ಹೊಂದಿಸಿ ಬರೆಯಿರಿ

ಹೊಂದಿಸಿ ಬರೆಯಿರಿ
Updated on: 

'ನಮ್ ಮನೆಗೆ ಬರೋ ಸೊಸೆ ಚೆನ್ನಾಗಿಲ್ಲದಿದ್ರೂ ಪರ್ವಾಗಿಲ್ಲ. ಆದ್ರೆ ಹೊಂದ್ಕೊಂಡು ಹೋಗೋವಂಥವಳಾಗಿರಬೇಕು' ಹಿರಿಯರು ಸಾಮಾನ್ಯವಾಗಿ ಆಡೋ ಮಾತಿದು.
'ಆಕೆ ಹೊಂದ್ಕೊಂಡು ಹೋಗೋ ಹಾಗಿದ್ರೆ ನಮ್ಮ ರೂಂನಲ್ಲಿರಲಿ. ಇಲ್ಲಾಂದ್ರೆ ಬೇಡ...' ಪಿಜಿ ಗೆಳತಿಯರ ಖಡಕ್ ಮಾತಿದು.
'ಹಾಸ್ಟೆಲ್‌ನಲ್ಲಿ ಎಲ್ರ ಜೊತೆ ಅಡ್ಜಸ್ಟ್ ಆಗಿ ಇದ್ದುಬಿಟ್ರೆ ನಿಂಗೇನೂ ತೊಂದ್ರೆ ಆಗಲಾರ್ದು...' ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಓದಿಸುವ ತಂದೆ- ತಾಯಿ ತಮ್ಮ ಮಕ್ಕಳಿಗೆ ಹೇಳೋ ಹಿತವಚನ.
ಏನಿದು ಹೊಂದ್ಕೊಳ್ಳೋದು ಅಂದ್ರೆ?
ಓದುವ ಮಕ್ಕಳು ಒಳ್ಳೆಯ ಶಿಕ್ಷಣಕ್ಕಾಗಿ, ಓದಿ ಮುಗಿಸಿದವರು ಉದ್ಯೋಗಕ್ಕಾಗಿ, ಹೆಣ್ಣು ಮಕ್ಕಳು ಮದುವೆಯಾಗಿ- ಹೀಗೆ ಹತ್ತುಹಲವು ಕಾರಣಗಳಿಗಾಗಿ ನಾವು ಹುಟ್ಟಿ ಬೆಳೆದ ಮನೆಯನ್ನು ತೊರೆಯಲೇಬೇಕಾದ ಅನಿವಾರ್ಯತೆ ಬರುತ್ತದೆ. ಹುಟ್ಟಿ ಬೆಳೆದ ಮನೆಯಿಂದ ವಾಸ್ತವ್ಯ ಬದಲಾದಾಗ ಅಲ್ಲಿನ ಬದುಕು ಬೇರೆಯೇ ಬಗೆಯದು. ಹೀಗೆ ಬೇರೆ ವಾತಾವರಣವನ್ನು ಅರ್ಥೈಸಿಕೊಂಡು ಅದಕ್ಕೆ, ಅಲ್ಲಿರುವವರಿಗೆ ಸರಿಯಾಗಿ ಬದುಕೋದೇ ಹೊಂದಿಕೊಳ್ಳೋದು. ಇದಕ್ಕಾಗಿ ನಮ್ಮ ಇಷ್ಟಕಷ್ಟಗಳಲ್ಲಿ, ದಿನಚರಿಯಲ್ಲಿ, ಮಾತಾಡುವ ಶೈಲಿ, ಆಹಾರ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿ ಬರಬಹುದು. ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಹಾಗೆ ಎಲ್ಲರೊಂದಿಗೆ ಬೆರೆತು ಹೊಂದಾಣಿಕೆಯಿಂದಿದ್ದರೆ ಬದುಕು ಸಲೀಸು. ಇಲ್ಲದಿದ್ದರೆ ಕೊಂಚ ಕಷ್ಟವೇ.
ಹಾಗಂತ ಹೊಂದಾಣಿಕೆ ಎಂದರೆ ಗುಲಾಮರಂತೆ, ಇತರರು ಹೇಳಿದಂತೆ ನಡೆಯುವುದಂತೂ ಖಂಡಿತಾ ಅಲ್ಲ. ಇತರರ ಭಾವನೆಗಳನ್ನು ಗೌರವಿಸುತ್ತಾ ಸ್ನೇಹದಿಂದ ಬದುಕುವುದು. ಅನುಯಾಯಿ ಆಗುವುದಲ್ಲ. ಅನುಸರಿಸಿಕೊಂಡು ಹೋಗುವುದು. ಪರಸ್ಪರ ಸ್ನೇಹ, ವಿಶ್ವಾಸದಿಂದ ಇರುವುದು. ರೋಮ್‌ನಲ್ಲಿ ರೋಮನ್‌ನಂತೆಯೇ ಇರು ಎನ್ನುತ್ತದೆ ಗಾದೆ. ಎಲ್ಲಿ ಹೇಗೆ ಬೇಕೋ ಹಾಗೆ ಇದ್ದುಬಿಡುವುದು. ಮೊದಮೊದಲು ತುಸು ಕಷ್ಟ ಎನಿಸಿದರೂ ದಿನಗಳೆದಂತೆ ನಮಗರಿವಿಲ್ಲದೆಯೇ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿರುತ್ತೇವೆ.
ಕೆಲವೊಮ್ಮೆ ಹಳ್ಳಿಯಲ್ಲಿನ ತಂದೆತಾಯಿಯರೂ ಮಕ್ಕಳೊಂದಿಗೆ ನಗರಕ್ಕೆ ಆಗಮಿಸುವುದುಂಟು. ನಗರದ ಬ್ಯುಸಿ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೂ ಕಷ್ಟ ಆಗುವುದುಂಟು. ಆಗೆಲ್ಲಾ 'ಮಗ ಬದಲಾಗಿದ್ದಾನೆ, ಸೊಸೆ ಸರಿ ಇಲ್ಲ, ಹೊತ್ತು ಹೋಗ್ತಿಲ್ಲ...' ಮುಂತಾಗಿ ಗೊಣಗುವ ಬದಲು ಆ ಹಿರಿಯರು ಚಟುವಟಿಕೆಯತ್ತ ಗಮನ ಹರಿಸಿದರೆ ಹೊಂದಾಣಿಕೆ ಕಷ್ಟಸಾಧ್ಯವಲ್ಲ. ಮೊಮ್ಮಕ್ಕಳೊಂದಿಗೆ ಆಟ, ವಾಕಿಂಗ್, ಕತೆ ಹೇಳುವುದು ಇತ್ಯಾದಿಗಳಲ್ಲಿ ತೊಡಗಿಸಿಕೊಂಡರೆ ಉತ್ಸಾಹ, ಉಲ್ಲಾಸ ಇಮ್ಮಡಿಗೊಳ್ಳುತ್ತದೆ. ಸಾಕಷ್ಟು ಸಶಕ್ತರಾಗಿದ್ದರೆ ಯಾವುದಾದರೂ ಸಂಘಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರಿಯಾಶೀಲರಾಗುವುದು ಉತ್ತಮ. ಮಗಸೊಸೆಯ ಮನೆಕೆಲಸದಲ್ಲೂ ಆದಷ್ಟು ಕೈಜೋಡಿಸಬಹುದು. ಈ ಚಟುವಟಿಕೆಗಳ ನಡುವೆ ಹಳ್ಳಿಹಿರಿಯರು ತಮಗರಿವಿಲ್ಲದೆಯೇ ನಗರದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿರುತ್ತಾರೆ.  
ನೀವೊಬ್ಬ ವಿದ್ಯಾರ್ಥಿ ಎಂದಿಟ್ಟುಕೊಳ್ಳಿ. ರಾತ್ರಿ 1ರವರೆಗೆ ಕುಳಿತು ಸ್ಟಡಿ ಮಾಡುವವರು. ಆದರೆ ನಿಮ್ಮ ರೂಂಮೇಟ್‌ಗೆ ರಾತ್ರಿ 10 ಗಂಟೆಗೆ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ. ಇಬ್ಬರಿಗೂ ಜೊತೆಯಲ್ಲಿ ಓದಲು ಸರಿ ಹೋಗುವುದಿಲ್ಲ. ಹಾಗಂತ, ಜಗಳ ಮಾಡುತ್ತ ಗೊಣಗಿಕೊಳ್ಳುತ್ತಾ ಕುಳಿತರೆ ಆಗುತ್ತದೆಯೇ? ರೂಂಮೇಟ್‌ನ ನಿದ್ದೆಗೆ ತೊಂದರೆ ಆಗದಂತೆ ಟೇಬಲ್‌ಲ್ಯಾಂಪ್ ಹಾಕಿಕೊಂಡು ಓದಿದರೆ ಸಮಸ್ಯೆಗೆ ಪರಿಹಾರ ಸಿಕ್ಕಾಯ್ತಲ್ಲ...
ಮದುವೆಯಾಗಿ ಪತಿಯ ಮನೆಗೆ ಬಂದ ಗೃಹಿಣಿಯು 'ನನ್ನ ಅಮ್ಮನ ಮನೆಯಲ್ಲಿ ಇಂಥ ಕ್ರಮವಿಲ್ಲ, ನಾನು ಇದನ್ನು ಮಾಡುವುದಿಲ್ಲ, ಅದನ್ನು ಮಾಡುವುದಿಲ್ಲ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರೆ ವೈಮನಸ್ಯ ಕಟ್ಟಿಟ್ಟ ಬುತ್ತಿ. ಅದರ ಬದಲು 'ನನಗೀ ಕ್ರಮ ಹೊಸದು. ಸ್ವಲ್ಪ ದಿನಗಳಲ್ಲಿ ಇಲ್ಲಿನ ಕ್ರಮವನ್ನು ಕಲಿತುಕೊಳ್ತೀನಿ' ಅಂತ ಹೇಳಿಬಿಟ್ಟರೆ ಹೊಂದಿಕೊಂಡು ಹೋಗುವುದು ಸಲೀಸು. ಹಾಗಂತ ಸ್ವಂತಿಕೆಯನ್ನು ಬಿಟ್ಟುಕೊಡಬೇಕಾಗಿಲ್ಲ. ತನ್ನ ವ್ಯಕ್ತಿತ್ವದ ಕಂಪನ್ನೂ ಬೀರುತ್ತಾ ಮನೆಮಂದಿಯೆಲ್ಲ ಮೆಚ್ಚುವಂತೆ ಸಹಬಾಳ್ವೆ ನಡೆಸಿದರೆ ಚೆನ್ನ.

-ರಾಜೇಶ್ವರಿ ಜಯಕೃಷ್ಣ
vaijktn@rediffmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com