ಸಾಪ್ತಾಹಿಕಪ್ರಭ

ಸಾಮಾನ್ಯ ವಿಶೇಷ ರಾಗವೆಂದರೆ ನಮ್ಮೊಳಗಿನ ಅರಿವು

ಸಾಮಾನ್ಯ ವಿಶೇಷ ರಾಗವೆಂದರೆ ನಮ್ಮೊಳಗಿನ ಅರಿವು
Published On :

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೆಲವೊಂದು ರಾಗಗಳ ಸಮೂಹಗಳಿವೆ. ಉದಾಹರಣೆಗೆ ಕೇದಾರ್- ಕಾಮೋದ್- ತಿಲಕ್ ಕಾಮೋದ್- ಛಾಯಾನಟ್- ಬಿಲಾವಲ್- ನಂದ್- ಹಮೀರ್ ಇತ್ಯಾದಿ ಒಂದು ಸಮೂಹ. ಈ ಸಮೂಹದ ಈ ಎಲ್ಲ ರಾಗಗಳಲ್ಲಿ ಅಪಾರವಾದ ಸಾಮ್ಯತೆಗಳಿರುತ್ತವೆ. ಅಂದರೆ ಇವುಗಳಲ್ಲಿ ಬಳಸುವ ಸ್ವರಗಳು, ಅವುಗಳ ಶೈಲಿ, ಅವುಗಳಲ್ಲಿ ಬರುವ ಕೆಲವು ಸ್ವರ ಸಮೂಹಗಳು- ಹೀಗೆ ಅನೇಕ ಸಾಮ್ಯತೆಗಳಿರುತ್ತವೆ. ಇಷ್ಟೇ ಅಲ್ಲ, ಇವು ಕ್ಲಿಷ್ಟವೂ, ಪಾಂಡಿತ್ಯಪೂರ್ಣವೂ ಅಗಿರುವುದರಿಂದ ಇವುಗಳನ್ನು ಹಾಡಲು ಒಳ್ಳೆಯ ಅಧ್ಯಯನ, ತಯಾರಿ ಬೇಕಾಗುತ್ತದೆ. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಹಾಡುಗಾರ ಇವುಗಳನ್ನು ಸರಿಯಾಗಿ ಅಭ್ಯಾಸಮಾಡಿರದಿದ್ದರೆ ಅಥವಾ ಕೇಳುಗರಿಗೂ ಅಂಥ ತಿಳಿವಳಿಕೆ ಇಲ್ಲದಿದ್ದರೆ ಕಾರ್ಯಕ್ರಮದ ಕೊನೆಯವರೆಗೂ ಅಥವಾ ಯಾರಾದರೂ ರಾಗದ ಹೆಸರು ಹೇಳುವವರೆಗೂ ಎಲ್ಲರಿಗೂ ಗೊಂದಲವೇ. ಇದು ಆ ರಾಗವೋ ಈ ರಾಗವೋ ಎಂದು ಒಬ್ಬರನ್ನೊಬ್ಬರು ಕೇಳುತ್ತ ಕುಳಿತಿರಬೇಕಾಗುತ್ತದೆ. ಹೀಗೆಯೇ ಪೂರಿಯಾ- ಸೋಹಿನಿ- ಬಸಂತ್ - ಮಾರ್ವಾ- ಪರಜ್ ಇತ್ಯಾದಿಗಳೂ ಒಂದು ಸಮೂಹ...
ಹೀಗಿರುವಾಗ ಇಂಥ ರಾಗಗಳನ್ನು ಒಂದಾದಮೇಲೆ ಒಂದರಂತೆ ತತ್‌ಕ್ಷಣ ಹಾಡಬೇಕೆಂದರೆ ಹೇಗಿರಬೇಡ? ಕಳೆದ ವಾರ ಇಂಥ ರಾಗ ಸಮೂಹಗಳ ಮೇಲೆ ನಡೆದ ಒಂದು ಕಾರ್ಯಾಗಾರದಲ್ಲಿ ಪ್ರಸಿದ್ಧ ಸಂಗೀತಗಾರರಿಂದ ಇಂಥ ಒಂದು ಅಪರೂಪದ ಸಂಗತಿಯನ್ನು ಕೇಳಲು ಸಾಧ್ಯವಾಯಿತು. ಘನ ವಿದ್ವಾಂಸರಾದ ಅವರು ಈ ಎಲ್ಲ ರಾಗಗಳನ್ನು ಒಂದಾದ ಮೇಲೆ ಒಂದರಂತೆ ಅರ್ಧ- ಮುಕ್ಕಾಲು ನಿಮಿಷಗಳಲ್ಲಿ ಒಂದು ಚಿಕ್ಕ ಸ್ವರಸಮೂಹದಿಂದಲೋ, ಎರಡು- ಮೂರೇ ಸ್ವರಗಳಿಂದಲೋ ಅಯಾ ರಾಗಗಳನ್ನು ಒಂದಿನಿತೂ ಗೊಂದಲವಾಗದಂತೆ ಅನಾವರಣಗೊಳಿಸುತ್ತಿದ್ದರೆ ಕೇಳುಗರ ಮೈ ಜುಂ ಎನ್ನುತ್ತಿತ್ತು! ಅವರು ಹಾಡುತ್ತಿದ್ದಂತೆ ನಾವೇ ಹೇಳಿಬಿಡುತ್ತಿದ್ದೆವು... 'ಇದು ಕೇದಾರ್‌', 'ಇದು ಹಮೀರ್‌', 'ಇದು ಛಾಯಾನಟ್‌' ಎಂದು! ಎಲ್ಲಕ್ಕೂ ಅಷ್ಟು ಸಾಮ್ಯಗಳಿದ್ದರೂ ಒಂದು ಇನ್ನೊಂದಲ್ಲ, ಅದು ಇಂಥದೇ ರಾಗ ಎಂಬುದನ್ನು ಅಷ್ಟು ಕರಾರುವಕ್ಕಾಗಿ, ಅಷ್ಟು ಕಡಿಮೆ ಸಮಯದಲ್ಲಿ ತೋರಿಸುತ್ತಿದ್ದರವರು.
ಇಂಥ ನಿಖರತೆ ಹೇಗೆ ಸಾಧ್ಯ ಎಂದು ಕೇಳಿದಾಗ ಅವರ ಉತ್ತರವೂ ಬಹಳ ಅರ್ಥಪೂರ್ಣ- 'ಪ್ರತೀ ರಾಗಕ್ಕೂ ಬೇಕಾದಷ್ಟು ಸಾಮ್ಯತೆಗಳಿವೆ. ಅದನ್ನು ನಾನು ಪ್ರತೀ ಬಾರಿ ಹಾಡುವಾಗ ಹಾಡಲೇಬೇಕಿಲ್ಲ. ಆದರೆ, ಪ್ರತೀ ರಾಗಕ್ಕೂ ತನ್ನದೇ ಎಂಬ ಒಂದು ವಿಶೇಷತೆ ಇರುತ್ತದೆ. ಅದನ್ನು ಕಲಾವಿದ ಸರಿಯಾಗಿ ತಿಳಿದಿರಬೇಕು. ಎಲ್ಲ ಜನರಿಗೂ ಕೈ, ಕಾಲು, ಕಣ್ಣು, ಮೂಗು ಎಲ್ಲ ಇರುತ್ತದೆ. ಆದರೆ, ಇವರು ಇದೇ ವ್ಯಕ್ತಿ ಎಂದು ನಾವು ಗುರುತಿಸುವುದಿಲ್ಲವೆ? ಹಾಗೆಯೇ ಇದು ಎಲ್ಲ ಸಾಮ್ಯಗಳಿದ್ದು ಅದರದ್ದೇ ಎಂಬ ಅಂಶಗಳಿರುತ್ತವೆ. ಅದನ್ನು ಸರಿಯಾಗಿ ತಿಳಿದರೆ ಮಾತ್ರ ಆ ರಾಗವನ್ನು ಸರಿಯಾಗಿ ತಿಳಿಯಲು ಸಾಧ್ಯ.
ಅಬ್ಬಾ! ಭಾರತದ ವೈಶೀಷಿಕ ದರ್ಶನದ ತಿರುಳನ್ನೇ ಮಾತನಾಡುತ್ತಿದ್ದಾರಲ್ಲ ಇವರು ಎಂದು ಆಶ್ಚರ್ಯ- ಆನಂದಗಳಾದವು. ವೈಶೀಷಿಕರ ಅಪೂರ್ವ ಚಿಂತನೆಯ ಪ್ರಕಾರ, ಈ ಇಡೀ ಜಗತ್ತಿನ ಪ್ರತಿಯೊಂದು ವಸ್ತುವಿನ ಸರಿಯಾದ ಜ್ಞಾನ ಉಂಟಾಗುವುದೇ ಈ 'ಸಾಮಾನ್ಯ- ವಿಶೇಷ' ಎಂಬ ಅಂಶಗಳಿಂದ!
ನಾವು ಒಂದು ಪ್ರಾಣಿಯನ್ನು ನೋಡಿದೆವು ಎಂದುಕೊಳ್ಳೋಣ. ಮೊದಲು ನಮ್ಮ ಮನಸ್ಸು ಅದನ್ನು ಪ್ರಾಣಿಗಳು  ಎಂಬುದರ ಸಾಮಾನ್ಯ ಲಕ್ಷಣಗಳೊಂದಿಗೆ ಹೋಲಿಸಿ 'ಓ, ಇದು ಪ್ರಾಣಿ' ಎಂದು ನಿರ್ಧರಿಸುತ್ತದಂತೆ. ಆದರೆ ಇದು ಇಂಥದೇ ಪ್ರಾಣಿ- ಇದು ಆಕಳು, ಇದು ಬೆಕ್ಕು ಎಂದು ಗುರುತಿಸುವಾಗ ನಮಗೆ ಆಯಾ ಪ್ರಾಣಿಯ ವಿಶೇಷತೆ- ಅಂದರೆ ಆಕಳಿನ, ಬೆಕ್ಕಿನ ವಿಶೇಷ ಲಕ್ಷಣಗಳು ತಿಳಿದಿರಬೇಕಲ್ಲವೇ? ಅದರಲ್ಲೂ ಇದು ನಮ್ಮ ಮನೆಯದೇ ಬೆಕ್ಕು, ನಮ್ಮ ಮನೆಯದೇ ಆಕಳು ಎಂದು ಗುರುತಿಸುವಾಗಲಂತೂ ಸ್ಪಷ್ಟವಾಗಿ ಅದರ ವಿಶೇಷತೆ- ಬೇರೆ ಆಕಳು, ಬೆಕ್ಕಿಗಿಂತ ಅದು ಬೇರೆ ಹೇಗೆ ಎಂಬುದು ನಮ್ಮ ಮನಸ್ಸಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ.
ಹೀಗೆ ಜಗದ ಸ್ಪಷ್ಟ ಅರಿವು, ಇಲ್ಲಿನ ಪ್ರತಿಯೊಂದು ವಸ್ತುವಿನ ಸ್ಪಷ್ಟ ಅರಿವು ಎಂದರೆ ಈ 'ಸಾಮಾನ್ಯ- ವಿಶೇಷ' ಗಳ ಸ್ಪಷ್ಟ ಅರಿವು!
ಅವರೂ ಅದನ್ನೇ ಹೇಳಿದರು, 'ರಾಗದ ಸಾಮ್ಯತೆ ತಿಳಿದಿರಬೇಕು ಮತ್ತು ಅದರ ವಿಶೇಷತೆಯ ಸ್ಪಷ್ಟ ತಿಳಿವಳಿಕೆ ಇರಬೇಕು. ಆಗ ಈ ರಾಗಗಳ ತಿರುಳನ್ನು ಚೆನ್ನಾಗಿ ತಿಳಿಯಲು ಸಾಧ್ಯ. ಆಗ ಅದು ನಿಜ ಅರ್ಥದಲ್ಲಿ ಜ್ಞಾನ  ಆಗುತ್ತದೆ. ಅದಕ್ಕೇ ಇದು ಕೇವಲ ಪುಸ್ತಕ ಓದಿ, ಎಲ್ಲೋ ಕೇಳಿ, ಬರುವಂಥದಲ್ಲ. ಗುರುವಿನ ಮೂಲಕ, ಅವರ ಸಹವಾಸದಿಂದ, ನಮಗೆ ದೊರೆಯುವ, ನಮ್ಮೊಳಗೆ ನಮಗೇ ತಿಳಿಯುವ 'ಅರಿವು'!ಟಿ

-ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.