ಸಾಪ್ತಾಹಿಕಪ್ರಭ

ರಕ್ಕಸರು ಇತ್ತಕಡೆಯೇ ಬಂದರೇ?

ರಕ್ಕಸರು ಇತ್ತಕಡೆಯೇ ಬಂದರೇ?
Published On :

ರಕ್ಕಸರು ಇತ್ತಕಡೆಯೇ ಬಂದರೇ?
ಹಾಗಾದರೆ ರಕ್ಕಸರು ಇತ್ತ ಕಡೆಯೇ ಬಂದರೇ
ಈ ಮಾಯಾವಿ ಮಾರೀಚನ ಆರ್ತನಾದಕ್ಕೆ
ಲಂಕೆಯ ಬಾಗಿಲು ತೆರೆದಂತಾಯಿತೇ
ಕೂಗು ರಾಮನದೆಂದೇ ಭ್ರಮಿಸಿದ ಸೀತೆ
ಬಾಣಲೆಯಿಂದ ಬೆಂಕಿಗೆ ಬಿದ್ದಳೇ
ಹಗಲುವೇಷ ಧರಿಸಿದ ಮಾಯಾವಿಗಳು ತಕತಕ
ಬಾಗಿಲು ನೂಕಿ ಪರ್ಣ ಕುಟಿಯೊಳಗೆ ಕಾಲಿಟ್ಟಾರೇ
ಸರವನೆಳೆದಾರೇ ಸೀರೆ ಸೆಳೆದಾರೇ
ಇಬ್ಬರೂ ಇಲ್ಲದ ಹೊತ್ತಲ್ಲಿ
ಕುಣಿಕೆ ಬಿಡಿಸಿ ಹಟ್ಟಿಯಿಂದ ಕದ್ದೊಯ್ದಾರೇ
ಅಯ್ಯೋ, ರಾಮ! ಹಾಗಾದರೆ
ನಾನು ಕಟ್ಟಿದ ಮೂರು ತಡೆ ಬೇಲಿಗಳು ವ್ಯರ್ಥವಾದವೇ
ಗೋಡೆ ಮುರಿದು ಬೇಲಿ ಹರಿದು
ಬಾಗಿಲೊಡೆದು ನೋಡನೋಡುತ್ತಿದ್ದಂತೆ
ಆ ಪುಣ್ಯಕೋಟಿಯನ್ನು ಅನಾಮತ್ತು ಎತ್ತಿಕೊಂಡೊಯ್ದಾರೇ
ರಾಮ ರಾಮ... ಸೀತೆಗೇನೂ ಆಗದಿರಲಿ.

ಬೆಕ್ಕಸ ಬೆರಗಾಗಿ ನಿಂತಿದ್ದಾನೆ, ರಾಮ
ಕಾಲಬಳಿಯಲ್ಲೇ ಇದೆ ಮಾಯಾ ಜಿಂಕೆಯ ಮಾರೀಚ ಶರೀರ
ಬಾಣಕ್ಕೆ ಸಿಲುಕಿ ಒದ್ದಾಡುತ್ತಿದೆ ವಿಲವಿಲ
ಮೀನು ಹಿಡಿಯಲು ಗಾಳಕ್ಕೆ ಸಿಕ್ಕಿಸಿದ ಎರೆಹುಳದ ಹಾಗೆ
ಬಂದಿರಬೇಕು ಇಷ್ಟರಲ್ಲೇ ಪರ್ಣಕುಟಿಗೆ ಯಾವನೋ ರಕ್ಕಸ

ಎಡಗಣ್ಣು ಅದುರುತ್ತಿದೆ
ಬಹುಶಃ ಅಪಾಯಕಾದಿದೆ ಸೀತೆಗೆ
ಮೂರೂ ತಡೆಬೇಲಿಗಳ ಮುರಿದು ಹಾಕಿರಬೇಕು ಈ ಹೊತ್ತಿಗೆ
ತಲವಾರು ತೋರಿಸಿ ಕತ್ತಿಗೆ
ಒಯ್ದಿರಬೇಕು ಮೆತ್ತಗೆ

ಏನೆಲ್ಲ ಮಾಡುವುದು?
ಇರುವುದು ನಾವು ಮೂವರು
ಗಡ್ಡೆಗೆಣಸು ಅರಸಿ ತರಬೇಕು ಹೊಟ್ಟೆ ಹೊರೆಯಬೇಕು
ಮಾಯಾವಿಗಳಿಂದ ಹಟ್ಟಿಯ ರಕ್ಷಿಸಬೇಕು
ಇಂಥ ಹೊತ್ತಲ್ಲಿ ಸೀತೆಯೊಬ್ಬಳನ್ನೇ ಬಿಟ್ಟು ಯಾಕೆ ಬಂದೆ
ಎಂದು ರಾಮನೆಲ್ಲಿ ಆತಂಕಪಡುವನೋ ಎನುವ ಭಯ ನನಗೆ!
ಡವಡವ ಎದೆ ಪತರಗುಟ್ಟುವ ಕಾಲು

ಸದ್ಯ, ರಾಮ ಮಾತಾಡಲಿಲ್ಲ
ಅವನ ಕಣ್ಣಲ್ಲಿ ಕೊತಕೊತ ಬೆಂಕಿ
ಬಾ, ಲಕ್ಷ್ಮಣ! ಎನ್ನುತ್ತ
ದಂಡಕಾರಣ್ಯದಲ್ಲಿ ಕೋದಂಡ ಎತ್ತಿ ಹಿಡಿದು ಡವಡವ ನಡೆದ

ಹಿಂದೆ ನಾನು!

- ಡಾ. ವಸಂತಕುಮಾರ ಪೆರ್ಲ
vasanthkumarperla@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.