ಮೂಕ ಪ್ರತಿಧ್ವನಿ
2013 ಮೆಚ್ಚುಗೆ ಪಡೆದ ಕಥೆ
ಸಂತೆ ಮುಗಿಯುವುದು ಸಂಜೆ. ಆದರೆ ಅದಕ್ಕಿಂತ ಮುನ್ನ ಹೊರಟುಬಿಡಬೇಕೆಂದು ಯೋಚಿಸಿದ ಸಣ್ಣಯ್ಯ, ಇದೇ ಮಾತನ್ನು ಅವನು ಮಗಳು ಗೌರಿಗೂ ಸಹ ಹೇಳಿದ- ಮಧ್ಯಾಹ್ನದಿಂದ ಮೋಡ ಕಟ್ಟಿಕೊಂಡಿತ್ತು. ಯಾವ ಕ್ಷಣದಲ್ಲಾದರೂ ಮಳೆಯಾಗುವ ಸಂಭವವಿತ್ತು. ಆದರೆ ಸಂಜೆಗಿಂತ ಮುನ್ನವೇ ತುಂತುರ ಮಳೆ ಪ್ರಾರಂಭವಾಯಿತು. ಇನ್ನು ಇಲ್ಲಿ ಒಂದು ನಿಮಿಷ ಸಹ ನಿಲ್ಲಬಾರದೆಂದು ಅವರು ಕಂಚನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ನೆನೆಯುತ್ತ ಹೆಜ್ಜೆಯಿಟ್ಟರು. ರಸ್ತೆಯ ಎರಡು ಬದಿಯಲ್ಲಿ ಜೋಳದ ಹೊಲಗಳಿದ್ದವು. ಆಳೆತ್ತರಕ್ಕೆ ಜೋಳ ಬೆಳೆದು ನಿಂತಿತ್ತು. ಇಲ್ಲಿಂದ ಕಂಚನಹಳ್ಳಿ ಎರಡು ಮೈಲಿ ದೂರದಲ್ಲಿತ್ತು. ಅಲ್ಲಿ ಊರಿನ ಒಂದು ಮೂಲೆಯಲ್ಲಿರುವ ಶಾಲೆಯ ಜಗುಲಿ ಮೇಲೆ ಕಳೆದ ಒಂದು ವಾರದಿಂದ ಅವರು ಬಿಡಾರ ಹಾಕಿದ್ದರು.
ಸಣ್ಣಯ್ಯ ಬೆಳಗ್ಗೆ ಸಂಜೆಯೆನ್ನದೆ ಮದ್ಯಪಾನ ಮಾಡುತ್ತಿದ್ದ. ನಶೆ ಜಾಸ್ತಿಯಾದಾಗಲೆಲ್ಲ ನಾಲ್ಕೈದು ವರ್ಷಗಳ ಕೆಳಗೆ ಅವರ ಜನಾಂಗದವನಾದ ಯುವಕ ಲೋಕೇಶನ ಜತೆ ಓಡಿಹೋದ ಹೆಂಡತಿ ದೇವಿಯನ್ನು ಬೈಯುತ್ತಿದ್ದ- ಅಪ್ಪ, ಅಮ್ಮನನ್ನು ಬೈಯುತ್ತಿದ್ದರೆ ಗೌರಿ ಸುಮ್ಮನೆ ಕೇಳುತ್ತಿದ್ದಳೇ ಹೊರತು ಯಾವ ಮಾತನ್ನೂ ಆಡುತ್ತಿರಲಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಅವಳಿಗೂ ತಾಯಿಯ ಮೇಲೆ ಕೋಪವಿತ್ತು. ತನಗೆ ಬುದ್ಧಿ ಬರುವುದಕ್ಕೆ ಮುನ್ನ ತಾಯಿ ತನ್ನನ್ನು ಬಿಟ್ಟು ಹೋಗಿಬಿಟ್ಟಳು. ಒಂದು ವೇಳೆ ಅಪ್ಪ ಇಲ್ಲದೆ ಹೋಗಿದ್ದರೆ ತನ್ನನ್ನು ಯಾರು ಸಾಕುತ್ತಿದ್ದರು ಎಂದು ಯೋಚಿಸುತ್ತಿದ್ದಳು ಹದಿನಾರು ವರ್ಷದ ಗೌರಿ. ಅವಳು ನೋಡಲು ತಾಯಿಯಂತೆಯೇ ಲಕ್ಷಣವಾಗಿದ್ದಳು. ಹಳ್ಳಿ ಹೆಂಗಸರಿಂದ ಕಾಡಿಬೇಡಿ ಅವರಿಂದ ಈಸಿಕೊಂಡು ಹಳೇ ಬಟ್ಟೆಗಳನ್ನು ಧರಿಸಿಕೊಳ್ಳುತ್ತಿದ್ದಳು. ಈಗವಳು ಲಂಗ-ದಾವಣಿ ಹಾಕಿಕೊಂಡಿದ್ದಳು. ಅವು ನೆನೆದುಕೊಂಡು ಮೈಗೆ ಅಂಟಿಕೊಂಡಿದ್ದವು- ದೇವಿ ಕಪ್ಪಗಿದ್ದರೂ ಲಕ್ಷಣವಾಗಿದ್ದಳು- ಸಣ್ಣಯ್ಯ ನೆನೆದುಹೋಗುರುವ ಗೌರಿಯನ್ನು ನೋಡುತ್ತ ದೇವಿಯನ್ನು ನೋನಪಿಸಿಕೊಂಡ.
ಸಣ್ಣಯ್ಯ ಬುಡುಬುಡುಕೆ ಜನಾಂಗಕ್ಕೆ ಸೇರಿದವನಾಗಿದ್ದ- ಅವರು ಈಗ ತಮ್ಮ ಪೂರ್ವಜರ ಶಾಸ್ತ್ರ ಹೇಳುವ ಕಸುಬನ್ನು ಕೈಬಿಟ್ಟಿದ್ದರು- ಆದರೆ ಅವರು ಒಂದಿಷ್ಟು ಕುಟುಂಬಗಳು ಒಂದೊಂದು ಗುಂಪು ಕಟ್ಟಿಕೊಂಡು ಊರೂರುಗಳನ್ನು ಅಲೆಯುವುದನ್ನು ನಿಲ್ಲಿಸಿರಲಿಲ್ಲ- ಸಂಪಾದನೆ ಮಾಡಿ ನಾಳೆಗಾಗಿ ಇಡುವ ಬುದ್ಧಿಯಂತೂ ಅವರಿಗಿರಲಿಲ್ಲ. ನಾಳೆ ಬಗ್ಗೆ ಯೋಚಿಸುವ ವಿಚಾರ ಸಹ ಅವರು ಮಾಡುತ್ತಿರಲಿಲ್ಲ. ಏನಿದ್ದರೂ ಇಂದು ಸಂಪಾದನೆ ಮಾಡುವುದೆಲ್ಲವನ್ನೂ ಇಂದೇ ತಿಂದು ಚೆನ್ನಾಗಿ ಕುಡಿಯುತ್ತಿದ್ದರು-
ಬುಡುಬುಡಕೆಯ ಹೊಸ ಪೀಳಿಗೆಯ ಗಂಡಸರ ಪೈಕಿ ಅನೇಕರು ಸ್ಟೌವ್ ರಿಪೇರಿ, ಛತ್ರಿ ರಿಪೇರಿ ಮಾಡಿದರೆ ಹೆಂಗಸರ ಪೈಕಿ ಎಲ್ಲರೂ ಬಟ್ಟೆ ಪಿನ್, ತಲೆ ಪಿನ್, ಹೆಂಗಸರ ಸಿಂಗಾರದ ಅಗ್ಗದ ವಸ್ತುಗಳ ವ್ಯಾಪಾರ ಮಾಡುತ್ತಿದ್ದರು-
ತಮಗೆ ಸರಿಯೆನಿಸುವ ಕಡೆ ಬಿಡಾರ ಹಾಕುತ್ತಿದ್ದರು- ಒಂದಿಷ್ಟು ದಿನ ಅಲ್ಲಿರುವುದು ಆಮೇಲೆ ಅಲ್ಲಿಂದ ಬೇರೆ ಕಡೆ ವಲಸೆ ಹೋಗುವುದು ಅವರ ಮಾಮೂಲಾಗಿತ್ತು. ದೇವಿ ಇರುವವರೆಗೆ ಸಣ್ಣಯ್ಯ ತಮ್ಮ ಜನಾಂಗದವರ ಜತೆಗಿದ್ದ. ದೇವಿ ಓಡಿಹೋದ ಬಳಿಕ ಅವನು ಯಾರ ಜತೆಯಲ್ಲೂ ಸೇರುತ್ತಿರಲಿಲ್ಲ- ಸ್ವಂತ ಊರಿಗೂ ಹೋಗಿರಲಿಲ್ಲ.
ಸಣ್ಣಯ್ಯ, ಗೌರಿ ಜತೆ ಸಂತೆಗಳಲ್ಲದೆ ಊರೂರು ಅಲೆದು ಸ್ಟೌವ್ ರಿಪೇರಿ ಮಾಡುತ್ತಿದ್ದ- ಗೌರಿ ಬಟ್ಟೆ ಪಿನ್, ತಲೆ ಪಿನ್ ಇನ್ನಿತರೆ ವಸ್ತುಗಳ ವ್ಯಾಪಾರ ಮಾಡುತ್ತಿದ್ದಳು.
ಇತ್ತೀಚೆಗೆ ಎರಡು ವರ್ಷದಿಂದ ಸಣ್ಣಯ್ಯ ಪಾಷಾಣದ ವ್ಯಾಪಾರ ಸಹ ಕಲಿತುಕೊಂಡಿದ್ದ. ಸಂತೆಗಳಲ್ಲಿ ಪಾಷಾಣ ಮಾರುವ ವಯಸ್ಸಾದ ಸಾಬಿಯೊಬ್ಬ ಅವನಿಗೆ ಈ ವ್ಯಾಪಾರದ ಬಗ್ಗೆ ಹೇಳಿಕೊಟ್ಟಿದ್ದ. ಸಂತೆಗಳಲ್ಲದೆ ಹಳ್ಳಿ ಮೇಲೆ ಇಲಿ, ಹೆಗ್ಗಣ ಪಾಷಾಣ ಎಂದು ಕೂಗಿಕೊಂಡು ಹೋದರೆ ಬೇಕಾದವರು ಕೊಂಡುಕೊಳ್ಳುತ್ತಾರೆ ಎಂದು ಹೇಳಿದ್ದ. ಲಾಭ ಹೆಚ್ಚು ಎಂದು ಸಹ ವಿವರಿಸಿದ್ದ.
ವಯಸ್ಸಿಗೆ ಬಂದ ಮಗಳೊಂದಿಗೆ ನಲವತ್ತೆರಡರ ಆಸುಪಾಸಿನಲ್ಲಿರುವ ಸಣ್ಣಯ್ಯ ಮಳೆಯಲ್ಲಿ ನೆನೆಯುತ್ತ ಹೆಜ್ಜೆಯಿಟ್ಟ. ಅವನ ಹೆಗಲ ಮೇಲೆ ಜೋಳಿಗೆಯಿತ್ತು- ಅದರಲ್ಲಿ ಪಾಷಾಣದ ಪೊಟ್ಟಣಗಳ ಜತೆ ಸಾರಾಯಿಯ ಎರಡು ಬಾಟಲುಗಳಿದ್ದವು. ಆಕಾಶದಲ್ಲಿ ಮೋಡ ಕಟ್ಟಿಕೊಂಡಿರುವುದರಿಂದ ಸಮಯಕ್ಕಿಂತ ಮುಂಚೆ ಕತ್ತಲೆ ಹರಡಿಕೊಳ್ಳಲು ಪ್ರಾಂಭವಾಗಿತ್ತು- ವಯಸ್ಸಿಗೆ ಬಂದ ಮಗಳಿಗೆ ತಾಗಿಕೊಂಡು ಹೋಗುತ್ತಿದ್ದಾಗ ಸಣ್ಣಯ್ಯನಿಗೆ ದೇವಿ ನೆನಪಾದಳು- ಅವಳ ಜತೆ ಕಳೆದ ಮಧುರವಾದ ಕ್ಷಣಗಳು ಸಹ ನೆನಪಿಗೆ ಬಂದವು. ಒಳ್ಳೆ ಆಲೋಚನೆಗಳ ಜತೆ ಜತೆಯಲ್ಲಿ ದುಷ್ಟ ಆಲೋಚನೆಗಳು ಸಹ ಬರತೊಡಗಿದವು. ಕಂಚನಹಳ್ಳಿ ಇನ್ನೇನು ಸ್ವಲ್ಪ ದೂರದಲ್ಲಿದ್ದಾಗ ಇದ್ದಕ್ಕಿದ್ದಂತೆ ಅವನು ಗೌರಿಯನ್ನು ಅನಾಮತ್ತಾಗಿ ಎತ್ತಿಕೊಂಡು ಜೋಳದ ಹೊಲಗಳ ಮಧ್ಯ ಪ್ರವೇಶಿಸಿದ.
ಸ್ವಲ್ಪ ಸಮಯದ ಬಳಿಕ ಅವರಿಬ್ಬರು ಹೊಲದಿಂದ ಹೊರಬಂದರು- ಗೌರಿ ಮಂಕಾಗಿ ಹೋಗಿದ್ದಳು. ಸಣ್ಣಯ್ಯ ನಶೆಯಲ್ಲಿದ್ದ. ಆದರೆ ಅವನು ದೇವಿಯನ್ನು ಬೈಯುತ್ತಿರಲಿಲ್ಲ.
ಅವರಿಬ್ಬರೂ ಮೌನವಾಗಿಯೇ ಕಂಚನಹಳ್ಳಿ ತಲುಪಿದರು. ಶಾಲೆಯ ಜಗುಲಿಯ ಮೂಲೆಯಲ್ಲಿಟ್ಟಿರುವ ಹಳೆ ಬಟ್ಟೆ, ಹೊದಿಕೆಯ ಪೊಟ್ಟಣವನ್ನು ಬಿಚ್ಚಿದರು. ನೆನೆದು ಬಂದಿರುವುದರಿಂದ ಇಬ್ಬರಿಗೂ ಚಳಿಯಾಗುತ್ತಿತ್ತು. ಇಬ್ಬರೂ ಹೊದಿಕೆಗಳನ್ನು ಹೊತ್ತುಕೊಂಡು ಕತ್ತಲೆಯಲ್ಲಿ ಕುಳಿತು ಸಂತೆಯಿಂದ ತಂದಿದ್ದ ತಿಂಡಿ ತಿಂದರು. ತಿಂಡಿ ತಿಂದ ಬಳಿಕ ಸಣ್ಣಯ್ಯ ಸಾರಾಯಿ ಬಾಟಲು ಹುಡುಕಿ ತೆಗೆದ.
ಎಂದಿನಂತೆ ಮುಂಜಾನೆ ಎದ್ದ ಸಣ್ಣಯ್ಯ, ನಶೆ ಇಳಿದಿತ್ತು. ಅವನು ಗೌರಿಯನ್ನು ನೋಡಿದ. ಅವಳು ಗಾಢ ನಿದ್ದೆಯಲ್ಲಿದ್ದಳು.
ಸ್ವಲ್ಪ ಸಮಯದವರೆಗೆ ಸುಮ್ಮನೆ ಯೋಚಿಸುತ್ತ ಕುಳಿತ ಬಳಿಕ ಅವನು ಎಂದಿನಂತೆ ಕೆರೆ ಕಡೆ ಹೊರಟ. ಕೆರೆ ಕಡೆ ಹೋಗುವುದಕ್ಕಿಂತ ಮುನ್ನ ಜೋಳದ ಹೊಲಗಳ ಕಡೆ ನಡೆದ. ನಿನ್ನೆ ತಾನು ದುಡುಕಿ ಹೋದ ಸ್ಥಳಕ್ಕೆ ತಲುಪಿ ಯೋಚಿಸುತ್ತ ನಿಂತುಕೊಂಡ. ಸಾಮಾನ್ಯವಾಗಿ ಮುಂಜಾನೆ ಕೆರೆ ಕಡೆ ಹೋಗುವಾಗ ಅವನು ಬರಿಕೈಯಲ್ಲಿ ಹೋಗುತ್ತಿದ್ದ. ಆದರೆ ಇಂದು ಅವನ ಹೆಗಲಿನ ಮೇಲೆ ಜೋಳಿಗೆಯಿತ್ತು. ಅದರಲ್ಲಿ ಪಾಷಾಣದ ಪೊಟ್ಟಣಗಳಿದ್ದವು. <
-ಅದೀಬ್ ಅಖ್ತರ್ 9845371383
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

