ಸಾಪ್ತಾಹಿಕಪ್ರಭ

ದೇವಿ ಶಾರದೆ ಲೋಕ ಪೂಜಿತೆ

ದೇವಿ ಶಾರದೆ ಲೋಕ ಪೂಜಿತೆ
Published On :

ಜೀವನದಿ ತುಂಗೆಯ ತಟದಲ್ಲಿರುವ ಶೃಂಗೇರಿ ನೂರಾರು ವರ್ಷಗಳಿಂದ ಐತಿಹಾಸಿಕ, ಧಾರ್ಮಿಕ ಶಕ್ತಿ ದೇವತೆಯ ಆವಾಸ ಸ್ಥಾನ. ನೂರಾರು ವರ್ಷಗಳಿಂದ ಪೂರ್ವಪರಂಪರೆಗೆ ಲೋಪ ಬಾರದಂತೆ ವಿಜೃಂಭಣೆಯಿಂದ ನಡೆಯುವ ನವರಾತ್ರಿ ಉತ್ಸವ ಇಲ್ಲಿನ ಅಪೂರ್ವ ಗಳಿಗೆ.
ಇಲ್ಲಿನ ಪೀಠದ ಎಲ್ಲಾ ಜಗದ್ಗುರುಗಳು ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ. 1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾಗಿದ್ದ ಇಲ್ಲಿನ ಪೀಠದ 12ನೇ ಪೀಠಾಧಿಪತಿ ಶ್ರೀ ವಿದ್ಯಾರಣ್ಯರು ನವರಾತ್ರಿ ಉತ್ಸವಕ್ಕೆ ಹೊಸ ಆಯಾಮ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಮೊದಲ ಅರಸ ಹರಿಹರರಾಯ, ಬುಕ್ಕರಾಯರು ಪೀಠಕ್ಕೆ ಆಗಮಿಸಿ ಸಾಮ್ರಾಜ್ಯ ಸ್ಥಾಪನೆಗೆ ತಮಗೆ ಅನುಗ್ರಹಿಸಿದ್ದ ಗುರುಗಳಿಗೆ ಸ್ವರ್ಣಸಿಂಹಾಸನ, ಸ್ವರ್ಣಪಲ್ಲಕ್ಕಿ, ರತ್ನಕಿರೀಟ, ಛತ್ರಛಾಮರ ಸೇರಿದಂತೆ ಸಕಲ ರಾಜಲಾಂಛನಗಳನ್ನು ಸಮರ್ಪಿಸಿದ್ದರು.
ವಿಜಯನಗರ ಸಾಮ್ರಾಜ್ಯ ಅಸ್ತಮಿಸಿದ ನಂತರ ಇಕ್ಕೇರಿ ಕೆಳದಿ ನಾಯಕರು, ಹೈದರಾಬಾದಿನ ನಿಜಾಮರು, ಹೈದರಾಲಿ, ಟಿಪ್ಪುಸುಲ್ತಾನ್, ಬಿಜಾಪುರದ ಆದಿಲ್‌ಶಾಹಿಗಳು, ಯದುವಂಶದ ಅರಸರು, ದೇಶವಿದೇಶಗಳ ರಾಜಮಹಾರಾಜರು ಪೀಠದ ಬಗ್ಗೆ ಅಪಾರ ಗೌರವ ಹೊಂದಿ ಧಾರ್ಮಿಕ ಸ್ಥಾನವನ್ನು ಎತ್ತಿಹಿಡಿದರು.
ಶೃಂಗೇರಿಯಲ್ಲಿ ಒಂಬತ್ತು ದಿನಗಳ ಉತ್ಸವ ವೈಭವಯುತವಾಗಿ ನಡೆಯುತ್ತದೆ. ಭಾದ್ರಪದ ಬಹುಳ ಅಮವಾಸ್ಯೆಯಿಂದ ದಶಮಿಯವರೆಗೆ ಶ್ರೀ ಶಾರದಾಂಬೆಗೆ ಮಹಾಭಿಷೇಕಗಳು, ಸೂಕ್ತ ಪಠನಗಳು, ವೇದಪಾರಾಯಣಗಳು, ಯಾಗಗಳು, ಅಲಂಕಾರಗಳು ನಿರಂತರ. ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ಇಂದ್ರಾಣಿ, ವೀಣಾಶಾರದೆ, ಮೋಹಿನಿ, ರಾಜರಾಜೇಶ್ವರಿ, ಚಾಮುಂಡಿ, ಗಜಲಕ್ಷ್ಮಿ ಅಲಂಕಾರಗಳಲ್ಲಿ ಭಕ್ತರನ್ನು ಅನುಗ್ರಹಿಸುತ್ತಾಳೆ.
ಪ್ರತಿನಿತ್ಯ ಸಂಜೆ ಮಠದ ಆವರಣದಲ್ಲಿ ಜಗದ್ವಿಖ್ಯಾತ ಸಂಗೀತ ವಿದ್ವಾಂಸರಿಂದ ಸಂಗೀತ ಕಛೇರಿಗಳು ನಡೆಯುತ್ತವೆ. ಮೈಸೂರಿನ ದರ್ಬಾರಿಗೂ ಇಲ್ಲಿನ ಪೀಠದ ದರ್ಭಾರಿಗೂ ವಿಭಿನ್ನತೆ, ಸಾಮ್ಯ ಇದೆ. 1885ರಲ್ಲಿ ಮೈಸೂರು ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಇಲ್ಲಿಗೆ ಭೇಟಿ ನೀಡಿದಾಗ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಸರಸ್ವತಿಗಳು ಅವರಿಗೆ ಸನ್ನಿಧಿಯ ರತ್ನಖಚಿತ ಕಿರೀಟ ಸಮರ್ಪಿಸಿದ್ದರು. ಈ ಕಿರೀಟಕ್ಕೆ ಈಗಲೂ ಮೈಸೂರು ಅರಸರ ಖಾಸಗಿ ದರ್ಬಾರ್‌ನಲ್ಲಿ ಪೂಜೆ ಸಲ್ಲುತ್ತದೆ.
ಶ್ರೀಗಳು ವರ್ಣರಂಜಿತ ದರ್ಬಾರು ಉಡುಗೆ, ವಜ್ರಖಚಿತ ಕಿರೀಟ, ಆಭರಣ ಧರಿಸಿ ಚಂದ್ರಮೌಳೀಶ್ವರ ತೊಟ್ಟಿಯಿಂದ ಮೆರವಣಿಗೆಯಲ್ಲಿ ಶಾರದೆಯ ಸನ್ನಿಧಿಗೆ ಆಗಮಿಸುತ್ತಾರೆ. ಬಂಗಾರದ ರಥದ ಮೇಲೆ ಶಾರದಾಂಬೆಯ ಉತ್ಸವ ಮೂರ್ತಿ ತಂದು ಕೂರಿಸಿದ ನಂತರ ಅದಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬರುತ್ತಾರೆ. ನಂತರ ದೇವಾಲಯದ ಶಾರದೆಯ ವಿಗ್ರಹದ ಕಡೆ ಮುಖಮಾಡಿ ಸಿಂಹಾಸನಾರೂಢರಾಗುತ್ತಾರೆ. ನಿಜಾಮ ಸಮರ್ಪಿಸಿದ ವಜ್ರ ಖಚಿತ ಮೊಗಲ್ ಶೈಲಿಯ ಕಿರೀಟ, ಎರಡನೇ ಕೃಷ್ಣರಾಜ ಒಡೆಯರ್, ಜಮಖಂಡಿ ಸಂಸ್ಥಾನ ಇತರ ರಾಜಮಹಾರಾಜರು ಸಮರ್ಪಿಸಿದ ನವರತ್ನ ಖಚಿತ ಕಂಠೀಹಾರ, ವಜ್ರಪದಕದಿಂದ ಕೂಡಿದ ಮುತ್ತಿನ ಹಾರ, ವಜ್ರದ ಹಾರಗಳನ್ನು ಧರಿಸಿ, ಕೈಯಲ್ಲಿ ಜಪಸರ ಹಿಡಿದು ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ. ನವರಾತ್ರಿ ಉತ್ಸವದ ಹನ್ನೊಂದನೇ ದಿನ ರಥಬೀದಿಯಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ.

- ನೆಮ್ಮಾರ್ ಅಬೂಬಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.