ಎಲ್ಲರಿಗೊಳಿತನು ಬಯಸಲಿ ಕವನ

ನನಗಾಗ ಹತ್ತೋ ಹನ್ನೊಂದೋ ವರ್ಷ ವಯಸ್ಸು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದು ಬಾಡಿಗೆಮನೆ. ಅದರ ಯಜಮಾನರಾದ ಸೆಟ್ಟರು ಪಕ್ಕದ ದೊಡ್ಡ ಮನೆಯಲ್ಲಿದ್ದರು. ಅವರ ಮನೆಗೆ ಪ್ರತಿ ತಿಂಗಳೂ 'ಚಂದಮಾಮ' ಮತ್ತು 'ಬಾಲಮಿತ್ರ' ತರಿಸುತ್ತಿದ್ದರು. ನಾನು ಅವರ ಮನೆಯಲ್ಲೇ ಕೂತು ಅವನ್ನು ಓದುತ್ತಿದ್ದೆ. ಅವುಗಳಲ್ಲಿ ಬರುತ್ತಿದ್ದ ಅದ್ಭುತ ರಮ್ಯ ಕಥೆಗಳಿಗೆ ನಾನು ಮಾರುಹೋಗಿದ್ದೆ. ನನ್ನದೇ ಕಲ್ಪನಾಲೋಕವೊಂದರಲ್ಲಿ ವಿಹರಿಸುತ್ತಿದ್ದೆ. ಜೊತೆಗೆ, ನನ್ನ ತಾಯಿ ಸಕ್ಯಲೇಟಿಂಗ್ ಲೈಬ್ರರಿಯಿಂದ ಅನಕೃ, ತರಾಸು, ತ್ರಿವೇಣಿ ಮುಂತಾದವರ ಕಾದಂಬರಿಗಳನ್ನು ತರುತ್ತಿದ್ದರು. ಅವುಗಳನ್ನು ನಾನೂ ಓದಿ, ನನ್ನ ಆಗಿನ ವಯಸ್ಸಿಗೆ ತಕ್ಕಷ್ಟು ಅರ್ಥ ಮಾಡಿಕೊಳ್ಳುತ್ತಿದ್ದೆ. ಹೀಗೆ ಓದುವ ಹುಚ್ಚು ನನ್ನನ್ನು ಆಗಲಿಂದಲೇ ಆವರಿಸಿತ್ತು.
ನನ್ನ ತಂದೆ ಫೋಟೋಗ್ರಾಫರ್. ಬೆಳಗಿನಿಂದ ರಾತ್ರಿಯ ತನಕ ಬಿಡುವಿಲ್ಲದ ದುಡಿಮೆ. ಓದಲು ಅವರಿಗೆ ಪುರುಸೊತ್ತೆಲ್ಲಿ? ಆದರೂ ಅವರು ಕೆಲವು ಪುಸ್ತಕಗಳನ್ನು ಸಂಗ್ರಹಿಸಿ, ಒಂದು ಗಾಡ್ರೇಜ್ ಬೀರುವಿನಲ್ಲಿ ಭದ್ರವಾಗಿ ಬೀಗ ಹಾಕಿ ಇರಿಸಿದ್ದರು. ಆಗಾಗ ಅವುಗಳನ್ನು ಹೊರತೆಗೆದು, ಗುಟ್ಟಾಗಿ ಕಣ್ಣಾಡಿಸುತಿದ್ದರು. ಯಾರ ಕೈಗೂ ಅವು ಸಿಕ್ಕದ ಹಾಗೆ ಜಾಗರೂಕತೆ ವಹಿಸಿದ್ದರು. ಹೀಗಾಗಿ ನನ್ನಲ್ಲಿ ಕೆಟ್ಟ ಕುತೂಹಲ- ಹೇಗಾದರೂ ಮಾಡಿ ಆ ಪುಸ್ತಕಗಳನ್ನು ನೋಡಬೇಕು, ಸಾಧ್ಯವಾದರೆ ಓದಬೇಕೆಂದು.
ಒಂದು ಅವಕಾಶ ಒದಗಿ ಬಂತು; ಅಪರೂಪಕ್ಕೆ ನನ್ನ ತಂದೆ ಮತ್ತು ತಾಯಿ ಕೆಲವು ದಿನಗಳ ಮಟ್ಟಿಗೆ ಬೇರೆ ಊರಿಗೆ ಹೋದರು. ಮನೆಯಲ್ಲಿ ಮಕ್ಕಳಾದ ನಮ್ಮದೇ ಸರ್ವತಂತ್ರ ಸ್ವತಂತ್ರ ರಾಜ್ಯಭಾರ. ನಾನು ನನ್ನ ಸೋದರ ಸೋದರಿಯರಿಗೆ ಗೊತ್ತಾಗದ ಹಾಗೆ ಅಪ್ಪನ ಗಾಡ್ರೇಜ್ ಬೀರುವಿನ ಬೀಗದಕೈ ಪತ್ತೆ ಮಾಡಿ ಬೀರುವನ್ನು ತೆಗೆದೆ. ಅಲ್ಲಿದ್ದ ಕೇವಲ ನಾಲ್ಕೈದು ಪುಸ್ತಕಗಳನ್ನು ಒಂದೊಂದಾಗಿ ಎತ್ತಿಕೊಂಡು ಪುಟ ತಿರುವಿ ಕಣ್ಣಾಡಿಸಿದೆ. ಅವೆಲ್ಲ ಸೆಕ್ಸಿಗೆ ಸಂಬಂಧಿಸಿದ ಪುಸ್ತಕಗಳು. ವಾತ್ಸಾಯನ, ಕೊಕ್ಕೋಕ ಇತ್ಯಾದಿ. ಆ ವಯಸ್ಸಿಗೆ ನನಗೆ ಅವುಗಳಲ್ಲಿ ಅಂಥ ಸ್ವಾರಸ್ಯವೇನೂ ಕಾಣಲಿಲ್ಲ. ಆದರೆ ಒಂದು ಪುಸ್ತಕ ನನ್ನನ್ನು ತೀವ್ರವಾಗಿ ಸೆಳೆಯಿತು. ಅದು ಮಾಟ ಮಂತ್ರ ಇಂದ್ರಜಾಲಕ್ಕೆ ಸಂಬಂಧಿಸಿದ್ದು. ಅದನ್ನು ಮಾತ್ರ ತೆಗೆದುಕೊಂಡು, ಬೀರು ಮುಚ್ಚಿ, ನನ್ನ ಕೋಣೆಯಲ್ಲಿ ಕೂತು, ಕೂಲಂಕಷವಾಗಿ ಓದತೊಡಗಿದೆ.
ಎಂಥೆಂಥ ಅದ್ಭುತ ಸಂಗತಿಗಳು! ಕಬ್ಬಿಣವನ್ನು ಬಂಗಾರ ಮಾಡುವುದು, ಇತರರಿಗೆ ಕಾಣದ ಹಾಗೆ ಅದೃಶ್ಯನಾಗಿ ಸಂಚರಿಸುವುದು, ಶತ್ರುಗಳಿಗೆ ಮಾಟ ಮಾಡಿ ಮಟ್ಟ ಹಾಕುವುದು, ಅಂಜನ ಹಾಕಿ ನೋಡಿ ಏನು ಬೇಕಾದರೂ ಪತ್ತೆ ಮಾಡುವುದು- ಹೀಗೆ ಅನೇಕ ರೋಚಕ ಸಾಧನೆಗಳು! ಆದರೆ ಅವುಗಳ ಸಿದ್ಧಿ ಅಷ್ಟು ಸುಲಭವಾಗಿರಲಿಲ್ಲ. ಅಮಾವಾಸ್ಯೆ ರಾತ್ರಿ ಸ್ಮಶಾನದಲ್ಲಿ ಕೂತು ಹೋಮ ಮಾಡಬೇಕಿತ್ತು; ಕೋಳಿಯನ್ನು ಬಲಿ ಕೊಡಬೇಕಿತ್ತು; ಯಾವ ಯಾವುದೋ ಧಾನ್ಯ, ಎಣ್ಣೆ, ಪತ್ರೆ ಸಂಗ್ರಹಿಸಬೇಕಿತ್ತು; ಗಂಟೆಗಟ್ಟಲೆ ಧ್ಯಾನಸ್ಥನಾಗಿ ಕೂತು ಮಂತ್ರ ಸಿದ್ಧಿ ಮಾಡಿಕೊಳ್ಳಬೇಕಿತ್ತು; ಹೀಗೇ ಏನೇನೋ. ಇವೆಲ್ಲ ಅಸಾಧ್ಯವಾಗಿ ತೋರಿ, ನನಗೆ ನಿರಾಶೆಯಾಗಿತ್ತು. ಆದರೆ ಒಂದು ಸಿದ್ಧಿ ಮಾತ್ರ ತೀರಾ ಸುಲಭವೆಂದು ತೋರಿತು. ಅದು ವಶೀಕರಣ ವಿದ್ಯೆ. ಕಣ್ಣ ನೋಟದಿಂದಲೇ ಇನ್ನೊಬ್ಬರನ್ನು ಸಮ್ಮೋಹನಗೊಳಿಸಿ, ನಾವು ಹೇಳಿದಂತೆ ಕೇಳುವ ಹಾಗೆ ವಶಪಡಿಸಿಕೊಳ್ಳುವ ವಿದ್ಯೆ. ಇದರ ಸಿದ್ಧಿಗಾಗಿ ಮಾಡಬೇಕಾಗಿದ್ದದ್ದು ಕೇವಲ ಇಷ್ಟೇ: ಯಾವುದಾದರೂ ಒಂದು ಅದೇ ತಾನೇ ಅರಳಿದ ತಾಜಾ ಹೂವನ್ನು ತಂದು ಮುಂದಿಟ್ಟುಕೊಳ್ಳುವುದು; ಅದನ್ನೇ ಏಕಾಗ್ರಚಿತ್ತತೆಯಿಂದ ದಿಟ್ಟಿಸುತ್ತಾ ಕೂರುವುದು; ಹೂವು ಕ್ರಮೇಣ ಬಾಡಿ ಒಣಗಿ ಮುದುರಿಕೊಳ್ಳುತ್ತೆ; ಆ ಹೂವು ಮತ್ತೆ ಮೊದಲಿನಂತೆ ಅರಳಿ ನಳನಳಿಸಲಿ, ಘಮಘಮಿಸಲಿ, ಎಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿಕೊಂಡು ಅದನ್ನೇ ದಿಟ್ಟಿಸಿನೋಡುತ್ತಾ ಕೂರುವುದು; ಇದು ದಿನಗಟ್ಟಲೆ, ವಾರಗಟ್ಟಲೆ ಹಿಡಿಯಬಹುದು; ನಿರಾಶರಾಗಬಾರದು; ಸಾಧನೆ ಮುಂದುವರಿಸಬೇಕು; ಕೊನೆಗೊಮ್ಮೆ ಆ ಕರಕಲಾದ ಹೂವು ಮತ್ತೆ ಮೊದಲಿನಂತೆ ನಳನಳಿಸಿ ಅರಳಿ ಘಮಘಮಿಸಿದರೆ ಆ ವಶೀಕರಣ ವಿದ್ಯೆ ನಮ್ಮ ನೇತ್ರಗತವಾದಂತೆ. ಅಲ್ಲಿಂದಾಚೆ ಕೇವಲ ನಮ್ಮ ಕಣ್ಣನೋಟದಿಂದಲೇ ಯಾರನ್ನು ಬೇಕಾದರೂ ಆಟ ಆಡಿಸಬಹುದು.
ಅರರೇ! ಈ ಸಾಧನೆ ಇಷ್ಟು ಸುಲಭವೇ! ಅನ್ನಿಸಿ ಕೂಡಲೇ ಕಾರ್ಯತತ್ಪರನಾದೆ. ಹೂವೊಂದನ್ನು ತಂದು ನನ್ನ ಕೊಠಡಿಯಲ್ಲಿ ಗುಟ್ಟಾಗಿ ಮುಂದಿಟ್ಟುಕೊಂಡು ಕೂತು, ಅದನ್ನೇ ಗಂಟೆಗಟ್ಟಲೆ ದಿಟ್ಟಿಸತೊಡಗಿದೆ. ಮುಂದೆ ಏನಾಯಿತೆಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಹೂವೇನೋ ಬಾಡಿ ಒಣಗಿ ಮುದುರಿಕೊಂಡು ಕ್ರಮೇಣ ಕರಕಲಾಯಿತು. ಆದರೆ ನಾನು ಎಷ್ಟೇ ದೃಢ ಸಂಕಲ್ಪದಿಂದ, ಎಷ್ಟೇ ದಿನ ಪ್ರಯತ್ನಿಸಿದರೂ ಅದು ಮೊದಲಿನಂತೆ ನಳನಳಿಸಿ ಅರಳಲಿಲ್ಲ, ಮಗಮಗಿಸಲಿಲ್ಲ. ವಶೀಕರಣ ವಿದ್ಯೆ ನನಗೆ ಸಿದ್ಧಿಸಲಿಲ್ಲ. ಕೊನೆಗೆ ಹತಾಶನಾಗಿ ನನ್ನ ಪ್ರಯತ್ನವನ್ನು ನಾನು ಕೈಬಿಡಬೇಕಾಯಿತು.
ಮುಂದೆ ನಾನು ಬೆಳೆದು ದೊಡ್ಡವನಾಗಿ, ಸಾಹಿತ್ಯದ ಅಧ್ಯಯನ ಹಾಗೂ ಕಾವ್ಯಕೃಷಿಯಲ್ಲಿ ಗಂಭೀರವಾಗಿ ನನ್ನನ್ನು ತೊಡಗಿಸಿಕೊಂಡೆ. ಇತ್ತೀಚೆಗೆ ಒಮ್ಮೆ ಇದ್ದಕ್ಕಿದ್ದಂತೆ ನನಗೆ ಹೊಳೆಯಿತು; 'ಅರೇ! ಬಾಲ್ಯದಲ್ಲಿ ವಶೀಕರಣ ವಿದ್ಯೆಯ ಸಾಧನೆಗಾಗಿ ನಾನು ಮಾಡಿದ ಪ್ರಯತ್ನ ಕಾವ್ಯದ ಉದ್ದೇಶಕ್ಕೆ ಒಡ್ಡಿದ ಪ್ರತಿಮೆಯಂತಿದೆಯಲ್ಲವೇ? ಜೀವನದ ಜಂಜಾಟಗಳಿಂದ ಜರ್ಜರಿತರಾದ ಎಷ್ಟೊಂದು ಜನರಿದ್ದಾರಲ್ಲ ನಮ್ಮ ಸುತ್ತ! ಅವರ ಬಾಳಿನಲ್ಲಿ ಭರವಸೆಯನ್ನು ತುಂಬಿ, ಅವರ ಬಾಡಿ ಮುದುರಿ ಕರಕಲಾದ ಮನಸ್ಸುಗಳನ್ನು ಮತ್ತೆ ಅರಳಿ ನಳನಳಿಸುವಂತೆ, ಮಗಮಗಿಸುವಂತೆ ಮಾಡಲು ಪ್ರಯತ್ನಿಸಬೇಕಾದ್ದು ಕಾವ್ಯದ ನಿಜವಾದ ಉದ್ದೇಶವಾಗಬೇಕಲ್ಲವೆ? ಸಂಕಲ್ಪವಾಗಬೇಕಲ್ಲವೆ?' ಕೆ.ಎಸ್. ನರಸಿಂಹಸ್ವಾಮಿಯವರು ಹೇಳುತ್ತಾರೆ....
ಭೂಮಿಯ ಕರುಣೆಗೆ ಮಿತಿ ಇರದೆಂದು,
ಎಲ್ಲರ ದುಡಿಮೆಗೆ ಫಲವಿಹುದೆಂದು,
ನಾಳೆಯ ಬಾಗಿಲು ನಂದನವೆಂದು,
ಪ್ರೀತಿಗೆ ಶಾಂತಿಗೆ ಜಯವಿರಲೆಂದು
ಎಲ್ಲರಿಗೊಳಿತನು ಬಯಸಲಿ ಕವನ!
ಗೋಪಾಲಕೃಷ್ಣ ಅಡಿಗರು ತಮ್ಮ 'ಬತ್ತಲಾರದ ಗಂಗೆ' ಕವನದ ಕೊನೆಯಲ್ಲಿ ಹೀಗೆ ಹೇಳುತ್ತಾರೆ...
ಗಂಗೆಯಿಲ್ಲದ ಕಾಲದಲ್ಲಿ ತಡೆದುಡುಕಿದ ಭಗೀರಥನ
ಸಂಕಲ್ಪ ಬಲದ ಅಸಂಖ್ಯಾತರಿಲ್ಲಿ
ಬಂದೆ ಬರುವರು; ದೇವಗಂಗೆಯೆ ನೇರ
ಹೃದಯದಂತರ್ಗಂಗೆ ತುಂಬಿ ಚೆಲ್ಲಿ,
ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ
ಚಿಗುರುವುವು ಚಿಗಿಯುವುವು ಮುಗಿಲ ಕಡೆಗೆ;
ಕನಸೆ? ಕಲ್ಪನೆಯೆ? ಇಲ್ಲವಾದರೇನಿದೆ ಇಲ್ಲಿ?
ಕಣ್ಣು ಕೀಳುವ ಸೂಜಿ, ಕೊಲುವ ಬಡಿಗೆ.
ಭ್ರಷ್ಟಗೊಂಡ ವಾಣಿಜ್ಯ ಮತ್ತು ರಾಜಕಾರಣ, ಜೀವನದ ಮೌಲ್ಯಗಳನ್ನೇ ಪಲ್ಲಟಗೊಳಿಸುತ್ತಿರುವ ಭೋಗ ಸಂಸ್ಕೃತಿ, ನಿತ್ಯದ ಸಂಗತಿಗಳಾಗಿರುವ ಕೋಮು ಗಲಭೆ, ಭಯೋತ್ಪಾದನೆ, ಹಿಂಸಾಚಾರ- ಇವುಗಳಿಂದ ತತ್ತರಿಸುತ್ತಿರುವ ಇಂದಿನ ಜಗತ್ತಿನ ಮಟ್ಟಿಗೂ ಕಾವ್ಯದ ಸಾಂತ್ವನ, ಭರವಸೆ ಮತ್ತು ಆಶಾವಾದ ಈಗ ಅತ್ಯಗತ್ಯವಾಗಿದೆಯಲ್ಲವೆ? ಎಲ್ಲ ಮಲಿನ ಮನಸ್ಸುಗಳನ್ನೂ ತೊಳೆದು ನಿರ್ಮಲಗೊಳಿಸುವಂಥ ಹಾಗೂ ಬರಡಾದ ಪರಿಸರವನ್ನು ಮತ್ತೆ ಹಚ್ಚಹಸಿರಾಗಿಸುವಂಥ ಕಾವ್ಯಗಂಗೆಗೆ 'ಇಳಿದು ಬಾ, ತಾಯಿ, ಇಳಿದು ಬಾ' ಎಂದು ನಾವು ಆರ್ತರಾಗಿ ಮೊರೆಯಿಡಬೇಕಾದ ಸಂದರ್ಭ ಇದಲ್ಲವೆ? ಹೀಗನ್ನಿಸಿ, ನನ್ನ ಬಾಲ್ಯದ ವಶೀಕರಣ ವಿದ್ಯೆಯ ಸಾಧನೆಯ ಪ್ರಯತ್ನವನ್ನೇ ಪ್ರತಿಮೆಯಾಗಿಸಿ, ಕಾವ್ಯದ ಉದ್ದೇಶದ ಬಗ್ಗೆ ನಾನು ಬರೆದ ಕಿರುಗವನ 'ಸಿದ್ಧಿ'.
ಹಾಗೆಯೇ, ಮುಂದೆ 'ಭರವಸೆ' ಎಂಬ ನನ್ನ ಭಾವಗೀತೆಯೊಂದರ ರಚನೆಗೂ ಇದು ಕಾರಣವಾಯಿತು. ಉಪಾಸನಾ ಮೋಹನ್ ಅವರ ಸೊಗಸಾದ ಸಂಗೀತ ಸಂಯೋಜನೆಯಲ್ಲಿ ಎಂ.ಡಿ. ಪಲ್ಲವಿ ಹಾಡಿರುವ ಈ ಹಾಡು ತುಂಬ ಜನಪ್ರಿಯವಾಗಿದೆ.
ಸಿದ್ಧಿ
ಆ ಬಾಡಿಹೋದ ಹೂವನ್ನು
ಕಂಡೆಯಾ?
ತಂದು ಮುಂದಿಟ್ಟುಕೊ
ಮೃದುವಾಗಿ ಅದನ್ನು
ನೇವರಿಸು
ನೆಟ್ಟ ನೋಟದಿಂದ
ದಿಟ್ಟಿಸು
ನಿಧಾನ ಅದರ ಒಳಕ್ಕಿಳಿ
ಹೃದಯ ಮುಟ್ಟು
ಅಕ್ಕರೆಯಿಂದ
ಮೆಲ್ಲಗೆ ತಟ್ಟು
ಘಲ್ಲೆಂದು ಪುಲಕಿಸಿ
ಆ ಹೂ
ಮತ್ತೆ
ದಳ ಬಿಚ್ಚಿ ನಳನಳಿಸಿ
ನಕ್ಕರೆ-
ನೀ ಕವಿ
ಅದು ಕವಿತೆ
ಭರವಸೆ
ಆಗು, ಗೆಳೆಯ, ಆಗು ನೀನು ಭರವಸೆಯ ಪ್ರವಾದಿ
ಹತಾಶೆಯಲ್ಲೇನಿದೆ? ಬರಿ ಶೂನ್ಯ, ಬರೀ ಬೂದಿ
ಕೊಚ್ಚಿದಷ್ಟೂ ಹೆಚ್ಚಿ ಬರುವ ಸೃಷ್ಟಿಶೀಲ ಪ್ರಕೃತಿ
ಉಬ್ಬೆಯಲ್ಲೂ ಹುಳಿ ನೀಗಿದ ಸಿಹಿಹಣ್ಣಿನ ಪ್ರೀತಿ
ಅದುಮಿದಷ್ಟೂ ಚಿಮ್ಮಿ ಬರುವ ಚೈತನ್ಯದ ಚಿಲುಮೆ
ಇಂದು ನಮ್ಮ ಯತ್ನಗಳಿಗೆ ಇವೇ ತಕ್ಕ ಪ್ರತಿಮೆ
ಜೋಪಡಿಯಲೂ ಜೋಗುಳ, ಅಂಗಳದಲಿ ಹೂಹಸೆ
ಕೊಳೆಗೇರಿಯ ಕೊಚ್ಚೆಯಲ್ಲೂ ಮಗು ಗುಲಾಬಿನಗೆ
ಚಿಂದಿಯಲ್ಲೂ ಹಿಗ್ಗು ಹರೆಯ, ನೂರು ಕನಸು ಕವಿತೆ
ಹಟ್ಟಿಯಲ್ಲೂ ಹುಟ್ಟುಹಬ್ಬ, ಮುಂಬೆಳಗಿನ ಹಣತೆ
ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ, ಸ್ನೇಹದೊಟ್ಟಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ
- ಬಿ.ಆರ್. ಲಕ್ಷ್ಮಣ್ರಾವ್
lakshmanaraobr@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


