ನಿಮ್ಮದಾಗಬಹುದು. ಉತ್ತರಕ್ಕೆ ಮುಂದೆ ಓದಿ. ರಂಗ ಯುಗಾದಿ 13ರ ಅಡಿಯಲ್ಲಿ ರಂಗ ಸೌರಭ ತಂಡ ರಾಜೇಂದ್ರ ಕಾರಂತರ ವಿನ್ಯಾಸ- ರಚನೆ- ನಿರ್ದೇಶನದ 'ಗಂಗಾವತರಣ' ನಾಟಕವನ್ನು ಪ್ರೇಕ್ಷಕನ ಮನಮುಟ್ಟಿಸಿದ ರೀತಿಯೇ ವಿಭಿನ್ನ.
ವರಕವಿ ದ.ರಾ. ಬೇಂದ್ರೆ ಅವರ ಬಗ್ಗೆ ಬರೆಯಹೊರಟ ಸಾಹಿತಿ ಗಣೇಶ್ ಮೂರ್ತಿ (ಸುನೀಲ್‌ಕುಮಾರ್) ಬೇಂದ್ರೆಯವರ ಒಳ ಹರಿವನ್ನು ಅರಿಯಲಾಗದೇ ತೊಳಲಾಡುವಾಗ ಒಳಮನಸ್ಸು ಆತ್ಮದ ರೂಪದಲ್ಲಿ (ರಾಜೇಂದ್ರ ಕಾರಂತ್) ಪಾತ್ರವಾಗಿ ಬಂದು ಕವಿವರ್ಯರ ಜೀವನಸ್ತರಗಳನ್ನು ಬಿಚ್ಚಿಡುತ್ತಾ, ವಿಚಾರ ಮಂಡಿಸುತ್ತಾ ರಂಗದ ಎಲ್ಲ ಪಾತ್ರಗಳ ನಡುವೆ ಸುತ್ತುತ್ತಾ ನಾಟಕ ನಡೆಗೆ ಅರ್ಥ ಕಲ್ಪಿಸುವ ಪಾತ್ರದ ಕಲ್ಪನೆಯೇ ವಿಶೇಷವಾಗಿದೆ.
ಬೇಂದ್ರೆಯವರ ಬದುಕು ಮತ್ತು ಸಮಗ್ರ ಸಾಹಿತ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಹೊರಟು, ಬೇಂದ್ರೆ ಅವರನ್ನೇ ಇಲ್ಲಿ ಪಾತ್ರವಾಗಿಸಲಾಗಿದೆ. ಪ್ರೇಕ್ಷಕನ ಕೆಲಕ್ಷಣಗಳು ಮಹಾಕವಿಯೊಂದಿಗೆ ವಿಲೀನಗೊಳ್ಳುತ್ತವೆ. ಆಗಿನ ಕಾಲ ಘಟ್ಟಕ್ಕೆ ಜಾರುವಂತೆ ಪಾತ್ರಗಳು ಮೋಡಿಗೊಳಿಸುತ್ತವೆ.
ಕವಿವರ್ಯರ ದರ್ಶನ ಪಡೆದ ಭಾಗ್ಯವಷ್ಟೇ ಅಲ್ಲದೇ ಇವರ ಪ್ರಮುಖ ಕಾವ್ಯಗಳು ನೃತ್ಯರೂಪಕದಲ್ಲಿ ನಾಟಕದ ಕಥೆಯೊಂದಿಗೆ ಬೆಸೆದುಕೊಂಡು ಕಥೆಯ ತಾಳಕ್ಕೆ ತಾಳ ಹಾಕಿ ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ದು ಅಲ್ಲಿ ಗಂಧಪೂಸಿ, ಶ್ರಾವಣ ಮಾಸದ ಹಾಡಿನಲ್ಲಿ ಮಳೆಯ ವಾಸನೆ ಪಸರಿಸಿ, ಸೋನೆಯಲಿ ತೊಯ್ಸಿ, 'ನೀ ಹೀಂಗಾ...' ಮತ್ತು 'ನಾನು ಬಡವ, ಆಕೆ ಬಡವಿ'ಯಲ್ಲಿ ಪ್ರೇಕ್ಷಕನ ಮನದಾಳದ ನೋವನ್ನು ಕದಡುತ್ತವೆ. ಕಣ್ಣನ್ನು ತೇವವಾಗಿಸುತ್ತವೆ. ಇದರ ಜೊತೆ ಜೊತೆಗೆ ಸಮಕಾಲೀನ ಸಮಾಜದಲ್ಲಿ ಕವಿ ಹೃದಯವಿಲ್ಲದ ಕಾಂಚಾಣಕ್ಕೆ ಮಣೆ ಹಾಕುವ ಸಾಹಿತ್ಯ ಸಂಗೀತಕ್ಕೆ ಸರಿಯಾದ ಮನ್ನಣೆ ಇಲ್ಲದ ಸಿನಿಮಾ ಜಗತ್ತಿನ ಒಂದು ಮುಖವನ್ನು ತೆರೆದಿಡುತ್ತಾರೆ. ಇನ್ನು ಬೇಂದ್ರೆ ಮಾಸ್ತರರ ಪಾತ್ರಧಾರಿ (ರಾಕೇಶ್ ಕುಮಾರ್) ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಕಿರಿಯ ವಯೋವಾನದಲ್ಲೇ ಹಿರಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಲ್ಲದೆ ಈ 'ಬೇಂದ್ರೆ'ಯನ್ನು ಆ 'ಬೇಂದ್ರೆ' ರಂಗದ ಪಕ್ಕ ನಿಂತು ಗಮನಿಸುತ್ತಿರುವಂತೆ ಭಾಸವಾದದ್ದೂ ಇದೆ!
'ಬೆಂದ್ರೆ ಬೇಂದ್ರೆ ಆಗ್ತಾರೆ', 'ಅದನ್ನು ಅಂಬಿಕಾತನಯದತ್ತ ಬರೆದಾನ, ಈ ಬೇಂದ್ರೆನ ಕೇಳಿದ್ರೆ ಹ್ಯಾಂಗೆ ತಿಳಿತಾವ?', 'ಬರೆದಿದ್ದು ನಾನಲ್ಲ ಅಂಬಿಕಾತನಯ ದತ್ತ...' ಎಂಬ ನುಡಿಗಳು ಮನದಲ್ಲಿ ಗೂಡು ಕಟ್ಟಿ ಗುಂಯ್‌ಗುಡುತ್ತವೆ. ತಮ್ಮ ಜೀವನದ ನೋವನ್ನೂ ಹಗುರವಾಗಿ ತೆಗೆದುಕೊಳ್ಳುವ ಬೇಂದ್ರೆಯವರ ಸಮತೋಲನ ಗುಣ ಪ್ರೇಕ್ಷಕನ ಜೀವನದ ನೋವಿಗೆ ಸಾಂತ್ವನ ನೀಡುತ್ತದೆ.
ದುಃಖ ಸಾಗರದಲ್ಲಿ ಮುಳುಗಿರುವ ಸಾಹಿತಿಯ ಸಂಸಾರದ ಸುಂದ್ರಮ್ಮ (ಸುಷ್ಮಾ) ತನ್ನ ಪಾತ್ರಕ್ಕೆ ತಕ್ಕ ಮಾತಿನ ಧಾಟಿ, ರಂಗದ ಮೇಲಿನ ನಡೆ, ಆಂಗಿಕ ಅಭಿನಯವನ್ನು ಅಳವಡಿಸಿಕೊಂಡಿದ್ದಾರೆ. ಚಂದ್ರು ಪಾತ್ರಧಾರಿಯ (ಪ್ರಮೋದ್ ಜಿ. ಶೆಟ್ಟಿ) ಆಧುನಿಕ ಸಿನಿಮಾ ಸಾಹಿತಿಯಾಗಿ ಅಭಿನಯಿಸಿ ಈಗಿನ ಅಬ್ಬರದ ಸಿನಿಮಾ ಸಾಹಿತ್ಯವನ್ನು ಪ್ರತಿನಿಧಿಸಿದ್ದಾರೆ. ಉತ್ತಮ ಮೇಳದಲ್ಲಿ ವೇಣುಗೋಪಾಲ್, ಕಾರ್ತಿಕ್, ಅಪೂರ್ವ ಹಾಗೂ ಮಾಧುರಿ ಪಾಲ್ಗೊಂಡಿದ್ದರು. ಎಂ.ಜಿ. ನವೀನ್‌ಕುಮಾರ್ ಬೆಳಕು ದೃಶ್ಯಗಳಿಗೆ ವಿವಿಧ ಮಜಲುಗಳನ್ನು ತೋರ್ಪಡಿಸುವಲ್ಲಿ ಸಹಕಾರಿಯಾಗಿದೆ.
'ಮೂಡಲ ಮನೆಯ...' ಹಾಡಿಗೆ ರಂಗದ ಮೇಲೆ ಮೋಡಗಳ ಓಡುವಿಕೆ ಮತ್ತು ಸಮಯಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿ ಸೂರ್ಯ- ಚಂದ್ರರನ್ನೂ ಪಾತ್ರಪೋಷಣೆಗೆ ಬಳಸಿದ್ದಾರೆ. ರಾಜೇಂದ್ರ ಕಾರಂತರು ಆತ್ಮದ ಪಾತ್ರ ವಹಿಸಿದ್ದಲ್ಲದೆ ಹೊಸ ಪ್ರಯೋಗವಾಗಿ ಭಾವನಾತ್ಮಕತೆ ಮತ್ತು ಕಟು ಸತ್ಯ ಎರಡನ್ನು ತುಲನಾತ್ಮಕವಾಗಿ ನಿರ್ವಹಿಸಿ ನಿರ್ದೇಶಿಸಿದ್ದಾರೆ. ಮಹಾಕವಿಯ ಬಗ್ಗೆ ಸಾಕ))ಷ್ಟು ತಿಳಿವಳಿಕೆ ಕೊಟ್ಟಿರುವುದು ಮೆಚ್ಚಲರ್ಹ.

-ಸಂಕೇತ್ ಗುರುದತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.