ಸಾಪ್ತಾಹಿಕಪ್ರಭ

ಗುರುದಾಸ್ ಗುಪ್ತ ಗುಟುರು

ಗುರುದಾಸ್ ಗುಪ್ತ ಗುಟುರು
Published On :

1985ರಿಂದಲೂ ಇದುವರೆಗೆ ಸಂಸತ್ತಿನ ಸದಸ್ಯರಾಗಿರುವ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಗುರುದಾಸ್ ದಾಸ್ ಗುಪ್ತ, ರಾಜ್ಯ ಸಭೆ, ಲೋಕಸಭೆಗಳೆರಡರಲ್ಲೂ ದೊಡ್ಡ ಹೆಸರು ಮಾಡಿರುವ ನಾಯಕ. 1985ರಲ್ಲಿ ಅವರು ಮೊದಲು ಆಯ್ಕೆಯಾಗಿದ್ದು ರಾಜ್ಯಸಭೆಗೆ. 2004ರಿಂದ ಲೋಕಸಭೆಯಲ್ಲಿದ್ದಾರೆ.

ಇಷ್ಟು ಸುದೀರ್ಘ ಅವಧಿಯಲ್ಲಿ ಆರ್ಥಿಕ ಚಿಂತನೆ, ವಿಚಾರವಂತಿಕೆ, ಅಧ್ಯಯನ ಆಧರಿತ ಹೋರಾಟಗಳಿಗೆ ಹೆಸರುವಾಸಿ. ಈಗಂತೂ ಲೋಕಸಭೆಯಲ್ಲಿ ವಾಮ ಪಂಥೀಯ ಚಿಂತನೆಯ ಉಳಿವಿಗಾಗಿ ಪಣತೊಟ್ಟಿರುವ ಏಕೈಕ ಹೋರಾಟಗಾರ.

ಸಂಸತ್ತಿನಲ್ಲಿ ವಿತ್ತೀಯ ವಿವಾದ, ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಸಮಿತಿ ರಚಿಸಿದರೂ, ಅದರಲ್ಲಿ ಗುರುದಾಸ್ ದಾಸ್ ಗುಪ್ತ ಅವರ ಹೆಸರು ಇರುತ್ತದೆ. ಹರ್ಷದ್ ಮೆಹತಾ ಹಗರಣದ ತನಿಖೆಗೆ ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಯಲ್ಲಿ ದಾಸ್ ಗುಪ್ತರ ಕಾಣಿಕೆ ದೊಡ್ಡದು. ಈಗವರು ಸ್ಪೆಕ್ಟ್ರಮ್ ತನಿಖಾ ಸಮಿತಿಯಲ್ಲೂ ಇದ್ದಾರೆ.
ಸದನದಲ್ಲಿ ಅಪ್ಪಟ ಕಮ್ಯುನಿಸ್ಟ್. ಅದರಲ್ಲಿ ಹೊಂದಾಣಿಕೆ, ಸಾಧ್ಯವೇ ಇಲ್ಲ. ಆದರೆ ಸಮಿತಿಗಳ ಸಭೆಗಳಲ್ಲಿ ಪೆನ್ನು- ಪ್ಯಾಡ್ ಹಿಡಿದು ಕೂತಾಗ ಅವರ ಕಾಣಿಕೆ, ಅನೇಕ ಸಂದರ್ಭಗಳಲ್ಲಿ ಮಾರ್ಕ್ಸ್‌ನ ಸಿದ್ಧಾಂತವನ್ನು ಮೀರಿನಿಂತಿದೆ. ಅದೇ ಅವರ ಬೌದ್ಧಿಕ ಹೆಗ್ಗಳಿಕೆ.
ನಂಬಿದ ಸಿದ್ಧಾಂತದ ಪರವಾಗಿ ಹೋರಾಟದಲ್ಲಿ ನಿರತರಾದಾಗಲೂ, ವಾಸ್ತವ ನೆಲೆಗಟ್ಟನ್ನು ಬಿಡದೇ ಸತ್ಯ ಎಂದು ಕಂಡುಬಂದಿದ್ದನ್ನು ಎತ್ತಿ ಹಿಡಿಯುವ ಪ್ರವೃತ್ತಿ ಅವರದ್ದು. ಸಿದ್ಧಾಂತ ಬದ್ಧ ಹೋರಾಟಗಾರರಲ್ಲಿ ಬಹುಮಂದಿ ತಮ್ಮ ಮೂಗಿನ ನೇರದ ದಿಕ್ಕನ್ನು ಬಿಟ್ಟು ಆ ಕಡೆ- ಈ ಕಡೆ ನೋಡುವವರಲ್ಲ. ಆದರೆ ಗುರುದಾಸ್ ದಾಸ್ ಗುಪ್ತ ಅವರದ್ದು ಪ್ರಾಂಜಲ ಮನಸ್ಸು. ಆದ್ದರಿಂದಲೇ ಅವರು ಪ್ರಮುಖ ಸಮಿತಿಗಳಿಗೆ ಅನಿವಾರ್ಯ ಸದಸ್ಯ ಎನ್ನುವಂತಾಗಿರುವುದು.
ಹುಟ್ಟಿದ್ದು ಈಗ ಬಾಂಗ್ಲಾದೇಶದಲ್ಲಿರುವ ಬಾರಿಸಾಲ್‌ನಲ್ಲಿ (1936). ಆದರೆ ಉನ್ನತ ಶಿಕ್ಷಣವೆಲ್ಲ ಕೋಲ್ಕತ್ತಾದ ಕಾಲೇಜುಗಳಲ್ಲಿ. ಎಂ.ಕಾಂ. ಪದವೀಧರ. ವಿದ್ಯಾರ್ಥಿ ದೆಸೆಯಲ್ಲೇ ಕಮ್ಯುನಿಸ್ಟರ ಸಹವಾಸ. ವಿದ್ಯಾರ್ಥಿ ಸಂಘಟನೆಗಳಲ್ಲಿ ಪ್ರಮುಖ ಪಾತ್ರಧಾರಿ.

1965ರ ಸುಮಾರಿನಲ್ಲಿ ಡಿಫೆನ್ಸ್ ಆಫ್ ಇಂಡಿಯಾ ನಿಯಮಗಳಂತೆ ಬಂಧನ. ಅನಂತರದ ದಿನಗಳಲ್ಲಿ ಭೂಗತ ಕಾರ್ಯಾಚರಣೆ. ವಿದ್ಯಾರ್ಥಿ ಅಧ್ಯಾಪಕರ ಸಂಘಟನೆಗಳ ಸಂಪರ್ಕದಲ್ಲಿ ಇದ್ದಂತೆಯೇ, ಕಮ್ಯುನಿಸ್ಟ್ ನೇತೃತ್ವದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ ಕಾರ್ಯಕರ್ತ. ಹಲವಾರು ಅಖಿಲ ಭಾರತ ಕಾರ್ಮಿಕ ಸಂಘಟನೆಗಳಲ್ಲಿ ಪದಾಧಿಕಾರಿ. ಈಗ ಲೋಕಸಭೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ನಾಯಕ. ವಾಮರಂಗದ ಪ್ರಮುಖ ಬೌದ್ಧಿಕ ನಾಯಕರಲ್ಲೊಬ್ಬರು.

ಹಿಂದೆಲ್ಲ ಸೋಮನಾಥ ಜಟರ್ಜಿ, ಇಂದ್ರಜಿತ್ ಗುಪ್ತರಂಥ ನಾಯಕರು ವಾಮಪಂಥೀಯ ನಿಲುವನ್ನು ಸಂಸತ್ತಿನಲ್ಲಿ ಪ್ರತಿಪಾದಿಸುತ್ತಿದ್ದಾಗ, ದಾಸ್ ಗುಪ್ತ ಅವರು ಸಮಿತಿಗಳಲ್ಲಿ ಆ ಚಿಂತನೆಯ ಪ್ರತಿಪಾದಕರಾಗಿದ್ದರು. ಈಗ ಅವರೇ ಏಕಾಂಗಿಯಾಗಿ ಸಂಸತ್ತಿನಲ್ಲಿ ಹೋರಾಡಬೇಕಿದೆ. ಹರ್ಷದ್ ಮೆಹತಾ ಸೆಕ್ಯೂರಿಟಿ ಹಗರಣದ ತನಿಖೆ ಮಾಡಿದ ಸಂಯುಕ್ತ ಸಂಸದೀಯ ಸಮಿತಿಯ ಸದಸ್ಯರಾಗಿದ್ದ ದಾಸ್ ಗುಪ್ತ ಈಗಲೂ ನಂಬಿರುವಂತೆ ಆ ಹಗರಣದ ಸಂಪೂರ್ಣ ವಿವರಗಳು ಬೆಳಕನ್ನು ಕಂಡಿಲ್ಲ. ಅವರು ಈ ವಿಚಾರದಲ್ಲಿ ತಮ್ಮ ಅನುಭವ, ಅನಿಸಿಕೆಗಳನ್ನು ವಿವರಿಸುತ್ತಾ ಹಗರಣದ ಅನೇಕ ಘಟ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಒಂದು ಪುಸ್ತಕವನ್ನೇ ಬರೆದಿದ್ದಾರೆ. ಸಂಸತ್ತಿನ ಕೆಲಸ, ಪಕ್ಷದ ಕೆಲಸಗಳ ನಡುವೆಯೇ ಸಮಕಾಲೀನ ಬೆಳವಣಿಗೆ ಕುರಿತು ಪತ್ರಿಕೆಗಳಿಗೆ ಲೇಖನ ಬರೆಯುವುದು ಅವರ ಹವ್ಯಾಸ. ಬಂಗಾಳಿ ಭಾಷೆಯ ಮೇಲೆ ಒಳ್ಳೆಯ ಹಿಡಿತವಿದೆ. ಬಂಗಾಳಿ ಒಳ್ಳೆಯ ಭಾಷೆ. ಆದರೆ ಇಂಗ್ಲಿಷಿಲ್ಲಿ ಆ ಧಾಟಿ ಇಲ್ಲದಿದ್ದರೂ ಕೇಳುವವರ ಮನಸ್ಸಿನ ಮೇಲೆ ಪರಿಣಾಮ ಬೀರುವಂಥ ಶೈಲಿ.

ಈಚೆಗೆ ಗುರುದಾಸ್ ದಾಸ್ ಗುಪ್ತ ಒಂದು ಕಡೆ ರಿಲೈಯನ್ಸ್ 'ಗ್ಯಾಸ್ ಬೆಲೆ' ವ್ಯವಹಾರದಲ್ಲಿ ಸಚಿವ ವೀರಪ್ಪ ಮೊಯಿಲಿ ಅವರು ತಳೆದ ನಿಲುವನ್ನು ಬಲವಾಗಿ ವಿರೋಧಿಸಿ ತಮ್ಮ ಹೋರಾಟದ ಜೀವನಕ್ಕೆ ಹೊಸ ಆಯಾಮವನ್ನೇ ನೀಡಿದ್ದಾರೆ. ಆಂತರಿಕವಾಗಿ ಲಭ್ಯವಿರುವ ಅನಿಲ ಹಾಗೂ ತೈಲಕ್ಕೆ ಉತ್ತೇಜನಕಾರಿ ದರಗಳನ್ನು ಕೊಡದೇ ಹೋದರೆ, ಯಾವ ಉದ್ಯಮಿಯೂ ಈ ಉದ್ಯಮದಲ್ಲಿ ಸಂಶೋಧನೆಗೆ ಮುಂದಾಗುವುದಿಲ್ಲ ಎನ್ನುವುದು ವೀರಪ್ಪ ಮೊಯಿಲಿ ಅವರ ವಾದ. ರಿಲೈಯನ್ಸ್ ಸಂಸ್ಥೆ ದರಗಳ ಏರಿಕೆಗೆ ಒತ್ತಾಯಪಡಿಸಿ, ಆ ಬೇಡಿಕೆ ಈಡೇರುವವರೆಗೂ ಒಪ್ಪಿಕೊಂಡಷ್ಟು ಪ್ರಮಾಣದಲ್ಲಿ ತೈಲ ಹಾಗೂ ಅನಿಲವನ್ನು ಒದಗಿಸದೇ ಹಿಂದಿನ ಒಪ್ಪಂದವನ್ನು ಮುರಿದಿರುವುದರ ವಿರುದ್ಧ ದಾಸ್ ಗುಪ್ತ ಮಾತನಾಡಿದ್ದಾರೆ.
ಈ ವಿಚಾರ ಇನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ. ಈಗಿನ ಬೆಲೆಯ ವಿವಾದದಲ್ಲಿ ಗುರುದಾಸ್ ದಾಸ್ ಗುಪ್ತ ಅವರು ವಿಶೇಷವಾದ ಆಸಕ್ತಿಯನ್ನು ವಹಿಸಿರುವುದರಿಂದ, ವ್ಯವಹಾರದ ಸಂಬಂಧಪಟ್ಟವರೆಲ್ಲರೂ ಎಚ್ಚರಿಕೆಯಿಂದಲೇ ಇರಬೇಕಾಗಿದೆ. ಈ ವಿಚಾರದಲ್ಲಿ ದಾಸ್‌ಗುಪ್ತ ಒಂದು ರೀತಿಯಲ್ಲಿ ದೇಶದ ಹಿತದ ಕಾವಲುಗಾರ.

ಅದೇ ರೀತಿ ಕಲ್ಲಿದ್ದಲು ಗಣಿಗಳ ಹಕ್ಕಿನ ಹಂಚಿಕೆಯ ವಿಚಾರದಲ್ಲೂ ಅಷ್ಟೇ. ಕಲ್ಲಿದ್ದಲು ಗಣಿಗಳಲ್ಲಿ ಕೂಲಿ ಮಾಡುವ ಜನರ ಸಂಘಟನೆಗಳ ಮೂಲಕ, ಆ ವ್ಯವಹಾರದ ಎಲ್ಲ ವಿವರಗಳನ್ನು ಚೆನ್ನಾಗಿ ಬಲ್ಲ ದಾಸ್ ಗುಪ್ತ, ಲೋಕಸಭೆಯಲ್ಲೇ ನೇರವಾಗಿ, ಕಲ್ಲಿದ್ದಲ ಗಣಿಗಳ ವ್ಯವಹಾರದ ಎಲ್ಲ ವಿವರಗಳೂ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಚೆನ್ನಾಗಿಯೇ ಗೊತ್ತು ಎಂದು ಹೇಳಿದಾಗ, ಬೇರೆಯವರಿಗೆ ಮಾತನಾಡಲು ಅವಕಾಶವೇ ಇರಲಿಲ್ಲ.

ಆದರೆ, ಸಂಸತ್ತಿನ ಉಭಯ ಸದನಗಳಲ್ಲೂ ಕಲ್ಲಿದ್ದಲ ಗಣಿಗಳ ವ್ಯವಹಾರದ ಚರ್ಚೆ ನಡೆದಾಗ ಪ್ರಧಾನವಾಗಿ ಪ್ರಸ್ತಾಪವಾಗಿದ್ದು ಸಿಬಿಐ ತನಿಖೆಗೆ ಅಗತ್ಯವಾಗಿ ಬೇಕಾಗಿದ್ದ ಕಡತಗಳು ಕಣ್ಮರೆಯಾದ ವಿಚಾರ. ಆ ಸಂಬಂಧದಲ್ಲಿ ಹಲವರು ಮನಮೋಹನ ಸಿಂಗ್‌ರನ್ನೇ ಟೀಕಿಸಿದಾಗ ಅವರೂ ಕುಪಿತರಾಗಿ ಫೈಲುಗಳನ್ನು ಜೋಪಾನ ಮಾಡಿ ಕಾಯುವುದು ಪ್ರಧಾನಿಯ ಕೆಲಸವಲ್ಲ ಎಂದಿದ್ದರು.

ಅದಕ್ಕೆ ದಾಸ್ ಗುಪ್ತರ ತಿರುಗೇಟು; 'ಫೈಲುಗಳನ್ನು ಕಾಯುವುದು ಪ್ರಧಾನಿಯ ಕೆಲಸವಲ್ಲ, ಆದರೆ ಅವು ಕಳೆದು ಹೋದಾಗ, ಅದನ್ನು ಹುಡುಕಿಸುವುದು ಪ್ರಧಾನಿಯ ಕರ್ತವ್ಯ ಅಲ್ಲವೇ?'. ಆಗ ಪ್ರಧಾನಿ ಏನನ್ನೂ ಹೇಳದೇ ಇದ್ದರೂ, ಅನಂತರ ಮನಮೋಹನ ಸಿಂಗ್ 'ಎಲ್ಲಾ ಫೈಲುಗಳನ್ನೂ ಹುಡುಕಿಸಲು, ಸರ್ವ ಪ್ರಯತ್ನ ಮಾಡಲಿದ್ದೇವೆ' ಎನ್ನುವ ಭರವಸೆ ನೀಡಲೇಬೇಕಾಯಿತು.

ಸಂಸತ್ತಿನ ಹಲವು ಸಮಿತಿಗಳ ಸದಸ್ಯರಾಗಿರುವ ದಾಸ್ ಗುಪ್ತ ರಿಲೈಯನ್ಸ್ ತೈಲ- ಅನಿಲದ ಮಾರಾಟದ ಹಾಗೂ ಕಲ್ಲಿದ್ದಲ ಗಣಿಗಳ ತನಿಖೆಯ ಅವಾಂತರಗಳನ್ನು ಸುಮ್ಮನೆ ಬಿಡುವವರಲ್ಲ. ಸಂಸತ್ತಿನಲ್ಲಿ ಈಗವರು ಏಕಾಂಗಿಯಾದರೂ, ಅವರಿಗೆ ಈ ವಿಚಾರಗಳಲ್ಲಿ 'ಹೊರಗಿನಿಂದ' ದೊಡ್ಡ ಬೆಂಬಲ ಸಿಕ್ಕಿರುವುದೂ ನಿಜ. ಅನೇಕ ಸಂಘಟನೆಗಳು ಮಾಹಿತಿಯನ್ನು ದಾಸ್ ಗುಪ್ತರಿಗೆ ಒದಗಿಸುತ್ತಿವೆ. ಸಾಮಾನ್ಯ ಜನರಲ್ಲಿ ಅಷ್ಟು ವಿಶ್ವಾಸವನ್ನು ಗಳಿಸುವುದು ಸುಲಭದ ಕೆಲಸವಲ್ಲ.

-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.