ಸಾಪ್ತಾಹಿಕಪ್ರಭ

ಮಲೆಯಾಳಿ ಕತೆಗಳು

Published On :

ಮಲೆಯಾಳದ ಪ್ರಮುಖ ಕತೆಗಾರ ಅರ್ಷಾದ್ ಬತೇರಿಯವರ 14 ಸಣ್ಣ ಕತೆಗಳನ್ನು ಡಾ. ಪಾರ್ವತಿ ಜಿ. ಐತಾಳ ಅವರು 'ಭೂಮಿಯಷ್ಟು ಬದುಕು' ಹೆಸರಿನಲ್ಲಿ ಅನುವಾದಿಸಿರುವರು. ಇದಕ್ಕೆ ಮುನ್ನುಡಿಯನ್ನು ಬರೆದಿರುವ ಜಿ. ರಾಜಶೇಖರ ಅವರು, 'ಹಿಂಸೆಯ ಕುರಿತು ಲೇಖಕನಿಗೆ ಇರುವ ಕಳವಳವೇ ಪ್ರಸ್ತುತ ಸಂಕಲನದ ಎಲ್ಲ ಕತೆಗಳಿಗೂ ಇರುವ ಸಮಾನ ಗುಣ. ಧರ್ಮ, ಸಂಸ್ಕೃತಿ, ನಾಗರಿಕತೆ, ಸಭ್ಯತೆ ಮೊದಲಾದ ಸಮಾಜದ ಮುಖವಾಡಗಳ ಹಿಂದೆ ಅಡಗಿರುವ ಹಿಂಸೆಯನ್ನು ಅರ್ಷಾದ್ ತನ್ನ ಕತೆಗಳಲ್ಲಿ ಅದರ ನಿಜ ಸ್ವರೂಪದಲ್ಲಿ ಗುರುತಿಸುತ್ತಾರೆ' ಎಂದು ಹೇಳಿದ್ದಾರೆ. ನಮಗೆ ಪರಿಚಿತವಿರುವ ಹಳ್ಳಿ, ಪಟ್ಟಣಗಳ ಪರಿಸರದಿಂದಲೇ ತಮ್ಮ ಕತೆಗಳಿಗೆ ವಸ್ತುವನ್ನು, ಪಾತ್ರಗಳನ್ನು ಆಯ್ದುಕೊಳ್ಳುವ ಅರ್ಷಾದ್ ನಮ್ಮೆದುರಿಗಿರಿಸಿರುವ ಅಮಾನವೀಯ ಮುಖಗಳು ನಾವು ಬೆಚ್ಚಿಬೀಳುವಂತೆ ಮಾಡುತ್ತವೆ. ದಲಿತರ ಹಾಗೆಯೇ ಮಹಿಳೆಯನ್ನೂ ಸರಕಿನ ಹಾಗೆ ನೋಡುವ ವ್ಯವಸ್ಥೆಯ ಮುಖವಾಡವನ್ನು ಅವರು ಇಲ್ಲಿ ಕಳಚುತ್ತಾರೆ.
ಕೃತಿ: ಭೂಮಿಯಷ್ಟು ಬದುಕು
ಪ್ರಕಾರ: ಅನುವಾದ, ಕತೆಗಳು
ಏಕೆ ಓದಬೇಕು?: ಮಲೆಯಾಳಿ ಕತೆ ಅಧ್ಯಯನಕ್ಕೆ
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 104 ಬೆಲೆ ರು. 65
---
ಕಸ್ತೂರಿ ಘಮ
ನೀಲತ್ತಹಳ್ಳಿ ಕಸ್ತೂರಿ ಅವರು ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ತಪ್ಪದೇ ನೆನಪಾಗುತ್ತಾರೆ. ಅವರು ಒಬ್ಬ ಸಂಘಟಕ, ಗಾಂಧೀವಾದಿ ಹಾಗೂ ಉತ್ತಮ ಬರೆಹಗಾರರೂ ಅತ್ಯುತ್ತಮ ಅನುವಾದಕರೂ ಹೌದು. ಸಿದ್ದವನಹಳ್ಳಿ ಕೃಷ್ಣಶರ್ಮ, ಡಾ.ಜಿ.ಪಿ. ರಾಜರತ್ನಂ, ಪುತಿನ, ಹು.ಮ. ರಾಮಾರಾಧ್ಯರು ಇವರ ಸಾಹಿತ್ಯ ರಚನೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದ ಮಹನೀಯರು. ನೀಲತ್ತಹಳ್ಳಿಯವರ ಬರೆವಣಿಗೆ ಎಂದರೆ ಕೃಷ್ಣಶರ್ಮರ ಗದ್ಯಶೈಲಿಯ ಮರುಹುಟ್ಟು. ನೀಲತ್ತಹಳ್ಳಿಯವರು ನಾಟಕ, ರೂಪಕ, ಗಾಂಧೀ ಸಾಹಿತ್ಯ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ ಹಾಗೂ ಇತರ ಪ್ರಕಾರ ಸೇರಿ ನಲ್ವತ್ತು ಕೃತಿಗಳನ್ನು ರಚಿಸಿದ್ದಾರೆ. ಕಸ್ತೂರಿಯವರ ಬದುಕು ಇತರರಿಗೆ ಆದರ್ಶಪ್ರಾಯ. ಅವರು ಗಮಕಿಗಳೂ ಹೌದು. ಕಸ್ತೂರಿಯವರ ಚರಿತ್ರೆಯನ್ನು ಅವರ ಆತ್ಮೀಯ ಸ್ನೇಹಿತರೇ ಆದ ಬೆ.ಗೋ. ರಮೇಶ್ ಅವರು ಸರಳವಾಗಿ ಮನಮುಟ್ಟುವಂತೆ ಬರೆದುಕೊಟ್ಟಿದ್ದಾರೆ.
ಕೃತಿ: ನೀಲತ್ತಹಳ್ಳಿ ಕಸ್ತೂರಿ
ಪ್ರಕಾರ: ಜೀವನಚರಿತ್ರೆ
ಏಕೆ ಓದಬೇಕು?: ಕಸ್ತೂರಿ ಅವರನ್ನು ಅರಿಯಲು
ಪ್ರ: ಉದಯಭಾನು ಕಲಾಸಂಘ, ಬೆಂಗಳೂರು, ಪುಟಗಳು
58 ಬೆಲೆ ರು. 45
---
ಜಾನಪದ ಪ್ರಕಾರ
ನಮ್ಮ ಬದುಕಿನ ರೀತಿ ನೀತಿಗಳೇ ಜಾನಪದ. ಈ ಜಾನಪದದ ವಿಶ್ವರೂಪವನ್ನು ಪರಿಚಯಿಸುವ ನಿಟ್ಟಿನಲ್ಲಿ ಡಾ. ರಾಗೌ ಅವರು 'ಜಾನಪದ ಪ್ರಕಾರಗಳು' ಎಂಬ ಕೃತಿಯನ್ನು ಹೊರತಂದಿದ್ದಾರೆ. ಇದರಲ್ಲಿ ಜಾನಪದದ ಹದಿನೆಂಟು ಪ್ರಕಾರಗಳ ಬಗೆಗೆ ಲೇಖಕರು ವಿವರಿಸಿದ್ದಾರೆ. ಶಿಶುಪ್ರಾಸಗಳಿಂದ ಹಿಡಿದು ಜನಪದ ಸಾಹಿತ್ಯದ ಭಾಷೆಯ ವರೆಗೆ ಇದರ ಹರಹು ಇದೆ. ಜನಪದ ಅಡುಗೆಯ ಬಗೆಗೆ ಹಲವು ಹೊಸ ವಿಚಾರಗಳನ್ನು ಲೇಖಕರು ಹೇಳಿದ್ದಾರೆ. ಜೀವನದಲ್ಲಿ ನಾವು ಎಷ್ಟೇ ನಾಗರಿಕರಾಗುತ್ತ ಹೋದರೂ ಆಂತರ್ಯದಲ್ಲಿ ಎಲ್ಲೋ ಜಾನಪದೀಯ ಅಂಶಗಳು ಉಳಿದುಕೊಂಡು ಬಿಡುತ್ತವೆ ಎಂಬ ಮಾತನ್ನು ಅವರು ಹೇಳುತ್ತಾರೆ. ನಮ್ಮ ಜಾನಪದ ಮತ್ತು ಜಗತ್ತಿನ ಇತರ ದೇಶಗಳ ಜಾನಪದವನ್ನು ಸಾಂದರ್ಭಿಕವಾಗಿ ಹೋಲಿಸಿ ಅಧ್ಯಯನದ ಹರಹನ್ನು ವಿಸ್ತರಿಸಿದ್ದಾರೆ. ಜಾನಪದದ ಪ್ರಕಾರಗಳನ್ನು ಯಾವ ರೀತಿಯಲ್ಲಿ ಅಧ್ಯಯನ ಮಾಡಬೇಕೆಂಬ ಸೂಚನೆಗಳೂ ಈ ಕೃತಿಯಲ್ಲಿ ದೊರೆಯುತ್ತವೆ. ಜಾನಪದದ ಅಭ್ಯಾಸಿಗಳಿಗೆ ಇದು ಉಪಯುಕ್ತ ಗ್ರಂಥ.
ಕೃತಿ: ಜಾನಪದ ಪ್ರಕಾರಗಳು
ಪ್ರಕಾರ: ಸಂಶೋಧನೆ ಏಕೆ ಓದಬೇಕು?: ಜಾನಪದ್ಮ ಅರಿಯಲು
ಪ್ರ: ತನು ಮನು ಪ್ರಕಾಶನ,
ಮೈಸೂರು, ಪುಟಗಳು 348 ಬೆಲೆ ರು. 250

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.